ಶರಾವತಿ ಮುಳುಗಡೆ ಸಂತ್ರಸ್ತರಿಂದ ಪ್ರತಿಭಟನೆ; ಶಿವಮೊಗ್ಗಕ್ಕೆ ಆಗಮಿಸಿದ ಸಿಎಂ ಬೊಮ್ಮಾಯಿಗೆ ಮುತ್ತಿಗೆಗೆ ಯತ್ನ

Update: 2023-02-08 13:43 GMT

ಶಿವಮೊಗ್ಗ(ಫೆ.೦೮): ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ  ನೆರವೇರಿಸಲು ಶಿವಮೊಗ್ಗಕ್ಕೆ ಆಗಮಿಸಿದ ಸಿಎಂ ಬಸವರಾಜ ಬೊಮ್ಮಾಯಿಗೆ ಪ್ರತಿಭಟನೆಯ ಬಿಸಿ ತಟ್ಟಿದೆ.

ನಗರದ ಪ್ರವಾಸಿ ಮಂದಿರದಲ್ಲಿ  ಹುಣಸೋಡು ಸ್ಪೋಟ ಸಂತ್ರಸ್ತರು ಹಾಗೂ ಶರಾವತಿ ಮುಳುಗಡೆ ಸಂತ್ರಸ್ತರಿಂದ ಪ್ರತಿಭಟನೆ ನಡೆಸಿ, ಸಿಎಂಗೆ ಘೇರಾವ್ ಹಾಕಲು ಯತ್ನಿಸಿದರು.

ಮಲೆನಾಡಿ ಸಮಸ್ಯೆಗಳಿಗೆ ಪರಿಹಾರ ನೀಡಬೇಕು ಹಾಗೂ ನಾಡಿಗೆ ಬೆಳಕು ನೀಡಲು ಮನೆ ಹೊಲ ಕಳೆದುಕೊಂಡಿರುವ ಶರಾವತಿ ಮುಳುಗಡೆ ಸಂತ್ರಸ್ತರಿಗೆ ಭೂಮಿಯ ಹಕ್ಕು ನೀಡಬೇಕು. ಅರಣ್ಯ ಭೂಮಿಯಲ್ಲಿ ಜಮೀನು ಮಾಡಿಕೊಂಡಿರುವ ಬಗರ್‌ಹುಕುಂ ಸಾಗುವಳಿದಾರರಿಗೆ ಭೂ ಹಕ್ಕು ನೀಡಬೇಕು ಎಂದು ಆಗ್ರಹಿಸಿ ಮಲೆನಾಡು ರೈತರ ಹೋರಾಟ ಸಮಿತಿ  ಅಧ್ಯಕ್ಷ ತೀ.ನಾ ಶ್ರೀನಿವಾಸ್ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿದರು. ಈ ವೇಳೆ ಸಿಎಂ ವಿರುದ್ಧವೇ ತಿರುಗಿಬಿದ್ದ ಪ್ರತಿಭಟನಕಾರರು  ರಾಜ್ಯ ಸರ್ಕಾರಕ್ಕೆ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಅಲ್ಲದೇ ಹುಣಸೋಡು ಸ್ಫೋಟದಲ್ಲಿ ಸಾಕಷ್ಟು ಮನೆಗಳಿಗೆ ಹಾನಿಯಾಗಿದೆ. ರಾಜ್ಯ ಸರ್ಕಾರದಿಂದ ಸರಿಯಾದ ಪರಿಹಾರ ನೀಡಿಲ್ಲ ಎಂದು ಕನ್ನಡ ಪರ ಸಂಘಟನೆಯ ಮುಖಂಡ ಗೋ .ರಮೇಶ್ ಗೌಡ ನೇತೃತ್ವದಲ್ಲಿ  ಪ್ರತಿಭಟನಕಾರರು ಸಿಎಂಗೆ ಧಿಕ್ಕಾರ ಕೂಗಿ, ಸಂತ್ರಸ್ತರ ಮನವಿಗೆ ಸರಿಯಾಗಿ ಸ್ಪಂದಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಸಿಎಂಗೆ ಮುತ್ತಿಗೆಗೆ ಯತ್ನಿಸಲು ಮುಂದಾದ ಪ್ರತಿಭಟನಾಕರರನ್ನು ಸರ್ಕ್ಯೂಟ್ ಹೌಸ್ ನಿಂದ ಬೇರೆಡೆಗೆ ಪೊಲೀಸರು ಕರೆದೊಯ್ದರು.

Similar News