ಇದು ಜನಪರ ಕಾಯ್ದೆಗಳಿಗೆ ತಿದ್ದುಪಡಿ ಜಮಾನಾ

Update: 2023-02-10 07:22 GMT

ಉದ್ಯಮಗಳಿಗೆ ವ್ಯವಹಾರವನ್ನು ಸುರಳೀತಗೊಳಿಸಲು ಜೈವಿಕ ವೈವಿಧ್ಯ(ಬಿಡಿಎ) ಹಾಗೂ ವನ್ಯಜೀವಿ ಸಂರಕ್ಷಣೆ ಕಾಯ್ದೆ(ಡಬ್ಲ್ಯುಪಿಎ)ಗಳಿಗೆ ತಿದ್ದುಪಡಿ ತರಲಾಗುತ್ತಿದೆ. ಈ ತಿದ್ದುಪಡಿಗಳು ಅರಣ್ಯವಾಸಿಗಳ ಸಾಂಪ್ರದಾಯಿಕ ಹಕ್ಕುಗಳಿಗೆ ಧಕ್ಕೆ ತಂದಿವೆ. ಈ ಅರ್ಧ ಬೆಂದ ಕಾಯ್ದೆಗಳು ಸಂರಕ್ಷಣೆ ಎಂಬ ಪದಕ್ಕೆ ತದ್ವಿರುದ್ಧವಾಗಿವೆ.


ಜನಪರ ಕಾಯ್ದೆಗಳಿಗೆ ಈಗ ತಿದ್ದುಪಡಿ ತರಲಾಗುತ್ತಿದೆ. 2002ರ ಜೈವಿಕ ವೈವಿಧ್ಯ ಕಾಯ್ದೆ ತಿದ್ದುಪಡಿಗೊಂಡು, ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಜಂಟಿ ಸಂಸದೀಯ ಸಮಿತಿಯ ಪರಾಮರ್ಶನಕ್ಕೆ ಹೋಗಿದೆ. 1972ರ ವನ್ಯಜೀವಿ ಸಂರಕ್ಷಣೆ ಕಾಯ್ದೆ(ಡಬ್ಲ್ಯುಪಿಎ) 2021ನ್ನು ಲೋಕಸಭೆಯ ಮಳೆಗಾಲದ ಅಧಿವೇಶನದಲ್ಲಿ ತರಾತುರಿಯಲ್ಲಿ ಮಂಡಿಸಿ, ಆಗಸ್ಟ್ 2022ರಲ್ಲಿ ಅಂಗೀಕಾರ ಪಡೆಯಲಾಗಿದೆ. 1972ರ ಕಾಯ್ದೆಯು ವನ್ಯಜೀವಿಗಳ ಬೇಟೆಯನ್ನು ನಿರ್ಬಂಧಿಸಿತ್ತು ಹಾಗೂ ಸಂರಕ್ಷಿತ ಅರಣ್ಯ, ರಾಷ್ಟ್ರೀಯ ಉದ್ಯಾನ ಇತ್ಯಾದಿ ಅನುಲ್ಲಂಘನೀಯ ಪ್ರದೇಶಗಳನ್ನು ಸೃಷ್ಟಿಸುವ ಮೂಲಕ ವನ್ಯಜೀವಿಗಳನ್ನು ಸಂರಕ್ಷಿಸಿತ್ತು. ತಿದ್ದುಪಡಿ ಕಾಯ್ದೆಯು ನಿರ್ಬಂಧಗಳನ್ನು ಸಡಿಲಗೊಳಿಸುವುದಲ್ಲದೆ, ಅರಣ್ಯವಾಸಿಗಳನ್ನು ಸಬಲಗೊಳಿಸಿದ್ದ ಅರಣ್ಯ ಹಕ್ಕುಗಳ ಕಾಯ್ದೆ(ಎಫ್‌ಆರ್‌ಎ)ಯನ್ನು ದುರ್ಬಲಗೊಳಿಸುತ್ತದೆ.


ತಿದ್ದುಪಡಿ ಕಾಯ್ದೆಯು ಹಲವು ಲೋಪಗಳ ಸಾಗರ. ಮೊದಲಿಗೆ, ಅದು ರಾಜ್ಯಗಳ ಅಧಿಕಾರವನ್ನು ಮೊಟಕುಗೊಳಿಸುತ್ತದೆ. ವನ್ಯಜೀವಿ ಸಂರಕ್ಷಣೆ ವಿಷಯ ಸಮವರ್ತಿ ಪಟ್ಟಿಯಲ್ಲಿದ್ದು, ರಾಜ್ಯ ಮತ್ತು ಒಕ್ಕೂಟ ಸರಕಾರ ಸಮಾನಾಧಿಕಾರ ಹೊಂದಿವೆ. ಸಂರಕ್ಷಣೆಗೆ ಸಂಬಂಧಿಸಿದ ಕೇಂದ್ರದ ಸೂಚನೆಗಳನ್ನು ರಾಜ್ಯ ಅನುಮೋದಿಸಬೇಕು. ರಾಜ್ಯ ಸರಕಾರಗಳು ತನ್ನದೇ ವನ್ಯ ಮಂಡಳಿಗಳ ಶಿಫಾರಸುಗಳ ಅನ್ವಯ ನಡೆದುಕೊಳ್ಳಬೇಕು ಎಂದು 1972ರ ಕಾಯ್ದೆ ಹೇಳುತ್ತದೆ. ಈ ಅಂಶಕ್ಕೆ ತಿದ್ದುಪಡಿ ತರಲಾಗಿದ್ದು, ‘ಮಂಡಳಿ’ ಯನ್ನು ‘ರಾಷ್ಟ್ರೀಯ ಮಂಡಳಿ’ ಎಂದು ತಿದ್ದಲಾಗಿದೆ. ರಾಷ್ಟ್ರೀಯ ಮಂಡಳಿಯ ನಿರ್ಧಾರಗಳನ್ನು ರಾಜ್ಯಗಳು ಕಡ್ಡಾಯವಾಗಿ ಅನುಷ್ಠಾನಗೊಳಿಸಬೇಕಾಗುತ್ತದೆ. ಇದರಿಂದಾಗಿ, ರಾಜ್ಯ ವನ್ಯಜೀವಿ ಮಂಡಳಿಗಳು ನಿಸ್ತೇಜವಾಗುತ್ತವೆ. ಇದು ಒಕ್ಕೂಟ ತತ್ವಕ್ಕೆ ವಿರುದ್ಧವಾದ ನಡೆ. ಷೆಡ್ಯೂಲ್‌ಗಳ ಗೊಂದಲ:
ಸಂರಕ್ಷಣೆ ಆದ್ಯತೆಗೆ ಅನುಗುಣವಾಗಿ ಪ್ರಭೇದಗಳನ್ನು ವಿವಿಧ ಶೆಡ್ಯೂಲ್‌ಗಳಲ್ಲಿ ವರ್ಗೀಕರಿಸಲಾಗುತ್ತದೆ. ಇಂತಹ ವರ್ಗೀಕರಣಕ್ಕೆ 3 ಗುರಿ ಇದೆ. ಮೊದಲಿಗೆ, ಕೆಲವು ಪ್ರಭೇದಗಳ ರಕ್ಷಣೆಗೆ ಆದ್ಯತೆ. ಎರಡನೆಯದಾಗಿ, ವಿವಿಧ ಕಾಯ್ದೆಗಳ ಉಲ್ಲಂಘನೆಗೆ ಶಿಕ್ಷೆ ಮತ್ತು ಮೂರನೆಯದಾಗಿ, ವೈಜ್ಞಾನಿಕ ಸಂಶೋಧನೆ. ತಿದ್ದುಪಡಿ ಕಾಯ್ದೆಯಲ್ಲಿ ಈ ವರ್ಗೀಕರಣ ಅವೈಜ್ಞಾನಿಕ, ಅಸಮರ್ಪಕ ಮತ್ತು ಅತಾರ್ಕಿಕವಾಗಿದೆ. ಮುಖ್ಯ ಶೆಡ್ಯೂಲ್(1 ಮತ್ತು 2)ನಲ್ಲಿ ಬಹುತೇಕ ಹಕ್ಕಿಗಳು, ಆಯ್ದ ಉಭಯಜೀವಿಗಳು ಮತ್ತು ಸರೀಸೃಪಗಳು, ಕೆಲವು ಶಾರ್ಕ್‌ಗಳು ಹಾಗೂ ಅಕಶೇರುಕ ಪ್ರಭೇದಗಳಿವೆ. ಅಂತರ್‌ರಾಷ್ಟ್ರೀಯ ಪ್ರಕೃತಿ ಸಂರಕ್ಷಣೆ ಒಕ್ಕೂಟ(ಐಯುಸಿಎನ್)ದ ಕೆಂಪುಪಟ್ಟಿ(ರೆಡ್‌ಲಿಸ್ಟ್) ಪ್ರಭೇದಗಳನ್ನು ನಿರ್ವಂಶದ ಹಾದಿಯಲ್ಲಿರುವ (ಕ್ರಿಟಿಕಲಿ ಎಂಡೇಂಜರ್ಡ್) ಅಥವಾ ಅಪಾಯದಲ್ಲಿರುವ(ಎಂಡೇಂಜರ್ಡ್) ಎಂದು ವಿಭಾಗಿಸುತ್ತದೆಯೇ ಹೊರತು ಸಂರಕ್ಷಣೆಗೆ ಮಾರ್ಗಗಳನ್ನು ಸೂಚಿಸುವುದಿಲ್ಲ. ಅಂದರೆ, ಎರಡು ಪ್ರಭೇದಗಳ ಸಂರಕ್ಷಣೆಗೆ ನಡೆಸುವ ಪ್ರಕ್ರಿಯೆಗಳು ಸಂಪೂರ್ಣ ವಿಭಿನ್ನವಾಗಿರುತ್ತವೆ. ಐಯುಸಿಎನ್ ಕೆಂಪುಪಟ್ಟಿ ಸಿದ್ಧಗೊಳಿಸುವಿಕೆಯು ಸ್ಪಷ್ಟ ಕಾರ್ಯವಿಧಾನ ಹೊಂದಿದ್ದು, ಅಂಕಿಅಂಶ ಹಾಗೂ ವೈಜ್ಞಾನಿಕ ಮಾಹಿತಿಯನ್ನು ಆಧರಿಸಿರುತ್ತದೆ. ಪ್ರಭೇದವೊಂದನ್ನು ನಿರ್ದಿಷ್ಟ ವಿಭಾಗಕ್ಕೆ ಸೇರ್ಪಡೆಗೊಳಿಸಲು ಮಾರ್ಗದರ್ಶಿ ಸೂತ್ರಗಳು ಇರುತ್ತವೆ. ಆದರೆ, ತಿದ್ದುಪಡಿ ಕಾಯ್ದೆಯಲ್ಲಿ ಪ್ರಭೇದಗಳನ್ನು ಇಂಥದ್ದೇ ಶೆಡ್ಯೂಲ್‌ಗೆ ಏಕೆ ಆಯ್ಕೆ ಮಾಡಲಾಯಿತು ಎಂಬುದು ಅಸ್ಪಷ್ಟವಾಗಿದೆ. ಕಶೇರುಕಗಳ ಹಲವು ಗುಂಪುಗಳ ಬಗ್ಗೆ ಸಾಕಷ್ಟು ಅಂಕಿಅಂಶವಿದ್ದರೂ, ನಿರ್ಧಾರ ತೆಗೆದುಕೊಳ್ಳುವಾಗ ಅದನ್ನು ಪರಿಗಣಿಸಿಲ್ಲ. ಇದರಿಂದಾಗಿ, ವಿನಾಶ ಭೀತಿಯಿರುವ, ಕೇವಲ 150ರಷ್ಟಿರುವ ಹೆಬ್ಬಾತು ಹಾಗೂ ಕೃಷಿಯಲ್ಲಿ ಪೀಡೆ ಎಂದು ಪರಿಗಣಿಸಲ್ಪಟ್ಟಿರುವ ಒಂದು ಪ್ರಭೇದದ ಕೋಳಿ(ಪೀಫೌಲ್)ಯನ್ನು ಒಂದೇ ಶೆಡ್ಯೂಲ್‌ನಲ್ಲಿ ಇರಿಸಲಾಗಿದೆ. ಅದೇ ರೀತಿ ಶೆಡ್ಯೂಲ್ 1ರಲ್ಲಿ ನರಿ, ಬಾನೆಟ್ ಮೆಕಾಕೆ(ಮುಸವ)ಯನ್ನು ಹುಲಿ ಹಾಗೂ ಘೇಂಡಾಮೃಗದ ಜೊತೆಗೆ ಇರಿಸಲಾಗಿದೆ. ನಗರಗಳಲ್ಲಿ ವ್ಯಾಪಕವಾಗಿರುವ ಗೂಬೆ(ಬಾರ್ನ್ ಔಲ್)ಯನ್ನು ಅಪರೂಪದ, ಪ್ರಾಯಶಃ ನಿರ್ವಂಶವಾಗಿರುವ ಫಾರೆಸ್ಟ್ ಔಲೆಟ್ ಜೊತೆಗೆ ಇರಿಸಲಾಗಿದೆ. ರೈತರಿಗೆ ತೀವ್ರ ನಷ್ಟ ಉಂಟುಮಾಡುವ ಕಾಡುಹಂದಿ ಮತ್ತು ನೀಲ್ಗಾಯ್‌ಗಳನ್ನು ಶೆಡ್ಯೂಲ್ 2ರಲ್ಲಿ ಇರಿಸಲಾಗಿದೆ. ಇಂಥ ಅಸಂಖ್ಯ ಲೋಪಗಳಿದ್ದು, ವರ್ಗೀಕರಣ ವೈಜ್ಞಾನಿಕವಾಗಿಲ್ಲ; ಬೇಕಾಬಿಟ್ಟಿಯಾಗಿದೆ.
ತಿದ್ದುಪಡಿ ಕಾಯ್ದೆಯು ಪ್ರಭೇದಗಳ ಸಂರಕ್ಷಣೆಗೆ ಯಾವುದೇ ಪ್ರಯತ್ನ ಮಾಡಿಲ್ಲ. ಆದರೆ, ಬೇರೆ ದೇಶಗಳಲ್ಲಿ, ಉದಾಹರಣೆಗೆ ಅಮೆರಿಕದಲ್ಲಿ ಪ್ರಭೇದಗಳ ಸಂಖ್ಯೆ ಹೆಚ್ಚಳಕ್ಕೆ ನಿರ್ವಂಶದ ಹಾದಿಯಲ್ಲಿರುವ ಪ್ರಭೇದಗಳ ಕಾಯ್ದೆ(ಎಂಡೇಂಜರ್ಡ್ ಸ್ಪೀಸೀಸ್ ಆ್ಯಕ್ಟ್) ಹಲವು ಉಪಕ್ರಮಗಳನ್ನು ಒಳಗೊಂಡಿದೆ. ನಮ್ಮಲ್ಲಿ ಪ್ರದೇಶಾಧರಿತ ಸಂರಕ್ಷಣೆ(ಉದಾಹರಣೆಗೆ, ನಾಗರಹೊಳೆಯಲ್ಲಿ ಹುಲಿ, ದರೋಜಿಯಲ್ಲಿ ಕರಡಿ ಇತ್ಯಾದಿ) ಉಪಕ್ರಮಗಳು ಯಶಸ್ವಿಯಾಗಿವೆ. ಆದರೆ, ಭಾರೀ ಪ್ರಮಾಣದ ಪ್ರಭೇದಗಳನ್ನು ಒಂದೇ ಶೆಡ್ಯೂಲ್‌ನಲ್ಲಿ ಸೇರಿಸುವುದರಿಂದ, ಸಂರಕ್ಷಣೆಯ ತೀವ್ರ ಅಗತ್ಯವಿರುವ ಪ್ರಭೇದಗಳ ಕಡೆಗೆ ಗಮನ ಕಡಿಮೆಯಾಗುತ್ತದೆ ಮತ್ತು ಅವು ನಿರ್ವಂಶವಾಗುವ ಸಾಧ್ಯತೆ ಹೆಚ್ಚುತ್ತದೆ.

ಗಜ ಗಾತ್ರದ ಸಮಸ್ಯೆ:
ಆನೆ ಅತ್ಯಂತ ಸೂಕ್ಷ್ಮ ಮತ್ತು ಬುದ್ಧಿವಂತ ಜೀವಿ. ಸಾಂಸ್ಕೃತಿಕ ಹಾಗೂ ಆರ್ಥಿಕ ಕಾರಣಗಳಿಂದಾಗಿ ಸಂರಕ್ಷಿಸಲ್ಪಟ್ಟಿದೆ. ತಿದ್ದುಪಡಿ ಕಾಯ್ದೆಯ ವಿಭಾಗ 43(2)ರ ಪ್ರಕಾರ, ಪ್ರಮಾಣಪತ್ರ ಹೊಂದಿರುವ ಸಾಕಾನೆ ಮಾಲಕ ಅದನ್ನು ಧಾರ್ಮಿಕ ಇಲ್ಲವೇ ಬೇರಾವುದೇ ಉದ್ದೇಶಕ್ಕೆ ಸಾಗಣೆ ಮಾಡಬಹುದು. ಇದಕ್ಕೆ ಕೇಂದ್ರ ಸರಕಾರ ವಿಧಿಸುವ ಶರತ್ತುಗಳನ್ನು ಪಾಲಿಸಬೇಕು. ಸಮಸ್ಯೆ ಏನೆಂದರೆ, ‘ಯಾವುದೇ ಉದ್ದೇಶ’ ಎನ್ನುವಲ್ಲಿ ಉದ್ದೇಶ ಯಾವುದು ಎಂಬುದನ್ನು ಸ್ಪಷ್ಟಪಡಿಸಿಲ್ಲ. ಇದು ಆನೆಗಳ ವಾಣಿಜ್ಯಿಕ ಬಳಕೆ ಹಾಗೂ ಶೋಷಣೆಗೆ ದಾರಿ ಮಾಡಿಕೊಡುತ್ತದೆ. ದೇವಾಲಯಗಳಲ್ಲಿ ಆನೆಗಳ ಬಳಕೆಯನ್ನು ಪ್ರಶ್ನಿಸಿದ ಹಲವು ಪ್ರಕರಣಗಳ ವಿಚಾರಣೆ ನಡೆದಿದೆ. ದೇಶದಲ್ಲಿ ಅಂದಾಜು 2,675 ಸಾಕಾನೆಗಳಿದ್ದು, ಇದರಲ್ಲಿ 1,251 ಮಾತ್ರ ಮಾಲಕತ್ವದ ಪ್ರಮಾಣಪತ್ರ ಹೊಂದಿವೆ. ಉಳಿದವು ಹೇಗೆಂದರಲ್ಲಿ ಹಾಗೆ ಬಳಕೆಯಾಗುತ್ತಿವೆ. ಇವುಗಳ ಬಗ್ಗೆ ತಿದ್ದುಪಡಿ ಕಾಯ್ದೆಯಲ್ಲಿ ಯಾವುದೇ ಉಲ್ಲೇಖವಿಲ್ಲ. ಆನೆಯನ್ನು ಮಾರಾಟ/ಖರೀದಿ ಮಾಡಬಾರದು ಎಂದಾದಲ್ಲಿ, ದಾನ ಪಡೆದ ಆನೆಗಳು ಎಲ್ಲಿಂದ ಬಂದವು? ಆನೆಗಳನ್ನು ಅಕ್ರಮವಾಗಿ ಖರೀದಿಸಿ, ಬಂಧನದಲ್ಲಿ ಇರಿಸಲಾಗುತ್ತದೆ ಎನ್ನುವುದು ವಾಸ್ತವ. ಪ್ರಮಾಣಪತ್ರ ಹೊಂದಿರುವವರು ಆನೆಗಳ ವರ್ಗಾವಣೆ/ಸಾಗಣೆ ಮಾಡಬಹುದು ಎನ್ನುವ ಅಂಶ ಅಕ್ರಮ ಬಂಧನವನ್ನು ಸುಲಭಗೊಳಿಸುತ್ತದೆ. 1972ರ ಕಾಯ್ದೆಯು ಆನೆಗಳನ್ನು ಹುಲಿಗಳ ಜೊತೆಗೆ ಶೆಡ್ಯೂಲ್ 1ರಲ್ಲಿ ಇರಿಸಿತ್ತು. ಆದರೆ, ಆನೆಗಳನ್ನು ಬಂಧನದಲ್ಲಿ ಇರಿಸಲು ಅವಕಾಶ ನೀಡಿತ್ತು. ತಿದ್ದುಪಡಿ ಕಾಯ್ದೆಯು ಈ ಲೋಪವನ್ನು ಸರಿಪಡಿಸದೆ, ಹೊಸದಾಗಿ ಸೇರ್ಪಡೆಗೊಳಿಸಿದ ವಿನಾಯಿತಿ ಮೂಲಕ ಇನ್ನಷ್ಟು ಶೋಷಣೆಗೆ ದಾರಿ ಮಾಡಿಕೊಟ್ಟಿದೆ. ವಿಭಾಗ 43(1)ರ ಅನ್ವಯ, ಆನೆಗಳ ಖರೀದಿ-ಮಾರಾಟ ನಿಷೇಧಿತ. ವಿಭಾಗ 40 ಮುಖ್ಯ ವನ್ಯಜೀವಿ ವಾರ್ಡನ್ ಅನುಮತಿ ಮೇಲೆ ಮಾಲಕತ್ವದ ವರ್ಗಾವಣೆಗೆ ವಿನಾಯಿತಿ ನೀಡುತ್ತದೆ.
ಇದಲ್ಲದೆ, ತಿದ್ದುಪಡಿ ಕಾಯ್ದೆಯು ಸೈಟ್ಸ್(ಸಿಐಟಿಇಎಸ್, ಅಳಿವಿನ ಅಂಚಿನಲ್ಲಿರುವ ವನ್ಯಜೀವಿ ಮತ್ತು ಸಸ್ಯಗಳ ಅಂತರ್‌ರಾಷ್ಟ್ರೀಯ ವ್ಯಾಪಾರ ಒಪ್ಪಂದ) ಪಟ್ಟಿಯಲ್ಲಿರುವ ಪ್ರಾಣಿ/ಸಸ್ಯಗಳ ಮಾರಾಟ-ವರ್ಗಾವಣೆಗೆ ಅವಕಾಶ ನೀಡಿದೆ. ವನ್ಯಜೀವಿ-ಸಸ್ಯಗಳ ಮಾರಾಟ, ಆಮದು, ತಡೆ ಮತ್ತು ನಿಯಂತ್ರಣ ಅಧಿಕಾರ ಕೇಂದ್ರ ಸರಕಾರಕ್ಕೆ ಇರಲಿದೆ. ನಾಲ್ಕನೇ ಶೆಡ್ಯೂಲ್‌ನಲ್ಲಿರುವ ಪ್ರಾಣಿ-ಸಸ್ಯ ಪ್ರಭೇದವನ್ನು ಹೊಂದಿರುವ ವ್ಯಕ್ತಿಯೊಬ್ಬರು ಪ್ರಾಧಿಕಾರಕ್ಕೆ ಮಾಹಿತಿ ನೀಡಿ, ಪ್ರಮಾಣಪತ್ರ ಪಡೆದುಕೊಳ್ಳಬಹುದು; ಮಾರಾಟ-ವರ್ಗಾವಣೆ ಮಾಡಬಹುದು. ಇದು ಅಪರೂಪದ ವಂಶವಾಹಿಗಳಿರುವ ಪ್ರಭೇದಗಳ ಅಕ್ರಮ ಮಾರಾಟಕ್ಕೆ ದಾರಿ ಮಾಡಿಕೊಡುವ ಸಾಧ್ಯತೆ ಇದೆ. ಕೀಟಗಳದ್ದೂ ಇದೇ ಕತೆ. 1972ರ ಕಾಯ್ದೆಯ ಶೆಡ್ಯೂಲ್ 2(2)ರಲ್ಲಿ ಕೀಟಗಳಿಗೆ ಸಂರಕ್ಷಣೆ ನೀಡಲಾಗಿತ್ತು. ಇಂತಹ ಸಂರಕ್ಷಣೆ ತಿದ್ದುಪಡಿ ಕಾಯ್ದೆಯಲ್ಲೂ ಮುಂದುವರಿಸಿದೆ. ಆದರೆ, ಕೀಟಗಳನ್ನು ಹೊಂದುವ-ಸಾಗಿಸುವುದರ ಮೇಲಿದ್ದ ನಿರ್ಬಂಧಗಳನ್ನು ತೆಗೆದುಹಾಕಲಾಗಿದೆ. ಇದರಿಂದ ಕೀಟಗಳ ಸಂಗ್ರಹಿಸುವಿಕೆ, ಸಂಸ್ಕರಿಸುವಿಕೆಗೆ ಅಡೆತಡೆ ಇರುವುದಿಲ್ಲ. ಕಳ್ಳಸಾಗಣೆಯ ಸಾಧ್ಯತೆಯೂ ಇದೆ.

ಅರಣ್ಯ ಹಕ್ಕುಗಳ ಕಾಯ್ದೆ(ಎಫ್‌ಆರ್‌ಎ)ಗೆ ಪ್ರತಿಗಾಮಿ:
 2008ರ ಅರಣ್ಯ ಹಕ್ಕುಗಳ ಕಾಯ್ದೆ ಒಂದು ಪ್ರಗತಿಪರ ಕಾನೂನಾಗಿದ್ದು, ಅರಣ್ಯವಾಸಿಗಳ ಸಾಂಪ್ರದಾಯಿಕ ಹಕ್ಕುಗಳನ್ನು ರಕ್ಷಿಸಲು ಸಾಕಷ್ಟು ಶ್ರಮಿಸಿತ್ತು. ಅರಣ್ಯವನ್ನು ಆಧರಿಸಿದ ಸಮುದಾಯಗಳಿಗೆ ಆಗಿದ್ದ ಚಾರಿತ್ರಿಕ ಅನ್ಯಾಯವನ್ನು ಸರಿಪಡಿಸಲು ರೂಪಿಸಿದ್ದ ಸಬಲಗೊಳಿಸುವ ಕಾಯ್ದೆ. ಆದರೆ, ತಿದ್ದುಪಡಿ ಕಾಯ್ದೆಯಿಂದಾಗಿ ಎಫ್‌ಆರ್‌ಎ ಬಲಹೀನವಾಗುತ್ತದೆ. ತಿದ್ದುಪಡಿ ಕಾಯ್ದೆಯು ಕಾನೂನು ಉಲ್ಲಂಘನೆಗೆ ವಿಧಿಸುವ ದಂಡದ ಮೊತ್ತವನ್ನು ಹೆಚ್ಚಿಸಿದೆ. ಸಾಮಾನ್ಯ ಉಲ್ಲಂಘನೆಗೆ ದಂಡವನ್ನು 25,000 ರೂ.ನಿಂದ 1 ಲಕ್ಷ ರೂ.ಗೆ ಹಾಗೂ ಹೆಚ್ಚು ರಕ್ಷಿತ ಪ್ರಾಣಿಗಳ ವಿಷಯದಲ್ಲಿ ದಂಡವನ್ನು 10,000 ರೂ.ನಿಂದ 25,000 ರೂ.ಗೆ ಹೆಚ್ಚಳ ಮಾಡಲಾಗಿದೆ. ಶಿಕ್ಷೆ ಪ್ರಮಾಣ ಹಾಗೂ ದಂಡದ ಹೆಚ್ಚಳ ಬಾಧಿಸುವುದು ಅರಣ್ಯವಾಸಿಗಳನ್ನು. ಇದಕ್ಕೆ ಸಾಕ್ಷಿ ಇದೆ. ಕ್ರಿಮಿನಲ್ ಜಸ್ಟೀಸ್ ಆ್ಯಂಡ್ ಪೊಲೀಸ್ ಅಕೌಂಟಬಿಲಿಟಿ ಪ್ರಾಜೆಕ್ಟ್(ಮಧ್ಯಪ್ರದೇಶದಲ್ಲಿ ಪೊಲೀಸ್ ಮತ್ತು ಅರಣ್ಯ ಇಲಾಖೆ ದಾಖಲಿಸಿದ ಎಫ್‌ಐಆರ್, ಬಂಧನ, ಅಪರಾಧದ ದಾಖಲೆಗಳ ಪರಿಶೀಲನೆ ಯೋಜನೆ) ಪ್ರಕಾರ, 2016-2020ರ ಅವಧಿಯಲ್ಲಿ ವನ್ಯಜೀವಿ ಸಂಬಂಧಿತ ಅಪರಾಧಗಳಲ್ಲಿ ಬಂಧಿತರಾದವರಲ್ಲಿ ಪರಿಶಿಷ್ಟ ವರ್ಗಗಳು ಹಾಗೂ ಇನ್ನಿತರ ಅರಣ್ಯವಾಸಿಗಳ ಪ್ರಮಾಣ ಹೆಚ್ಚು. ಪೊಲೀಸರು ದಾಖಲಿಸಿದ ಎಫ್‌ಐಆರ್‌ಗಳಲ್ಲಿ ಎಸ್‌ಟಿ ಶೇ.32, ಎಸ್‌ಸಿ ಶೇ.12.5 ಹಾಗೂ ಇನ್ನಿತರ ಅರಣ್ಯವಾಸಿಗಳು ಶೇ.12ರಷ್ಟು ಇದ್ದರು. ಅರಣ್ಯ ಇಲಾಖೆ ದಾಖಲಿಸಿದ ಪ್ರಕರಣಗಳಲ್ಲಿ ಶೇ.40ರಷ್ಟು ಪರಿಶಿಷ್ಟ ವರ್ಗದವರಿದ್ದರು. ಅರಣ್ಯ ಇಲಾಖೆ ಸಿಬ್ಬಂದಿ/ಅಧಿಕಾರಿಗಳು ಸೆರೆವಾಸದ ಭೀತಿಯೊಡ್ಡಿ ಅರಣ್ಯವಾಸಿಗಳನ್ನು ಮಾಹಿತಿದಾರರಂತೆ ಬಳಸಿಕೊಳ್ಳುತ್ತಿದ್ದರು ಹಾಗೂ ದಿನಗೂಲಿ ಕೆಲಸದ ಆಮಿಷವೊಡ್ಡಿ ಅವರ ನಿಷ್ಠೆಯನ್ನು ಗಳಿಸಿದ್ದರು. ದಾಖಲಾದ ಪ್ರಕರಣಗಳಲ್ಲಿ ಹೆಚ್ಚಿನವು ಮೀನುಗಾರಿಕೆ, ಜೇನು/ಅಣಬೆ ಸಂಗ್ರಹಕ್ಕೆ ಸಂಬಂಧಿಸಿದ್ದವು ಹಾಗೂ ಇದರಲ್ಲಿ ಶೇ.95ರಷ್ಟು ಪ್ರಕರಣಗಳು ವಿಚಾರಣೆಯಾಗದೆ ಉಳಿದಿವೆ. ಅಕ್ರಮ ಮೀನುಗಾರಿಕೆಗೆ 3ರಿಂದ 7ವರ್ಷ ಸೆರೆವಾಸ ವಿಧಿಸಲಾಗುತ್ತಿದೆ. 2016ರಲ್ಲಿ ದಾಖಲಾದ ಇಂತಹ ಪ್ರಕರಣವೊಂದರಲ್ಲಿ ನದಿಯಲ್ಲಿ ಹಿಡಿದ ಮೀನನ್ನು ಸುಡುತ್ತಿದ್ದ ಐವರು ಆದಿವಾಸಿಗಳನ್ನು ವಲಯ ಅರಣ್ಯಾಧಿಕಾರಿ ಹಾಗೂ ಅರಣ್ಯಪಾಲಕರು ಬಂಧಿಸಿ, ವನ್ಯಜೀವಿ ವಾಸಸ್ಥಾನಕ್ಕೆ ಹಾನಿ ಹೆಸರಿನಲ್ಲಿ ಹಲವು ಪ್ರಕರಣ ದಾಖಲಿಸಿದ್ದರು. ಆ ಮೀನು ಹೆಚ್ಚೆಂದರೆ 500 ಗ್ರಾಂ ಇತ್ತು! ಪ್ರಕರಣ ಈಗಲೂ ನ್ಯಾಯಾಲಯದಲ್ಲಿದೆ.
           
 
ತಿದ್ದುಪಡಿ ಕಾಯ್ದೆ ನೀಡುವ ಅನಿರ್ಬಂಧಿತ, ಪ್ರಶ್ನಿಸಲಾಗದ ಅಧಿಕಾರದಿಂದಾಗಿ ಅರಣ್ಯ ಹಕ್ಕುಗಳ ಕಾಯ್ದೆ ಇನ್ನಷ್ಟು ದುರ್ಬಲಗೊಳ್ಳಲಿದೆ. ಲೋಕಸಭೆಯಲ್ಲಿ ನಡೆದ ಚರ್ಚೆ ವೇಳೆ ಕಾಡುಹಂದಿಯನ್ನು ‘ಪೀಡೆ’ ಎಂದು ಪರಿಗಣಿಸಬೇಕೆಂದು ಹಲವು ಸಂಸದರು ಒತ್ತಾಯಿಸಿದ್ದರು. ಮಧ್ಯಪ್ರದೇಶದಲ್ಲಿ ದಾಖಲಾದ ಪ್ರಕರಣಗಳಲ್ಲಿ ಶೇ.24ರಷ್ಟು ಹಂದಿ ಬೇಟೆಗೆ ಸಂಬಂಧಿಸಿದವು. ಹಂದಿಗಳು ಬೇಲಿಗೆ ಸಿಲುಕಿಕೊಂಡರೆ, ರೈತರ ಮೇಲೆ ಕೇಸು ದಾಖಲಿಸಲಾಗುತ್ತದೆ. ಆದರೆ, ಬೆಳೆ ಹಾನಿಗೆ ಚಿಕ್ಕಾಸು ಪರಿಹಾರ ಸಿಗುವುದಿಲ್ಲ. ಲೋಕಸಭೆಯಲ್ಲಿ ಚರ್ಚೆ ವೇಳೆ ಆದಿವಾಸಿಗಳು ಹಾಗೂ ಇತರ ಸಾಂಪ್ರದಾಯಿಕ ಅರಣ್ಯವಾಸಿಗಳ ನೆಲೆಸುವ ಹಕ್ಕನ್ನು ಮನ್ನಿಸಲಾಗುವುದು ಎಂದು ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವ ಹೇಳಿದ್ದರು. ತದ್ವಿರುದ್ಧವಾಗಿ, ಅರಣ್ಯ ಹಕ್ಕುಗಳ ಕಾಯ್ದೆ ಕೊಡಮಾಡಿದ ಸಾಂಪ್ರದಾಯಿಕ ಹಕ್ಕುಗಳು ದಿನೇದಿನೇ ಶಿಥಿಲಗೊಳ್ಳುತ್ತಿವೆ. ಜಗತ್ತು ಹವಾಮಾನ ಬದಲಾವಣೆಯ ವಿಪರಿಣಾಮಗಳು ತೀವ್ರವಾಗುತ್ತಿರುವ ಸಂದಿಗ್ಧ ಸ್ಥಿತಿಯಲ್ಲಿದೆ. ಇದು ವನ್ಯಜೀವಿಗಳ ಮೇಲೆ ಯಾವ ಪರಿಣಾಮ ಬೀರುತ್ತದೆ? ಯಾವ ಪ್ರಭೇದಗಳು ಬದಲಾವಣೆಗೆ ಒಗ್ಗಿಕೊಳ್ಳುತ್ತವೆ ಮತ್ತು ಯಾವುದು ನಾಶವಾಗುತ್ತವೆ? ಒಂದುವೇಳೆ ಪ್ರಭೇದಗಳು ತಮ್ಮ ಉಳಿವಿಗಾಗಿ ಸ್ಥಳಾಂತರಗೊಳ್ಳಬೇಕು ಎಂದಿದ್ದರೆ, ಎಲ್ಲಿಗೆ ಹೋಗುತ್ತವೆ? ಇಂತಹ ಪ್ರಶ್ನೆಗಳಿಗೆ ಉತ್ತರ ಸಿಗುವುದು ಖಚಿತ ಅಂಕಿಅಂಶ ಹಾಗೂ ವೈಜ್ಞಾನಿಕ ಸತ್ಯಗಳಿಂದ. ವಿಜ್ಞಾನಿಗಳ ಪ್ರಕಾರ, ದಕ್ಷಿಣ ಏಶ್ಯ ಹವಾಮಾನ ಬದಲಾವಣೆ ಹಾಗೂ ರೋಗ ಹೆಚ್ಚಳದಿಂದ ತೀವ್ರ ಸಂಕಷ್ಟಕ್ಕೆ ಸಿಲುಕುವ ಪ್ರದೇಶ. ಹೀಗಾಗಿ ಇಲ್ಲಿ ಅಧಿಕ ಸಂಖ್ಯೆಯ ವನ್ಯಜೀವಿಶಾಸ್ತ್ರಜ್ಞರು ಹಾಗೂ ರೋಗಪತ್ತೆ ತಜ್ಞರ ಅಗತ್ಯವಿದೆ. ತಿದ್ದುಪಡಿ ಕಾಯ್ದೆಯಲ್ಲಿ ಇಂತಹ ಸೂಕ್ಷ್ಮಗಳ ಬಗ್ಗೆ ಯಾವುದೇ ಉಲ್ಲೇಖ ಲಭ್ಯವಿಲ್ಲ. ಕಾಯ್ದೆಗೆ ಸಂಸತ್ತಿನ ಎರಡೂ ಸದನಗಳಲ್ಲಿ ಪ್ರತಿರೋಧ ವ್ಯಕ್ತವಾಗಿತ್ತು. ಪ್ರತಿಪಕ್ಷಗಳು ಹಲವು ಆಕ್ಷೇಪಗಳನ್ನು ದಾಖಲಿಸಿದ್ದವು. ಆದರೆ, ಬಹುಮತದ ಬಲದಿಂದಾಗಿ ಸರಕಾರ ತಿದ್ದುಪಡಿ ಕಾಯ್ದೆಯನ್ನು ದೇಶದ ಮೇಲೆ ಹೇರಿತು. ಈ ಅಸ್ಪಷ್ಟ, ಅತಾರ್ಕಿಕ, ಅವೈಜ್ಞಾನಿಕ, ಗೊಂದಲಮಯ ಕಾಯ್ದೆಯಿಂದ ವನ್ಯಜೀವಿ ಸಂರಕ್ಷಣೆ ಆಗುತ್ತದೆ ಎಂದು ಭಾವಿಸುವುದು ಮೂರ್ಖತನವಾದೀತು.