ಶಿವಮೊಗ್ಗ ಕ್ಷೇತ್ರದ ಜನರ ಸೇವೆ ಮಾಡಲು ಅವಕಾಶ ನೀಡುವಂತೆ ವರಿಷ್ಠರಿಗೆ ಮನವಿ ಮಾಡಿದ್ದೇನೆ: ಆಯನೂರು ಮಂಜುನಾಥ್

''ಈಶ್ವರಪ್ಪ ಅವಕಾಶ ಕೊಟ್ಟರೆ ನಾನೂ ಡ್ರೈವಿಂಗ್ ಮಾಡುತ್ತೇನೆ''

Update: 2023-02-07 11:37 GMT

ಶಿವಮೊಗ್ಗ, ಫೆ.08: ಶಿವಮೊಗ್ಗ ಕ್ಷೇತ್ರದ ಜನರ ಸೇವೆ ಮಾಡಲು ನನಗೂ ಒಂದು ಅವಕಾಶ ಕೊಡುವಂತೆ ವರಿಷ್ಠರಿಗೆ ಮನವಿ ಮಾಡಿದ್ದೇನೆ ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ತಿಳಿಸಿದ್ದಾರೆ. 

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ಇತ್ತೀಚಿನ ವರ್ಷಗಳಲ್ಲಿ ಗಲಭೆಗಳು ನಡೆಯುತ್ತಿರುವುದು ನಿಜ. ಶಾಸಕ ಕೆ.ಎಸ್. ಈಶ್ವರಪ್ಪನವರು ಅದನ್ನು ಹತೋಟಿಗೆ ತಂದಿರುವುದೂ ನಿಜ. ಆದರೆ ಬಹಳಷ್ಟು ಬಡವರು ಗಲಭೆಗಳಿಂದ ಹತಾಶರಾಗಿದ್ದಾರೆ. ವ್ಯಾಪಾರಸ್ಥರು ಸಂಕಷ್ಟ ಅನುಭವಿಸಿದ್ದಾರೆ. ಒಂದು ರೀತಿಯಲ್ಲಿ ಆರ್ಥಿಕ ಚಟುವಟಿಕೆಗಳು ಸ್ತಬ್ಧವಾಗಿದ್ದವು. ನಗರದಲ್ಲಿ ಶಾಂತಿ ಸ್ಥಾಪಿಸಬೇಕು ಎಂಬುದು ಎಲ್ಲರ ಉದ್ದೇಶವೂ ಆಗಿದೆ. ಈ ಉದ್ದೇಶವನ್ನು ಮತ್ತಷ್ಟು ಉತ್ತಮಪಡಿಸಲು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ನೀಡಬೇಕು ಎಂಬುದು ನನ್ನ ಒತ್ತಾಸೆಯಾಗಿದೆ ಎಂದರು.

ನಗರದಲ್ಲಿ ನನ್ನ ಕುರಿತಂತೆ ಫ್ಲೆಕ್ಸ್ ಅಳವಡಿಸಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ಇದು ಅಭಿಮಾನಿಗಳು ಹೇಳಿದ ರೀತಿ ಇದೆ ಅಷ್ಟೆ. ಇದು ನನ್ನ ಅಭಿಪ್ರಾಯವಲ್ಲ ಎಂದು ಸ್ಪಷ್ಟಪಡಿಸಿದ ಅವರು, ನಾನು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗುವುದಕ್ಕೆ ಜನರಿಂದ ಯಾವ ವಿರೋಧವೂ ಇಲ್ಲ. ಈಶ್ವರಪ್ಪ ಮತ್ತು ನಾನು ಒಂದೇ ಕಾರಿನಲ್ಲಿ ಡ್ರೈವಿಂಗ್ ಮಾಡುತ್ತಿದ್ದೇವೆ. ಈಶ್ವರಪ್ಪನವರು ಡ್ರೈವಿಂಗ್ ಮಾಡುತ್ತಿದ್ದು, ಅವರಿಗೆ ದಣಿವಾದಾಗ ನಾನೂ ಸ್ವಲ್ಪ ದೂರ ಡ್ರೈವಿಂಗ್ ಮಾಡಬೇಕೆಂಬ ಬಯಕೆ ಇದೆ. ಅವರು ಅವಕಾಶ ಕೊಟ್ಟರೆ ಡ್ರೈವಿಂಗ್ ಮಾಡುತ್ತೇನೆ ಇಲ್ಲವೇ ಅವರ ಪಕ್ಕದಲ್ಲಿಯೇ ಕುಳಿತುಕೊಳ್ಳುವೆ ಎಂದರು.

ಭದ್ರಾವತಿಯ ವಿಐಎಸ್‌ಎಲ್ ಕಾರ್ಖಾನೆ ಪುನಶ್ಚೇತನಕ್ಕೆ ಈಗಲೂ ಪ್ರಯತ್ನ ನಡೆಯುತ್ತಿದೆ. ಕಾರ್ಖಾನೆಯ ವ್ಯಾಪ್ತಿಯನ್ನು ರೆಡ್ ಝೋನ್ ಎಂದು ಘೋಷಣೆಯಾಗಿರುವುದರಿಂದ ಯಾವುದೇ ಹೊಸ ಕಾರ್ಖಾನೆ ಆರಂಭವಾಗುವುದಿಲ್ಲ. ಆದ್ದರಿಂದ ಕೊನೇ ಪಕ್ಷ ಸರ್ಕಾರ ಬಂಡವಾಳ ಹೂಡಬೇಕು ಅಥವಾ ಖಾಸಗಿಯವರಿಗೆ ವಹಿಸಿಕೊಡಬೇಕು. ಜಿಲ್ಲೆಯಲ್ಲಿ ಇರುವ ಏಕೈಕ ಸರ್ಕಾರಿ ಕಾರ್ಖಾನೆ ಇದಾಗಿರುವುದರಿಂದ ಇದನ್ನು ಉಳಿಸುವ  ಪ್ರಯತ್ನ  ಆಗುತ್ತಿದೆ ಎಂದರು.

Similar News