ಈ ಬಾರಿ ಟಿಪ್ಪು ಮತ್ತು ಸಾವರ್ಕರ್ ವಿಚಾರಗಳ ನಡುವೆ ಚುನಾವಣೆ: ನಳಿನ್ ಕುಮಾರ್ ಕಟೀಲ್

Update: 2023-02-07 14:35 GMT

ಭಟ್ಕಳ, ಫೆ.7: ರಾಜ್ಯದಲ್ಲಿ ಈ ಬಾರಿ ನಡೆಯುವ ಚುನವಣೆ ರಾಜಕೀಯ ಪಕ್ಷಗಳ ನಡುವೆ ನಡೆಯುವ ಚುನಾವಣೆಯಾಗದೆ, ಟಿಪ್ಪು ಹಾಗೂ ಸಾವರ್ಕರ್ ನಡುವಿನ ಸಿದ್ಧಾಂತಗಳ ಹೋರಾಟವಾಗಿದೆ. ನಿಮಗೆ ಟಿಪ್ಪೂಬೇಕಾ? ಅಥವಾ ಸಾವರ್ಕರ್ ಬೇಕಾ? ಎಂದು ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರಶ್ನೆ ಮಾಡಿದ್ದಾರೆ. 

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಶಿರಾಲಿಯಲ್ಲಿ ಇಂದು ವಿಜಯ ಸಂಕಲ್ಪ ಅಭಿಯಾನದ ಅಂಗವಾಗಿ ನಡೆದ ಮತಗಟ್ಟೆ ಮತ್ತು ಪೇಜ್ ಪ್ರಮುಖರ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದರು. 

'ಕನ್ಯಾಕುಮಾರಿಯಿಂದ ಕಾಶ್ಮೀರದವೆರೆಗೆ ಭಾರತವನ್ನು ಜೋಡಿಸಿದ್ದು ಪ್ರಧಾನಿ ನರೇಂದ್ರ ಮೋದಿ ಆದರೆ, ರಾಹುಲ್ ಗಾಂಧಿ ಭಾರತ್ ಜೋಡೊ ಯಾತ್ರೆ ಆರಂಭಿಸಿದ್ದು ಒಂದು ಹಾಸ್ಯಾಸ್ಪದ' ಎಂದು ಹೇಳಿದರು. 

'ಕರಾವಳಿಯಲ್ಲಿ ಬಿಜೆಪಿ ಅರಳಿಸಲು ಪ್ರೇರಣೆ ನೀಡಿದ್ದು ಭಟ್ಕಳ ಕ್ಷೇತ್ರ. ಹಾಗಾಗಿ ಭಟ್ಕಳದಿಂದಲೇ ಪ್ರಥಮ ಬಿಜೆಪಿ ಸಮಾವೇಶ ನಡೆಸಿ ಕರಾವಳಿಯಲ್ಲಿ ಸಂಕಲ್ಪ ಯಾತ್ರೆ ಆರಂಭಿಸಲಾಗುವುದು' ಎಂದರು.

'ಕಾಂಗ್ರೆಸ್ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದೆ. ಆದರೆ ಕಾಂಗ್ರೆಸ್ ನಾಯಕರೇ ಹಲವು ಹಗರಣದಲ್ಲಿ ಸಿಲುಕಿ ಜೈಲು ಶಿಕ್ಷೆ ಅನುಭವಿಸಿದ್ದಾರೆ. ಸಿದ್ದರಾಮಯ್ಯ ಆಪ್ತ ಕೆಂಪಯ್ಯ ಸಿಕ್ಕಿ ಬಿದ್ದಿದ್ದಾರೆ. ಸಿದ್ದರಾಮಯ್ಯ ಜೈಲಿಗೆ ಹೋಗುವ ದಿನ ದೂರ ಇಲ್ಲ' ಎಂದರು.

ರಾಜ್ಯ ಬಿಜೆಪಿ ಘಟಕ ಪ್ರಧಾನ ಕಾರ್ಯದರ್ಶಿ ಮಹೇಶ ತೆಂಗಿನಕಾಯಿ, ಜಿಲ್ಲಾ ಘಟಕ ಅಧ್ಯಕ್ಷ ವೆಂಕಟೇಶ ನಾಯಕ, ಜಿಲ್ಲಾ ಪ್ರಮುಖರಾದ ಭಾರತಿ ಜಂಬೆ, ಎನ್.ಎಸ್ಹೆಗಡೆ, ಪ್ರಸನ್ನ ಕೆರಕೆ, ಚಂದ್ರಎಸಳೆ, ಗುರುಪ್ರಸಾದ ಹೆಗಡೆ, ರವಿನಾಯ್ಕ, ಸುಬ್ರಾಯ ದೇವಾಡಿಗ, ರಾಜೇಶ ಭಂಡಾರಿ ಇದ್ದರು.

Similar News