ಪ್ರಿಯಾಂಕ್ ಖರ್ಗೆಯನ್ನು 50 ಸಾವಿರ ಮತಗಳ ಅಂತರದಿಂದ ಗೆಲ್ಲಿಸಿ: ಚಿತ್ತಾಪುರದಲ್ಲಿ ಸಿದ್ದರಾಮಯ್ಯ

Update: 2023-02-08 15:22 GMT

ಕಲಬುರಗಿ, ಫೆ. 8: ಕೇಂದ್ರ ಹಾಗೂ ರಾಜ್ಯ ಸರಕಾರಗಳು ಸರಕು ಮತ್ತು ಸೇವಾ(ಜಿಎಸ್ಟಿ) ತೆರಿಗೆ ಮೂಲಕ ಜನರ ರಕ್ತ ಹೀರುತ್ತಿದ್ದಾರೆ. ಇಂತಹ ಕೆಟ್ಟ ಸರಕಾರಕ್ಕೆ ಮತ ನೀಡುತ್ತೀರ? ಎಂದು ಪ್ರಶ್ನಿಸಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಕನಿಷ್ಠ 50ಸಾವಿರ ಮತಗಳ ಅಂತರದಿಂದ ಗೆಲ್ಲಿಸಿಕೊಡಬೇಕು ಎಂದು ಮನವಿ ಮಾಡಿದ್ದಾರೆ.

ಬುಧವಾರ ಜಿಲ್ಲೆಯ ಚಿತ್ತಾಪುರ ಕ್ಷೇತ್ರದಲ್ಲಿ ಏರ್ಪಡಿಸಿದ್ದ ‘ಪ್ರಜಾಧ್ವನಿ’ ಸಮಾವೇಶದಲ್ಲಿ ಮಾತನಾಡಿದ ಅವರು, ‘ಪ್ರಿಯಾಂಕ್ ಖರ್ಗೆ ಅತ್ಯಂತ ಕ್ರಿಯಾಶೀಲ, ವಿಚಾರಶೀಲ ರಾಜಕಾರಣಿ. ನನ್ನ ಸರಕಾರದಲ್ಲಿ ಐಟಿ,-ಬಿಟಿ ಸಚಿವರಾಗಿ, ಸಮ್ಮಿಶ್ರ ಸರಕಾರದಲ್ಲಿ ಸಮಾಜ ಕಲ್ಯಾಣ ಸಚಿವರಾಗಿ ಪ್ರಾಮಾಣಿಕ, ನಿಷ್ಠೆಯಿಂದ ಕೆಲಸ ಮಾಡಿದ ಮಂತ್ರಿಗಳಲ್ಲಿ ಇವರೂ ಒಬ್ಬರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಿಯಾಂಕ್ ನಿಷ್ಠುರವಾಗಿ ಮಾತನಾಡುತ್ತಾರೆ, ಪ್ರಾಮಾಣಿಕವಾಗಿ ಮಾತನಾಡುವವರನ್ನು ಜನರು ಅಪ್ಪಿಕೊಳ್ಳುವುದು ಕಡಿಮೆ. ಈ ನೇರ ನಡೆಯ ಸ್ವಭಾವ ರಾಜಕೀಯದಲ್ಲಿ ತೊಂದರೆ ಉಂಟುಮಾಡುವುದೇ ಹೆಚ್ಚು ಆದರೆ ಈ ಸ್ವಭಾವವನ್ನು ಬದಲಾವಣೆ ಮಾಡಿಕೊಳ್ಳದೆ ಜನರ ಪ್ರೀತಿ, ವಿಶ್ವಾಸ ಗಳಿಸುವ ಕೆಲಸ ಮಾಡಬೇಕು ಎಂದು ಅವರು ನುಡಿದರು.

ಪ್ರಿಯಾಂಕ್ ಅವರು ಪಕ್ಷದ ಸಂವಹನ ವಿಭಾಗದ ಅಧ್ಯಕ್ಷರಾಗಿದ್ದಾರೆ, ಹೀಗಿದ್ದಾಗ ಇಲ್ಲಿಗೆ ಗಮನ ನೀಡುವುದಕ್ಕೆ ಹೆಚ್ಚು ಸಮಯ ಸಿಗುತ್ತಿಲ್ಲ. ಇಲ್ಲಿನ ಒಬ್ಬ ವ್ಯಕ್ತಿ ರಾಜ್ಯ ಮಟ್ಟದಲ್ಲಿ ಬೆಳೆಯುತ್ತಿರುವುದರಿಂದ ಕ್ಷೇತ್ರದ ಜನ ಸಹಕಾರ ನೀಡಬೇಕಾಗುತ್ತದೆ ಎಂದ ಅವರು, ಮೋದಿ 022ರೊಳಗೆ ರೈತರ ಆದಾಯ ದುಪ್ಪಟ್ಟು ಮಾಡುವುದಾಗಿ ಭರವಸೆ ನೀಡಿದ್ದರು. 2023 ಬಂದಿದೆ, ಆದಾಯ ದುಪ್ಪಟ್ಟಾಗಿದೆಯಾ? ರೈತರ ಸಾಲ ದುಪ್ಪಟ್ಟಾಗಿದೆಯೇ ವಿನಃ ಆದಾಯ ದುಪ್ಪಟ್ಟಾಗಿಲ್ಲ. ಮೋದಿ ಈ ರೀತಿ ನಾಡಿನ ರೈತರಿಗೆ ಮೋಸ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ನಮ್ಮದು ಡಬ್ಬಲ್ ಇಂಜಿನ್ ಸರಕಾರ ಎನ್ನುವ ಬೊಮ್ಮಾಯಿ ಮೊದಲು ಕುರುಬರು, ಗೊಂಡ, ರಾಜಗೊಂಡ ಸಮಾಜವನ್ನು ಎಸ್.ಟಿ. ಸೇರಿಸುವ ಕೆಲಸ ಮಾಡಲಿ ಎಂದು ಸವಾಲು ಹಾಕಿದ ಸಿದ್ದರಾಮಯ್ಯ, ಮಹಿಳೆಯರಿಗೆ, ಯುವಕರಿಗೆ, ರೈತರಿಗೆ, ಬಡಜನರಿಗೆ, ಹಿಂದುಳಿದವರಿಗೆ, ಅಲ್ಪಸಂಖ್ಯಾತರಿಗೆ ಯಾವ ಸಮುದಾಯಗಳಿಗೂ ನ್ಯಾಯ ಒದಗಿಸಿಲ್ಲ ಎಂದು ಟೀಕಿಸಿದರು.

ತೇಜಸ್ವಿ ಸೂರ್ಯ ವಿರುದ್ಧ ಸಿದ್ದರಾಮಯ್ಯ ಕಿಡಿ:

‘ಸಂಸದ ತೇಜಸ್ವಿ ಸೂರ್ಯ ರೈತರ ಸಾಲಮನ್ನಾ ಮಾಡುವುದರಿಂದ ದೇಶದ ಮೇಲೆ ದುಷ್ಪರಿಣಾಮ ಬೀರುತ್ತದೆ. ಇದಕ್ಕಾಗಿ ರೈತರ ಸಾಲಮನ್ನಾ ಮಾಡಬಾರದು ಎಂದಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಬಂಡವಾಳಶಾಹಿಗಳು, ಉದ್ಯಮಿಗಳ 14ಲಕ್ಷ ಕೋಟಿ ರೂ.ಸಾಲಮನ್ನಾ ಮಾಡಿದ್ದಾರೆ. ಇದರಿಂದ ದೇಶಕ್ಕೆ ಲಾಭವಾಗಿದೆಯಾ? ಇಂತಹವರನ್ನು ‘ಅಮವಾಸ್ಯೆ ಸೂರ್ಯ’ ಎನ್ನದೆ ಬೇರೆ ಏನು ಹೇಳಬೇಕು? ಇದುಅವರ ವೈಯಕ್ತಿಯ ಅಭಿಪ್ರಾಯವಲ್ಲ, ಬಿಜೆಪಿ ಆಂತರಿಕ ಅಭಿಪ್ರಾಯ ಎಂಬುದನ್ನು ಜನ ಅರ್ಥಮಾಡಿಕೊಳ್ಳಬೇಕು’

-ಸಿದ್ದರಾಮಯ್ಯ ವಿಪಕ್ಷ ನಾಯಕ

Similar News