ನಂದಿಬೆಟ್ಟದ ಬಳಿ ‘ಆದಿಯೋಗಿ ಪ್ರತಿಮೆ’ ಸ್ಥಾಪನೆ ವಿರುದ್ಧ ಸಲ್ಲಿಸಿದ್ದ ಪಿಐಎಲ್ ಹೈಕೋರ್ಟ್ ನಿಂದ ವಜಾ

Update: 2023-02-09 14:33 GMT

ಬೆಂಗಳೂರು, ಫೆ. 9: ನಂದಿಬೆಟ್ಟದ ಬಳಿ ಆದಿಯೋಗಿ ಪ್ರತಿಮೆ ಸ್ಥಾಪನೆ ವಿರುದ್ಧ ಸಲ್ಲಿಸಿದ್ದ ಪಿಐಎಲ್ ಅನ್ನು ಹೈಕೋರ್ಟ್ ವಜಾಗೊಳಿಸಿದೆ. 

ಮೂರು ಜನರ ವಿರುದ್ಧ ಕೇಸ್ ದಾಖಲಾದ ಹಿನ್ನಲೆ ಆದಿಯೋಗಿ ಪ್ರತಿಮೆ ಸ್ಥಾಪನೆ ವಿರುದ್ಧ ಸಲ್ಲಿಸಿದ್ದ ಪಿಐಎಲ್ ಅನ್ನು ಹೈಕೋರ್ಟ್ ವಜಾಗೊಳಿಸಿದ್ದು, ಉತ್ತಮ ಹಿನ್ನೆಲೆಯುಳ್ಳವರು ಅರ್ಜಿ ಸಲ್ಲಿಸಬಹುದು ಎಂದು ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ಹೇಳಿದ್ದಾರೆ.

ಹೈಕೋರ್ಟ್ ಪಿಐಎಲ್ ಅರ್ಜಿ ವಿಚಾರಣೆ ನಡೆಸಿದ್ದು, ಇಶಾ ಫೌಂಡೇಶನ್ ಪರ ಹಿರಿಯ ವಕೀಲ ಉದಯ್ ಹೊಳ್ಳ ವಾದ ಮಂಡಿಸಿದ್ದಾರೆ. ಅರ್ಜಿದಾರರ ಕ್ರಿಮಿನಲ್ ಹಿನ್ನಲೆಯನ್ನು ಬಹಿರಂಗಪಡಿಸಿಲ್ಲ. ವಾಸ್ತವಾಂಶವನ್ನು ಮುಚ್ಚಿಟ್ಟು ಪಿಐಎಲ್ ಸಲ್ಲಿಸಿದ್ದಾರೆ. ಅರ್ಜಿದಾರರು ಪಿಐಎಲ್ ನಿಯಮಗಳನ್ನು ಪಾಲಿಸಿಲ್ಲವೆಂದು ಹೇಳಿದರು.

ಪ್ರತಿವಾದ ಮಂಡಿಸಿದ ಅರ್ಜಿದಾರರ ಪರ ವಕೀಲರು, ಚಳವಳಿಗಳ ಹಿನ್ನಲೆಯಲ್ಲಿ ಮೂರು ಜನರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೀಠಕ್ಕೆ ತಿಳಿಸಿದರು. ವಕೀಲರ ವಾದ ಆಲಿಸಿದ ನ್ಯಾಯಪೀಠವು ತಪ್ಪು ಮಾಹಿತಿ ನೀಡಿ ಪಿಐಎಲ್ ಹಾಕುವ ಹಕ್ಕು ಎಲ್ಲಿದೆ ಎಂದು ಪ್ರಶ್ನಿಸಿತು.

ನ್ಯಾಯಾಲಯಕ್ಕೆ ಪಿಐಎಲ್ ಸಲ್ಲಿಸುವಾಗ ಶುದ್ಧ ಹಸ್ತರಾಗಿರಬೇಕು. ಬೇರೆಯವರ ಮೇಲೆ ಬೆರಳು ತೋರಿಸುವ ಮುನ್ನ ನೀವು ಸರಿಯಾಗಿರಬೇಕು. ಉದ್ದೇಶ ಮಾತ್ರವಲ್ಲ, ಮಾರ್ಗವೂ ಶುದ್ಧವಿರಬೇಕು ಎಂದು ಹೇಳಿ ಮಹಾತ್ಮ ಗಾಂಧಿ ಹೇಳಿಕೆ ಉಲ್ಲೇಖಿಸಿದರು. 

ನಂತರ ಉತ್ತಮ ಹಿನ್ನೆಲೆಯುಳ್ಳವರು ಅರ್ಜಿ ಸಲ್ಲಿಸಬಹುದು ಎಂದು ಸೂಚಿಸಿ ಕ್ಯಾತಪ್ಪ ಮತ್ತಿತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾಗೊಳಿಸಿದರು.

ಈ ಹಿಂದೆ ವಿಚಾರಣೆ ನಡೆಸಿದ್ದ ಹೈಕೋರ್ಟ್, ನಂದಿಬೆಟ್ಟದ ಬಳಿ ಆದಿಯೋಗಿ ಪ್ರತಿಮೆ ಅನಾವರಣಕ್ಕೆ ಅನುಮತಿ ನೀಡಿದ್ದ ಹೈಕೋರ್ಟ್, ಉಳಿದಂತೆ ಕಾಮಗಾರಿ ನಡೆಸದೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಹೊರಡಿಸಿದ್ದ ಆದೇಶವನ್ನು ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚಿಸಿತ್ತು. ಹೈಕೋರ್ಟ್ ಆದೇಶದಂತೆ ನಿಗದಿತ ಜ.15ರಂದು ಪ್ರತಿಮೆ ಅನಾವರಣಗೊಳಿಸಲಾಗಿತ್ತು.

Similar News