ಬಿಜೆಪಿಗೆ ಗೆಲ್ಲುವುದು ಗೊತ್ತಿದೆ ಎಂದಲ್ಲ, ಸೋತರೂ ಸರಕಾರ ಮಾಡುತ್ತೇವೆ ಎನ್ನುವವರು ಅವರು: ದಿನೇಶ್ ಗುಂಡೂರಾವ್

ವಾರ್ತಾಭಾರತಿ ಚುನಾವಣಾ ವಿಶೇಷ ಸಂದರ್ಶನ ಸರಣಿ

Update: 2023-02-07 08:09 GMT

ನಾವು ಎಲ್ಲರೂ ಬೇಕು ಎನ್ನುವವರು. ಮುಸ್ಲಿಮರಿಗೆ ತೊಂದರೆಯಾದಾಗ ಧ್ವನಿಯೆತ್ತಬೇಕು. ಹಾಗೆ ಮಾಡಿದ ತಕ್ಷಣ ಮುಸ್ಲಿಮರ ಪರ, ಹಿಂದೂ ವಿರೋಧಿ ಪಟ್ಟ ಕಟ್ಟಿದಾಗ, ಭಾವನಾತ್ಮಕವಾಗಿ ಹೇಳಿ ಜನರನ್ನು ಪ್ರಚೋದಿಸಿದಾಗ ಜನರಿಗೆ ಹೌದೆನ್ನಿಸುತ್ತದೆ. ಆದರೆ ಈ ಬಾರಿ ಕೋಮು ಧ್ರುವೀಕರಣ ಫಲ ನೀಡದು. ಹಿಂದುತ್ವದ ನೆಲೆ ಎನ್ನಲಾಗುವ ಮಲೆನಾಡು, ಕರಾವಳಿಯಲ್ಲಿಯೇ ಜನ ಬೇಸತ್ತು ಹೋಗಿದ್ದಾರೆ. ಬಿಜೆಪಿಗೆ ತಿರುಗೇಟು ಕೊಡುವ ವಾತಾವರಣವಿದೆ.

ಭಾರತ್ ಜೋಡೊ ಯಾತ್ರೆ ಭಾರತಕ್ಕೆ, ಕಾಂಗ್ರೆಸ್‌ಗೆ ಏನು ಕೊಟ್ಟಿತು?

ದಿನೇಶ್ ಗುಂಡೂರಾವ್: ದೇಶದಲ್ಲಿ ಅನೇಕ ರೀತಿಯಲ್ಲಿ ಭಯದ ವಾತಾವರಣ, ಸಂಕಟದ ಸ್ಥಿತಿಯಿದೆ. ಇಂತಹ ಹೊತ್ತಿನಲ್ಲಿ, ದೇಶವನ್ನು ನಾವು ಕಾಪಾಡಬಹುದು, ಅನ್ಯಾಯದ ವಿರುದ್ಧ ಹೋರಾಡಬಹುದು, ಸಮಾನತೆ ತರಲು ಧ್ವನಿ ಎತ್ತಬಹುದು ಎಂಬುದನ್ನು ಈ ಯಾತ್ರೆ ತೋರಿಸಿದೆ. ಧೈರ್ಯ ಕೊಡುವ ಕೆಲಸವಾಗಿದೆ.

 ಯಾತ್ರೆಯಿಂದ ಚುನಾವಣೆ ಮೇಲೆ ಪರಿಣಾಮವೇನು?

ದಿನೇಶ್ ಗುಂಡೂರಾವ್: ಇದು ನೇರವಾಗಿ ಚುನಾವಣೆಗೆ ಸಂಬಂಧಿಸಿದ್ದಲ್ಲ. ದೇಶದ ಜನರಲ್ಲಿ ಜಾಗೃತಿ ಮೂಡಿಸುವ, ಜನರನ್ನು ಒಗ್ಗೂಡಿಸುವ ಉದ್ದೇಶದ್ದು. ಕಾಂಗ್ರೆಸನ್ನು ಗೆಲ್ಲಿಸುವ ಉದ್ದೇಶದಿಂದ ಮಾಡಿದ್ದಲ್ಲ. ಬಿಜೆಪಿ ವಿರುದ್ಧ ಹೋರಾಟ ಮಾಡಬೇಕೆಂಬ ಶಕ್ತಿಗಳಿಗೆ, ಅಂತಹ ಆಲೋಚನೆಯುಳ್ಳ ಯಾವುದೇ ಪಕ್ಷಗಳಿಗೆ ಈ ಯಾತ್ರೆಯಿಂದ ಸಹಾಯವಾಗಿದೆ. 

 ಬಿಬಿಸಿ ಡಾಕ್ಯುಮೆಂಟರಿ ವಿಚಾರವಾಗಿ ಏನು ಹೇಳುತ್ತೀರಿ?

ದಿನೇಶ್ ಗುಂಡೂರಾವ್: ಬಿಬಿಸಿ ಡಾಕ್ಯುಮೆಂಟರಿಯನ್ನು ನಾನು ನೋಡಿಲ್ಲ. ಅದರ ಬಗ್ಗೆ ಓದಿ ತೀಳಿದಿದ್ದೇನೆ. ಆವತ್ತು ಗುಜರಾತಿನಲ್ಲಿ ಹಾಗೆ ಆದಾಗ ಪ್ರಧಾನಿಗಳೇ ಬಂದು ರಾಜಧರ್ಮ ಪಾಲಿಸಬೇಕು ಎಂದರು. ಅದರರ್ಥ, ರಾಜಧರ್ಮ ಪಾಲನೆಯಾಗಿಲ್ಲ. ಸರಕಾರದ ಬೆಂಬಲದಿಂದಲೇ ಎಲ್ಲ ಆಯಿತೆನ್ನುವುದು ನಿಜ. ಆ ಘಟನೆಯಲ್ಲಿದ್ದವರೆಲ್ಲ ಖುಲಾಸೆಯಾಗಿ ಆಚೆಗೆ ಬಂದಿದ್ದಾರೆ. ಕೋರ್ಟಿನ ತೀರ್ಪು ಒಪ್ಪಿಕೊಳ್ಳಬೇಕಾಗುತ್ತದೆ. ಆದರೆ ತಾರ್ಕಿಕವಾಗಿ ಕಾರಣಕರ್ತರು ಯಾರೆಂಬುದರ ಬಗ್ಗೆ ಅನುಮಾನವೇ ಇಲ್ಲ.

 ಹಿಂಡನ್‌ಬರ್ಗ್ ವರದಿ ಬಗ್ಗೆ?

ದಿನೇಶ್ ಗುಂಡೂರಾವ್: ಅದಾನಿ ಬೆಳವಣಿಗೆ ಎಲ್ಲರಿಗೂ ಆಶ್ಚರ್ಯ ತರುವಂತಹದ್ದು. ಮೋದಿಯವರ ಜೊತೆ ಅವರಿಗೆ ಹತ್ತಿರದ ಸಂಬಂಧ ಇದೆಯೆಂಬುದು ಎಲ್ಲರಿಗೂ ಗೊತ್ತಿದೆ. ಗುಜರಾತಿನಲ್ಲಿ ಮೋದಿ ಸಿಎಂ ಆಗಿದ್ದಾಗಿನಿಂದಲೂ ಅದು ಇತ್ತು. ಪ್ರಧಾನಿಯಾದ ಮೇಲೆ ಅದಾನಿ ಬೆಳವಣಿಗೆ ಶರವೇಗದಲ್ಲಿ ಆಯಿತು. ಹಿಂಡನ್‌ಬರ್ಗ್ ದಾಖಲೆಗಳ ಸಮೇತ ವರದಿ ಮಾಡಿದೆ. ಇಡೀ ದೇಶದ ಆಸ್ತಿ ಅದಾನಿ ಕೈಗೆ ಹೋಗುತ್ತಿರುವುದನ್ನು ನೋಡುತ್ತಿದ್ದೇವೆ. ರಾಹುಲ್ ಗಾಂಧಿಯವರು ಆರೇಳು ವರ್ಷಗಳಿಂದ ಹೇಳುತ್ತಿರುವುದು ಇದನ್ನೇ. ಅಗ್ರ ಶ್ರೀಮಂತರು ದೇಶದ ಆಸ್ತಿಯನ್ನೆಲ್ಲ ಮುಷ್ಟಿಯಲ್ಲಿಟ್ಟುಕೊಳ್ಳುತ್ತಿದ್ದಾರೆ ಎಂದು. ದೇಶದ ಶೇ. 90ರಷ್ಟು ಆಸ್ತಿ 20 ಜನ ಶ್ರೀಮಂತರ ಕೈಯಲ್ಲಿದೆ. ಬಡತನ, ಅಸಮಾನತೆ ಹೆಚ್ಚುತ್ತಿದೆ. ಸಣ್ಣಪುಟ್ಟ ಉದ್ಯಮಿಗಳು, ವ್ಯಾಪಾರಿಗಳು ನಶಿಸಿಹೋಗುತ್ತಿದ್ದಾರೆ. ಸಂಪತ್ತಿನ ಕೇಂದ್ರೀಕರಣ ಆಗುತ್ತಿದೆ. ಇದು ಬಹಳ ಅಪಾಯಕಾರಿ. ಬ್ರಿಟಿಷರ ವಿರುದ್ಧ ಹೋರಾಟ ನಡೆದದ್ದೇ ದೇಶದ ಸಂಪತ್ತೆಲ್ಲ ಅವರ ಕೈಗೆ ಹೋಗುತ್ತಿತ್ತು ಎಂಬ ಕಾರಣಕ್ಕೆ. ಆದರೆ ಇಂದು ದೇಶದ ಕೆಲವೇ ಜನರ ಕೈಗೆ ದೇಶದ ಆಸ್ತಿ ಹೋಗುತ್ತಿದೆ. ಈ ಬೆಳವಣಿಗೆ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೇ ಗಂಡಾಂತರಕಾರಿ. 

 ಈಗ ಭ್ರಷ್ಟಾಚಾರ ವಿಚಾರ ಚರ್ಚೆಯಾಗುತ್ತಿದೆ. ನಿಮ್ಮ ಕಾಲದಲ್ಲಿ ಭ್ರಷ್ಟಾಚಾರ ಇರಲಿಲ್ಲವೆ?

ದಿನೇಶ್ ಗುಂಡೂರಾವ್: ಭ್ರಷ್ಟಾಚಾರ ದೊಡ್ಡ ಪಿಡುಗು. ರಾಜಕೀಯದಲ್ಲಂತೂ ಇದ್ದೇ ಇದೆ. ಭ್ರಷ್ಟಾಚಾರ ಮಾಡಿರಲಿಲ್ಲ ಎಂದು ಹೇಳುವ ನೈತಿಕತೆ ಯಾರಿಗೂ ಇಲ್ಲ. ಆದರೆ ಇಂದು ಲೂಟಿ ನಡೆಯುತ್ತಿದೆ. ಪ್ರತಿಯೊಂದರಲ್ಲಿಯೂ ಹಣ ಮಾಡುವುದೇ ಉದ್ದೇಶವಾಗಿದೆ. ಕೆಲಸಕ್ಕಿಂತ ಮೊದಲೇ ಗುತ್ತಿಗೆದಾರರಿಂದ ನೇರವಾಗಿ 20, 30, 40 ಪರ್ಸೆಂಟ್ ಕೇಳುವ ಥರದ ಹಗಲು ದರೋಡೆಯನ್ನು ಬಿಜೆಪಿಯವರು ಮಾಡುತ್ತಿದ್ದಾರೆ. ಭ್ರಷ್ಟಾಚಾರವನ್ನು ಯಾವ ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದಾರೆಂದರೆ ಸಂಪೂರ್ಣ ವ್ಯವಸ್ಥೆ ಕುಲಗೆಟ್ಟುಹೋಗಿದೆ. 

 ಈಗ ನೀವು ಕಡುಭ್ರಷ್ಟರೆನ್ನುತ್ತಿರುವ ಸುಧಾಕರ್, ಮುನಿರತ್ನ, ಸೋಮಶೇಖರ್ ಎಲ್ಲರೂ ಮೂರ್ನಾಲ್ಕು ವರ್ಷಗಳ ಕೆಳಗೆ ಕಾಂಗ್ರೆಸ್‌ನಲ್ಲೇ ಇದ್ದರಲ್ಲವೆ?
ದಿನೇಶ್ ಗುಂಡೂರಾವ್: ಆ ಮೂವರ ಹೆಸರು ಮಾತ್ರ ಯಾಕೆ, ಬಿಜೆಪಿಯವರೇ ಎಷ್ಟೋ ಜನ ಇದ್ದಾರೆ. ಉದಾಹರಣೆಗೆ ಈಶ್ವರಪ್ಪ. ಕಾಂಗ್ರೆಸ್‌ನಿಂದ ಹೋದವರು ನಮ್ಮ ಕಾಲದಲ್ಲಿ ಸಚಿವರಾಗಿರಲಿಲ್ಲ. ಅಲ್ಲಿಗೆ ಅವರು ಹೋದದ್ದೇ ಸಚಿವರಾಗಬೇಕು, ದುಡ್ಡು ಮಾಡಬೇಕು ಎಂದು. ದುಡ್ಡು ತೆಗೆದುಕೊಂಡೇ ಹೋಗಿದ್ದಾರೆ. ರಾಜ್ಯದಲ್ಲಿ ಆಡಳಿತ ಸ್ಥಿತಿ ಹದಗೆಟ್ಟು ಹೋಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅದನ್ನು ಸರಿಪಡಿಸುವುದೇ ದೊಡ್ಡ ಸವಾಲಾಗಲಿದೆ.

 ಕಾಂಗ್ರೆಸ್ ಸರಕಾರ ಬರುವ ವಿಶ್ವಾಸ ಇದೆಯೆ?

ದಿನೇಶ್ ಗುಂಡೂರಾವ್: ಖಂಡಿತ ಇದೆ. ಜನರಿಗೆ ಈ ಸರಕಾರದ ಬಗ್ಗೆ ಕೆಟ್ಟ ಅಭಿಪ್ರಾಯ ಬಂದಿದೆ. ಸಿದ್ದರಾಮಯ್ಯ-ಡಿ.ಕೆ. ಶಿವಕುಮಾರ್ ಮಧ್ಯೆ ಭಿನ್ನಮತವಿದೆ ಎನ್ನುತ್ತಾರೆ. ಆದರೆ ಬಿಜೆಪಿಯವರಲ್ಲಿ ಸಹಮತ ಇದೆಯೆ? ಮುಖ್ಯಮಂತ್ರಿಯ ಮಾತು ಕೇಳುವುದಕ್ಕೂ ಯಾರೂ ತಯಾರಿಲ್ಲ. 

 ಆದರೆ, ಅವರಿಗೆ ಚುನಾವಣೆ ಹೇಗೆ ಗೆಲ್ಲಬೇಕೆಂದು ಗೊತ್ತಿದೆಯಲ್ಲವೆ?

ದಿನೇಶ್ ಗುಂಡೂರಾವ್: ಹಾಗಲ್ಲ. ಯಥೇಚ್ಛವಾಗಿ ಹಣ ಖರ್ಚು ಮಾಡುತ್ತಾರೆ. ಎಲ್ಲರನ್ನೂ ಖರೀದಿ ಮಾಡುವುದು, ಬೆದರಿಸುವುದು, ಈ.ಡಿ., ಸಿಬಿಐ ಎಲ್ಲವುಗಳ ದುರುಪಯೋಗ ಮಾಡಿಕೊಳ್ಳುವುದು ಇವೆಲ್ಲವೂ ಇದೆ. ಕಾಂಗ್ರೆಸ್ ಕಾಲದಲ್ಲಿ ಎಲ್ಲವೂ ಸರಿಯಿತ್ತು ಎಂದಲ್ಲ. ಆದರೆ ಈ ರೀತಿಯ ದುರುಪಯೋಗ - ವಿರೋಧ ಪಕ್ಷದವರನ್ನು ಬೆದರಿಸುವುದು, ಜೈಲಿಗೆ ಕಳಿಸುವುದು, ಪತ್ರಕರ್ತರ ಮೇಲೆ ಆಕ್ರಮಣ ಇದೆಲ್ಲ ನಡೆದಿರಲಿಲ್ಲ. ಅವರಿಗೆ ಗೆಲ್ಲುವುದು ಗೊತ್ತಿದೆ ಎಂದಲ್ಲ. ಸೋತರೂ ಸರಕಾರ ಮಾಡುತ್ತೇವೆ ಎಂದು ಹೇಳಿಕೊಳ್ಳುವವರು ಅವರು.

 ಹಿಂದೆಯೂ ಗೋವಾದಲ್ಲಿ, ಕರ್ನಾಟಕದಲ್ಲಿ ನಿಮ್ಮ ಶಾಸಕರನ್ನು ಉಳಿಸಿಕೊಳ್ಳಲು ನಿಮಗೆ ಆಗಲಿಲ್ಲ. ನೀವು ಗೆದ್ದರೂ, ಸರಳ ಬಹುಮತ ಬಂದರೂ ಅಧಿಕಾರ ಮಾಡಲು ಆದೀತೆ?

ದಿನೇಶ್ ಗುಂಡೂರಾವ್: ಬಹುಮತ ಬರದಿದ್ದರೂ ಸರಕಾರ ಮಾಡುವುದು ಗೊತ್ತಿದೆ ಎನ್ನುತ್ತಾರೆ. ಆಪರೇಷನ್ ಕಮಲ ಇದಕ್ಕೆಲ್ಲ ಯಾವ ನೈತಿಕತೆ ಇದೆ? ಮೌಲ್ಯವೇ ಇಲ್ಲದ ಬಿಜೆಪಿ ದೇವರು, ದೇವಸ್ಥಾನ ಅನ್ನುವುದೇಕೆ? ಜನರಿಗೆ ಇದು ಅರ್ಥವಾಗಬೇಕು. ಸರಕಾರ ಬೀಳಿಸಿ ಹೋದವರನ್ನು ಜನ ಉಪಚುನಾವಣೆಯಲ್ಲಿ ಸೋಲಿಸಿದ್ದರೆ ಆಗ ಭಯ ಬರುತ್ತಿತ್ತು. ಬಿಜೆಪಿಗೆ ಯಾಕೆ ಭಯವಿಲ್ಲವೆಂದರೆ ಹೇಗೂ ಸರಕಾರ ಮಾಡುತ್ತೇವೆ, ಜನ ಹೇಗೂ ಒಪ್ಪಿಕೊಳ್ಳುತ್ತಾರೆ ಎಂಬ ಭಾವನೆಯಿದೆ. ಜನರನ್ನು ಎಚ್ಚರಿಸುವ ಕೆಲಸ ಮಾಡಬೇಕು.

 ಬಿಜೆಪಿಯನ್ನು ಬೆಂಬಲಿಸುವವರು ಮಧ್ಯಮ ವರ್ಗದವರು ಮತ್ತು ಯುವಕರು. ಎಲ್ಲರೂ ವಿದ್ಯಾವಂತರೇ. ಅವರನ್ನು ಹೇಗೆ ಬದಲಾಯಿಸುತ್ತೀರಿ? 

ದಿನೇಶ್ ಗುಂಡೂರಾವ್: ಮೋದಿಗೆ ಬೆಂಬಲ ಸಿಕ್ಕಿದ್ದು ದೇಶ ಕಟ್ಟುತ್ತಾರೆ ಎಂಬ ಕಾರಣಕ್ಕೆ. ಒಳ್ಳೆಯದಾಗುತ್ತದೆ ಎಂದು ಮತ ಹಾಕಿದರು. ಆದರೆ ಆಗಲಿಲ್ಲ. ಅದನ್ನು ತಿಳಿಸುವುದು ನಮ್ಮ ಕೆಲಸ. ಭಾರತ್ ಜೋಡೋ ಯಾತ್ರೆ ಕೂಡ ಅಂತಹ ಒಂದು ಯತ್ನ. ಕಾಂಗ್ರೆಸ್ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟಿದೆ.

 ಕಾಂಗ್ರೆಸ್ ಹಿಂದೂ ವಿರೋಧಿ ಎಂದು ತೋರಿಸುವಲ್ಲಿಯೂ ಅವರು ಯಶಸ್ಸು ಕಂಡಿದ್ದಾರಲ್ಲವೆ?

ದಿನೇಶ್ ಗುಂಡೂರಾವ್: ಕಂಡಿದ್ದಾರೆ. ನಾವು ಎಲ್ಲರೂ ಬೇಕು ಎನ್ನುವವರು. ಮುಸ್ಲಿಮರಿಗೆ ತೊಂದರೆಯಾದಾಗ ಧ್ವನಿಯೆತ್ತಬೇಕು. ಹಾಗೆ ಮಾಡಿದ ತಕ್ಷಣ ಮುಸ್ಲಿಮರ ಪರ, ಹಿಂದೂ ವಿರೋಧಿ ಪಟ್ಟ ಕಟ್ಟಿದಾಗ, ಭಾವನಾತ್ಮಕವಾಗಿ ಹೇಳಿ ಜನರನ್ನು ಪ್ರಚೋದಿಸಿದಾಗ ಜನರಿಗೆ ಹೌದೆನ್ನಿಸುತ್ತದೆ. ಆದರೆ ಈ ಬಾರಿ ಕೋಮು ಧ್ರುವೀಕರಣ ಫಲ ನೀಡದು. ಹಿಂದುತ್ವದ ನೆಲೆ ಎನ್ನಲಾಗುವ ಮಲೆನಾಡು, ಕರಾವಳಿಯಲ್ಲಿಯೇ ಜನ ಬೇಸತ್ತು ಹೋಗಿದ್ದಾರೆ. ಬಿಜೆಪಿಗೆ ತಿರುಗೇಟು ಕೊಡುವ ವಾತಾವರಣವಿದೆ.

 ಮಹಿಳೆಯರಿಗೆ ಹೆಚ್ಚು ಟಿಕೆಟ್ ಸಿಗುವುದೇ?

ದಿನೇಶ್ ಗುಂಡೂರಾವ್: ಹೆಚ್ಚು ಕೊಡಬೇಕು ಎಂಬುದು ನಮ್ಮೆಲ್ಲರ ಉದ್ದೇಶ. ಶೇ.33 ಮಹಿಳಾ ಮೀಸಲಾತಿ ತಂದಿದ್ದೇ ಕಾಂಗ್ರೆಸ್. ರಾಜ್ಯಸಭೆಯಲ್ಲಿ ಮಸೂದೆ ಪಾಸಾಯಿತು. ಲೋಕಸಭೆಯಲ್ಲಿ ಆಗಲಿಲ್ಲ. ಬಿಜೆಪಿ ಈ 8 ವರ್ಷಗಳಲ್ಲಿ ಒಮ್ಮೆಯೂ ಅದನ್ನು ತರಲು ಯತ್ನಿಸಲಿಲ್ಲ.

 ನೀವು ಬೇರೆ ರಾಜ್ಯಗಳ ಉಸ್ತುವಾರಿ ನಡುವೆ ಕ್ಷೇತ್ರ ಅಭಿವೃದ್ಧಿಗೆ ಗಮನ ಕೊಟ್ಟಿಲ್ಲ ಎಂಬ ಆರೋಪಗಳಿವೆಯಲ್ಲವೆ?

ದಿನೇಶ್ ಗುಂಡೂರಾವ್: ತಮಿಳುನಾಡು, ಪುದುಚೇರಿ, ಗೋವಾ ಉಸ್ತುವಾರಿ ಇದೆ. ಬೆಂಗಳೂರಿನಲ್ಲಿ ಇರುವಾಗೆಲ್ಲ ಕ್ಷೇತ್ರದಲ್ಲಿಯೇ ಇರುತ್ತೇನೆ. ಒಂದೆರಡು ವರ್ಷ ಮೊದಲಿನಂತೆ ಕೆಲಸ ಮಾಡಲಾಗಿಲ್ಲ. ಅದಾದ ಬಳಿಕ ಅಭಿವೃದ್ಧಿ ಕೆಲಸ ಆಗಿದೆ. ಒಳಾಂಗಣ ಕ್ರೀಡಾಂಗಣ, ಪಾರ್ಕ್ ಎಲ್ಲವು ಆಗಿದೆ. ಸರಕಾರದಿಂದ ಹೆಚ್ಚು ಸಹಾಯ ಸಿಗಲಿಲ್ಲ. ಕೋವಿಡ್ ಸಂದರ್ಭದಲ್ಲಿಯೂ ಅನುದಾನ ಬರಲಿಲ್ಲ. 

 ಕ್ಷೇತ್ರದ ಇತರ ಪಕ್ಷಗಳ ಕಾರ್ಪೊರೇಟರ್‌ಗಳ ಜೊತೆ ಹೊಂದಾಣಿಕೆ ರಾಜಕೀಯ ನಿಮ್ಮ ಗೆಲುವಿನ ಮಂತ್ರ ಎಂಬ ಆರೋಪಕ್ಕೆ ಏನೆನ್ನುತ್ತೀರಿ?

ದಿನೇಶ್ ಗುಂಡೂರಾವ್: ಹಾಗೇನಿಲ್ಲ. 7 ಮಂದಿಯಲ್ಲಿ 5 ಜನ ಕಾಂಗ್ರೆಸ್‌ನವರೇ ಇದ್ದರು. ಇಬ್ಬರು ಬಿಜೆಪಿ. ಆದರೆ, ಅವರು ಬಿಜೆಪಿಯವರು, ಅವರ ಕೆಲಸ ಆಗಬಾರದು ಎಂಬ ರೀತಿಯಲ್ಲಿ ಎಂದೂ ನಡೆದುಕೊಂಡಿಲ್ಲ. ಅದರಿಂದಾಗಿ ಅವರಿಗೆ ಗೌರವ ಇರಬಹುದು. 

 ನೀವು ಅಧ್ಯಕ್ಷರಾಗಿದ್ದಾಗ ಪಕ್ಷ ಸಂಘಟನೆಗೆ ಒತ್ತು ನೀಡಲಿಲ್ಲ, ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ. ಹಾಗಾಗಿ ಸರಕಾರ ಬಿತ್ತು ಎಂಬ ಆರೋಪಗಳ ಬಗ್ಗೆ?

ದಿನೇಶ್ ಗುಂಡೂರಾವ್: ಸಮ್ಮಿಶ್ರ ಸರಕಾರದ ಗೊಂದಲಗಳ ಬಗ್ಗೆ ನಿಮಗೇ ಗೊತ್ತಿದೆ. ಮುಖ್ಯಮಂತ್ರಿಗಳು ಸರಿಯಾಗಿ ನಡೆಸಿಕೊಂಡು ಹೋಗಿದ್ದರೆ ಸಮಸ್ಯೆಯೇ ಇರುತ್ತಿರಲಿಲ್ಲ. ಅವರ ಜೊತೆ ಕೈಜೋಡಿಸಿದ್ದೇ ನಮ್ಮಲ್ಲಿ ಅನೇಕರಿಗೆ ಇಷ್ಟವಾಗಿರಲಿಲ್ಲ. ಹೇಗಾದರೂ ಸರಕಾರ ಬೀಳಿಸಲು ಬಿಜೆಪಿ ಪ್ರಯತ್ನ ನಡೆದೇ ಇತ್ತು. ನಮ್ಮಲ್ಲಿ ಕೆಲವರಿಗೆ ಆಸೆ ಜಾಸ್ತಿಯಾಗಿತ್ತು. ನನ್ನ ಹೊಣೆ ಇಲ್ಲ ಎನ್ನಲಾರೆ. ಉಪಚುನಾವಣೆ ಸೋಲಿಗೆ ನೈತಿಕ ಹೊಣೆ ಹೊತ್ತುಕೊಂಡೆ.

 ರಾಜಕೀಯ ನಿಮಗೆ ಆಕಸ್ಮಿಕ. ಅದು ಖುಷಿ ತಂದಿದೆಯೆ?

ದಿನೇಶ್ ಗುಂಡೂರಾವ್: ತಂದೆಯವರು ದಿಢೀರನೆ ತೀರಿಹೋದಾಗ ರಾಜಕೀಯಕ್ಕೆ ಬಂದೆ. ಹಂತಹಂತವಾಗಿ ಬೆಳೆದುಬಂದೆ. ಪಕ್ಷ ಸಂಘಟನೆ, ಜಿಲ್ಲಾ ಕಾಂಗ್ರೆಸ್, ಯುವ ಕಾಂಗ್ರೆಸ್, ಬಳಿಕ ಕೆಪಿಸಿಸಿ ಅಧ್ಯಕ್ಷ ಹುದ್ದೆ. 23 ವರ್ಷಗಳಲ್ಲಿ ಮಂತ್ರಿಯಾಗಿದ್ದು 3 ವರ್ಷ ಮಾತ್ರ. ಜನರೊಡನೆ ಬೆರೆತು ಕೆಲಸ ಮಾಡುವ ಅವಕಾಶ ಸಿಕ್ಕಿದ್ದಕ್ಕೆ ತೃಪ್ತಿಯಿದೆ. ಇನ್ನೂ ಕೆಲಸ ಮಾಡುವ ಆಸೆಯಿದೆ.