ಶಿವಮೊಗ್ಗ | ವಿಮಾನ ನಿಲ್ದಾಣದಲ್ಲಿ ಉದ್ಯೋಗದ ಆಮಿಷ: ಯುವಕನಿಗೆ 72 ಸಾವಿರ ರೂ. ವಂಚನೆ

Update: 2023-02-08 05:02 GMT

ಶಿವಮೊಗ್ಗ, ಫೆ.8: ವಿಮಾನ ನಿಲ್ದಾಣದಲ್ಲಿ ಉದ್ಯೋಗದ ಆಮಿಷವೊಡ್ಡಿ ಯುವಕನೊಬ್ಬನಿಗೆ 72 ಸಾವಿರ ರೂ. ವಂಚನೆ ಮಾಡಿರುವ ಬಗ್ಗೆ ಶಿವಮೊಗ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೊಳಲೂರಿನ ಯುವಕನೊಬ್ಬ ಈ ರೀತಿ ವಂಚನೆಗೊಳಗಾಗಿದ್ದಾನೆ. ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಗ್ರೌಂಡ್ ಸ್ಟಾಫ್ ಆಗಿ ನೇಮಕವಾಗಿದ್ದೀರಿ ಎಂದು ಕರೆ ಮಾಡಿ, ನೋಂದಣಿ ಹೆಸರಲ್ಲಿ ಸಾವಿರಾರು ರೂ. ಪಡೆದು ವಂಚಿಸಲಾಗಿದೆ.

ಹೊಳಲೂರಿನ ಯುವಕ ಮೊಬೈಲ್ ಫೋನ್ ನಲ್ಲಿ ಏರ್ ಪೋರ್ಟ್ ಅಥಾರಿಟಿ ಅಪ್ಲಿಕೇಶನ್ ತೆರೆದು ತನ್ನ ಆಧಾರ್ ಕಾರ್ಡ್, ಮೊಬೈಲ್ ನಂಬರ್, ಹೆಸರು ದಾಖಲಿಸಿದ್ದರು. ಫೆ.2ರಂದು ಮಧ್ಯಾಹ್ನ ಈ ಯುವಕನಿಗೆ ಅಪರಿಚಿತ ಮೊಬೈಲ್ ನಂಬರಿನಿಂದ ಮಹಿಳೆಯೊಬ್ಬರು ಕರೆ ಮಾಡಿ, ತನ್ನನ್ನು ಮೋನಿಕಾ ಎಂದು ಪರಿಚಯಿಸಿಕೊಂಡಿದ್ದಾಳೆ. ತಾನು ಶಿವಮೊಗ್ಗ ಏರ್ ಪೋರ್ಟ್ ಅಥಾರಿಟಿಯ ಎಚ್.ಆರ್, ಎಂದು ಹೇಳಿ ಯುವಕನನ್ನು ನಂಬಿಸಿದ ಆಕೆ, ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ನೀವು ಗ್ರೌಂಡ್ ಸ್ಟಾಫ್ ಆಗಿ ನೇಮಕವಾಗಿದ್ದೀರಿ. ಇದರ ರಿಜಿಸ್ಟ್ರೇಷನ್ ಗೆ ಹಣ ಪಾವತಿಸಬೇಕು ಎಂದು ತಿಳಿಸಿದ್ದಾಳೆ.

ಈ ರೀತಿ ಹಂತ ಹಂತವಾಗಿ ಫೋನ್ ಪೇ ಮೂಲಕ 72,900 ರೂ. ವರ್ಗಾವಣೆ ಮಾಡಿಸಿಕೊಂಡಿದ್ದಾಳೆ. ಆ ಬಳಿಕ ಯುವಕನಿಗೆ ತಾನು ವಂಚನೆಗೊಳಾಗಿರುವುದು ಗೊತ್ತಾಗಿದೆ. ಬಳಿಕ ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ.

Similar News