ಮೂಡಿಗೆರೆ ತಾಲೂಕು ಕಚೇರಿ ಎದುರು ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ನೆರೆ ಸಂತ್ರಸ್ತರು
ಪುನರ್ವಸತಿ ಕಲ್ಪಿಸಲು ನಿರ್ಲಕ್ಷ್ಯ ಆರೋಪ
ಮೂಡಿಗೆರೆ, ಫೆ.10: ಅತಿವೃಷ್ಟಿಯಿಂದ ಮನೆ ಹಾಗೂ ಜಮೀನು ಕಳೆದುಕೊಂಡ ತಾಲೂಕಿನ ಮಲೆಮನೆ ಮತ್ತು ಮದುಗುಂಡಿ ನಿರಾಶ್ರಿತರಿಗೆ ಭೂಮಿ ಮಂಜೂರು ಮಾಡಿಕೊಡುವಲ್ಲಿ ತಾಲೂಕು ಆಡಳಿತ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿ ಶುಕ್ರವಾರ ಪಟ್ಟಣದ ತಾಲೂಕು ಕಚೇರಿ ಎದುರು ಅತಿವೃಷ್ಟಿ ಸಂತ್ರಸ್ತರು ಕಪ್ಪುಪಟ್ಟಿ ಧರಿಸಿ ಧರಣಿ ನಡೆಸಿದ್ದು, ಈ ವೇಳೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ವರದಿಯಾಗಿದೆ.
ಶುಕ್ರವಾರ ಬೆಳಿಗ್ಗೆ ತಾಲೂಕಿನ ಮಲೆಮನೆ ಹಾಗೂ ಮಧುಗುಂಡಿ ಗ್ರಾಮದ ಸುಮಾರು 11 ಕುಟುಂಬಗಳ ಸದಸ್ಯರು ದಿಢೀರ್ ಸಮಾವೇಶಗೊಂಡು 4 ವರ್ಷಗಳ ಹಿಂದೆ ಸಂಭವಿಸಿದ ಅತಿವೃಷ್ಟಿಯಿಂದ ಜಮೀನು, ಮನೆಗಳನ್ನು ಕಳೆದುಕೊಂಡ ಸಂತ್ರಸ್ಥರಿಗೆ ತಾಲೂಕು ಆಡಳಿತ ಹಾಗೂ ಕ್ಷೇತ್ರದ ಶಾಸಕರು ಇದುವರೆಗೂ ಪರಿಹಾರ, ಪುನರ್ವಸತಿ ಕಲ್ಪಿಸಿಲ್ಲ ಎಂದು ಆರೋಪಿಸಿ ಧರಣಿ ನಡೆಸಿದರು.
► ಆತ್ಮಹತ್ಯೆಗೆ ಯತ್ನ
ಧರಣಿ ವೇಳೆ ಸಂತ್ರಸ್ತರು ತಾಲೂಕು ಕಚೇರಿ ಒಳಗೆ ನುಗ್ಗಲು ಯತ್ನಿಸಿದ್ದು, ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಸಂತ್ರಸ್ತರನ್ನು ತಡೆದರು. ಆಗ ಪೊಲೀಸರು ಹಾಗೂ ಧರಣಿ ನಿರತರೊಂದಿಗೆ ಕೆಲ ಹೊತ್ತು ಮಾತಿನ ಚಕಮಕಿ ನಡೆಯಿತು. ಧರಣಿನಿರತರನ್ನು ಭೇಟಿಯಾಗಿ ಸಮಸ್ಯೆ ಆಲಿಸದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಪೊಲೀಸರನ್ನು ತರಾಟೆಗೈದರು. ಇದೇ ವೇಳೆ ಸಂತ್ರಸ್ತರ ಪೈಕಿ ಕೆಲವರು ಸ್ಥಳದಲ್ಲಿ ಪರ್ಯಾಯ ಜಮೀನು ನೀಡಬೇಕು, ತಪ್ಪಿದಲ್ಲಿ ತಾಲೂಕು ಕಚೇರಿಯಲ್ಲೇ ವಿಷ ಕುಡಿದು ಸಾಯುತ್ತೇವೆ ಎಂದು ಎಚ್ಚರಿದರು. ಈ ವೇಳೆ ಕೆಲ ಧರಣಿ ನಿರತರು ಪೆಟ್ರೋಲ್‍ಅನ್ನು ಮೈಮೇಲೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದರು. ಆಗ ಸ್ಥಳದಲ್ಲಿದ್ದ ಪೊಲೀಸರು ಪೆಟ್ರೋಲ್ ಕಿತ್ತುಕೊಂಡಿದ್ದರಿಂದ ಸಂಭವಿಸಲಿದ್ದ ಅಪಾಯ ತಪ್ಪಿತು.
ಧರಣಿ ಬಳಿಕ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಸಮಸ್ಯೆ ಪರಿಹಾರ ಮಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಳ್ಳುವ ಭರವಸೆ ನೀಡಿದ್ದರಿಂದ ಧರಣಿ ಹಿಂಪಡೆಯಲಾಯಿತು. ನಿರಾಶ್ರಿತರಾದ ಸುರೇಶ್‍ಗೌಡ, ಚನ್ನಯ್ಯ, ರಾಜು, ಚಂದ್ರೇಗೌಡ ಮತ್ತಿತರರಿದ್ದರು.
''ಮಲೆಮನೆ, ಮಧುಗುಂಡಿಯಲ್ಲಿ 11 ಕುಟುಂಬಗಳು ಅತಿವೃಷ್ಟಿಯಿಂದ ಮನೆ, ಜಮೀನು ಕಳೆದುಕೊಂಡು ಸಂತ್ರಸ್ಥರಾಗಿದ್ದಾರೆ. ಅನಾಹುತ ಸಂಭವಿಸಿ 4 ವರ್ಷ ಕಳೆದರೂ ಸಂತ್ರಸ್ಥರ ನೋವಿಗೆ ಅಧಿಕಾರಿಗಳು, ಶಾಸಕರು, ಜಿಲ್ಲಾ ಮಂತ್ರಿಗಳು ಸ್ಪಂದಿಸಿಲ್ಲ. ಕೇವಲ ಭರವಸೆಗಳು ಮಾತ್ರ ಸಿಗುತ್ತಿದ್ದು, ಮನೆ ನಿರ್ಮಾಣಕ್ಕೆ ಜಾಗ ನೀಡಿಲ್ಲ, ಜಮೀನಿಗೆ ಪರ್ಯಾಯ ಜಮೀನನ್ನೂ ನೀಡಿಲ್ಲ. ಕ್ಷೇತ್ರದ ಜನರು ಸಂಕಷ್ಟದಲ್ಲಿದ್ದರೂ ಕ್ಷೇತ್ರದ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರು ಮುಂದಿನ ಚುನಾವಣೆ ಹಿನ್ನೆಲೆಯಲ್ಲಿ ತಾಲೂಕು ಉತ್ಸವದಲ್ಲಿ ಮೈಮರೆತಿದ್ದಾರೆ. ನಮಗೆ ಉತ್ಸವ ಬೇಡ, ಪರಿಹಾರ, ಪುನರ್ವಸತಿಬೇಕು. ಪುನರ್ವಸತಿ ಕಲ್ಪಿಸಲು ಕ್ರಮಕೈಗೊಳ್ಳದಿದ್ದಲ್ಲಿ ಮತ್ತೆ ಹೋರಾಟ ರೂಪಿಸಲಾಗುವುದು, ಆಗ ಸಂಭವಿಸುವ ಅನಾಹುತಗಳಿಗೆ ಅಧಿಕಾರಿಗಳು, ಶಾಸಕರು, ಜಿಲ್ಲಾಡಳಿತವೇ ಹೊಣೆ''
- ಅಶ್ವಥ್, ಸಂತ್ರಸ್ತ