ಹಾಸನ: ರೈಲಿನಿಂದ ಬಿದ್ದು ಬಾಲಕ ಮೃತ್ಯು; ತಡವಾಗಿ ಬೆಳಕಿಗೆ ಬಂದ ಪ್ರಕರಣ

Update: 2023-02-07 15:23 GMT

ಬೆಂಗಳೂರು: ಚಲಿಸುತ್ತಿರುವ ರೈಲಿನಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಬಾಲಕ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವ ಘಟನೆ ಹಾಸನದಲ್ಲಿ ವರದಿಯಾಗಿದೆ. 

ಹಾಸನ ಮತ್ತು ಮಾವಿನಿಕೆರೆ ರೈಲು ನಿಲ್ದಾಣಗಳ ನಡುವೆ ಈ ಘಟನೆ ನಡೆದಿದ್ದು, ಚಲಿಸುತ್ತಿರುವ ರೈಲಿನಿಂದ ಕೆಳಗೆ ಬಿದ್ದಿದ್ದ ಐದು ವರ್ಷದ ಬಾಲಕ ಕಾಲು ಕತ್ತರಿಸಿದ್ದ ಸ್ಥಿತಿಯಲ್ಲಿ ಪೊದೆಯಲ್ಲಿ ಪತ್ತೆಯಾಗಿದ್ದ ಎನ್ನಲಾಗಿದೆ. ತೀವ್ರರಕ್ತದ ಮಡುವಿನಲ್ಲಿ ಬಿದ್ದಿದ್ದ ಬಾಲಕನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಬಾಲಕ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ. ಮೃತ ಬಾಲಕನನ್ನು 5 ವರ್ಷದ ಸಿಎ ಯೋಜಿತ್ ಎಂದು ಗುರುತಿಸಲಾಗಿದೆ.

ಮೂಲಗಳ ಪ್ರಕಾರ ಬಾಲಕ ತನ್ನ ತಾಯಿ ಗೃಹಿಣಿ ಎಚ್.ಎಸ್. ಸವಿತಾ ಅವರೊಂದಿಗೆ ಮೈಸೂರಿಗೆ ತೆರಳುತ್ತಿದ್ದರು. ಇವರು ಚಿಕ್ಕಮಗಳೂರು ಜಿಲ್ಲೆಯ ಕಡೂರು ಗ್ರಾಮದವರು. ಇವರಿಬ್ಬರೂ ಜನವರಿ 30 ರಂದು ಕಡೂರಿನಿಂದ ಶಿವಮೊಗ್ಗ-ತಾಳಗುಪ್ಪ ಎಕ್ಸ್ ಪ್ರೆಸ್‍ನ ಕಾಯ್ದಿರಿಸದ ಕಂಪಾರ್ಟ್‍ಮೆಂಟ್‍ನಲ್ಲಿ ಪ್ರಯಾಣಿಸುತ್ತಿದ್ದಾಗ ದುರಂತ ಸಂಭವಿಸಿದೆ ಎಂದು ಹೇಳಲಾಗಿದೆ.

ಬಾಲಕನ ಪತ್ತೆಗೆ ಹಳಿಗಳ ಉದ್ದಕ್ಕೂ ಶೋಧ:

ಈ ಕುರಿತು ಮಾಧ್ಯಮಗಳಿಗೆ ಪ್ರತಿಕಿಯಿಸಿದ ಪೊಲೀಸ್ ಅಧಿಕಾರಿ, “ನಾವು 10 ಕಿ.ಮೀ ಗಿಂತಲೂ ಹೆಚ್ಚು ದೂರ ಹಳಿ ಶೋಧ ನಡೆಸಿದ್ದೇವೆ. ಆದರೆ ಬಾಲಕನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ತಂದೆ ನಂತರ ನಮ್ಮೊಂದಿಗೆ ಸೇರಿಕೊಂಡರು ಮತ್ತು ಅವರು ಹುಡುಗನನ್ನು ಪತ್ತೆಹಚ್ಚಲು ಮಂಗಳವಾರ ಬೆಳಿಗ್ಗೆ 5.30 ರವರೆಗೆ ರಾತ್ರಿಯಿಡೀ ಕೆಲವು ಪೊಲೀಸರೊಂದಿಗೆ ಶೋಧ ನಡೆಸಿದರು. ಈ ವೇಳೆ ಬಾಲಕನ ತಾಯಿ ನಮಗೆ ಕಾಲುವೆ ಮತ್ತು ದಟ್ಟವಾದ ಕಾಡಿನ ಬಗ್ಗೆ ಸುಳಿವುಗಳನ್ನು ನೀಡಿದರು. ಅದನ್ನು ಅನುಸರಿಸಿ ನಾವು ಬೇರೆ ಮಾರ್ಗದಲ್ಲಿ ಶೋಧ ನಡೆಸಿದಾಗ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಹುಡುಗ ಪತ್ತೆಯಾದ. ಈ ವೇಳೆ ಆತ ಉಸಿರಾಡಲು ಏದುಸಿರು ಬಿಡುತ್ತಿದ್ದ. ಅವರನ್ನು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆತ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ ಎಂದು ಶೋಧ ಮಾಹಿತಿ ನೀಡಿದ್ದಾರೆ. 

ಪುತ್ರ ಸಾವಿನ ಬಗ್ಗೆ ಮಾತನಾಡಿರುವ ಬಾಲಕನ ತಂದೆ ಸಿ.ಎಚ್. ಆನಂದ್ ಅವರು, ನನ್ನ ಮಗು ಬಿಸ್ಕತ್ತು ಕೇಳಿದಾಗ ನನ್ನ ಪತ್ನಿ ಅವನಿಗೆ ಬಿಸ್ಕತ್ತು ಕೊಟ್ಟು ಲಗೇಜ್‌ನ ಅನ್ನು ಮೇಲಿಡಲು ಪ್ರಯತ್ನಿಸಿದ್ದಾಳೆ. ಆ ವೇಳೆ ಮಗು ಬಿಸ್ಕತ್ತು ತಿನ್ನುತ್ತಾ, ಆಟವಾಡಿಕೊಂಡು ದೂರ ಹೋಗಿರಬಹುದು. ಆಕೆ ತಿರುಗಿ ನೋಡಿದಾಗ ಆತ ರೈಲಿನಲ್ಲಿ ಇರಲಿಲ್ಲ. ತೆರೆದಿದ್ದ ಬಾಗಿಲಿನ ಎರಡನೇ ಸೀಟಿನಲ್ಲಿ ಅವರಿದ್ದರು. ಈ ವೇಳೆ ಜಾರಿ ಬಿದ್ದಿರಬೇಕು ಎಂದು ವಿವರಿಸಿದರು. ಬಳಿಕ ರೈಲು ನಿಲ್ಲಿಸಲು ಸರಪಳಿಯನ್ನ ಎಳೆಯುವಂತೆ ನನ್ನ ಪತ್ನಿ ಸಹ ಪ್ರಯಾಣಿಕರಿಗೆ ಮನವಿ ಮಾಡಿದರೂ ಯಾರೂ ಸಹಾಯ ಮಾಡಲಿಲ್ಲ ಎಂದು ತಮ್ಮ ಅಳಲು ತೋಡಿಕೊಂಡು ಬೇಸರ ವ್ಯಕ್ತಪಡಿಸಿದರು.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Similar News