×
Ad

ಏಕವ್ಯಕ್ತಿ ನಾಟಕಗಳತ್ತ ಕಲಾವಿದೆಯರ ಚಿತ್ತ...

Update: 2023-02-10 10:24 IST

ರಾಜ್ಯದಾದ್ಯಂತ ಅಲ್ಲಲ್ಲಿ ಏಕವ್ಯಕ್ತಿ ನಾಟಕಗಳು ಪ್ರದರ್ಶನಗೊಳ್ಳುತ್ತಲೇ ಇರುತ್ತವೆ. ಅದರಲ್ಲೂ ಕಲಾವಿದೆಯರು ಏಕವ್ಯಕ್ತಿ ನಾಟಕಗಳತ್ತ ವಾಲಿರುವುದು ಗಮನಾರ್ಹ. ಪೌರಾಣಿಕ ಕಥೆಗಳನ್ನು ಸಮಕಾಲೀನಗೊಳಿಸಿದ ನಾಟಕಗಳು ಏಕವ್ಯಕ್ತಿ ಪ್ರಯೋಗಗಳಿಗೆ ಹೆಚ್ಚು ಆಯ್ಕೆಯಾಗಿವೆ. ದ್ರೌಪದಿ, ಸೀತೆ, ಮಂಡೋದರಿ... ಹೀಗೆ. ತೊಂಬತ್ತರ ದಶಕದ ನಂತರ ಕಲಾವಿದೆಯರ ಏಕವ್ಯಕ್ತಿ ನಾಟಕಗಳು ಹೆಚ್ಚಾದವು. ಇದರಿಂದ ಸ್ತ್ರೀಸಂವೇದನೆಯ ಅನಾವರಣ ಸಮರ್ಥವಾಗಿ ಸಾಧ್ಯವಾಗುತ್ತದೆ.

‘‘ಹೆಣ್ಣು ಅಂದರೆ ಸೀತೆ, ಸಾವಿತ್ರಿ ಮಾತ್ರ ಅಲ್ಲ

ಶರ್ಮಿಷ್ಠೆ ಮತ್ತು ಮಂಥರೆ ನಾರಿಯರೆ.

ನಾನು ಒಬ್ಬ ಹೆಣ್ಣಾದ್ರೂ ಹೆಣ್ಣಿನ

ನಿಜಸ್ವರೂಪವನ್ನು ತಿಳಿಸಿಕೊಟ್ಟಿದ್ದು ಈ ರಂಗಭೂಮಿ...’’

ಹೀಗೆ ಅಪೂರ್ವ ನಾಗರಾಜ್ ಅವರು ಅನಘಾ ನರಸಿಂಹ ರಚನೆಯ ‘ರಂಗನಾಯಕಿ’ ಏಕವ್ಯಕ್ತಿ ನಾಟಕದ ಮಾತುಗಳನ್ನು ಹೇಳಿ ಗಮನ ಸೆಳೆದರು. ಬೆಂಗಳೂರಿನ ಕ್ಲೌನ್ಸ್ ರೆವರಿ ತಂಡದ ಮೂಲಕ ಪ್ರಸ್ತುತಪಡಿಸಿದ ಈ ನಾಟಕದಲ್ಲಿ ಹಿರಿ ಪ್ರಾಯದ ಪಾತ್ರ ಹಾಗೂ ಯೌವನದ ಪಾತ್ರಗಳನ್ನು ಚೆನ್ನಾಗಿ ಅಭಿನಯಿಸಿದರು. ‘ಸದಾರಮೆ’ ನಾಟಕದ ಕಳ್ಳ, ‘ಯಯಾತಿ’ ನಾಟಕದ ಶರ್ಮಿಷ್ಠೆ, ಕುವೆಂಪು ಅವರ ಜಲಗಾರ, ‘ಹರಿಶ್ಚಂದ್ರ ಕಾವ್ಯ’ದ ಚಂದ್ರಮತಿ ಪಾತ್ರಗಳನ್ನು ಪ್ರಸ್ತುತಪಡಿಸುತ್ತಲೇ ತಾನು ಅಭಿನಯಿಸಿದ ರಂಗಮಂದಿರವನ್ನು ಕೆಡವಿ ಅದು ಮುಂದೆ ಸಿನೆಮಾ ಟಾಕೀಸ್ ಆಗಿಯೋ, ಮಾಲ್ ಆಗಿಯೋ ಬದಲಾಗುತ್ತದಲ್ಲ ಎಂದು ವ್ಯಥೆಪಡುವ ಹಿರಿಯ ಕಲಾವಿದೆಯ ಕಳವಳವನ್ನು ಸಣ್ಣ ವಯಸ್ಸಿನ ಅಪೂರ್ವ ಅದ್ಭುತವಾಗಿ ಹಿಡಿದಿಟ್ಟರು. 

ಇದೆಲ್ಲ ಸಾಧ್ಯವಾಗಿದ್ದು ಕಳೆದ ವಾರ ಮೈಸೂರಿನಲ್ಲಿ, 78 ವರ್ಷ ವಯಸ್ಸಿನ ರಂಗಕರ್ಮಿ ರಾಜಶೇಖರ ಕದಂಬ ಅವರು ಆಯೋಜಿಸಿದ್ದ ಮೂರು ದಿನಗಳ ಕದಂಬ ಮಹಿಳಾ ಏಕವ್ಯಕ್ತಿ ನಾಟಕೋತ್ಸವದಲ್ಲಿ. ಇದೇ ನಾಟಕೋತ್ಸವದಲ್ಲಿ ಸಾಣೇಹಳ್ಳಿಯ ಗ್ರಾಮರಂಗ ಸಾಂಸ್ಕೃತಿಕ ಟ್ರಸ್ಟ್ ಮೂಲಕ ಎಚ್.ಎಸ್.ದ್ಯಾಮೇಶ್ ಅವರ ‘ವಸುಂಧರೆ’ ನಾಟಕವನ್ನು ಮಂಜುಳಾ ಬದಾಮಿ, ವೈ.ಡಿ.ಬಾದಾಮಿ ನಿರ್ದೇಶನದಲ್ಲಿ ಅಭಿನಯಿಸಿದರು. ಬೆಂಗಳೂರಿನ ಸೆಂಟರ್ ಫಾರ್ ಡಿವೈನ್ ಆರ್ಟ್ಸ್ ತಂಡದ ಮೂಲಕ ಗಜಾನನ ಶರ್ಮಾ ಅವರ ‘ಚೆನ್ನಭೈರದೇವಿ’ ಕಾದಂಬರಿ ಆಧರಿಸಿ ‘ಅವ್ವರಸಿ’ ನಾಟಕವನ್ನು ಕೃಷ್ಣಮೂರ್ತಿ ಕವತ್ತಾರ್ ನಿರ್ದೇಶನದಲ್ಲಿ ಲೀಲಾ ಬಸವರಾಜು ಪ್ರಸ್ತುತಪಡಿಸಿದರು.

ಹೀಗೆಯೇ 2021ರಲ್ಲಿ ಏಕವ್ಯಕ್ತಿ ನಾಟಕ ಸಪ್ತಾಹವನ್ನು ಕಲಬುರಗಿ ರಂಗಾಯಣದ ನಿರ್ದೇಶಕರಾದ ಪ್ರಭಾಕರ ಜೋಶಿ ಅವರು ತಮ್ಮ ರಂಗಾಯಣದಲ್ಲಿ ಆಯೋಜಿಸಿದ್ದರು. ಗಮನಿಸಿ; ರಾಜ್ಯದಾದ್ಯಂತ ಅಲ್ಲಲ್ಲಿ ಏಕವ್ಯಕ್ತಿ ನಾಟಕಗಳು ಪ್ರದರ್ಶನಗೊಳ್ಳುತ್ತಲೇ ಇರುತ್ತವೆ. ಅದರಲ್ಲೂ ಕಲಾವಿದೆಯರು ಏಕವ್ಯಕ್ತಿ ನಾಟಕಗಳತ್ತ ವಾಲಿರುವುದು ಗಮನಾರ್ಹ. ಪೌರಾಣಿಕ ಕಥೆಗಳನ್ನು ಸಮಕಾಲೀನಗೊಳಿಸಿದ ನಾಟಕಗಳು ಏಕವ್ಯಕ್ತಿ ಪ್ರಯೋಗಗಳಿಗೆ ಹೆಚ್ಚು ಆಯ್ಕೆಯಾಗಿವೆ. ದ್ರೌಪದಿ, ಸೀತೆ, ಮಂಡೋದರಿ... ಹೀಗೆ. ತೊಂಬತ್ತರ ದಶಕದ ನಂತರ ಕಲಾವಿದೆಯರ ಏಕವ್ಯಕ್ತಿ ನಾಟಕಗಳು ಹೆಚ್ಚಾದವು. ಇದರಿಂದ ಸ್ತ್ರೀಸಂವೇದನೆಯ ಅನಾವರಣ ಸಮರ್ಥವಾಗಿ ಸಾಧ್ಯವಾಗುತ್ತದೆ. ಜೊತೆಗೆ ಕಲಾವಿದೆಯರ ಇತಿಮಿತಿಗಳೂ ಗೊತ್ತಾಗುತ್ತವೆ. ಅನೇಕ ಬಾರಿ ಧ್ವನಿಯ ಏರಿಳಿತವಿಲ್ಲದ ಪರಿಣಾಮ ಯಾವ ಪಾತ್ರ ನಿರ್ವಹಿಸುತ್ತಿದ್ದಾರೆಂಬುದೂ ಗೊತ್ತಾಗುವುದಿಲ್ಲ. ಮುಖ್ಯವಾಗಿ ರಂಗದ ಮೇಲೆ ಒಬ್ಬರೇ ಇದ್ದು, ಪ್ರೇಕ್ಷಕರನ್ನು ಒಂದು ಗಂಟೆ ಇಲ್ಲವೇ ಅದಕ್ಕೂ ಹೆಚ್ಚು ಹೊತ್ತು ಹಿಡಿದಿಟ್ಟುಕೊಳ್ಳುವ ಸವಾಲು ಕಲಾವಿದೆಯರದು. ಆದರೆ ಇದು ಎಲ್ಲರಿಗೂ ಸಾಧ್ಯವಾಗದು. ಆಗ ರಂಗಸಜ್ಜಿಕೆಗೆ, ಸಂಗೀತಕ್ಕೆ ಒತ್ತುಕೊಡುತ್ತಾರೆ. 

ಆದರೆ ಅಭಿನಯವೇ ಜೀವಾಳವಾದರೆ ನಾಟಕ ಗೆಲ್ಲುತ್ತದೆ ಎನ್ನುವುದು ಮತ್ತೆ ಮತ್ತೆ ಸಾಬೀತಾಗುತ್ತದೆ. ಸಾಮಾನ್ಯವಾಗಿ ಏಕವ್ಯಕ್ತಿ ನಾಟಕಗಳಿಗೆ ಕಥೆ, ಕವಿತೆ, ಕಾದಂಬರಿಯ ಭಾಗ ಆಯ್ದುಕೊಳ್ಳುವುದು ಹೆಚ್ಚು. ಆದರೆ ಉಡುಪಿಯಲ್ಲಿ ಉಪನ್ಯಾಸಕಿಯಾಗಿರುವ ಸುಧಾ ಆಡುಕಳ ಅವರು ಏಕವ್ಯಕ್ತಿ ನಾಟಕಗಳನ್ನೇ ಬರೆದುದು ಹೆಚ್ಚುಗಾರಿಕೆ. ರಾಧಾ, ನೃತ್ಯಗಾಥಾ, ಆನಂದಭಾವಿನಿ ನಾಟಕಗಳು ಏಕವ್ಯಕ್ತಿ ನಾಟಕಗಳಾಗಿವೆ. ಅವರ ‘ಯತ್ರನಾರ್ಯಸ್ತು ಪೂಜ್ಯಂತೆ’ ಹಾಗೂ ‘ಗೆಲ್ಲಿಸಬೇಕು ಅವಳ’ ಕಥೆಗಳು ಕೂಡಾ ಏಕವ್ಯಕ್ತಿ ನಾಟಕಗಳಾಗಿವೆ. ಇವುಗಳನ್ನು ವಿದುಷಿ ಮಂಜುಳಾ ಸುಬ್ರಹ್ಮಣ್ಯ, ವಿದುಷಿ ಅನಘಾ, ಸಿರಿ ವಾನಳ್ಳಿ, ಕೀರ್ತನಾ ಉದ್ಯಾವರ ಹಾಗೂ ಪವಿತ್ರಾ ನಾಯ್ಕ, ಶ್ವೇತಾ ಅರೆಹೊಳೆ ಅಭಿನಯಿಸುತ್ತಿದ್ದಾರೆ. ಏಕವ್ಯಕ್ತಿ ನಾಟಕಗಳನ್ನು ರಚಿಸಿರುವ ಕುರಿತು ಸುಧಾ ಆಡುಕಳ ಅವರನ್ನು ಕೇಳಿದಾಗ ‘‘ನಾಟಕಗಳಲ್ಲಿ ಸ್ತ್ರೀಪಾತ್ರಗಳಿಗೆ ಮಹತ್ವ ಸ್ವಲ್ಪಕಡಿಮೆ. ಹೆಣ್ಣಿನ ಪಾತ್ರಗಳಿಗೆ ಮಹತ್ವ ನೀಡಬೇಕು ಜೊತೆಗೆ ಹೆಣ್ಣಿನ ತುಮುಲಗಳನ್ನು ಮಹಿಳೆಯರೇ ಅಭಿನಯಿಸಿದರೆ ಚೆನ್ನ. ಯುದ್ಧ, ಹೋರಾಟ, ಸಂಘರ್ಷ ಇವೆಲ್ಲ ಗಂಡಿನ ಪ್ರಧಾನವಾಗಿವೆ. ಇಂತಹ ಸಂದರ್ಭದಲ್ಲಿ ಹೆಣ್ಣಿನ ಅಭಿವ್ಯಕ್ತಿಯೇನು ಎನ್ನುವ ಕಾರಣಕ್ಕೆ ಏಕವ್ಯಕ್ತಿ ನಾಟಕಗಳನ್ನು ಬರೆದೆ’’ ಎನ್ನುವ ಉತ್ತರ ಅವರದು.

ಈ ಏಕವ್ಯಕ್ತಿ ನಾಟಕಗಳ ವಸ್ತು ವೈವಿಧ್ಯ ಕೂಡಾ. ಡಿ.ಎಸ್.ಚೌಗಲೆ ಅವರ ‘ಸಾವಿತ್ರಿಬಾಯಿ ಫುಲೆ’ ನಾಟಕವನ್ನು ಮಂಜುನಾಥ ಬಡಿಗೇರ ನಿರ್ದೇಶಿಸಿದ್ದು, ಎ.ಎಸ್.ಶೈಲಜಾ ಪ್ರಕಾಶ್ ಅಭಿನಯಿಸುತ್ತಿದ್ದಾರೆ. ಶ್ರೀಪಾದ ಭಟ್ ನಿರ್ದೇಶನದಲ್ಲಿ ಕಾವ್ಯಾ ಹಂದೆ ಅವರು ‘ಹಕ್ಕಿ ಮತ್ತು ಅವಳು’ ಏಕವ್ಯಕ್ತಿ ನಾಟಕವಾಡುತ್ತಿದ್ದಾರೆ. ದೇವನೂರ ಮಹಾದೇವ ಅವರ ‘ಒಡಲಾಳ’ ಕೃತಿಯನ್ನು ಹುಬ್ಬಳ್ಳಿಯ ಸುನಂದಾ ಹೊಸಪೇಟೆ ಅವರು ತಡೆರಹಿತ- ಸುದೀರ್ಘ ಮಹಿಳಾ ಸ್ವಗತ ವಿಭಾಗದ ಏಶ್ಯ ಬುಕ್ ಆಫ್ ರೆಕಾರ್ಡ್ಸ್ ಸೇರ್ಪಡೆಗಾಗಿ ಇದೇ ಫೆಬ್ರವರಿ 25ರಂದು ಹುಬ್ಬಳ್ಳಿಯ ಸವಾಯಿ ಗಂಧರ್ವ ಸಭಾಂಗಣದಲ್ಲಿ ಪ್ರಸ್ತುತಪಡಿಸಲಿದ್ದಾರೆ. ಹೀಗೆಯೇ ಸೀತಾ ಕೋಟೆ ಅವರ ‘ಶಕುಂತಲೆ’, ಮೈಸೂರು ರಂಗಾಯಣದ ಕಲಾವಿದೆ ಬಿ.ಎನ್.ಶಶಿಕಲಾ ಅವರು ಅಭಿನಯಿಸುವ ಕಸ್ತೂರಬಾ ಕುರಿತ ನಾಟಕ, ಪ್ರಸನ್ನ ಕೆರಗೋಡು ಅವರ ‘ಮಧುರ ಮಂಡೋದರಿ’ ನಾಟಕವು ಮಧು ಮಳವಳ್ಳಿ ನಿರ್ದೇಶನದಲ್ಲಿ ವನಿತಾ ರಾಜೇಶ್ ಅವರ ಅಭಿನಯದಲ್ಲಿ ಅನೇಕ ಪ್ರಯೋಗಗಳಾದವು. ಅಕ್ಷತಾ ಪಾಂಡವಪುರ ‘ಲೀಕ್ ಔಟ್’ ಹೀಗೆ ಪಟ್ಟಿ ದೊಡ್ಡದಿದೆ. ಕರಾವಳಿಯಲ್ಲಿ ಟ್ರೆಂಡ್: ಎಚ್.ಎಸ್.ವೆಂಕಟೇಶಮೂರ್ತಿ ಅವರ ‘ಊರ್ಮಿಳಾ’ ಹಾಗೂ ಸುಧಾ ಆಡುಕಳ ಅವರ ‘ರಾಧಾ’ ನಾಟಕವನ್ನು ಪುತ್ತೂರಿನ ಭರತನಾಟ್ಯ ಕಲಾವಿದೆ ಮಂಜುಳಾ ಸುಬ್ರಹ್ಮಣ್ಯ ಕೆಲವರ್ಷಗಳಿಂದ ಪ್ರಸ್ತುತಪಡಿಸುತ್ತಿದ್ದಾರೆ. 

ಹಾಗೆ ನೋಡಿದರೆ, ಹತ್ತು ವರ್ಷಗಳಿಗೆ ಮೊದಲು ಕರಾವಳಿಯಲ್ಲಿ ನೃತ್ಯಕಲಾವಿದೆಯರು ನಾಟಕ ನೋಡುತ್ತಿದ್ದುದು ತುಂಬ ಕಡಿಮೆ. ನಾಟಕದವರಿಗೂ ನೃತ್ಯಕಲಾವಿದೆಯರಿಗೂ ಅಷ್ಟಕಷ್ಟೆ ಇತ್ತು. ಈಗೀಗ ನೃತ್ಯಕಲಾವಿದೆಯರೂ ನಾಟಕವಾಡುತ್ತಿದ್ದಾರೆ. ಥಿಯೇಟರ್ ಡ್ಯಾನ್ಸ್‌ಗಳು ಹೆಚ್ಚುತ್ತಿವೆ. ಇದರಿಂದ ನೃತ್ಯ ಹಾಗೂ ರಂಗಭೂಮಿ ಬೆಸೆದ ಹಾಗಾಗಿದೆ. ರಂಗ ನಿರ್ದೇಶಕರು ನೃತ್ಯಕಲಾವಿದೆಯರಿಗೆ ರಂಗಭೂಮಿ ಅಳವಡಿಕೆ ಕುರಿತು ಹೇಳಿಕೊಡುತ್ತಿದ್ದಾರೆ. ‘‘ನಾನು ಶುರು ಮಾಡಿದಾಗ ಇಷ್ಟು ಬೆಳೆದಿರಲಿಲ್ಲ. ಇಂಥ ಸಂದರ್ಭದಲ್ಲಿ ಏಕವ್ಯಕ್ತಿ ನಾಟಕ ಪ್ರಯೋಗಕ್ಕೆ ಮುಂದಾದೆ. ಆಗ ವಿದ್ದು ಉಚ್ಚಿಲ್ ನಿರ್ದೇಶನದ ‘ಊರ್ಮಿಳಾ’ ನಾಟಕ ಶುರು ಮಾಡಿದೆ. ಈ ನಾಟಕ ಆಪ್ತ ರಂಗಭೂಮಿಗೆ ಅಳವಡಿಸಿದ್ದೆ. ಆಮೇಲೆ ನೃತ್ಯ ಹಾಗೂ ರಂಗಭೂಮಿಯನ್ನು ಒಟ್ಟಿಗೇ ರಂಗದ ಮೇಲೆ ತರಬೇಕೆಂದುಕೊಂಡಾಗ ಸುಧಾ ಆಡುಕಳ ರಚನೆಯ ‘ರಾಧಾ’ ನಾಟಕವನ್ನು ರಂಗಭೂಮಿಗೆ ನೃತ್ಯದ ಚಲನೆಗಳನ್ನು ಅಳವಡಿಸಿಕೊಂಡು ಅಭಿನಯಿಸಿದೆ’’ ಎನ್ನುವ ಮಂಜುಳಾ ಸುಬ್ರಹ್ಮಣ್ಯ ಅವರು ಕರಾವಳಿಯಲ್ಲಿ ಏಕವ್ಯಕ್ತಿ ನಾಟಕಗಳ ಟ್ರೆಂಡ್ ಶುರು ಮಾಡಿದವರು ಎನ್ನಲಡ್ಡಿಯಿಲ್ಲ. ಎನ್.ಮಂಗಳಾ ಅವರು ಕೂಡಾ ‘ಊರ್ಮಿಳಾ’ ಏಕವ್ಯಕ್ತಿ ನಾಟಕವಾಡಿದ್ದಾರೆ. ಅರುಂಧತಿ ನಾಗ್ ಅವರು ಗಿರೀಶ್ ಕಾರ್ನಾಡ್ ಅವರ ‘ಒಡಕಲು ಬಿಂಬ’ ನಾಟಕವನ್ನು ಕನ್ನಡ ಹಾಗೂ ಹಿಂದಿಯಲ್ಲೂ, ಅರುಂಧತಿ ರಾಜಾ ಅವರು ‘ಒಡಕಲು ಬಿಂಬ’ವನ್ನು ಇಂಗ್ಲಿಷ್‌ನಲ್ಲಿ ಪ್ರಸ್ತುತಪಡಿಸಿದರು. ಬಿ.ಜಯಶ್ರೀ ಅವರು ಎಚ್.ಎಸ್.ವೆಂಕಟೇಶಮೂರ್ತಿ ಅವರ ‘ಉರಿಯ ಉಯ್ಯಿಲೆ’ ನಾಟಕವನ್ನು ಏಕವ್ಯಕ್ತಿ ನಾಟಕವಾಗಿ ಅಭಿನಯಿಸಿದ್ದಾರೆ.

ನೀವು ಗಮನಿಸಿರಬಹುದು; ಮೊದಲೆಲ್ಲ ನಾಟಕಗಳಲ್ಲಿ ಅಭಿನಯಿಸಿದ ನಂತರ ಏಕವ್ಯಕ್ತಿ ನಾಟಕಗಳತ್ತ ವಾಲುತ್ತಿದ್ದರು. ಈಚೆಗೆ ಅಭಿನಯಿಸುತ್ತಿರುವ ಯುವ ಕಲಾವಿದೆಯರು ನೇರವಾಗಿ ಏಕವ್ಯಕ್ತಿ ನಾಟಕಗಳನ್ನು ಆಡುತ್ತಿದ್ದಾರೆ. ಇದರಿಂದ ರಂಗಭೂಮಿಯ ಇತರ ಅಂಶಗಳನ್ನು ಅರಿಯದೆ ಎನರ್ಜಿ ಇದ್ದರೆ ಸಾಕು ಏಕವ್ಯಕ್ತಿ ನಾಟಕವಾಡಲು ಸಾಧ್ಯವಾಗುತ್ತಿದೆ ಎಂಬ ನಂಬಿಕೆ ಹೆಚ್ಚಿದೆ. ಇನ್ನು ಕನ್ನಡದಲ್ಲಿ ಕಲಾವಿದೆಯರ ಮೊದಲ ಏಕವ್ಯಕ್ತಿ ನಾಟಕವೆಂದರೆ ಭಾಗೀರಥಿಬಾಯಿ ಕದಂ ಅವರದು. ನೀನಾಸಂನಲ್ಲಿದ್ದಾಗ ಅವರು ವೈದೇಹಿ ಅವರ ‘ಶಕುಂತಲೆಯೊಡನೆ ಒಂದು ಅಪರಾಹ್ನ’ ಕಥೆಯನ್ನು ನಿರೂಪಿಸುವ ಮೂಲಕ ಏಕವ್ಯಕ್ತಿ ನಾಟಕವಾಡಿದರು. ಹೆಣ್ತನ ಅನಾವರಣ: 

ಲಕ್ಷ್ಮೀ ಚಂದ್ರಶೇಖರ್ ಅವರ ‘ಹೆಣ್ಣಲ್ಲವೆ?’ ನಾಟಕ ಅವರ ಮೊದಲ ಏಕವ್ಯಕ್ತಿ ಪ್ರಯೋಗ. ಬೆಂಗಳೂರಿನಲ್ಲಿ ಏಕವ್ಯಕ್ತಿ ನಾಟಕವಾಡಿದ ಮೊದಲ ಕಲಾವಿದೆ ಅವರು. ‘ಹೆಣ್ಣಲ್ಲವೆ?’ ನಾಟಕವನ್ನು ಇಂಗ್ಲಿಷಿನಲ್ಲಿ ‘ಜಸ್ಟ್ ಎ ವುಮನ್’ ಆಗಿ ಅಭಿನಯಿಸಿದರು. ಬಳಿಕ ಚಂದ್ರಶೇಖರ ಕಂಬಾರ ಅವರ ‘ಸಿಂಗಾರೆವ್ವ ಮತ್ತು ಅರಮನೆ’ ಕಾದಂಬರಿಯನ್ನು ಕನ್ನಡದಲ್ಲಿ ಅದೇ ಹೆಸರಿನಲ್ಲಿ ಏಕವ್ಯಕ್ತಿಯಾಗಿ ಪ್ರಯೋಗವಾಗಿ ಹಾಗೂ ಇಂಗ್ಲಿಷಿನಲ್ಲಿ ‘ಸಿಂಗಾರೆವ್ವ ಆ್ಯಂಡ್ ಪ್ಯಾಲೇಸ್’ ಪ್ರಯೋಗಿಸಿದರು. ದಾರಿಯೊ ಫೋನ ‘ಮೀಡಿಯಾ’ ನಾಟಕವನ್ನಲ್ಲದೆ, ಅವನ ‘ರೈಸ್ ಆ್ಯಂಡ್ ಶೈನ್’ ನಾಟಕವನ್ನು ‘ಎದ್ದೇಳು’ ಎಂದು ಕನ್ನಡಕ್ಕೆ ರೂಪಾಂತರಿಸಿಕೊಂಡು ನಾಟಕವಾಡಿದರು. ಕೊಡವ ಸಂಸ್ಕೃತಿಗೆ ಅಳವಡಿಸಿಕೊಂಡ ‘ಕಿತ್ತಳೆಮನೆ ಕಾವೇರಿ’ ಎಂದು ಹಾಗೂ ಇಂಗ್ಲಿಷಿನಲ್ಲಿ ‘ಕಾವೇರಿ ಆಫ್ ಕಿತ್ತಳೆ ವಿಲ್ಲಾ’ ನಾಟಕವಾಡಿದರು. ಚಿದಂಬರ ರಾವ್ ಜಂಬೆ ಅವರು ಷೇಕ್ಸ್‌ಪಿಯರ್‌ನ ಮ್ಯಾಕ್‌ಬೆತ್ ನಾಟಕದಿಂದ ಆಯ್ದುದನ್ನು ‘ಲೇಡಿ ಮೈನಸ್ ಮ್ಯಾಕ್‌ಬೆತ್’ ನಾಟಕವಾಡಿದರು. ಹೀಗೆ ಇತರರೊಂದಿಗೆ ನಾಟಕವಾಡುವುದಲ್ಲದೆ ಏಕವ್ಯಕ್ತಿ ಪ್ರಯೋಗಗಳಿಗೆ ಒಡ್ಡಿಕೊಳ್ಳುವ ಕುರಿತು ಲಕ್ಷ್ಮೀ ಚಂದ್ರಶೇಖರ್ ಅವರು ‘‘ಇದೊಂದು ಸವಾಲು. 

ಬೇರೆ ಬೇರೆ ಪಾತ್ರಗಳನ್ನು, ಬೇರೆ ಬೇರೆ ಸಂಸ್ಕೃತಿಗಳನ್ನು ಅರಗಿಸಿಕೊಂಡು ಪ್ರೇಕ್ಷಕರನ್ನು ಹಿಡಿದಿಡುವ ಸವಾಲು. ಹೆಣ್ಣಾಗಿ ಹೆಣ್ಣಿನ ಅಂತರಂಗವನ್ನು ಅನಾವರಣಗೊಳಿಸಲು ಸಾಧ್ಯವಾಗುತ್ತದೆ. ಒಬ್ಬಳೇ ಅಭಿನಯಿಸುವುದರಿಂದ ಒಂದು ರೀತಿ ಸ್ವಾತಂತ್ರ್ಯ ಇರುತ್ತದೆ. ಪುರುಷ ಪ್ರಧಾನ ಇರುವ ಪಾತ್ರಗಳೇ ಇರುವ ನಾಟಕಗಳೇ ಹೆಚ್ಚು. ಹೀಗಿದ್ದಾಗ ಏಕವ್ಯಕ್ತಿ ನಾಟಕಗಳಿಗೆ ಹುಡುಕಾಡಿದೆ’’ ಎನ್ನುವ ಅವರು ಈಚೆಗೆ ಉದಯ್ ಇಟಗಿ ರಚನೆಯ, ವಿಶ್ವರಾಜ ಪಾಟೀಲ ನಿರ್ದೇಶನದಲ್ಲಿ ‘ಷೇಕ್ಸ್‌ಪಿಯರ್‌ನ ಶ್ರೀಮತಿ’ ಏಕವ್ಯಕ್ತಿ ನಾಟಕವಾಡುತ್ತಿದ್ದಾರೆ. ಹೀಗೆ ಅವರು ತಮ್ಮ ಏಕವ್ಯಕ್ತಿ ನಾಟಕಗಳನ್ನು ವಿದೇಶದಲ್ಲೂ ಆಡಿದರು. ಇದರಿಂದ ಕಡಿಮೆ ಖರ್ಚಿನೊಂದಿಗೆ ಹೆಚ್ಚು ಪ್ರಯೋಗಗಳನ್ನು ಕೊಡಲು ಸಾಧ್ಯವಾಯಿತು. ಹೀಗೆ ಕಲಾವಿದೆಯರ ಏಕವ್ಯಕ್ತಿ ಪ್ರಯೋಗಗಳ ಕುರಿತ ಹಕ್ಕಿನೋಟದ ಈ ಅಂಕಣವನ್ನು ಮತ್ತೆ ಅಪೂರ್ವ ನಾಗರಾಜ್ ಅವರ ‘ರಂಗನಾಯಕಿ’ ನಾಟಕದ ಮಾತುಗಳ ಮೂಲಕ ಮುಗಿಸುವೆ.

‘‘ಈ ರಂಗಭೂಮಿ ಮನುಷ್ಯರಿಗೆ ಅನುಭೂತಿಯನ್ನು ಹೇಳಿಕೊಡುತ್ತದೆ. ಈ ಬೆಳಕು ಮನುಷ್ಯನಿಗೆ ಮನುಷ್ಯತ್ವದ ದಾರಿ ತೋರಿಸುತ್ತದೆ.’’