ಫಾಸ್ಟ್ಯಾಗ್ ಪರಿಣಾಮ: 5 ವರ್ಷಗಳಲ್ಲಿ ರಸ್ತೆ ಬಳಕೆದಾರರು ತೆತ್ತ ಟೋಲ್ ಮೊತ್ತ ಎಷ್ಟು ಗೊತ್ತೇ?

Update: 2023-02-07 01:45 GMT

ಬೆಂಗಳೂರು: ಕಳೆದ ಐದು ವರ್ಷಗಳಲ್ಲಿ ಅಂದರೆ 2018ರ ಏಪ್ರಿಲ್‍ನಿಂದ 2022ರ ಡಿಸೆಂಬರ್‍ವರೆಗೆ ದೇಶಾದ್ಯಂತ ರಸ್ತೆ ಬಳಕೆದಾರರು 1.5 ಲಕ್ಷ ಕೋಟಿ ರೂಪಾಯಿ ಟೋಲ್ ಪಾವತಿಸಿದ್ದಾರೆ. ಟೋಲ್ ಪಾವತಿಯಲ್ಲಿ ಉತ್ತರಪ್ರದೇಶ ಅಗ್ರಸ್ಥಾನದಲ್ಲಿದೆ ಎಂಬ ಅಂಶ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ಅಂಕಿ ಅಂಶಗಳಿಂದ ತಿಳಿದು ಬರುತ್ತದೆ.

ಅಂಕಿ ಅಂಶಗಳ ವಿಶ್ಲೇಷಣೆಯಿಂದ ತಿಳಿದು ಬರುವ ಮತ್ತೊಂದು ಪ್ರಮುಖ ಅಂಶವೆಂದರೆ, ಪ್ರಸಕ್ತ ಹಣಕಾಸು ವರ್ಷ ಕಳೆದ ಐದು ವರ್ಷಗಳಲ್ಲೇ ಗರಿಷ್ಠ ಟೋಲ್ ಸಂಗ್ರಹಕ್ಕೆ ಸಜ್ಜಾಗಿದೆ. ರಾಷ್ಟ್ರೀಯವಾಗಿ ಸಂಗ್ರಹವಾದ 1.5 ಲಕ್ಷ ಕೋಟಿ ರೂಪಾಯಿಗಳ ಪೈಕಿ 2021-22ನೇ ಹಣಕಾಸು ವರ್ಷದಲ್ಲಿ ಗರಿಷ್ಠ ಸಂಗ್ರಹವಾಗಿದೆ. ಈ ಅವಧಿಯಲ್ಲಿ 33,881.2 ಕೋಟಿ ರೂಪಾಯಿ ಟೋಲ್ ಸಂಗ್ರಹವಾಗಿದೆ.

ಆದಾಗ್ಯೂ ಈ ದಾಖಲೆಯನ್ನು ಮರಿಯಲು 2022-23 ಸಜ್ಜಾಗಿದ್ದು, ಮೊದಲ ಮೂರು ತ್ರೈಮಾಸಿಕದಲ್ಲೇ 33,489.1 ಕೋಟಿ ರೂಪಾಯಿ ಸಂಗ್ರಹವಾಗಿದೆ. ದೇಶದಲ್ಲಿ ಗರಿಷ್ಠ ಜನಸಂಖ್ಯೆ ಹೊಂದಿರುವ ಉತ್ತರ ಪ್ರದೇಶ ಟೋಲ್ ಪಾವತಿಯಲ್ಲೂ ಮೊದಲ ಸ್ಥಾನದಲ್ಲಿದೆ. ಈ ರಾಜ್ಯದಲ್ಲಿ 17242.9 ಕೋಟಿ ರೂಪಾಯಿ ಟೋಲ್ ಸಂಗ್ರಹವಾಗಿದ್ದರೆ ರಾಜಸ್ಥಾನ (g16565.9) ನಂತರದ ಸ್ಥಾನದಲ್ಲಿದೆ. ಗುಜರಾತ್, ಮಹಾರಾಷ್ಟ್ರ ಹಾಗೂ ತಮಿಳುನಾಡು ನಂತರದ ಸ್ಥಾನಗಳಲ್ಲಿವೆ. ಈ ಐದು ರಾಜ್ಯಗಳು ಒಟ್ಟು ಟೋಲ್ ಸಂಗ್ರಹಕ್ಕೆ ಶೇಕಡ 50ರಷ್ಟು ಕೊಡುಗೆ ನೀಡಿವೆ.

ಇತ್ತೀಚಿನ ಕೆಲ ವರ್ಷಗಳಲ್ಲಿ ಟೋಲ್ ಸಂಗ್ರಹ ಹೆಚ್ಚಳಕ್ಕೆ ಪೂರ್ಣಪ್ರಮಾಣದಲ್ಲಿ ಫಾಸ್ಟ್‍ಟ್ಯಾಗ್‍ಗಳ ಬಳಕೆ ಕಾರಣ ಎನ್ನಲಾಗಿದೆ. ಇದು ಟೋಲ್ ಸಂಗ್ರಹದ ಕ್ಷಮತೆ ಹೆಚ್ಚಿಸಲು ನೆರವಾಗಿದೆ ಎಂದು ತಜ್ಞರು ಹೇಳುತ್ತಾರೆ. 2014ರಲ್ಲಿ ಪ್ರಾಯೋಗಿಕವಾಗಿ ಫಾಸ್ಟ್‍ಟ್ಯಾಗ್ ಬಳಕೆ ಆರಂಭವಾಗಿದ್ದು, 2015ರಲ್ಲಿ ಬೆಂಗಳೂರು, ಚೆನ್ನೈ ಸೇರಿದಂತೆ ಸುವರ್ಣ ಚತುರ್ಭುಜ ಹೆದ್ದಾರಿಗಳಲ್ಲಿ ಫಾಸ್ಟ್ಯಾಗ್ ಆರಂಭವಾಗಿತ್ತು. 2019ರಿಂದ ಎಲ್ಲ ಹೆದ್ದಾರಿಗಳಲ್ಲೂ ಇದು ಕಡ್ಡಾಯವಾಯಿತು. ಆದರೆ 2021-22ನೇ ಸಾಲಿನಿಂದ ಇದನ್ನು ಕಟ್ಟುನಿಟ್ಟಾಗಿ ಎಲ್ಲೆಡೆ ಅನುಷ್ಠಾನಗೊಳಿಸಲಾಯಿತು.

Similar News