‘ನವಿಲು ಪುರಾಣ’ ಯುದ್ಧದ ಆಖ್ಯಾನ, ಶಾಂತಿಯ ವ್ಯಾಖ್ಯಾನ

Update: 2023-02-07 03:20 GMT

ಹಿಂಸೆ ಮನುಷ್ಯನಲ್ಲಿ ಲಾಗಾಯ್ತಿನಿಂದಲೂ ಅಡಕವಾಗಿರುವ ವಿಷಯ. ಅದು ಮಾನವ ವಿಕಾಸದಲ್ಲಿ ಹಸಿವು, ನೀರಡಿಕೆ, ಸಂತಾನೋತ್ಪತ್ತಿ ಮುಂತಾದ ಮೂಲಭೂತ ಅಗತ್ಯಗಳ ಹಾಗೆಯೇ ಅತ್ಯಂತ ಪ್ರಜ್ಞಾಪೂರ್ವಕವಾಗಿ ಬೆನ್ನುಹತ್ತಿ ಸಾಗಿಬಂದಿದೆ. ಹಿಂಸೆಯನ್ನು ಹತೋಟಿಯಲ್ಲಿಡಲು ಮನುಷ್ಯ ಹರಸಾಹಸ ಪಡಬೇಕು. ಸ್ವಲ್ಪಮಿತಿಮೀರಿದರೂ ಅದು ಅಸಂಬದ್ಧಕ್ಕೆ ಎಡೆಮಾಡಿಕೊಡುತ್ತದೆ. ಹಿಂಸೆಯ ಸ್ವರೂಪವೂ ಕಾಲ-ದೇಶಕ್ಕೆ ಅನುಸಾರವಾಗಿ ಭಿನ್ನ ಸ್ವರೂಪವನ್ನು ಪಡೆಯುತ್ತಾ ಬಂದಿದೆ.

ಯುದ್ಧವೂ ಹಿಂಸೆಯ ಒಂದು ರೂಪ. ಮಾನವನ ಇತಿಹಾಸದುದ್ದಕ್ಕೂ ಯುದ್ಧದ ರಕ್ತಸಿಕ್ತ ಅಧ್ಯಾಯಗಳು ದಾಖಲಾಗುತ್ತಾ ಬಂದಿವೆ. ಶಾಂತಿ ಮನುಷ್ಯನ ಸಾಮಾನ್ಯ ಜೀವನಸ್ಥಿತಿಯೆಂದು ಮೇಲುನೋಟಕ್ಕೆ ಕಾಣಿಸಿದರೂ ಸದಾ ಯುದ್ಧೋನ್ಮಾದಲ್ಲಿರುವುದು ಮನುಷ್ಯನಿಗೆ ಕಷ್ಟವೇನಲ್ಲ! ಇಂತಹ ಯುದ್ಧೋನ್ಮಾದದ ಅನೇಕ ಬಿಡಿ ಬಿಡಿ ಉದಾಹರಣೆಗಳ ಆಖ್ಯಾನವನ್ನು ನವಿಲಿನ ಸುತ್ತ ಹೆಣೆದಿರುವ ನಾಟಕ ನವಿಲು ಪುರಾಣ. ಶಕ್ತಿ ಮತ್ತು ಅಧಿಕಾರವನ್ನು ಪ್ರತಿಬಿಂಬಿಸುವ ಪಕ್ಷಿ ನವಿಲು. ಅದು ತನ್ನ ಬಣ್ಣ ಮತ್ತು ಸೌಂದರ್ಯದಿಂದ ಸದಾ ಗಮನಸೆಳೆಯುತ್ತದೆ ಕೂಡ. ನವಿಲನ್ನು ಶಾಂತಿಯ ದೂತನ ರೂಪದಲ್ಲಿ ಕಾಣುವ ಈ ನಾಟಕದ ಮುಖ್ಯಪಾತ್ರಧಾರಿ ಮತ್ತು ನಿರೂಪಕ ಇತಿಹಾಸದುದ್ದಕ್ಕೂ ನಡೆದ ಅನೇಕ ಬರ್ಬರ ಯುದ್ಧಗಳ ಭಯಾನಕ ಕಥೆಗಳನ್ನು ಕಾಲ್ಪನಿಕ ನವಿಲಿನ ಸಾನಿಧ್ಯದಲ್ಲಿ ವಿವರವಾಗಿ ನಿರೂಪಿಸುತ್ತಾ ಸಾಗುತ್ತಾನೆ. ದೇಶ, ಕಾಲಗಳನ್ನು ಮೀರುವ ಇಲ್ಲಿನ ನವಿಲು ಮಾನವ ಚರಿತ್ರೆಯಲ್ಲಿ ಘಟಿಸಿದ ಎಲ್ಲಾ ಯುದ್ಧಗಳಿಗೆ ಹಿಡಿದ ಕನ್ನಡಿಯೂ ಹೌದು.

ಪ್ರಸಿದ್ಧ ಉರ್ದು ಲೇಖಕ ಇಂತಿಝಾರ್ ಹುಸೇನ್ ರಚಿಸಿದ ‘ದಿ ಕ್ರಾನಿಕಲ್ಸ್ ಆಫ್ ದಿ ಪಿಕಾಕ್ಸ್’ ಕಥಾಸಂಕಲನವನ್ನು ಪ್ರೊ.ಕೆ.ಇ. ರಾಧಾಕೃಷ್ಣ ಕನ್ನಡಕ್ಕೆ ಅನುವಾದಿಸಿದ್ದಾರೆ. ಇದರ ಒಂದು ಮುಖ್ಯ ಕಥೆಯಾದ ನವಿಲು ಪುರಾಣವನ್ನು ಆಧರಿಸಿ ಹಿರಿಯ ರಂಗ ನಿರ್ದೇಶಕ ಸುರೇಶ್ ಆನಗಳ್ಳಿ ಈ ನಾಟಕವನ್ನು ಕಟ್ಟಿದ್ದಾರೆ. ಇದು ಬೆಂಗಳೂರಿನ ‘ಅನೇಕ’ ತಂಡದವರ ನಾಟಕ.

ಮಾತು ಪ್ರಧಾನ ನಾಟಕವಿದು. ಇಡೀ ನಾಟಕ ನಿಂತಿರುವುದು ನಿರೂಪಕನ ಅಭಿನಯ ಮತ್ತು ಕಥನಕೌಶಲದ ಮೇಲೆ. ನಾಟಕದ ಪ್ರಾರಂಭದಿಂದ ಕಡೆಯವರೆಗೆ ನಿರೂಪಕ ರಂಗದ ಮೇಲೆ ನಿಂತು ಹಲವಾರು ಕಲಹಗಳ ವಿಸ್ತಾರವಾದ ವಿವರಣೆಗಳನ್ನು ತನ್ನ ವಾಕ್ಚಾತುರ್ಯದ ಮುಖಾಂತರ ನೀಡುತ್ತಾನೆ. ಅಲ್ಲಲ್ಲಿ ನವಿಲುಗಳು ರಂಗದ ಮೇಲೆ ಬಂದು ಕಥೆಯ ಸೌಂದರ್ಯಪ್ರಜ್ಞೆಯನ್ನು ಹೆಚ್ಚಿಸಲು ಪ್ರಯತ್ನ ಪಡುತ್ತವೆ. ಈ ನಾಟಕದ ಶೈಲಿ ಮತ್ತು ರಂಗವಿನ್ಯಾಸವು ತುಸು ಭಿನ್ನವಾಗಿದೆ. ರಂಗದ ಮೇಲೆ ಬಿಳಿ ಪರದೆಯನ್ನು ಕಟ್ಟಿ ನಾಟಕದ ಪ್ರಾರಂಭ ಮತ್ತು ಅಂತ್ಯಗಳೆರಡರಲ್ಲೂ ಅಣುಬಾಂಬ್ ಮತ್ತು ಸಾಮೂಹಿಕ ವಿನಾಶದ ಯುದ್ಧ ಪರಿಣಾಮಗಳ ಚಿಕ್ಕ ಸಾಕ್ಷ್ಯಚಿತ್ರ ತುಣುಕುಗಳನ್ನು ಪ್ರದರ್ಶಿಸಲಾಗುತ್ತದೆ. ನಾಟಕದೊಳಗೇ ಸಿನೆಮಾ ನೋಡುವ ಅನುಭವವೂ ಮತ್ತು ಯುದ್ಧದ ಭೀಕರತೆಯನ್ನು ರಂಗದ ಮೇಲೆ ಆದರೆ ತೆರೆಯಲ್ಲಿ ಕಾಣುವ ಸಾಧ್ಯತೆಯು ಪ್ರೇಕ್ಷಕರಿಗೆ ಸಿಗುತ್ತದೆ. ಬಗೆಬಗೆಯ ಮಾಸ್ಕ್ ಮತ್ತು ಗೊಂಬೆಗಳ ಬಳಕೆಯೂ ನಾಟಕದ ತುಂಬೆಲ್ಲಾ ಇದೆ. ನವಿಲುಗಳನ್ನು ಅನನ್ಯವಾದ ರೂಪುರೇಖೆಗಳಲ್ಲಿ ಚಿತ್ರಿಸಲಾಗಿದೆ. ಅವುಗಳ ನೃತ್ಯಗಳೂ ರಂಗಬೆಳಕು ಮತ್ತು ಬಣ್ಣ-ಬಣ್ಣದ ವೇಷಭೂಷಣದ ಆಕರ್ಷಣೆಯಲ್ಲಿ ಅಪೂರ್ವವಾಗಿವೆ. ಪಾಶ್ಚಾತ್ಯ, ಶಾಸ್ತ್ರೀಯ, ಕವಾಲಿ ಹೀಗೆ ರಂಗ ಸಂಗೀತವೂ ಸಾಕಷ್ಟು ವೈವಿಧ್ಯಮಯವಾಗಿದೆ. ಸುಮಾರು ಒಂದೂವರೆ ಗಂಟೆ ರಂಗದ ಮೇಲೆ ತೆರೆದುಕೊಳ್ಳುವ ನಾಟಕದ ಆಶಯ ಉತ್ತಮವಾಗಿದೆ.

ಇಪ್ಪತ್ತನೇ ಶತಮಾನದ ಭೀಕರ ಹಿರೋಷಿಮಾ ಯುದ್ಧದಿಂದ ಪ್ರಾರಂಭವಾಗುವ ನಾಟಕ, ಚರಿತ್ರೆಯ ಅನೇಕ ರಣರಂಗಗಳ ನೋವಿನ ನೆನಪನ್ನು ಕೆದಕುತ್ತಾ ಕಡೆಗೆ ಪುರಾಣದ ಕುರುಕ್ಷೇತ್ರದ ಯುದ್ಧದವರೆಗೂ ಹೋಗಿನಿಲ್ಲುತ್ತದೆ. ಹಿಂಸೆಯ ಹಲವು ಮುಖಗಳನ್ನು ಅರ್ಥಮಾಡಿಕೊಳ್ಳಲು ಬಯಸುವ ನಾಟಕ ಆ ಎಲ್ಲದರ ಹಿಂದಿರುವ ಮನುಷ್ಯನ ಕ್ರೂರ ಮನಃಸ್ಥಿತಿಯನ್ನೂ ಸ್ವಾರ್ಥದ ಉದ್ದೇಶವನ್ನೂ ಪ್ರಶ್ನಿಸುತ್ತದೆ. ಯಾವುದೇ ಯುದ್ಧ ಪ್ರಾರಂಭವಾಗುವಾಗ ಅದನ್ನು ಪ್ರಾರಂಭ ಮಾಡುವವರು ಈ ಯುದ್ಧದಿಂದ ಮುಂಬರುವ ದಿನಗಳಲ್ಲಿ ಉತ್ತಮ ಬದುಕು ಲಭಿಸುತ್ತದೆ ಎಂದೇ ಸಾಮಾನ್ಯ ಜನರನ್ನು ನಂಬಿಸಲೆತ್ನಿಸುತ್ತಾರೆ. ಆದರೆ ಪ್ರತಿಯೊಂದು ಯುದ್ಧದಲ್ಲಿಯೂ ಕಡೆಗೆ ಲಭಿಸುವುದು ವಿನಾಶ ಮಾತ್ರ. ಹಾಗಿದ್ದರೂ ಪ್ರಾಚೀನ ಕಾಲದಿಂದಲೂ ಮನುಷ್ಯ ಯಾವ ಯುದ್ಧದಿಂದಲೂ ಯಾವ ಪಾಠವನ್ನೂ ಕಲಿಯಲಿಲ್ಲವೆನ್ನುವುದು ವಿಷಾದದ ಸಂಗತಿ. ಈ ವಿಷಾದವೇ ಈ ನಾಟಕದ ಮುಖ್ಯ ಪಾತ್ರಧಾರಿಯ ಸ್ಥಾಯೀಭಾವ.

ಸೌಂದರ್ಯದ ಪ್ರತೀಕಗಳಾದ ನವಿಲುಗಳು ಒಮ್ಮೆ ಪೋಕ್ರಾನ್‌ನಲ್ಲಿ ಪರೀಕ್ಷಾರ್ಥ ಸ್ಫೋಟಗೊಂಡ ಅಣುಬಾಂಬ್‌ನಿಂದಾಗಿ ಆರ್ತನಾದ ಮಾಡುತ್ತಾ ದಿಕ್ಕಾಪಾಲಾಗಿ ಹಾರಿಹೋಗಿ ಆಮೇಲೆ ಅದೆಷ್ಟೂ ದಿನಗಳವರೆಗೆ ಅಲ್ಲಿಗೆ ಬರಲೇ ಇಲ್ಲವೆನ್ನುವ ಮತ್ತು ಈಗಲೂ ರಾಜಸ್ಥಾನದ ಆ ಜಾಗದಲ್ಲಿ ನವಿಲುಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿವೆಯೆನ್ನುವ ಒಂದು ಪ್ರಮುಖ ಸುದ್ದಿ ನಾಟಕದ ನಿರೂಪಕನ ವಿಷಾದವನ್ನು ಹೆಚ್ಚಿಸುವುದಷ್ಟೇ ಅಲ್ಲ, ಬದಲಿಗೆ ಪಾಠಕಲಿಯುವ ಸೂಕ್ಷ್ಮಜ್ಞ ಮನಸ್ಸು ಮನುಷ್ಯನಿಗಿದ್ದರೆ ಈ ಸುದ್ದಿಯೊಂದೇ ಸಾಕು ಯುದ್ಧವನ್ನು ಯಾವ ಕಾಲಕ್ಕೂ ನಿಲ್ಲಿಸಲು ಎನ್ನುವುದನ್ನು ತೋರಿಸುತ್ತದೆ. ಹೀಗೆ ಹಲವಾರು ಸನ್ನಿವೇಶಗಳು ಮತ್ತು ಯುದ್ಧದ ಭೀಕರ ವಿವರಗಳು ನಾಟಕದುದ್ದಕ್ಕೂ ಬಂದು ನಾಟಕದ ಯುದ್ಧ ವಿರೋಧಿ ಆಶಯ ಸ್ಪಷ್ಟವಾಗಿ ಕಾಣುತ್ತದೆ.

ನಾಟಕದ ಪ್ರಧಾನ ಅಂಶವಾದ ನಿರೂಪಕನ ಮಾತುಗಳೇ ನಾಟಕದ ನ್ಯೂನತೆಯೂ ಆಗಿಬಿಡುವ ಸಮಸ್ಯೆ ಈ ನಾಟಕಕ್ಕಿದೆ. ಕೆಲವು ಬಾರಿ ನಿರೂಪಕನ ಸುದೀರ್ಘ ಮಾತುಗಳು ತಮ್ಮ ನಾಟಕೀಯ ಅಂಶಗಳನ್ನು ಕಳೆದುಕೊಂಡು ಕೇವಲ ಒಬ್ಬ ಭಾಷಣಕಾರನ ವಾಚಾಳಿತನದಂತೆ ಕೇಳಿ, ತಮ್ಮ ಮಾತಿನ ಗಾಂಭೀರ್ಯವನ್ನು ಕಡಿಮೆ ಮಾಡಿಕೊಳ್ಳುವ ಸಾಧ್ಯತೆಗಳು ಈ ನಾಟಕದಲ್ಲಿವೆ. ರೂಪಕಗಳಲ್ಲಿ ಬರಬಹುದಾದ ಪ್ರತಿಯೊಂದು ಅಂಶಗಳನ್ನು ದೃಶ್ಯಗೊಳಿಸಿ ರಂಗದ ಮೇಲೆ ತಂದು ತೋರಿಸಿ ಅಭಿನಯಿಸಬೇಕೆನ್ನುವ ಹಪಾಹಪಿ ನಾಟಕವನ್ನು ಇನ್ನಷ್ಟು ವಾಚ್ಯಗೊಳಿಸುತ್ತದೆ.

ಯುದ್ಧವಿರೋಧಿ ಮತ್ತು ಶಾಂತಿಪ್ರಿಯ ಮನಃಸ್ಥಿತಿಯನ್ನು ತೋರಿಸಲು ಪ್ರತಿಹಂತದಲ್ಲಿಯೂ ಪ್ರಯತ್ನಪಡುವ ನಾಟಕ ತನ್ನ ಅತ್ಯುತ್ತಮ ಆಶಯಗಳನ್ನು ಪ್ರೇಕ್ಷಕರಿಗೆ ತಲುಪಿಸುವಲ್ಲಿ ತುಸು ಪ್ರಯಾಸಪಡುತ್ತದೆ. ರೂಪಕಗಳು ತೀರಾ ನೇರ ನುಡಿಗಟ್ಟುಗಳಾಗಿ ತಮ್ಮ ಕಾವ್ಯಶಕ್ತಿಯನ್ನು ಮತ್ತು ರಂಗಸಾಧ್ಯತೆಗಳನ್ನು ಕಳೆದುಕೊಂಡುಬಿಡುತ್ತವೆ. ಟಿವಿ ಸೀರಿಯಲ್‌ಗಳಲ್ಲಿ ಕಾಣಸಿಗುವ ಮತ್ತು ಇತ್ತೀಚಿನ ದಿನಗಳಲ್ಲಿ ಅತ್ಯಂತ ಜನಪ್ರಿಯಗೊಂಡಿರುವ ಅಸಹಜ ರೀತಿಯ ಕೃತ್ರಿಮ ಅಭಿನಯದ ತೊಡಕೂ ಈ ನಾಟಕದಲ್ಲಿದೆ. ಆಧುನಿಕ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಂಡ ರೀತಿಯಲ್ಲಿಯೇ ರಂಗಭೂಮಿಯ ರಂಗಸಾಧ್ಯತೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಬಳಸಿಕೊಂಡು ಈ ನಾಟಕವನ್ನು ಕಟ್ಟಿದ್ದರೆ ಪ್ರಾಯಶಃ ಇದೊಂದು ಅತ್ಯುತ್ತಮ ನಾಟಕವಾಗಿರುತ್ತಿತ್ತು. ಪ್ರಸಕ್ತ ಇದೊಂದು ಅತ್ಯುತ್ತಮ ಆಶಯವನ್ನು ಹೊಂದಿದ ನಾಟಕವಾಗಿ ಮಾತ್ರ ಜನಮಾನಸದಲ್ಲಿ ನೆಲೆನಿಲ್ಲುವಂತಿದೆ.