ಇನ್ನೂ ನಾಲ್ಕು ಬುಟ್ಟಿ ಹೆಚ್ಚು ಕಿತ್ತಳೆ ಹಣ್ಣು ಮಾರಿ ಕಾಲೇಜು ನಿರ್ಮಿಸುತ್ತೇನೆ: ಹರೇಕಳ ಹಾಜಬ್ಬ

Update: 2023-02-09 17:41 GMT

ಮೂಡಿಗೆರೆ, ಫೆ.9: ಮಕ್ಕಳಿಗೆ ಶಿಕ್ಷಣ ಕೊಟ್ಟಕಾರಣಕ್ಕೆ ಅನಕ್ಷರಸ್ಥನಾದ ನನಗೆ ಪದ್ಮಶ್ರೀ ಗೌರವ ನೀಡಿದೆ. ಶಿಕ್ಷಣದಿಂದ ಮಾತ್ರ ಪ್ರತಿಯೊಬ್ಬರೂ ಅತ್ಯುನ್ನತ ಸ್ಥಾನ ಅಲಂಕರಿಸುವ ಮಟ್ಟಕ್ಕೆ ಬೆಳೆಯಲು ಸಾಧ್ಯ ಎಂದು ಅಕ್ಷರಸಂತ ಹರೇಕಳ ಹಾಜಬ್ಬ ಅಭಿಪ್ರಾಯಪಟ್ಟರು.

ಬುಧವಾರ ರಾತ್ರಿ ಪಟ್ಟಣದ ಎಂಇಎಸ್ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬುಟ್ಟಿಯಲ್ಲಿ ಕಿತ್ತಳೆಹಣ್ಣು ಹೊತ್ತು ಮಾರಾಟ ಮಾಡಿ ಅದರಿಂದ ಬಂದ ಹಣದಲ್ಲಿ ಜೀವನ ನಡೆಸುವುದರೊಂದಿಗೆ ಒಂದಿಷ್ಟು ಹಣ ಉಳಿಸಿಕೊಂಡು ಬಡವರ ಮಕ್ಕಳ ಶಿಕ್ಷಣಕ್ಕಾಗಿ ನೀಡಿದ್ದೇನೆ. ಕಿತ್ತಳೆ ಮಾರಿ ಬಂದ ಹಣವನ್ನು ನಾನೊಬ್ಬನೇ ಬಳಸಿಕೊಳ್ಳಬೇಕು ಎಂದು ನನಗನ್ನಿಸಲಿಲ್ಲ. ಒಂದಷ್ಟು ಹಣ ಕೂಡಿಟ್ಟು ಅದರಲ್ಲಿ ಶಾಲೆಯೊಂದನ್ನು ನಿರ್ಮಿಸಿದ್ದೇನೆ. ಈ ಶಾಲೆಯನ್ನು ಸದ್ಯ ಸರಕಾರದ ಉಸ್ತುವಾರಿಗೆ ಬಿಟ್ಟಿದ್ದೇನೆ. ಪ್ರತೀ ಮಕ್ಕಳೂ ಶಿಕ್ಷಣ ಪಡೆಯುವಂತೆ ನೋಡಿಕೊಳ್ಳುವುದು ಸಮಾಜದ ಎಲ್ಲರ ಕರ್ತವ್ಯವಾಗಿದೆ ಎಂದರು.

ನನಗೆ ರಾಷ್ಟ್ರಪತಿ ಭವನದಲ್ಲಿ ಹಿಂದಿನ ರಾಷ್ಟ್ರಪತಿ ರಮಾನಾಥ ಕೋವಿಂದ ಅವರು ಪದ್ಮಶ್ರೀ ಪ್ರಶಸ್ತಿ ನೀಡುವಾಗ ಪ್ರಧಾನಿ ನರೇಂದ್ರ ಮೋದಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಮಾತನಾಡಲು ಅವಕಾಶ ಸಿಕ್ಕಿತ್ತು. ಆಗ ನನ್ನೂರಿಗೆ ಪದವಿಪೂರ್ವ ಕಾಲೇಜು ಮಂಜೂರು ಮಾಡಿಕೊಡಬೇಕೆಂದು ಮನವಿ ಮಾಡಿದ್ದೇನೆ. ಕಾಲೇಜಿಗೆ ಮಂಜೂರಾತಿ ನೀಡಲು ರಾಜ್ಯ ಸರಕಾರಕ್ಕೆ ಪ್ರಧಾನಿ ಸೂಚನೆ ನೀಡಿದ್ದಾರೆ. ಸದ್ಯದಲ್ಲಿ ಕಾಲೇಜು ಮಂಜೂರಾಗಲಿದೆ. ಕಾಲೇಜು ಮಂಜೂರಾದ ಕೂಡಲೇ ಇನ್ನೂ ನಾಲ್ಕು ಬುಟ್ಟಿ ಹೆಚ್ಚು ಕಿತ್ತಳೆ ಮಾರಾಟ ಮಾಡಿ ಬಂದ ಹಣದಲ್ಲಿ ಕಾಲೇಜು ಕಟ್ಟಡವನ್ನು ನಿರ್ಮಿಸುತ್ತೇನೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಚಿತ್ರನಟ ವಿನಾಯಕ ಜೋಶಿ, ಎಂಇಎಸ್ ಶಾಲೆ ಮುಖ್ಯಸ್ಥರಾದ ಹರೀಶ್, ಚಿಂತು ಮತ್ತಿತರರಿದ್ದರು.

Similar News