ಯಡಿಯೂರಪ್ಪ ಬಿಜೆಪಿ ತೊರೆದು JDS ಸೇರುತ್ತೇನೆ ಎಂದಾಗ ನಾನೇ ತಡೆದಿದ್ದೆ: ಎಚ್.ಡಿ.ಕುಮಾರಸ್ವಾಮಿ

Update: 2023-02-09 10:18 GMT

ಬೆಂಗಳೂರು: 'ಪೇಶ್ವೆ ವಂಶಸ್ಥರು ಬಿ.ಎಸ್ ಯಡಿಯೂರಪ್ಪ ಅವರಿಗೆ ಅಧಿಕಾರ ಕೊಡಲು ಬಿಡಲಿಲ್ಲ. ಅವರೇ ಯಡಿಯೂರಪ್ಪ ಸರ್ಕಾರವನ್ನು ತೆಗೆದರು. ಎರಡನೇ ಬಾರಿ ಕಷ್ಟ ಪಟ್ಟು ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆದರು. ಅವರನ್ನ ಹೇಗೆ ನಡೆಸಿಕೊಂಡಿದ್ದಾರೆ ಎಂದು ಎಲ್ಲರಿಗೂ ತಿಳಿದಿದೆ' ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. 

ಗುರುವಾರ ಕುಮಟಾ ಕ್ಷೇತ್ರದ ತಲಗೇರಿಯಲ್ಲಿ ಪಂಚರತ್ನ ರಥಯಾತ್ರೆ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ''ಬಿ.ಎಸ್ ಯಡಿಯೂರಪ್ಪ ಅವರು ಮಂತ್ರಿ ಸ್ಥಾನ ಕೊಡುವುದಾದರೆ ಜೆಡಿಎಸ್ ಸೇರುತ್ತೇನೆ ಎಂದು ಅವರ ಆಪ್ತರೊಬ್ಬರ ಮೂಲಕ ಹೇಳಿ ಕಳುಹಿಸಿದ್ದರು. ಆದರೆ, ಅವರ ರಾಜಕೀಯಕ್ಕೆ ಹಿನ್ನಡೆ ಆಗೋದು ಬೇಡ ಎಂದು ಅವರನ್ನು ಬಿಜೆಪಿಯಲ್ಲೇ ಮುಂದುವರಿಯಲು ಹೇಳಿದ್ದೆ. ಬಳಿಕ ಸರ್ಕಾರ ರಚನೆಗೂ ಅವಕಾಶ ಮಾಡಿಕೊಟ್ಟೆ'' ಎಂದು ತಿಳಿಸಿದರು. 

ಇದನ್ನೂ ಓದಿಯಾದಗಿರಿಯಲ್ಲಿ ಸ್ಪರ್ಧಿಸಿದರೆ 1 ಕೋಟಿ ರೂ. ಕೊಡ್ತೇನೆ: ಸಿದ್ದರಾಮಯ್ಯ ಹೆಸರಲ್ಲಿ ಚೆಕ್ ಬರೆದ ಬಿಜೆಪಿ ಮುಖಂಡ

''ನನ್ನ ಹೇಳಿಕೆಯಲ್ಲಿ ಗೊಂದಲ ಇಲ್ಲ''

ಇನ್ನು ಸರಣಿ ಟ್ವೀಟ್ ಗಳನ್ನ ಮಾಡಿರುವ ಕುಮಾರಸ್ವಾಮಿ ಅವರು,  ''ಪೇಶ್ವೆಗಳ ವಂಶಾವಳಿಗೆ ಸಂಬಂಧಪಟ್ಟ ವ್ಯಕ್ತಿಯನ್ನು ಬಿಜೆಪಿ ಮುಂದಿನ ಮುಖ್ಯಮಂತ್ರಿ ಮಾಡಲು ಹುನ್ನಾರ ನಡೆಸಿದೆ ಎಂಬುದು ನನ್ನ ಹೇಳಿಕೆ ಆಗಿತ್ತು. ನನ್ನ ಹೇಳಿಕೆಯಲ್ಲಿ ಗೊಂದಲ ಇಲ್ಲ, ಸ್ಪಷ್ಟತೆ ಇತ್ತು. ಕರ್ನಾಟಕ ರಾಜ್ಯದ ಮೇಲೆ, ಅದರಲ್ಲೂ ನಾವೆಲ್ಲರೂ ಶ್ರದ್ಧೆ, ಭಕ್ತಿಯಿಂದ ನಡೆದುಕೊಳ್ಳುವ ಶ್ರೀ ಶೃಂಗೇರಿ ಪೀಠ, ಮತ್ತೂ ಅಲ್ಲಿನ ದೇವಾಲಯಗಳ ಮೇಲೆ ಪೇಶ್ವೆಗಳಿಂದ ಪೈಶಾಚಿಕ ದಾಳಿ ನಡೆದಿತ್ತು. ಇದು ಇತಿಹಾಸ. ಈ ಇತಿಹಾಸವನ್ನು ತಿರುಚಿ ಹೇಳುವ ಅಗತ್ಯ ನನಗಿಲ್ಲ'' ಎಂದು ಸ್ಪಷ್ಟಪಡಿಸಿದ್ದಾರೆ. 

''ನಾನು ಹೇಳಿದ್ದೇ ಒಂದು, ಕೆಲವರು ತಿರುಚಿ ಅಪಪ್ರಚಾರ ನಡೆಸುತ್ತಿರುವುದೇ ಇನ್ನೊಂದು. ಈ ಒಂದು ಇನ್ನೊಂದರ ನಡುವೆ ಅಜಗಜಾಂತರ ವ್ಯತ್ಯಾಸವಿದೆ. ಸತ್ಯಕ್ಕೂ ಸುಳ್ಳಿಗೂ ಇರುವಷ್ಟೇ ದೂರವಿದೆ. ಪಾಪ.. ಕೆಲವರಿಗೆ ತಿರುಚುವುದೇ ಕೆಲಸ, ಅದೇ ಅವರಿಗೆ ಸರ್ವಸ್ವ. ನಾನು ಏನು ಮಾಡಲಿ? ಸತ್ಯ ಹೇಳಿದ್ದೇನೆ, ಚರ್ಚೆಯಾಗಲಿ.'' ಎಂದು ಒತ್ತಾಯಿಸಿದ್ದಾರೆ. 

''ಶಿವಾಜಿ ಮಹಾರಾಜರು, ಜಗಜ್ಯೋತಿ ಬಸವೇಶ್ವರರು, ಗೌತಮ ಬುದ್ಧ, ಮಹಾತ್ಮ ಗಾಂಧೀಜಿ ಮತ್ತು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನೇ ಬಿಡದವರು ಇವರು. ಇನ್ನು ನನ್ನನ್ನು ಬಿಟ್ಟಾರೆಯೇ? ಕೀಳು ನಿಂದನೆ, ಚಿತಾವಣೆಯಷ್ಟೇ ಇವರ ಆಯುಧಗಳು. ನಿಂದನೆ ಮತ್ತು ನಿಂದಕರ ಬಗ್ಗೆ ನಾನು ಅಂಜುವ ಪೈಕಿ ಅಲ್ಲ'' ಎಂದು ಟ್ವೀಟಿಸಿದ್ದಾರೆ. 
 

Similar News