ಪತ್ನಿಯೊಂದಿಗೆ ಜೀವನ ನಡೆಸುವುದಾಗಿ ಪತಿ ಹೇಳಿಕೆ: ಪೋಷಕರ ಹೇಬಿಯಸ್ ಕಾರ್ಪಸ್ ಅರ್ಜಿ ಇತ್ಯರ್ಥ

Update: 2023-02-07 12:57 GMT

ಬೆಂಗಳೂರು, ಫೆ.6: ಪತ್ನಿ ಮತ್ತು ಆಕೆಯ ಮೊದಲ ಇಬ್ಬರು ಪತಿಯರಿಗೆ ಜನಿಸಿದ ಮಕ್ಕಳೊಂದಿಗೆ ಜೀವನ ನಡೆಸುತ್ತಿರುವ ಉಡುಪಿ ಮೂಲದ ಹಿರಿಯ ನಾಗರಿಕರೊಬ್ಬರ ಪುತ್ರನನ್ನು ಪೊಲೀಸರು ಹೈಕೋರ್ಟ್ ಮುಂದೆ ಹಾಜರುಪಡಿಸಲಾಗಿದ್ದು, ಆಕೆಯೊಂದಿಗೆ ಜೀವನ ನಡೆಸುವುದಾಗಿ ಪುತ್ರ ಹೇಳಿಕೆ ನೀಡಿದ ಹಿನ್ನೆಲೆ ಅರ್ಜಿಯನ್ನು ಇತ್ಯರ್ಥಪಡಿಸಿದೆ.

ಪುತ್ರ ವಿವೇಕಾನಂದ ಶೆಟ್ಟಿರನ್ನು ಪತ್ತೆ ಹಚ್ಚಿ ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಕೋರಿ ಉಡುಪಿಯ ಕುಂದಾಪುರದ 63 ವರ್ಷದ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಹೈಕೋರ್ಟ್ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಪತ್ನಿ ಮತ್ತು ಇಬ್ಬರು ಮಕ್ಕಳ ಜೊತೆ ಜೀವನ ನಡೆಸಲು ಇಚ್ಛಿಸಿರುವುದಾಗಿ ವಿವೇಕಾನಂದ ಶೆಟ್ಟಿ ಪೀಠಕ್ಕೆ ತಿಳಿಸಿದ ಹಿನ್ನೆಲೆ ನ್ಯಾಯಾಲಯವು ಅವರನ್ನು ಹಾಜರು ಪಡಿಸಲು ಕೋರಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಇತ್ಯರ್ಥಪಡಿಸಿ ಆದೇಶ ಹೊರಡಿಸಿದೆ.

ಸರಕಾರದ ಪರ ವಾದಿಸಿದ ವಕೀಲರು, ಒಂದು ವರ್ಷ ಎಂಟು ತಿಂಗಳಿಂದ ವಿವೇಕಾನಂದ ಅವರು ಬೆಂಗಳೂರಿನ ಕೋರಮಂಗಲದಲ್ಲಿ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ನೆಲೆಸಿದ್ದಾರೆ ಎಂದರು. 

ಅಲ್ಲದೆ, ವಿವೇಕಾನಂದ ಶೆಟ್ಟಿ ಅವರ ಪತ್ನಿ ಸಂಧ್ಯಾ ಅವರು ಮೊದಲ ಪತಿಯಿಂದ ಒಂದು ಗಂಡು ಮಗು ಮತ್ತು ಎರಡನೆ ಪತಿಯಿಂದ ಮತ್ತೊಂದು ಗಂಡು ಮಗು ಪಡೆದಿದ್ದಾರೆ. ಇವರ ಜೊತೆ ವಿವೇಕಾನಂದ ಅವರು ಕೋರಮಂಗಲದಲ್ಲಿ ನೆಲೆಸಿದ್ದಾರೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು. ಈ ಅಂಶವನ್ನು ದಾಖಲಿಸಿಕೊಂಡ ನ್ಯಾಯಪೀಠ ಅರ್ಜಿಯನ್ನು ಇತ್ಯರ್ಥ ಪಡಿಸಿತು. ನಾಪತ್ತೆಯಾಗಿದ್ದ ಪುತ್ರ ವಿವೇಕಾನಂದ ಅವರನ್ನು ಪತ್ತೆ ಹಚ್ಚಲು ಹೇಬಿಯಸ್ ಕಾರ್ಪಸ್ ಅರ್ಜಿ ದಾಖಲಿಸಲಾಗಿತ್ತು ಎಂದು ಆದೇಶದಲ್ಲಿ ದಾಖಲಿಸಲಾಗಿದೆ.

Similar News