ಹಾವೇರಿ 86ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದ್ದ ಕಲಾವಿದರಿಗೆ ಇನ್ನೂ ದೊರಕದ ಗೌರವಧನ: ಆರೋಪ

Update: 2023-02-08 16:50 GMT

ಹಾವೇರಿ, ಫೆ.8: ಹಾವೇರಿಯಲ್ಲಿ ಜ.6, 7 ಮತ್ತು 8ರಂದು ನಡೆದ 86ನೆ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದ್ದ ಕಲಾವಿದರಿಗೆ ನಿಗದಿಯಾಗಿದ್ದ ಸಂಭಾವನೆಯನ್ನು ಇನ್ನೂ ನೀಡಲಾಗಿಲ್ಲ ಎಂಬ ಆರೋಪ ಕೇಳಿ ಬಂದಿದೆ. 

ರಾಜ್ಯದ ನಾನಾ ಕಡೆಗಳಿಂದ ಸಮ್ಮೇಳನಕ್ಕೆ ಬಂದಿದ್ದ ಕಲಾವಿದರು ಸಾಂಸ್ಕೃತಿಕ ಕಾರ್ಯಕ್ರಮ ನೀಡುವ ಮೂಲಕ ನೆರೆದಿದ್ದವರನ್ನು ರಂಜಿಸಿದ್ದರು. ಪ್ರತಿ ದಿನ ಸಂಜೆ 7 ಗಂಟೆಯಿಂದ ರಾತ್ರಿ 11 ಗಂಟೆವರೆಗೂ ಸಾಂಸ್ಕøತಿಕ ಕಾರ್ಯಕ್ರಮ ನೀಡಿದ್ದರು. ಆದರೆ, ಕಾರ್ಯಕ್ರಮ ಮುಗಿದು ತಿಂಗಳು ಕಳೆದರೂ ನಿಗದಿಯಾಗಿದ್ದ ಗೌರವಧನಕ್ಕಾಗಿ ಕಲಾವಿದರು ಎದುರು ನೋಡುತ್ತಿದ್ದಾರೆ. 

ತಮ್ಮ ಸ್ವಂತ ಹಣದಲ್ಲಿ ವಾಹನಗಳ ಬಾಡಿಗೆ ಪಾವತಿಸಿ ಕಲಾತಂಡಗಳು ರಾಜ್ಯದ ನಾನಾ ಕಡೆಗಳಿಂದ ಸಮ್ಮೇಳನಕ್ಕೆ ಆಗಮಿಸಿದ್ದರು. ವೈಯಕ್ತಿಕ ಹಾಗೂ ತಂಡದ ಕಾರ್ಯಕ್ರಮ ನೀಡಿದವರಿಂದ ಬ್ಯಾಂಕ್ ಖಾತೆ ವಿವರಗಳನ್ನು ಪಡೆದು ವಾರದೊಳಗಾಗಿ ಗೌರವಧನವನ್ನು ಖಾತೆಗೆ ಹಾಕುವುದಾಗಿ ಆಯೋಜಕರು ತಿಳಿಸಿದ್ದರು. ಆದರೆ, ಈವರೆಗೆ ಒಂದು ಪೈಸೆ ಕೂಡ ಬಂದಿಲ್ಲ ಎಂದು ಕಲಾವಿದರು ಬೇಸರ ವ್ಯಕ್ತಪಡಿಸಿದ್ದಾರೆ.

ಹಾವೇರಿ ಜಿಲ್ಲೆಯ ಮತ್ತು ಹೊರ ಜಿಲ್ಲೆಗಳ ಕಲಾ ತಂಡಗಳಿಗೆ ಕಲಾವಿದರ ಸಂಖ್ಯೆ ಆಧರಿಸಿ ಸುಮಾರು 200 ಕಲಾತಂಡಗಳಿಗೆ ಗೌರವಧನ ನಿಗದಿಪಡಿಸಲಾಗಿತ್ತು. ಒಟ್ಟು 47 ಲಕ್ಷ ಸಂದಾಯ ಮಾಡಬೇಕಿದೆ. ಸಮ್ಮೇಳನಕ್ಕೆ 20 ಕೋಟಿ ಅನುದಾನ ಬಿಡುಗಡೆಯಾಗಿದ್ದರೂ ಕಲಾವಿದರಿಗೆ ಗೌರವಧನ ತಲುಪಿಸುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ ಎಂದು ಕಲಾವಿದರು ದೂರಿದ್ದಾರೆ.

Similar News