ಮೂರನೇ ಬಾರಿ 'ಗ್ರ್ಯಾಮಿ' ಗೆದ್ದ ರಿಕಿ ಕೇಜ್
ಬೆಸ್ಟ್ ನ್ಯೂ ಏಜ್ ಆಲ್ಬಂ ವಿಭಾಗದಲ್ಲಿ 'ವಿಂಡ್ಸ್ ಆಫ್ ಸಂಸಾರ' ಆಲ್ಬಂಗಾಗಿ ರಿಕಿ ಕೇಜ್ 2015ರಲ್ಲಿ ತಮ್ಮ ಮೊದಲ ಗ್ರ್ಯಾಮಿ ಪ್ರಶಸ್ತಿಯನ್ನು ಪಡೆದುಕೊಂಡರು. ಕಳೆದ ವರ್ಷ ಪುನಃ ಅದೇ ವಿಭಾಗದಲ್ಲಿ ರಿಕಿ 2ನೇ ಗ್ರ್ಯಾಮಿ ಪ್ರಶಸ್ತಿಗೆ ಭಾಜನರಾಗಿದ್ದರು. ಇದೀಗ ಮೂರನೇ ಬಾರಿ ಈ ಪ್ರತಿಷ್ಠಿತ ಪ್ರಶಸ್ತಿ ಅವರಿಗೆ ಒಲಿದಿದೆ.
ಸಂಗೀತ ಕ್ಷೇತ್ರದಲ್ಲಿ ವಿಶ್ವಮಟ್ಟದಲ್ಲಿ ಮಿಂಚುವುದರೊಂದಿಗೆ ಭಾರತ ಮತ್ತೊಮ್ಮೆ ಹೆಮ್ಮೆಪಡುವ ಸಂದರ್ಭ. ಖ್ಯಾತ ಸಂಗೀತ ಸಂಯೋಜಕ ಬೆಂಗಳೂರಿನ ರಿಕಿ ಕೇಜ್ ಮೂರನೇ ಬಾರಿ ಗ್ರ್ಯಾಮಿ ಪ್ರಶಸ್ತಿ ಗೆದ್ದಿದ್ದಾರೆ.
ಬೆಸ್ಟ್ ಇಮ್ಮರ್ಸೀವ್ ಆಡಿಯೋ ಆಲ್ಬಂ ವಿಭಾಗದಲ್ಲಿ ಅವರ 'ಡಿವೈನ್ ಟೈಡ್ಸ್' ಎಂಬ ಆಲ್ಬಂ ಈ ಪ್ರಶಸ್ತಿ ಗೆದ್ದಿದೆ. ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಗ್ರ್ಯಾಮಿ ಪ್ರಶಸ್ತಿಯನ್ನು ಪಡೆಯುವ ಮೂಲಕ ರಿಕಿ ಮೂರು ಗ್ರ್ಯಾಮಿ ಪ್ರಶಸ್ತಿಗಳನ್ನು ಪಡೆದ ಏಕೈಕ ಭಾರತೀಯ ಎನಿಸಿಕೊಂಡಿದ್ದಾರೆ.
ರಿಕಿ ಈ ಪ್ರಶಸ್ತಿಯನ್ನು ಸಾಂಪ್ರದಾಯಿಕ ಬ್ರಿಟಿಷ್ ರಾಕ್ ಬ್ಯಾಂಡ್ 'ದಿ ಪೊಲೀಸ್'ನ ಡ್ರಮ್ಮರ್ ಸ್ಟೀವರ್ಟ್ ಕೋಪ್ಲ್ಯಾಂಡ್ ಅವರೊಂದಿಗೆ ಹಂಚಿಕೊಂಡಿದ್ದಾರೆ.
ರಿಕಿಯವರ ಡಿವೈನ್ ಟೈಡ್ಸ್ ಆಲ್ಬಂ 9 ಹಾಡುಗಳು ಮತ್ತು 8 ಸಂಗೀತ ವೀಡಿಯೊಗಳನ್ನು ಒಳಗೊಂಡಿದೆ. ಹಿಮಾಲಯದಿಂದ ಹಿಡಿದು ಸ್ಪೇನ್‌ನ ಹಿಮಾವೃತ ಕಾಡುಗಳವರೆಗೆ ವಿಶ್ವಾದ್ಯಂತದ ವಿವಿಧ ಸುಂದರ ತಾಣಗಳಲ್ಲಿ ಇದನ್ನು ಚಿತ್ರೀಕರಿಸಿರುವುದು ವಿಶೇಷ.
ಗ್ರ್ಯಾಮಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದ ಸಂದರ್ಭದಲ್ಲಿಯೇ ಅವರು ಹೇಳಿಕೊಂಡಂತೆ, ಅವರ ಸಂಗೀತದಲ್ಲಿ ಭಾರತೀಯವಾದ ಒಂದು ಸೆಲೆ ಇದ್ದೇ ಇರುತ್ತದೆ. ಈ ಆಲ್ಬಂ ಕೂಡ ಅದಕ್ಕೆ ಹೊರತಾದುದಲ್ಲ.
ಬೆಸ್ಟ್ ನ್ಯೂ ಏಜ್ ಆಲ್ಬಂ ವಿಭಾಗದಲ್ಲಿ 'ವಿಂಡ್ಸ್ ಆಫ್ ಸಂಸಾರ' ಆಲ್ಬಂಗಾಗಿ ರಿಕಿ ಕೇಜ್ 2015ರಲ್ಲಿ ತಮ್ಮ ಮೊದಲ ಗ್ರ್ಯಾಮಿ ಪ್ರಶಸ್ತಿಯನ್ನು ಪಡೆದುಕೊಂಡರು. ಕಳೆದ ವರ್ಷ ಪುನಃ ಅದೇ ವಿಭಾಗದಲ್ಲಿ ರಿಕಿ 2ನೇ ಗ್ರ್ಯಾಮಿ ಪ್ರಶಸ್ತಿಗೆ ಭಾಜನರಾಗಿದ್ದರು. ಇದೀಗ ಮೂರನೇ ಬಾರಿ ಈ ಪ್ರತಿಷ್ಠಿತ ಪ್ರಶಸ್ತಿ ಅವರಿಗೆ ಒಲಿದಿದೆ.
ಅಮೆರಿಕದ ರೆಕಾರ್ಡಿಂಗ್ ಅಕಾಡಮಿ ಎಂಬ ಸಂಸ್ಥೆ ಕಳೆದ 62 ವರ್ಷಗಳಿಂದಲೂ ಜಾಗತಿಕ ಮಟ್ಟದಲ್ಲಿ ಅತ್ಯುತ್ತಮ ಸಂಗೀತ ಸಾಧಕರಿಗೆ ಕೊಡುತ್ತಿರುವ ಪ್ರತಿಷ್ಠಿತ ಪ್ರಶಸ್ತಿ ಇದು. ಗ್ರಾಮೋಫೋನ್ ಅವಾರ್ಡ್ಸ್ ಎಂಬುದು ಇದರ ಪೂರ್ಣ ಹೆಸರು. ಸಿನೆಮಾಕ್ಕೆ ಆಸ್ಕರ್ ಅಥವಾ ವಿವಿಧ ಕ್ಷೇತ್ರಗಳ ಸಾಧನೆಗೆ ನೊಬೆಲ್ ಇರುವಂತೆ ಸಂಗೀತಗಾರರಿಗೆ ಗ್ರ್ಯಾಮಿ ಪ್ರಶಸ್ತಿ ಅತ್ಯಂತ ಹೆಮ್ಮೆಯ ಸಂಗತಿ.
ಇಂತಹದೊಂದು ಪ್ರಶಸ್ತಿಗೆ ಮೂರನೇ ಬಾರಿ ಭಾಜನರಾಗಿರುವ ರಿಕಿ ಅಮೆರಿಕದ ನಾರ್ತ್ ಕೆರೋಲಿನಾದಲ್ಲಿ ಭಾರತೀಯ ದಂಪತಿಗೆ 1981ರಲ್ಲಿ ಜನಿಸಿದರು. ಬಳಿಕ ಬೆಂಗಳೂರಿಗೆ ವಲಸೆ ಬಂದ ಪೋಷಕರೊಂದಿಗೆ 8ನೇ ವಯಸ್ಸಿನಿಂದಲೂ ರಿಕಿ ಬೆಂಗಳೂರಿನಲ್ಲಿಯೇ ನೆಲೆಸಿದ್ದಾರೆ. ಆಕ್ಸ್‌ಫರ್ಡ್ ಕಾಲೇಜಿನಿಂದ ದಂತ ವೈದ್ಯಕೀಯ ಪದವಿ ಪಡೆದಿದ್ದರೂ, ಆಯ್ದುಕೊಂಡದ್ದು ಸಂಗೀತ ಕ್ಷೇತ್ರವನ್ನು.
30ಕ್ಕೂ ಹೆಚ್ಚು ದೇಶಗಳಲ್ಲಿ ಸಂಗೀತ ಕಾರ್ಯಕ್ರಮಗಳು, ಪ್ರತಿಷ್ಠಿತ ಪ್ರಶಸ್ತಿಗಳು, ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಲು ವಿಶ್ವಸಂಸ್ಥೆಯ ಜೊತೆಗೂ ಕೆಲಸ ಇವೆಲ್ಲವೂ ಇವರ ಸಾಧನೆಯ ಪಟ್ಟಿಯಲ್ಲಿನ ಹೆಗ್ಗಳಿಕೆಗಳು.
ಬೆಂಗಳೂರಿನಲ್ಲಿ 2003ರಿಂದ 'ರೆವೊಲ್ಯೂಷನ್' ಹೆಸರಿನ ಸ್ವಂತ ಸ್ಟುಡಿಯೋ ಆರಂಭಿಸಿದ್ದು, ಸಾವಿರಾರು ಜಾಹೀರಾತುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. 'ಕ್ರೇಜಿ ಕುಟುಂಬ', 'ವೆಂಕಟ ಇನ್ ಸಂಕಟ', 'ಆ್ಯಕ್ಸಿಡೆಂಟ್' ಮೊದಲಾದ ಕನ್ನಡದ ಕೆಲವು ಸಿನೆಮಾಗಳಿಗೂ ಸಂಗೀತ ನೀಡಿದ್ದಾರೆ. 2011ರಲ್ಲಿ ಢಾಕಾದಲ್ಲಿ ಜರುಗಿದ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ಉದ್ಘಾಟನಾ ಸಮಾರಂಭಕ್ಕೆ ಸಂಗೀತ ಸಂಯೋಜಿಸಿದ ಹೆಚ್ಚುಗಾರಿಕೆಯೂ ಇವರದು.
ಸಂಗೀತವನ್ನೇ ಪ್ರಧಾನವಾಗಿ ತೆಗೆದುಕೊಂಡು ಕಲಿತವರಲ್ಲವಾದರೂ ರಿಕಿ ಅವರ ಸಾಧನೆ ವಿಶ್ವಮಟ್ಟದ್ದು. ಅವರ ತಾಯಿಯವರು ಹೇಳುವ ಪ್ರಕಾರ, ಸಂಗೀತ ರಿಕಿಗೆ ಅವರ ಅಜ್ಜ, ನಟರೂ ಆಗಿದ್ದ ಜಾನಕಿದಾಸ್ ಅವರಿಂದ ಬಂದುದಾಗಿದೆ. ಗ್ರ್ಯಾಮಿ ಪ್ರಶಸ್ತಿ ಪಡೆದಿರುವ ಭಾರತೀಯರಲ್ಲಿ ರಿಕಿ ನಾಲ್ಕನೆಯವರು ಮತ್ತು ಅತ್ಯಂತ ಕಿರಿಯ ಎಂಬುದು ಕೂಡ ವಿಶೇಷ.