ತಾತನಿಂದಲೇ ಮೊಮ್ಮಗಳಿಗೆ ಲೈಂಗಿಕ ದೌರ್ಜನ್ಯ: 20 ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್

Update: 2023-02-07 14:10 GMT

ಬೆಂಗಳೂರು, ಫೆ.6: ಅಪ್ರಾಪ್ತ ಬಾಲಕಿ(ಮೊಮ್ಮಗಳು) ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಗೆ 20 ವರ್ಷ ಜೈಲು ಶಿಕ್ಷೆ ವಿಧಿಸಿ ಬೆಂಗಳೂರಿನ ವಿಶೇಷ ನ್ಯಾಯಾಲಯ ಆದೇಶಿಸಿದೆ.

ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ನಿವಾಸಿಯಾದ 70 ವರ್ಷದ ರಮೇಶ್ ಶಿಕ್ಷೆಗೆ ಗುರಿಯಾಗಿರುವ ಅಪರಾಧಿ. ಈತನ ಕೃತ್ಯ ಸಾಬೀತಾದ ಹಿನ್ನೆಲೆಯಲ್ಲಿ ಬೆಂಗಳೂರು ನಗರದ 1ನೆ ಫಾಸ್ಟ್ ಟ್ರ್ಯಾಕ್ ಸ್ಪೆಷಲ್ ಕೋರ್ಟ್ ನ್ಯಾಯಪೀಠವು ಈ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ. 

ಆರೋಪಿಗೆ ಪೋಕ್ಸೊ ಕಾಯ್ದೆಯ ಕಲಂ 4(ಬಿ) ಅಡಿ 20 ವರ್ಷ ಸೆರೆವಾಸ ಮತ್ತು 50 ಸಾವಿರ ದಂಡ, ಕಲಂ 12ರ ಅಡಿ 1 ವರ್ಷ ಸೆರೆವಾಸ ಮತ್ತು 25 ಸಾವಿರ ದಂಡ ಮತ್ತು ಭಾರತೀಯ ದಂಡ ಸಂಹಿತೆಯ ಕಲಂ 506 ಅಡಿ 1 ವರ್ಷ ಕಾರಾಗೃಹ ಶಿಕ್ಷೆ ಮತ್ತು 5 ಸಾವಿರ ರೂ.ದಂಡ ಹಾಗೂ ಐಟಿ ಕಾಯ್ದೆಯ ಕಲಂ 67(ಎ) ಅಡಿ 6 ತಿಂಗಳು ಸಾಧಾರಣ ಸಜೆ ಮತ್ತು 5 ಸಾವಿರ ರೂ. ದಂಡ ವಿಧಿಸಿ ಕೋರ್ಟ್ ಆದೇಶ ಹೊರಡಿಸಿದೆ. 

ಇದೇ ವೇಳೆ ನೊಂದ ಬಾಲಕಿಗೆ 7 ಲಕ್ಷ ಪರಿಹಾರ ಹಣವನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ನೀಡುವಂತೆ ನ್ಯಾಯಪೀಠವು ಆದೇಶಿಸಿದೆ. ಪ್ರಾಸಿಕ್ಯೂಷನ್ ಪರ ಸರಕಾರಿ ಅಭಿಯೋಜಕರಾದ ಪಿ.ಕೃಷ್ಣವೇಣಿ ಅವರು ವಾದ ಮಂಡಿಸಿದ್ದರು.

ಪ್ರಕರಣವೇನು: ಪ್ರಕರಣದಲ್ಲಿನ ಅಪ್ರಾಪ್ತ ಬಾಲಕಿಯು ಅರೋಪಿಗೆ ಮೊಮ್ಮಗಳಾಗಿದ್ದು, ಅರೋಪಿಯು ಸಂತ್ರಸ್ತ ಬಾಲಕಿಗೆ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ತನ್ನ ಮೊಬೈಲ್‍ನಲ್ಲಿ ಅಶ್ಲೀಲ ಮತ್ತು ಬೆತ್ತಲೆ ಸಿನಿಮಾಗಳನ್ನು ತೋರಿಸಿ ಪ್ರಚೋದಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದ.

ಈ ವಿಚಾರವನ್ನು ಯಾರಿಗಾದರೂ ಹೇಳಿದರೆ ನಿನ್ನ ತಂದೆಯನ್ನು ಸಾಯಿಸುತ್ತೇನೆಂದು ಪ್ರಾಣ ಬೆದರಿಕೆ ಹಾಕಿದ್ದ ಎಂಬ ಹಿನ್ನಲೆಯಲ್ಲಿ ಕುಮಾರಸ್ವಾಮಿ ಲೇಔಟ್ ಠಾಣೆ ಪೊಲಿಸರು ಆರೋಪಿ ರಮೇಶ್ವಿರುದ್ಧ ಎಫ್‍ಐಆರ್ ದಾಖಲಿಸಿ, ತನಿಖೆ ಕೈಗೊಂಡು ಆರೋಪಿ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ವೇಳೆ ನ್ಯಾಯಾಲಯ ಒಟ್ಟು 11 ಜನ ಸಾಕ್ಷಿದಾರರನ್ನು ವಿಚಾರಣೆ ನಡೆಸಿತ್ತು, ಆರೋಪಿಯ ವಿರುದ್ಧದ ಅರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ಕೋರ್ಟ್ ಶಿಕ್ಷೆ ವಿಧಿಸಿ ಆದೇಶಿಸಿದೆ.

ಇದನ್ನೂ ಓದಿ: ಈ ಬಾರಿ ಟಿಪ್ಪು ಮತ್ತು ಸಾವರ್ಕರ್ ವಿಚಾರಗಳ ನಡುವೆ ಚುನಾವಣೆ: ನಳಿನ್ ಕುಮಾರ್ ಕಟೀಲ್

Similar News