ಅಧಿಕಾರಕ್ಕಾಗಿ ಧರ್ಮಗಳ ನಡುವೆ ಬಿಜೆಪಿಯಿಂದ ಕಂದಕ ಸೃಷ್ಟಿ: ಬಿ.ಕೆ. ಹರಿಪ್ರಸಾದ್ ವಾಗ್ದಾಳಿ

Update: 2023-02-09 14:48 GMT

ಕೊಪ್ಪ, ಫೆ.9:  ದೇಶದಲ್ಲಿ ಜನಸಂಘ, ಭಾರತೀಯ ಜನತಾ ಪಕ್ಷ ಅಸ್ತಿತ್ವಕ್ಕೆ ಬಂದ ನಂತರದಿಂದ ಅಧಿಕಾರಕ್ಕೆ ಧರ್ಮಗಳ ನಡುವೆ ಅಶಾಂತಿಯನ್ನು ಸೃಷ್ಟಿಸುವ ಪ್ರಯತ್ನ ಮಾಡುತ್ತಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಕಾಂಗ್ರೆಸ್ ವತಿಯಿಂದ ಸಿಗದಾಳಿನಲ್ಲಿ ಹಮ್ಮಿಕೊಂಡಿದ್ದ ಕರಾವಳಿ-ಮಲೆನಾಡು ಪ್ರಜಾದ್ವನಿ ಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇದ್ದಾಗ ಜನರ ನಡುವೆ ಸಮರಸ್ಯವಿತ್ತು. ಆದರೇ, ಬಿಜೆಪಿ ಅಧಿಕಾರದ ಹಪಹಾಪಿಯಿಂದ ಧರ್ಮ, ಧರ್ಮಗಳ ನಡುವೆ ಕಂದಕವನ್ನು ಸೃಷ್ಟಿಸಿದೆ. ರಾಷ್ಟ್ರದಲ್ಲಿ ಹಿಂದುಗಳು ಶೇ.80ರಷ್ಟು ಇದ್ದಾರೆ. ಅದರಲ್ಲಿ ಹಿಂದುತ್ವ ಎನ್ನುವವರು ಕೆವಲ 30ರಷ್ಟು ಮಾತ್ರ ಇರುವುದು. ಇವರಿಂದ ಕಾಂಗ್ರೆಸ್ ಪಕ್ಷಕ್ಕೆ ಹಿಂದುತ್ವದ ಪಾಠ ಆಗತ್ಯವಿಲ್ಲ ಎಂದರು.

ಬಿಜೆಪಿಯವರಿಗೆ ಕಳೆದ ಚುನಾವಣೆಯಲ್ಲಿ ಸ್ಪಷ್ಟವಾದ ಬಹುಮತ ನೀಡಿಲ್ಲ. ಅನೈತಿಕ ಸರ್ಕಾರ ಮಾಡಿದ್ದಾರೆ. ಅದ್ದರಿಂದ ಈ ಭಾರಿ ಸೋಲುವ ಭಯದಿಂದ ವಿಜಯ ಸಂಕಲ್ಪಯಾತ್ರೆಯನ್ನು ಮಾಡುತ್ತಿದ್ದಾರೆ. ಆದರೆ, ಕಾಂಗ್ರೆಸ್ ಜನರ ಬಳಿ ಈ ಹಿಂದೆ ಮಾಡಿರುವ ಅಭಿವೃದ್ದಿ ಹಾಗೂ ಜನರಿಗೆ ಮುಂದೆ ನೀಡುವ ಯೋಜನೆಗಳನ್ನು ಹೇಳುತ್ತಿದ್ದೇವೆ ಎಂದರು.

ಇಂದಿರಾ ಗಾಂಧಿ ಪ್ರದಾನಿಯಾಗಿದ್ದ ವೇಳೆಯಲ್ಲಿ ಬಡವರಿಗೆ ಭೂಮಿಯನ್ನು ನೀಡಲಾಯಿತು. ಬಡವರ ಪರ ನೂರಾರು ಯೋಜನೆಗಳನ್ನು ತರಲಾಯಿತು. ಆದರೇ, ಪ್ರಧಾನಿ ಮೋದಿ ಶ್ರೀಮಂತರ ಪರವಾಗಿದ್ದಾರೆ. ಸರ್ಕಾರದ ಉದ್ದಿಮೆಗಳನ್ನು ಖಾಸಗೀಕರಣ ಮಾಡುತ್ತಿದ್ದಾರೆ ಎಂದು ದೂರಿದರು.

ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಮಾತನಾಡಿ, ಕರಾವಳಿ ಮತ್ತು ಮಲೆನಾಡು ಭಾಗದ 33 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಕಳೆದ ಚುನಾವಣೆಯಲ್ಲಿ ಕೇವಲ ನಾಲ್ಕು ಕ್ಷೇತ್ರದಲ್ಲಿ ಗೆಲುವನ್ನು ಖಂಡಿದೆ. ಉಳಿದ ಕ್ಷೇತ್ರದ ಬಿಜೆಪಿಯವರ ಅಪಪ್ರಚಾರ ಹಾಗೂ ಪರೇಶ್ ಮೆಸ್ತರಂತ ಕೊಲೆಗಳನ್ನುಕಾಂಗ್ರೆಸ್ಸಿಗರ ತಲೆಗೆ ಕಟ್ಟಿ ಸುಳ್ಳು ಹೇಳಿದ ಪರಿಣಾಮ ಸೋತಿದೆ. ಆದರೇ, ಈ ಭಾರಿ ಕಾಂಗ್ರೆಸ್ ಎಚ್ಚೆತ್ತುಕೊಂಡಿದೆ ಎಂದರು.

ಈ ಬಾರಿ ಕಾಂಗ್ರೆಸ್‍ನ ಚುನಾವಣೆಯ ಪ್ರಣಾಳಿಕೆಯಲ್ಲಿ ರಾಜ್ಯಕ್ಕೆ ಒಂದು ಹಾಗೂ ಕ್ಷೇತ್ರಕ್ಕೆ ಸೀಮಿತ ಒಂದು ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಾಗುತ್ತದೆ. ನಾರಾಯಣ ಗುರು ಅಭಿವೃದ್ದಿ ನಿಗಮ, ಬಂಟ್ಸ್ ಅಭಿವೃದ್ದಿ ನಿಗಮ ಹಾಗೂ ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿರುವ ಭಂಡಾರಿ, ವಿಶ್ವಕರ್ಮ, ದೇವಾಡಿಗ, ಕೂಲಾಲ, ಶೆಟ್ಟಿಗಾರು ಹಾಗೂ ಮೊದಲಾದ ಸಮುದಾಯಗಳ ನಿಗಮ ಮಂಡಳಿಯನ್ನು ತೆರೆದು 200 ಕೋಟಿಯಷ್ಟು ಅನುದಾನ ನೀಡುವ ಕಾರ್ಯ ಕಾಂಗ್ರೆಸ್ ಮಾಡುತ್ತದೆ ಎಂದರು.

ಶಾಸಕ ಟಿ.ಡಿ ರಾಜೇಗೌಡ ಮಾತನಾಡಿ, ನನ್ನ ವಿರುದ್ಧ ಬಿಜೆಪಿಗರು ಸುಳ್ಳು ದೂರನ್ನು ಲೋಕಯುಕ್ತಗೆ ನೀಡಿದ್ದಾರೆ. ನನಗೆ ಈವರೆಗೂ ನೋಟಿಸ್ ಕೂಡ ಬಂದಿಲ್ಲ. ರಾಜ್ಯದಲ್ಲಿ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇದೆ. ಬಿಜೆಪಿಗರಿಗೆ ಕೈಯಲ್ಲಿ ಐ.ಟಿ, ಲೋಕಾಯುಕ್ತ, ಐ.ಟಿಗಳು ಇವೆ, ಇವರಿಗೆ ತಾಕತ್ ಇದ್ದಾರೆ ತನಿಖೆಗೆ ಒಳಪಡಿಸಲಿ ಎಂದು ಸವಾಲು ಹಾಕಿದರು.

ಸಮ್ಮಿಶ್ರ ಸರ್ಕಾರವಿದ್ದ ವೇಳೆಯಲ್ಲಿ ಸುಂಆರು 2500 ಹಕ್ಕುಪತ್ರವನ್ನು ವಿತರಣೆ ಮಾಡಿದ್ದೆ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಜೀವರಾಜ್ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾದ ನಂತರದಿಂದ ಹಕ್ಕುಪತ್ರ ನೀಡುವುದನ್ನು ತಡೆಯಲು ಜಿಲ್ಲಾಧಿಕಾರಿಯ ಮೂಲಕ ತಹಸೀಲ್ದಾರ್‍ಗಳಿಗೆ ಸೂಚನೆ ನೀಡುವ ಕೆಲಸ ಮಾಡಿದ್ದಾರೆ ಎಂದರು.

ಕೆಪಿಸಿಸಿ ಕಿಸಾನ್ ಸೆಲ್ ಘಟಕದ ಸಚಿನ್ ಮೀಗಾ ಮಾತನಾಡಿ, ಜೀವರಾಜ್, ಸಿ.ಟಿ ರವಿ, ಸುನೀಲ್ ಕುಮಾರ್ ಯಾರು ಕೂಡ ರೈತರ, ಕಾರ್ಮಿಕರ ಪರವಾಗಿ ಹೋರಾಟ ಮಾಡಿ ಶಾಸಕರಾದವರಲ್ಲ. ಮಹೇಂದ್ರ ಕುಮಾರ್ ಅಂತ ಒಬ್ಬ ವ್ಯಕ್ತಿಯನ್ನು ಸಿ.ಟಿ ರವಿ ಬಳಸಿಕೊಂಡು ದತ್ತಪೀಠ ಗಲಾಟೆ ನಡೆಸಿದ್ದರು. ಅರ್ದ ಕೆ.ಜಿ ಕುಂಕುಮ ಹಾಗೂ ಕೇಸರಿ ಶಾಲು ಇಟ್ಟುಕೊಂಡು ಇವರಲ್ಲೆ ಶಾಸಕರಾಗಿದ್ದು ಎಂದರು.

Similar News