×
Ad

ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪ್ರಕಟ

Update: 2023-02-09 20:39 IST

ಬೆಂಗಳೂರು, ಫೆ. 9: ಕರ್ನಾಟಕ ಮಾಧ್ಯಮ ಅಕಾಡೆಮಿಯ 2019, 2020, 2021 ಹಾಗೂ 2022ನೆ ಸಾಲಿನ ವಿಶೇಷ ಪ್ರಶಸ್ತಿ, ಜೀವಮಾನ ಸಾಧನೆ ಹಾಗೂ ಮಾಧ್ಯಮ ವಾರ್ಷಿಕ ಪ್ರಶಸ್ತಿಗೆ ರಾಜ್ಯದ ವಿವಿಧ ಪತ್ರಕರ್ತರ ಆಯ್ಕೆ ಪಟ್ಟಿ ಪ್ರಕಟಗೊಂಡಿದ್ದು, ವಾರ್ತಾಭಾರತಿ ಪತ್ರಿಕೆಯ ಬೆಂಗಳೂರಿನ ಬ್ಯೂರೋ ಮುಖ್ಯಸ್ಥ ಪ್ರಕಾಶ್ ಸಿ. ರಾಮಜೋಗಿಹಳ್ಳಿ ಅವರು 2022ನೆ ಸಾಲಿನ ‘ವಾರ್ಷಿಕ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ.

ಜೀವಮಾನದ ಸಾಧನೆ ಪ್ರಶಸ್ತಿ: ಜೀವಮಾನದ ಸಾಧನೆಗೆ ವಿಶೇಷ ಪ್ರಶಸ್ತಿಗೆ ಹಿರಿಯ ಪತ್ರಕರ್ತರಾದ ತಿಲಕ್ ಕುಮಾರ್(2019-ಡೆಕ್ಕನ್ ಹೆರಾಲ್ಡ್), ವಿಜಯ ಸಂಕೇಶ್ವರ್(2020-ವಿಜಯವಾಣಿ ಮುಖ್ಯಸ್ಥ), ಎಚ್.ಆರ್. ರಂಗನಾಥ್(2021-ಪಬ್ಲಿಕ್ ಟಿವಿ ಮುಖ್ಯಸ್ಥ), ಸುಶೀಲಾ ಸುಬ್ರಮಣ್ಯಂ (2022-ಹಿರಿಯ ಆರ್ಥಿಕ ತಜ್ಞೆ) ಆಯ್ಕೆಯಾಗಿದ್ದಾರೆ.

ಮೂಕ ನಾಯಕ ಪ್ರಶಸ್ತಿ: ತಳಸಮುದಾಯದ ಬಗೆಗಿನ ಬರಹಗಳ ಅಂಕಣಕಾರರಿಗೆ ಪ್ರದಾನಿಸುವ 2019ನೆ ಸಾಲಿನ ಡಾ.ಬಿ.ಆರ್.ಅಂಬೇಡ್ಕರ್ ಮೂಕನಾಯಕ ಪ್ರಶಸ್ತಿಗೆ ದಲಿತ ವಾಯ್ಸ್ ಸಂಪಾದಕ ವಿ.ಟಿ. ರಾಜಶೇಖರ್, ಮೈಸೂರು ವಿವಿಯ ಪ್ರಾಧ್ಯಾಪಕಿ ಪ್ರೊ.ಆರ್.ಇಂದಿರಾ(2020), ದೀನಬಂಧು ಸ್ವಯಂ ಸೇವಾ ಸಂಸ್ಥೆ ಮುಖ್ಯಸ್ಥ ಪ್ರೊ.ಜಿ.ಎಸ್.ಜಯದೇವ್(2021), ಮೈಸೂರು ವಿವಿಯ ಪ್ರಾಧ್ಯಾಪಕ ಪ್ರೊ.ಮುಝಫರ್ ಅಸ್ಸಾದಿ(2022) ಅವರು ಭಾಜನರಾಗಿದ್ದಾರೆ.

ಆಂದೋಲನ ಪ್ರಶಸ್ತಿ: ನೃಪತುಂಗ ದಿನಪತ್ರಿಕೆ ಕಲಬುರ್ಗಿ(2019), ನಾವಿಕ ದಿನಪತ್ರಿಕೆ ಶಿವಮೊಗ್ಗ(2020), ಸಂಜೆದರ್ಪಣ ಹುಬ್ಬಳ್ಳಿ(2021), ಜಯಕಿರಣ ದಿನಪತ್ರಿಕೆ ಮಂಗಳೂರು(2022). ಅರಗಿಣಿ ಪ್ರಶಸ್ತಿ: ಗಿರೀಶ್ ರಾವ್(2019), ಗಣೇಶ್ ಕಾಸರಗೊಡು(2020), ರಘುನಾಥ್ ಚ.ಹ.(2021), ಡಾ.ಶರಣು ಹುಲ್ಲೂರು(2022)

2021ನೆ ಸಾಲಿನ ‘ವಾರ್ಷಿಕ ಪ್ರಶಸ್ತಿ’ಗೆ ಎ. ಕಬೀರ್ ಕಾಂತಿಲ ಕಾಸರಗೋಡು ಸೇರಿ 30 ಮಂದಿಯನ್ನು ಆಯ್ಕೆ ಮಾಡಲಾಗಿದೆ. 

ಇನ್ನೂ, 2022ನೆ ಸಾಲಿನ ‘ವಾರ್ಷಿಕ ಪ್ರಶಸ್ತಿ’ಗೆ ವಾರ್ತಾಭಾರತಿ ಪತ್ರಿಕೆಯ ಬೆಂಗಳೂರಿನ ಬ್ಯೂರೋ ಮುಖ್ಯಸ್ಥ  ಪ್ರಕಾಶ್ ಸಿ. ರಾಮಜೋಗಿಹಳ್ಳಿ, ಹಿರಿಯ ಪತ್ರಕರ್ತರಾದ ಯಾಸೀರ್ ಮುಸ್ತಾಕ್, ಶಿವಣ್ಣ, ಆರ್.ಎಚ್.ಜಯಪ್ರಕಾಶ್ ಸೇರಿದಂತೆ ನಾಲ್ಕು ವರ್ಷಗಳು ಸೇರಿ ಒಟ್ಟು 124 ಮಂದಿ ಪತ್ರಕರ್ತರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. 

ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸದಾಶಿವ ಶೆಣೈ ಅವರ ಅಧ್ಯಕ್ಷತೆಯಲ್ಲಿ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಿರುವವರನ್ನು ಪರಿಗಣಿಸಿ ನಾಡಿನ ವಿವಿಧ ಪತ್ರಕರ್ತರನ್ನು ‘ಮಾಧ್ಯಮ ವಾರ್ಷಿಕ ಪ್ರಶಸ್ತಿ’ ಮತ್ತು ‘ದತ್ತಿ ಪ್ರಶಸ್ತಿ’ಗಳಿಗೆ ಆಯ್ಕೆ ಮಾಡಲಾಗಿದೆ.

ಜೀವಮಾನ ಸಾಧನೆ ವಿಶೇಷ ಪ್ರಶಸ್ತಿಗೆ 50 ಸಾವಿರ ರೂ., ವಾರ್ಷಿಕ ಪ್ರಶಸ್ತಿ ಪುರಸ್ಕೃತರಿಗೆ ತಲಾ 25 ಸಾವಿರ ರೂ. ನಗದು, ಪ್ರಶಸ್ತಿ ಫಲಕ ನೀಡಿ ಸನ್ಮಾನಿಸಲಾಗುವುದು. ಈ ಬಾರಿ ಒಟ್ಟು 21 ಮಂದಿ ಪತ್ರಕರ್ತರನ್ನು ‘ದತ್ತಿ ಪ್ರಶಸ್ತಿ’ಗೆ ಆಯ್ಕೆ ಮಾಡಲಾಗಿದೆ.

ನಾಲ್ಕು ವರ್ಷಗಳ ದತ್ತಿ ಪ್ರಶಸ್ತಿಗಳು: ಆಂದೋಲನ ಸಂಸ್ಥೆಯವರು ಸ್ಥಾಪನೆ ಮಾಡಿರುವ ಅತ್ಯುತ್ತಮ ಜಿಲ್ಲಾ ಪತ್ರಿಕೆಗೆ ನೀಡುವ ‘ಆಂದೋಲನ ಪ್ರಶಸ್ತಿ’, ಅಭಿಮಾನಿ ಸಂಸ್ಥೆ ಸ್ಥಾಪನೆ ಮಾಡಿರುವ ‘ಅಭಿಮಾನಿ’ ಮತ್ತು ‘ಅರಗಿಣಿ’ ಪ್ರಶಸ್ತಿಗಳು, ಮೈಸೂರು ದಿಗಂತ ಪತ್ರಿಕೆ ಸ್ಥಾಪಿಸಿರುವ ‘ಮೈಸೂರು ದಿಗಂತ’ ಪ್ರಶಸ್ತಿ ಹಾಗೂ ಪತ್ರಕರ್ತ ಕೆ.ಶಿವಕುಮಾರ್ ಸ್ಥಾಪಿಸಿರುವ ಡಾ.ಬಿ.ಆರ್.ಅಂಬೇಡ್ಕರ್ ‘ಮೂಕನಾಯಕ ಪ್ರಶಸ್ತಿ’ಗೂ ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಗಳ ಮೊತ್ತ ತಲಾ 10 ಸಾವಿರ ರೂ.ನಗದು ಬಹುಮಾನ ಒಳಗೊಂಡಿದೆ ಎಂದು ಪ್ರಕಟನೆ ತಿಳಿಸಿದೆ.

Similar News