ಕೇಳಿದ್ದನ್ನು ಮಾಡಿಕೊಡುವ ChatGPT ಗೆ ಭರ್ಜರಿ ಪ್ರತಿಕ್ರಿಯೆ

Update: 2023-02-07 03:13 GMT

ಮಾಹಿತಿ, ಸಂವಹನ ಹೀಗೆ ಹಲವಾರು ವಿಚಾರಕ್ಕೆ ಜಗತ್ತೇ ಇಂದು ಅವಲಂಬಿತವಾಗಿರುವುದು ಗೂಗಲ್ ಮೇಲೆ. ಅಂತಹ ಗೂಗಲನ್ನೇ ಮೀರಿಸಬಲ್ಲ, ಕಡೆಗೆ ಅದನ್ನೇ  ಮೂಲೆಗುಂಪು ಮಾಡಿದರೂ ಅಚ್ಚರಿಯಿಲ್ಲ ಅನ್ನಿಸುವ ಹಾಗಿರುವ ತಂತ್ರಜ್ಞಾನವೊಂದು ಈಗ ಬಂದಿದೆ. ಅದು ಚಾಟ್ ಜಿಪಿಟಿ. ಹಾಗಾದರೆ ಕಳೆದ ಕೆಲ ತಿಂಗಳಿಂದ ಜಾಗತಿಕವಾಗಿ  ದೊಡ್ಡ ಮಟ್ಟದಲ್ಲಿ ಸುದ್ದಿಯಲ್ಲಿರುವ ಚಾಟ್ ಜಿಪಿಟಿ ಏನು? ಅದು ನಮಗೆ ನೆರವಾಗಲಿದೆಯೆ ಅಥವಾ ಬಹಳಷ್ಟು ಜನರ ಕೆಲಸಗಳನ್ನೇ ಕಿತ್ತುಕೊಳ್ಳಲಿದೆಯೆ? ಅದರ ಇತಿಮಿತಿಗಳೇನು? ಸಂಭಾವ್ಯ ಅಪಾಯಗಳೇನು?

ನಿಮಗೊಂದು ವಿಷಯದ ಮೇಲೆ ಮಾಹಿತಿ ಬೇಕಿದ್ದಲ್ಲಿ ಗೂಗಲ್‌ನಲ್ಲಿ ಕೀ ವರ್ಡ್ ಹಾಕಿ ಹುಡುಕುತ್ತೀರಿ. ಕ್ಷಣಾರ್ಧದಲ್ಲಿ ಆ ಕೀ ವರ್ಡ್ ಸಂಬಂಧಿತ ರಾಶಿ ರಾಶಿ ಮಾಹಿತಿ ನಿಮ್ಮ ಕಣ್ಣೆದುರು ಇರುತ್ತದೆ. ಆ ಮಾಹಿತಿ ರಾಶಿಯಲ್ಲಿ ನಿಮಗೆ ಬೇಕಾದುದಕ್ಕಿಂತ ಬೇಡವಾದುದೇ ಹೆಚ್ಚಿರಬಹುದು. ಅದರಲ್ಲಿ ಮತ್ತೆ ನಿಮಗೆ ಬೇಕಿರುವುದನ್ನು ಮಾತ್ರ ಹುಡುಕಬೇಕು, ಆರಿಸಬೇಕು.

ಆದರೆ ನಿಮಗೆ ನಿರ್ದಿಷ್ಟವಾಗಿ ಏನು ಮಾಹಿತಿ ಬೇಕಿದೆಯೊ ಅದನ್ನೇ ಹೀಗೆ ತೆಗೆದುಕೊಡುವ, ರೆಡಿ ಟು ಯೂಸ್ ಅನ್ನುವ ಹಾಗೆ ಸಿದ್ಧಪಡಿಸಿ ಕೊಡುವ ತಂತ್ರಜ್ಞಾನವೊಂದು ನಿಮ್ಮ ಅಂಗೈಯಲ್ಲೇ ಇದ್ದರೆ ಹೇಗಿದ್ದೀತು? ಈಗ ಸದ್ದು ಮಾಡುತ್ತಿರುವ ಚಾಟ್ ಜಿಪಿಟಿ ಅಂಥ ಒಂದು ವಿಸ್ಮಯಕಾರಿ ತಂತ್ರಜ್ಞಾನ.

ಏನಿದು ಚಾಟ್ ಜಿಪಿಟಿ?

ಇದೊಂದು ಕೃತಕ ಬುದ್ಧಿಮತ್ತೆ ಮೂಲಕ ಕಾರ್ಯನಿರ್ವಹಿಸುವ ಸಂವಾದ ಪ್ಲಾಟ್‌ಫಾರ್ಮ್. ಜಿಪಿಟಿ ಎಂದರೆ ಜನರೇಟಿವ್ ಪ್ರಿ-ಟ್ರೈನ್ಡ್ ಟ್ರಾನ್ಸ್‌ಫಾರ್ಮರ್.  ಯಾವಾಗಲೂ ಸುದ್ದಿಯಲ್ಲಿರುವ ಅಮೆರಿಕದ ಎಲಾನ್ ಮಸ್ಕ್ ಹಾಗೂ ಇತರರು ಸೇರಿ 2015ರಲ್ಲಿ  ಸ್ಥಾಪಿಸಿರುವ OPEN AIಅಂದರೆ ಓಪನ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಅನ್ನುವ ಸಂಶೋಧನಾ ಲ್ಯಾಬ್ ಸಿದ್ಧಪಡಿಸಿರುವ ತಂತ್ರಜ್ಞಾನ ಇದು. ಮಸ್ಕ್ ಬಳಿಕ ಸಂಸ್ಥೆಯ ನಿರ್ದೇಶಕ ಸ್ಥಾನಕ್ಕೆ  ರಾಜೀನಾಮೆ ನೀಡಿದ್ದಾರೆ.  

ಈ ಚಾಟ್ ಬಾಟ್ ತನಗೆ ಕೇಳಲಾಗುವ ಯಾವುದೇ ರೀತಿಯ ಪ್ರಶ್ನೆಗಳಿಗೆ ಮನುಷ್ಯರ ಹಾಗೆಯೇ ಯೋಚಿಸಿ ಉತ್ತರ ಕೊಡಬಲ್ಲದು. ಅದೂ ಕೆಲವೇ ಕೆಲವು ಸೆಕೆಂಡುಗಳೊಳಗೆ. ಕೇಳಿದ್ದಕ್ಕಷ್ಟೇ ಉತ್ತರ. ಒಂದು ಶಬ್ದ, ಒಂದು ವಾಕ್ಯ, ಇಲ್ಲವೆ ಅಗತ್ಯವಿದ್ದರೆ ಕೆಲವು ವಾಕ್ಯಗಳಲ್ಲಿ ಅದರ ಉತ್ತರ ನಿಮ್ಮ ಮುಂದಿರುತ್ತದೆ.

ಚಾಟ್ ಜಿಪಿಟಿ ಹೇಗೆ ಕೆಲಸ ಮಾಡುತ್ತದೆ?


ಇದು ವೆಬ್‌ನಲ್ಲಿ ಲಭ್ಯ. OPEN AI ಅಥವಾ CHAT GPTಎಂದು ಹುಡುಕಿದರೆ ಸಿಗುತ್ತದೆ. ಡೌನ್ಲೋಡ್ ಮಾಡುವ ಅಗತ್ಯವೂ ಇಲ್ಲ. ಇಮೇಲ್ ಐಡಿ ಬಳಸಿ ಸುಲಭವಾಗಿ, ಕೆಲವೇ ಕ್ಷಣಗಳಲ್ಲಿ ಲಾಗಿನ್ ಆಗಬಹುದು. ಬಳಿಕ ಪ್ರಶ್ನೆಗಳನ್ನು ಚಾಟ್ ಜಿಪಿಟಿ ಪೇಜ್‌ನ ಟೆಕ್ಸ್ಟ್ ಬಾಕ್ಸ್‌ನಲ್ಲಿ ಟೈಪ್ ಮಾಡಿ ಕಳಿಸಿದರೆ, ಮರುಕ್ಷಣದಲ್ಲಿಯೇ ಅದಕ್ಕೆ ತಕ್ಕ ಉತ್ತರವನ್ನು ಒದಗಿಸುತ್ತದೆ.

ಇಷ್ಟಕ್ಕೇ ನಿಲ್ಲುವುದಿಲ್ಲ ಅದರ ಅಸಾಮಾನ್ಯ ಸಾಮರ್ಥ್ಯ.

ಅದು ಕೊಟ್ಟ ಉತ್ತರದ ಹಿನ್ನೆಲೆಯಲ್ಲಿ ಮತ್ತೆ ಉಪ ಪ್ರಶ್ನೆ ಕೇಳಿದ್ದರೆ ಅದಕ್ಕೂ ಉತ್ತರ ಕೊಡುತ್ತದೆ.
ನೀವು ಕೇಳಿದ ಪ್ರಶ್ನೆ ಅಸಂಬದ್ಧ ಎನ್ನಿಸಿದಲ್ಲಿ ಉತ್ತರವನ್ನೇ ಕೊಡದೆ ಸುಮ್ಮನಿರುವುದಕ್ಕೂ ಗೊತ್ತು ಅದಕ್ಕೆ. ಹಾಗೆ ಸೂಕ್ತವಲ್ಲ ಎನ್ನಿಸಿದ್ದನ್ನು ಅದು ಮರು ಪ್ರಶ್ನಿಸುತ್ತದೆ. ಸರಿಯಲ್ಲದ ಪ್ರಶ್ನೆಗಳನ್ನು ತಿರಸ್ಕರಿಸುತ್ತದೆ.

ಒಂದು ವೇಳೆ ತನ್ನದೇ ತಪ್ಪಿದ್ದಲ್ಲಿ ಅದನ್ನೂ ಒಪ್ಪಿಕೊಳ್ಳುತ್ತದೆ. ಏನೇ ಮಾಹಿತಿ ಬೇಕಿದ್ದರೂ ಈ ಚಾಟ್ ಜಿಪಿಟಿ ಯಲ್ಲಿ ಸರಳ ಚಾಟ್ ಮೂಲಕ ಪಡೆಯಬಹುದು. ನಿಮಗೊಂದು ತಜ್ಞ ಪ್ರಬಂಧ ಬರೆಯುವುದಿದ್ದಲ್ಲಿ ಚಾಟ್ ಜಿಪಿಟಿಗೆ ಕೇಳಿದರಾಯಿತು. ಬೇಕಿರುವ ಪ್ರಬಂಧ ಸಿದ್ಧವಾಗುತ್ತದೆ. ಗಣಿತದ ವರ್ಕ್ ಶೀಟ್ ತಯಾರಾಗಬೇಕೆ? ವಿಜ್ಞಾನದ ಸಮಸ್ಯೆ ಪರಿಹರಿಸಬೇಕೆ? ಒಂದು ವಿವರವಾದ ಭಾಷಣ ಅಥವಾ ಸ್ಕ್ರಿಪ್ಟ್ ಬೇಕೇ?  ಕೆಲವೇ ಸೆಕೆಂಡುಗಳಲ್ಲಿ ಅದು ಕೂಡ ತಯಾರಾಗುತ್ತದೆ.

ಒಳ್ಳೆಯದೊಂದು ಕವನ ಬೇಕು ಅಂದರೆ ಅದೂ ಸಿಗುತ್ತದೆ, ಬೋರಾಗುತ್ತಾ ಇದೆ ಒಂದು ಹೊಸ ಜೋಕು ಬರಿ ಅಂದರೆ ಅದನ್ನೂ ಬರೆದು ಬಿಸಾಕುತ್ತದೆ ಈ ಚಾಟ್ ಜಿಪಿಟಿ. 

ಈಗಾಗಲೇ ಪ್ರತಿಷ್ಠಿತ ಕಾನೂನು ಮತ್ತು ಬಿಸಿನೆಸ್ ಪರೀಕ್ಷೆಗಳನ್ನು ಪಾಸು ಮಾಡಿರುವ ಹೆಗ್ಗಳಿಕೆಯೂ ಈ ತಂತ್ರಜ್ಞಾನದ್ದು. ಜಗತ್ತಿನ ಮಹಾ ಚಾಣಾಕ್ಷರು ಬರೆಯುವ ಪರೀಕ್ಷೆ ಎಂದೇ ಪರಿಗಣಿಸಲ್ಪಟ್ಟ ಕ್ಯಾಲಿಫೋರ್ನಿಯಾದ ವಾರ್ಟನ್ ಸ್ಕೂಲ್ ಆಫ್ ಬಿಸಿನೆಸ್‌ನ ಎಂಬಿಎ ಪರೀಕ್ಷೆಯಲ್ಲಿ ಇದು ಬಿ ಗ್ರೇಡ್ ಪಡೆದು ಪಾಸಾಗಿದೆ. ಹಗಲೂ ರಾತ್ರಿ ತಲೆಕೆಡಿಸಿಕೊಂಡು ಓದಿ ಬರೆದವರಿಗೂ ಆ ಪರೀಕ್ಷೆಯಲ್ಲಿ ಬಿ ಗ್ರೇಡ್ ಪಡೆಯುವುದು ಬಹಳ ಕಷ್ಟ. ಅಂಥದ್ದರಲ್ಲಿ ಈ ಚಾಟ್ ಬಾಟ್ ಅದನ್ನು ಸಾಧಿಸಿದೆ ಎಂದರೆ ಸಣ್ಣ ಮಾತಲ್ಲ.

ಹಾಗೆಯೇ ಕಾನೂನು ಪರೀಕ್ಷೆಯಲ್ಲೂ ಹಿಂದೆ ಬಿದ್ದಿಲ್ಲ ಅದು. ಮಿನೆಸೋಟಾ ಯೂನಿವರ್ಸಿಟಿಯ ಪ್ರೊಫೆಸರುಗಳು ಕೊಟ್ಟ ನಾಲ್ಕು ಥರದ ಪರೀಕ್ಷೆಗಳನ್ನು ಬರೆದು, ಅವುಗಳಲ್ಲಿ ಸರಾಸರಿ ಸಿ ಗ್ರೇಡ್ ಪಡೆದಿದೆಯಂತೆ. ಸಾಫ್ಟ್‌ವೇರ್ ಕೋಡಿಂಗ್ ಬರೆಯುವುದನ್ನೂ ಕಲಿಯುತ್ತಿದೆಯಂತೆ.
ಅಸಾಧಾರಣ ಸಾಮರ್ಥ್ಯವಿರುವ ಈ ಚಾಟ್‌ಬಾಟ್ ಇನ್ನು ಮುಂದೆ ಬಹುತೇಕ ಕಂಪೆನಿಗಳ ಸಂವಹನ ಕೆಲಸದಲ್ಲಿ ಬಳಕೆಯಾಗುವ ಎಲ್ಲ ಸಾಧ್ಯತೆಗಳನ್ನೂ ಪರಿಣಿತರು ಊಹಿಸುತ್ತಿದ್ದಾರೆ. 2020ರಲ್ಲಿ ವಿವಿಧ ಕಂಪೆನಿಗಳ AI ಜನರೇಟೆಡ್ ಮೆಸೇಜ್‌ಗಳು ಶೇ. 2ರಷ್ಟಿತ್ತು ಎನ್ನಲಾಗಿದ್ದು, 2025ರ ವೇಳೆಗೆ ಇವು ಶೇ. 30ರಷ್ಟಾಗುವ ಅಂದಾಜು ಇದೆ.

ಎಲ್ಲಿಯವರೆಗೆ ಚಾಟ್ ಜಿಪಿಟಿ ಸಾಮರ್ಥ್ಯ ತಲುಪಲಿದೆ ಎಂದರೆ, ಬ್ಲಾಕ್ ಬಸ್ಟರ್ ಚಿತ್ರಗಳ ಕಂಟೆಂಟನ್ನೂ ಅದೇ ತಯಾರಿಸಬಲ್ಲಷ್ಟು ಮಟ್ಟಿಗೆ. 2030ರ ಹೊತ್ತಿಗೆ ಶೇ. 90ರಷ್ಟು ದೊಡ್ಡ ಚಲನಚಿತ್ರಗಳ ಕಂಟೆಂಟನ್ನು ಈ ಕೃತಕ ತಂತ್ರಜ್ಞಾನವೇ ಸಿದ್ಧಪಡಿಸಲಿದೆ. ಈಗಲೇ  ಆ ಕ್ಷೇತ್ರದಲ್ಲಿನ್ನೂ ಇದು ಹೆಜ್ಜೆಯಿಟ್ಟಿಲ್ಲ.

ಈ ತಂತ್ರಜ್ಞಾನ ಎಷ್ಟು ಗಮನ ಸೆಳೆಯುತ್ತಿದೆ ಎಂದರೆ, ಮೈಕ್ರೋಸಾಫ್ಟ್ ಕಂಪೆನಿ ಇದರ ಮೇಲೆ ಹಂತಹಂತವಾಗಿ ಬಿಲಿಯನ್ ಗಟ್ಟಲೆ ಡಾಲರ್ ತೊಡಗಿಸುವುದಕ್ಕೆ ಸಿದ್ಧವಾಗಿದೆ.

ಈಗಾಗಲೇ ಎಲ್ಲರಲ್ಲೂ ಕುತೂಹಲ ಕೆರಳಿಸಿರುವ ಚಾಟ್ ಜಿಪಿಟಿ ಮುಂದೆ ಕೂತು ಇಡೀ ಜಗತ್ತೇ ಚಾಟಿಂಗ್ ಶುರು ಮಾಡಿದೆ. ಪ್ರಶ್ನೆಗಳನ್ನು ಕೇಳಿ ಕುತೂಹಲ ತಣಿಸಿಕೊಳ್ಳುತ್ತಿರುವವರು, ಒಂದು ವಿಷಯ ಕೊಟ್ಟು ಅದರಿಂದ ಬರೆಸಲು ನೋಡುತ್ತಿರುವವರು, ಮನಸೋ ಇಚ್ಛೆ ಪ್ರಶ್ನೆ ಕೇಳಿದರೆ ಹೇಗೆ ರಿಯಾಕ್ಟ್ ಮಾಡುತ್ತದೆ ಎಂದು ಪರೀಕ್ಷೆ ಮಾಡುತ್ತಿರುವವರು, ಅದರ ಉತ್ತರಗಳನ್ನು ನೋಡಿ ರೋಮಾಂಚನ ಗೊಳ್ಳುತ್ತಿರುವವರು, ಹೀಗೆ ಪ್ರಾಯೋಗಿಕವಾಗಿ ಲಭ್ಯವಿರುವ ಅದರೆದುರು ಕುತೂಹಲಿಗಳ ಪ್ರಯೋಗವೂ ಬಹಳ ಜೋರಾಗಿಯೇ ಸಾಗಿದೆ. ಶುರುವಾದ ಎರಡೇ ತಿಂಗಳುಗಳಲ್ಲಿ 10 ಕೋಟಿಗೂ ಹೆಚ್ಚು ಬಳಕೆದಾರರು ಇದಕ್ಕೆ ಸೇರಿದ್ದಾರೆ. ಜನವರಿ  ಒಂದೇ ತಿಂಗಳಲ್ಲಿ 10 ಕೋಟಿಗೂ ಹೆಚ್ಚು ಪ್ರತ್ಯೇಕ ಬಳಕೆದಾರರು 59 ಕೋಟಿಗೂ ಹೆಚ್ಚು ಬಾರಿ ಇದಕ್ಕೆ ಭೇಟಿ ನೀಡಿದ್ದಾರೆ. ಆ್ಯಪ್ ಒಂದಕ್ಕೆ ಇಷ್ಟು ವೇಗದಲ್ಲಿ ಜನ ಬರುತ್ತಾ ಇರುವುದು ಇದೇ ಮೊದಲು ಎಂದು ವರದಿಗಳು ಹೇಳುತ್ತಿವೆ. 10 ಕೋಟಿ ಬಳಕೆದಾರರು ಸಿಗಲು ಟಿಕ್‌ಟಾಕ್‌ಗೆ 9 ತಿಂಗಳು ಬೇಕಾದರೆ, ಇನ್‌ಸ್ಟಾಗ್ರಾಂ ಗೆ ಎರಡು ವರ್ಷವೇ ತಗಲಿತ್ತು. ಆದರೆ ಚಾಟ್ ಜಿಪಿಟಿ ಎರಡೇ ತಿಂಗಳಲ್ಲಿ ಇದನ್ನು ಸಾಧಿಸಿದೆ ಎಂದರೆ ನೀವೇ ಊಹಿಸಿ. 

ಇದು ತಂದಿರುವ ಅನುಕೂಲಗಳ ಜೊತೆಗೇ ಎದ್ದಿರುವ ಆತಂಕಗಳು ಕೂಡ ಅಷ್ಟೇ ದೊಡ್ಡಮಟ್ಟದವಾಗಿವೆ. ವಿದ್ಯಾರ್ಥಿಗಳ ಪಾಲಿಗಂತೂ ತಾವು ಮಾಡಬೇಕಿರುವ ಹೋಂವರ್ಕ್ ಎಲ್ಲವನ್ನೂ ಇದರ ತಲೆಗೇ ಕಟ್ಟಿ ಕೆಲವೇ ನಿಮಿಷಗಳಲ್ಲಿ ನಿರಾಳವಾಗಿಬಿಡಬಹುದಾದ ಸವಲತ್ತು. ಇನ್ನು ವಿದ್ಯಾರ್ಥಿಗಳು ಮಾಡಿರುವ ಹೋಂವರ್ಕ್ ಅಥವಾ ಅಸೈನ್ ಮೆಂಟ್‌ಗಳನ್ನು ತಿದ್ದುವ ಕೆಲಸವನ್ನೂ ಶಿಕ್ಷಕರಿಗಿಂತ ಪರಿಣಾಮಕಾರಿಯಾಗಿ ಚಾಟ್ ಜಿಪಿಟಿ ಯೇ ಮಾಡಬಲ್ಲದು ಎಂಬ ವರದಿಗಳಿವೆ. ಆದರೆ ಇದೇ ಈಗ ಆತಂಕವನ್ನು ತಂದಿಟ್ಟಿರುವ ವಿಚಾರವೂ ಆಗಿದೆ. ಹೀಗಾದಲ್ಲಿ ಕಲಿಕೆ ಸಾಮರ್ಥ್ಯದ ಮೇಲೆ ಆಘಾತಕಾರಿ ಪರಿಣಾಮವಾಗಲಿದೆ. ಹಾಗಾಗಿಯೇ ಅಮೆರಿಕ, ಫ್ರಾನ್ಸ್ ಮತ್ತು ಭಾರತದಲ್ಲಿಯೂ ಇದು ವಿದ್ಯಾರ್ಥಿಗಳ ಕೈಗೆ ಬೇಡ ಅನ್ನುವ ಅಭಿಪ್ರಾಯ ವ್ಯಕ್ತವಾಗುತ್ತ್ತಿದೆ. ನಿಷೇಧ ಮಾಡುತ್ತಿರುವ ಸುದ್ದಿಯೂ ಇದೆ. ಮಕ್ಕಳ ಕೈಗೆ ಸುಲಭವಾಗಿ ಸಿಗಬಹುದಾದ ಇದರಿಂದ ಅನಾಹುತಗಳಾಗದಂತೆ ಎಚ್ಚರವಹಿಸುವುದು ಹೇಗೆ ಎಂಬ ತಲೆನೋವೂ ಶುರುವಾಗಿದೆ. ಆದರೆ ಅದನ್ನು ನಿರ್ಬಂಧಿಸದೆ ಅದನ್ನು ರಚನಾತ್ಮಕವಾಗಿ ಬಳಸಿಕೊಂಡು ಬೋಧನಾ ಹಾಗೂ ಮಕ್ಕಳ ಕಲಿಕಾ ವಿಧಾನವನ್ನು ಕ್ರಾಂತಿಕಾರಿಯಾಗಿ ಬದಲಾಯಿಸಬಹುದು ಎಂಬ ಅಭಿಪ್ರಾಯವೂ ಇದೆ. 

ಅಲ್ಲದೆ, ಈಗಾಗಲೇ ಯಾವುದೇ ಅನುಕೂಲಕಾರಿ ತಂತ್ರಜ್ಞಾನದ ದುರ್ಬಳಕೆಮಾಡಿಕೊಳ್ಳುವವರು ಇದನ್ನೂ ತಮ್ಮ ಕೈಯಲ್ಲಿನ ಅಸ್ತ್ರವಾಗಿಸಿಕೊಳ್ಳದೆ ಇರಲಾರರು. ಅಂಥ ಅಪಾಯಗಳ ಬಗ್ಗೆಯೂ ತಜ್ಞರು ಎಚ್ಚರಿಸತೊಡಗಿದ್ದಾರೆ.

ಗೂಗಲನ್ನೇ ಇದು ಮೂಲೆಗುಂಪಾಗಿಸೀತೆ ಎಂಬ ಪ್ರಶ್ನೆಯೂ ಎದ್ದಿದೆ. ಆದರೆ, ಚಾಟ್ ಜಿಪಿಟಿಗೆ ತನ್ನ ಬದ್ಧ ಪ್ರತಿಸ್ಪರ್ಧಿ ಮೈಕ್ರೋಸಾಫ್ಟ್ ಹೂಡಿಕೆ ಮಾಡಿರುವುದಕ್ಕೆ ಸೆಡ್ಡು ಹೊಡೆಯಲು ಗೂಗಲ್ ಕೂಡ ಸಜ್ಜಾಗಿದೆ. ಅದು ತನ್ನದೇ ಹೊಸ ಚಾಟ್‌ಬಾಟ್ ಶೀಘ್ರವೇ ಹೊರತರಲಿದೆ ಎಂದು ವರದಿಯಿದೆ. ಗೂಗಲ್ ಸಿಇಒ ಸುಂದರ್ ಪಿಚೈ ಇದರ ಸುಳಿವು ನೀಡಿದ್ದು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ನಲ್ಲಿ ಗೂಗಲ್ ಮುಂದಿನ ದಿನಗಳಲ್ಲಿ ಬಹಳ ದೊಡ್ಡ ಮಟ್ಟದಲ್ಲಿ ಬರಲಿದೆ ಎಂದಿದ್ದಾರೆ.   

ಹಾಗಾಗಿ  ಚಾಟ್ ಜಿಪಿಟಿ ಗೂಗಲ್ ಅನ್ನು ಬದಿಗೆ ಸರಿಸುವುದು ಅಷ್ಟು ಸುಲಭವಲ್ಲ ಎಂಬ ನಿರಾಳತೆಯೂ ಇನ್ನೊಂದೆಡೆ ವ್ಯಕ್ತವಾಗುತ್ತಿದೆ. ಯಾಕೆಂದರೆ ಇದು ಕೆಲವು ಮಿತಿಗಳನ್ನೂ ಹೊಂದಿದೆ.
ಇದರ ಮಿತಿಗಳೇನೆಂದರೆ,
ನಿಖರತೆಯ ಕೊರತೆ ಇದರಲ್ಲಿದೆ. ಇದು ನೀಡುವ ಉತ್ತರಗಳಲ್ಲಿ ಅಲ್ಲಲ್ಲಿ ತಪ್ಪುನುಸುಳಿರುತ್ತದೆ. ಅಲ್ಲದೆ ಇದರ ಪ್ರೋಗ್ರಾಮಿಂಗ್ ವಿಚಾರದಲ್ಲಿ ಮಾನವ ಹಸ್ತಕ್ಷೇಪದ ಅಗತ್ಯವಿದೆ.

ಇನ್ನು ಐಟಿಯಂಥ ಕ್ಷೇತ್ರಗಳಲ್ಲಿ, ಕಂಟೆಂಟ್ ಮೇಲೆ ಹೆಚ್ಚು ನೆಚ್ಚಿರುವ ಮಾಧ್ಯಮ ಸಂಸ್ಥೆಗಳ ವಲಯಗಳಲ್ಲಿ ಚಾಟ್ ಜಿಪಿಟಿ ಕಾಲಿಟ್ಟಿತೆಂದರೆ ಸಾವಿರಾರು ಮಂದಿಯ ಕೆಲಸವನ್ನೇ ಕಸಿದುಕೊಳ್ಳಲಿದೆ ಎಂಬ ಆತಂಕವೂ ಈಗಾಗಲೇ ಕಾಡತೊಡಗಿದೆ. ಕೋಡಿಂಗ್ ಬರೆಯಲು ಪಳಗಲಿರುವ, ಯಾವುದೇ ವಿಷಯ ಮೇಲೆ ತನ್ನೊಳಗಿನ ರಾಶಿ ರಾಶಿ ಮಾಹಿತಿ ಆಧರಿಸಿ ಅಗತ್ಯ ಮತ್ತು ನಿರ್ದಿಷ್ಟ ಕಂಟೆಂಟ್ ಸಿದ್ಧಪಡಿಸಬಲ್ಲ ಈ ಮಹಾ ತಂತ್ರಜ್ಞಾನ ವರವಾಗಲಿದೆಯೋ ವೈರಿಯಾಗಲಿದೆಯೋ ಎಂಬುದನ್ನು ಮುಂದಿನ ದಿನಗಳೇ ಹೇಳಲಿವೆ. ಸದ್ಯಕ್ಕಂತೂ ಇದು ಭಾರತೀಯ ಭಾಷೆಗಳಲ್ಲಿ ಲಭ್ಯವಿಲ್ಲ.
ಟೀಚರ್, ಲಾಯರ್, ಪತ್ರಕರ್ತ, ಕೋಡರ್, ಭಾಷಣ ಬರಹಗಾರ ಹೀಗೆ ಎಲ್ಲವೂ ಆಗಬಲ್ಲ ಇದರ ಈ ಹಿಂದಿನ ಆವೃತ್ತಿ ಜಿಪಿಟಿ-3 ಮೂರು ವರ್ಷಗಳ ಹಿಂದೆಯೇ ಬಂದಿತ್ತು. ಇದರ ಪೂರ್ಣರೂಪದ ಆವೃತ್ತಿ ಉಚಿತವಾಗಿ ಲಭ್ಯವಿರುವುದಿಲ್ಲ. ನಿಗದಿತ ಸಬ್‌ಸ್ಕ್ರಿಪ್ಷನ್ ನೀಡಿ ಬಳಸಬಹುದಾಗಿರುತ್ತದೆ. ಮೊನ್ನೆಯಷ್ಟೆ ಅಮೆರಿಕದಲ್ಲಿ ಇದರ ಪೇಯ್ಡ್ ಸಬ್‌ಸ್ಕ್ರಿಪ್ಷನ್ ಆವೃತ್ತಿಯನ್ನು ಘೋಷಣೆ ಮಾಡಲಾಗಿದೆ.

ನಿಜವಾಗಿಯೂ ಇದು ದೊಡ್ಡದೊಂದು ಕ್ರಾಂತಿ ತರಲಿದೆಯೇ? ಅಥವಾ ಬಹಳಷ್ಟು ಜನರ ಕೆಲಸಕ್ಕೆ ಕುತ್ತು ತರಲಿದೆಯೇ, ಸಮಸ್ಯೆಗಳ ಬಿರುಗಾಳಿಯನ್ನೇ ಎಬ್ಬಿಸಲಿದೆಯೇ ಎಂಬುದೇ ಈಗಿರುವ ದೊಡ್ಡ ಪ್ರಶ್ನೆ ಮತ್ತು ಭಯ.