ಯಡಿಯೂರಪ್ಪ ಇಲ್ಲದಿದ್ದರೆ ರಾಜ್ಯದಲ್ಲಿ ಬಿಜೆಪಿ ಶೂನ್ಯ: ಎಸ್.ಎಲ್.ಭೋಜೇಗೌಡ
ಚಿಕ್ಕಮಗಳೂರು, ಫೆ.9: 'ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಇಲ್ಲದಿದ್ದರೆ ರಾಜ್ಯದಲ್ಲಿ ಬಿಜೆಪಿ ಶೂನ್ಯ. ಯಡಿಯೂರಪ್ಪ ಅವರ ಬೆನ್ನಿಗೆ ಇಡಿ, ಐಟಿ ಬಾಂಬ್ ಕಟ್ಟಿ ಬ್ಲಾಕ್‍ಮೇಲ್ ಮಾಡುತ್ತಲೇ ಅವರ ಹೆಸರು ಹೇಳಿಕೊಂಡೇ ಚುನಾವಣೆ ಎದುರಿಸಬೇಕಾದ ದುಸ್ಥಿತಿ ಬಿಜೆಪಿಯವರದ್ದಾಗಿದೆ' ಎಂದು ಜೆಡಿಎಸ್ ನಾಯಕ ಹಾಗೂ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಹೇಳಿದ್ದಾರೆ.
ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ''ಸಿದ್ದರಾಮಯ್ಯ, ಕುಮಾರಸ್ವಾಮಿ, ಯಡಿಯೂರಪ್ಪ ಅವರು ರಾಜ್ಯದ ಮಾಸ್ ಲೀಡರ್ ಗಳು, ಸಿದ್ದರಾಮಯ್ಯ, ಯಡಿಯೂರಪ್ಪ ಅವರ ಮೇಲೆ ನಮಗೆ ಗೌರವವಿದೆ. ಆದರೆ ಬಿಜೆಪಿಯವರಿಗೆ ಸಿದ್ದರಾಮಯ್ಯ, ಎಚ್ಡಿಕೆ ಬಿಡಿ, ಯಡಿಯೂರಪ್ಪ ಅವರ ಮೇಲೂ ಗೌರವವಿಲ್ಲ. ಅವರನ್ನು ಅಧಿಕಾರದಿಂದ ಕೆಳಗಿಸಿದ ರಾಜ್ಯದ ಬಿಜೆಪಿ ಮುಖಂಡರು ಸದ್ಯ ಯಡಿಯೂರಪ್ಪ ಅವರ ಹೆಸರು ಹೇಳಿಕೊಂಡೇ ಚುನಾವಣೆ ಎದುರಿಸಲು ಮುಂದಾಗಿದ್ದಾರೆ'' ಎಂದು ಟೀಕಿಸಿದರು.
ಎಚ್ಡಿಕೆ, ದೇವೇಗೌಡ ಬಗ್ಗೆ ಹೇಳಿಕೆ; ಸಚಿವ ಅಶೋಕ್ ವಿರುದ್ಧ ಆಕ್ರೋಶ
'ಜಿಲ್ಲೆಯ ಹುಲಿಕೆರೆ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಕಂದಾಯ ಸಚಿವ ಆರ್.ಅಶೋಕ್ ಅವರು, ವಿಧಾನಸಭೆ ಚುನಾವಣೆ ಬಳಿಕ ಎಚ್ಡಿಕೆ, ದೇವೇಗೌಡ ಅವರು ಗಂಟುಮೂಟೆ ಕಟ್ಟಿಕೊಂಡು ಹೋಗುತ್ತಾರೆ ಎಂದು ಹೇಳಿಕೆ ನೀಡಿರುವುದು ಜವಬ್ದಾರಿಯುತ ಸ್ಥಾನದಲ್ಲಿರುವ ಸಚಿವರ ಬೇಜವಬ್ದಾರಿ ಹೇಳಿಕೆಯಾಗಿದೆ ಎಂದು ಎಸ್.ಎಲ್.ಭೋಜೇಗೌಡ ಅಸಮಾಧಾನ ವ್ಯಕ್ತಪಡಿಸಿದರು.
ಎಚ್.ಡಿ.ಕುಮಾರಸ್ವಾಮಿ ಅವರು ಜನತಾ ದರ್ಶನ, ಗ್ರಾಮ ವಾಸ್ತವ್ಯದಂತಹ ಜನಪ್ರಿಯ ಯೋಜನೆಗಳನ್ನು ನೀಡಿದ್ದು, ಈ ಕಾರ್ಯಕ್ರಮಗಳ ಮೂಲಕ ರಾಜ್ಯಾದ್ಯಂತ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಜಾರಿ ಮಾಡಲಾಗಿದೆ. ಜೆಡಿಎಸ್ ಸರಕಾರದ ಈ ಜನಪ್ರಿಯ ಕಾರ್ಯಕ್ರಮವನ್ನು ಸದ್ಯ ಬಿಜೆಪಿ ಅನುಸರಿಸುತ್ತಿದೆ. ಆದರೆ ಚಿಕ್ಕಮಗಳೂರು ಜಿಲ್ಲೆಯ ಹುಲಿಕೆರೆ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಕಂದಾಯ ಸಚಿವ ಆರ್.ಅಶೋಕ್ ಎಚ್ಡಿಕೆ ಹಾಗೂ ಮಾಜಿ ಪ್ರಧಾನಿ ದೇವೇಗೌಡ ಅವರ ವಿರುದ್ಧ ಅವಹೇಳನ ಮಾಡಿದ್ದಾರೆ. ಚುನಾವಣೆ ಬಳಿಕ ಇಬ್ಬರೂ ಗಂಟುಮೂಟೆ ಕಟ್ಟಿಕೊಂಡು ಹೋಗುತ್ತಾರೆ ಎನ್ನುವ ಮೂಲಕ ರಾಜ್ಯ, ದೇಶದ ಹಿತಕ್ಕಾಗಿ ಶ್ರಮಿಸಿದ ನಾಯಕರ ತೇಜೋವಧೆ ಮಾಡಿರುವುದು ಖಂಡನೀಯ. ಇಂತಹ ಹೇಳಿಕೆಯಿಂದ ಸಚಿವ ಆರ್.ಅಶೋಕ್ ಅವರದ್ದು ಎಂತಹ ಕೆಟ್ಟ ವ್ಯಕ್ತಿತ್ವ ಎಂಬುದು ಜಗಜ್ಜಾಹೀರಾಗಿದೆ ಎಂದು ಟೀಕಿಸಿದರು.
ಮುಂದಿನ ಚುನಾವಣೆ ಬಳಿಕ ಎಚ್ಡಿಕೆ ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ. ಆಗ ಇದೇ ಸಿ.ಟಿ.ರವಿ, ಆರ್.ಅಶೋಕ್‍ನಂತಹ ಬಿಜೆಪಿ ಮುಖಂಡರು ಕುಮಾರಸ್ವಾಮಿ ಅವರ ಒಂದು ಇಂಟರ್‍ವೀವ್ ಕೊಡಿಸಿ ಎಂದು ಮಾಜಿ ಪ್ರಧಾನಿ ದೇವೇಗೌಡ ಅವರ ಕಾಲು ಹಿಡಿಯುವ ಪರಿಸ್ಥಿತಿ ಬರುತ್ತದೆ ಎಂದು ಇದೇ ವೇಳೆ ಭೋಜೇಗೌಡ ವ್ಯಂಗ್ಯವಾಡಿದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಮುಖಂಡರಾದ ತಿಮ್ಮಶೆಟ್ಟಿ, ಹೊಲದಗದ್ದೆ ಗಿರೀಶ್, ಸಿ.ಕೆ.ಮೂರ್ತಿ, ಎ.ಸಿ.ಕುಮಾರ್, ನಂದನ್, ರೇವಣ್ಣ ಮತ್ತಿತರರು ಉಪಸ್ಥಿತರಿದ್ದರು.