ಸುಳ್ಳು ದಾವೆ: ಕಾಂಗ್ರೆಸ್ ನಾಯಕರ ವಿರುದ್ಧದ ಕೇಸ್ ವಜಾಗೊಳಿಸಿದ ಹೈಕೋರ್ಟ್

Update: 2023-02-09 14:53 GMT

ಮಡಿಕೇರಿ ಫೆ.9 : ರಾಜ್ಯದಲ್ಲಿ ಬಹು ಚರ್ಚೆಗೆ ಗ್ರಾಸವಾದ ಕೆಪಿಸಿಸಿ ಕಾನೂನು ಘಟಕದ ರಾಜ್ಯಾಧ್ಯಕ್ಷ ಎ.ಎಸ್.ಪೊನ್ನಣ್ಣ ಸೇರಿದಂತೆ 11 ಮಂದಿಯ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಕರ್ನಾಟಕ ರಾಜ್ಯ ಹೈಕೋರ್ಟ್ ವಜಾಗೊಳಿಸಿದೆ. 

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕೊಡಗು ಜಿಲ್ಲೆಗೆ ಅತಿವೃಷ್ಟಿ ನಷ್ಟದ ವೀಕ್ಷಣೆಗೆಂದು ಬಂದಾಗ ಮೊಟ್ಟೆ ಎಸೆದ ಪ್ರಕರಣ ನಡೆದಿತ್ತು. ಈ ಸಂದರ್ಭ ಎ.ಎಸ್.ಪೊನ್ನಣ್ಣಅವರ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಮಡಿಕೇರಿ ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಪ್ರತಿಭಟನೆ ನಡೆಸಿದ್ದರು.

ಈ ಪ್ರಕರಣದ ಮುಂದುವರಿದ ಭಾಗವಾಗಿ ಎ.ಎಸ್.ಪೊನ್ನಣ್ಣ, ವಿಧಾನ ಪರಿಷತ್ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ, ಮುಖಂಡರಾದ ಡಾ.ಮಂಥರ್ ಗೌಡ, ಚಂದ್ರಶೇಖರ್, ಸೂರಜ್ ಹೊಸೂರು, ತೆನ್ನಿರ ಮೈನಾ, ಮಂದ್ರಿರ ಮೋಹನ್ ದಾಸ್ ಸೇರಿದಂತೆ ಹನ್ನೊಂದು ಮಂದಿಯ ವಿರುದ್ಧ ಮಡಿಕೇರಿ ನಗರಸಭೆಯ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ ಅವರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಮಡಿಕೇರಿ ನಗರ ಠಾಣೆಯಲ್ಲಿ ದೂರು ನೀಡಿದ್ದರು.

ಈ ಪ್ರಕರಣದ ಬಗ್ಗೆ ಬುಧವಾರ ಹೈಕೋರ್ಟ್‍ನಲ್ಲಿ ವಿಚಾರಣೆ ನಡೆದಾಗ ವಕೀಲರಾದ ಸಂದೇಶ್ ಚೌಟ ಅವರು ಕಾಂಗ್ರೆಸ್ ಮುಖಂಡರ ಪರ ವಾದ ಮಂಡಿಸಿದರು. ವಾದ ಆಲಿಸಿದ ಹೈಕೋರ್ಟ್ ಇದೊಂದು ಸುಳ್ಳು ದಾವೆ ಎಂದು ಪರಿಗಣಿಸಿ ಕೇಸ್ ನ್ನು ವಜಾಗೊಳಿಸಿದೆ.  

Similar News