×
Ad

ಜೀವನಾಂಶ ಕೋರಿದ ಅರ್ಜಿಗಳು ಕಾಲಮಿತಿಯಲ್ಲಿ ಇತ್ಯರ್ಥವಾಗಲಿ: ಹೈಕೋರ್ಟ್ ನಿರ್ದೇಶನ

Update: 2023-02-10 20:03 IST

ಬೆಂಗಳೂರು, ಫೆ.10: ಕೌಟುಂಬಿಕ ಕಲಹ ಪ್ರಕರಣಗಳಿಗೆ ಸಂಬಂಧಿಸಿದಂತೆ ಜೀವನಾಂಶ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಗಳಲ್ಲಿ ಕೆಲವೊಂದು ಅರ್ಜಿಗಳು ಇತ್ಯರ್ಥವಾಗದೆ ಬಾಕಿ ಉಳಿದಿರುವುದನ್ನು ಗಮನಿಸಿದ ಹೈಕೋರ್ಟ್, ಇಂಥ ಅರ್ಜಿಗಳನ್ನು ಕಾಲಮಿತಿಯಲ್ಲಿ ಇತ್ಯರ್ಥಪಡಿಸುವಂತೆ ವಿಚಾರಣಾ ನ್ಯಾಯಾಲಯಗಳಿಗೆ ನಿರ್ದೇಶನ ನೀಡಿದೆ. 

ವಿಚ್ಚೇದಿತ ಮಹಿಳೆಯೊಬ್ಬರು ಜೀವನಾಂಶ ಕೋರಿ ಸಲ್ಲಿಸಿರುವ ಅರ್ಜಿಗೆ 19 ತಿಂಗಳ ಬಳಿಕ ಪತಿ ಆಕ್ಷೇಪಣೆ ಸಲ್ಲಿಸಿದ್ದರು. ಇದನ್ನು ಪ್ರಶ್ನಿಸಿ ಪತ್ನಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠದಲ್ಲಿ ನಡೆಯಿತು. 

ಹಿಂದೂ ವಿವಾಹ ಕಾಯಿದೆ ಸೆಕ್ಷನ್ 24ರ(ಜೀವನಾಂಶ) ಅಡಿಯಲ್ಲಿ ಸಲ್ಲಿಕೆ ಮಾಡುವ ಅರ್ಜಿಗಳನ್ನು ಜೀವನಾಂಶ ಕೋರಿ ಸಲ್ಲಿಸುವ ಅರ್ಜಿಗಳನ್ನು 60 ದಿನಗಳಲ್ಲಿ ವಿಲೇವಾರಿ ಮಾಡಬೇಕು ಎಂಬ ನಿಯಮವಿದ್ದರೂ, ಕೆಲವು ಕೇಸ್‍ಗಳಲ್ಲಿ ನ್ಯಾಯಾಲಯಗಳು ನಾಲ್ಕು ವರ್ಷಗಳ ಕಾಲ ಅರ್ಜಿ ವಿಲೇವಾರಿ ಮಾಡದ ಕ್ರಮದ ವಿರುದ್ಧ ಹೈಕೋರ್ಟ್ ನ್ಯಾಯಪೀಠವು ಅಸಮಾಧಾನ ವ್ಯಕ್ತಪಡಿಸಿದೆ. 

ಜೀವನಾಂಶ ಕೋರಿ ಸಲ್ಲಿಸುವ ಅರ್ಜಿಗಳ ವಿಚಾರಣೆಗಳ ಪರಿಗಣಿಸುವಲ್ಲಿ ವಿಳಂಬ ಮಾಡಿದಲ್ಲಿ ವಿಚ್ಛೇದಿತ ಮಹಿಳೆಗೆ ಇರುವ ಅವಕಾಶವನ್ನು ವಂಚಿಸಿದಂತಾಗಲಿದೆ. ಅಲ್ಲದೆ, ಜೀವನಾಂಶ ಪಡೆಯುವ ಹಕ್ಕು ಕೇವಲ ಭ್ರಮೆ ಆಗಲಿದೆ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ಹಲವು ಕಾರಣಗಳಿಂದ ಪತ್ನಿ ಪತಿಯ ಮನೆಯನ್ನು  ತೊರೆಯುತ್ತಾಳೆ. ಅಂತಹ ಸಂದರ್ಭದಲ್ಲಿ ಭೀತಿಗೆ ಒಳಗಾಗುವುದನ್ನು ತಪ್ಪಿಸುವುದು ಮತ್ತು ತೊಂದರೆಗೆ ಸಿಲುಕದಂತೆ ಮಾಡುವುದಕ್ಕಾಗಿ ಕಾಲಮಿತಿಯಲ್ಲಿ ನಿರ್ದಿಷ್ಟ ಮೊತ್ತದ ಪರಿಹಾರ ಸಿಗುವಂತೆ ಮಾಡಬೇಕು. ಹೀಗಾಗಿ ವಿಚಾರಣಾ ನ್ಯಾಯಾಲಯಗಳು ಕಾಲಮಿತಿಗೆ ಬದ್ಧವಾಗಿರಬೇಕು ಎಂದು ನ್ಯಾಯಪೀಠ ಆದೇಶದಲ್ಲಿ ಉಲ್ಲೇಖಿಸಿದೆ. 

ಈ ಕೇಸ್‍ನಲ್ಲಿ ಈವರೆಗೂ ನೀಡಲಾಗುತ್ತಿದ್ದ 15 ಸಾವಿರ ರೂ.ಗಳ ಮಾಸಿಕ ಜೀವನಾಂಶವನ್ನು 50 ಸಾವಿರ ರೂ.ಗಳಿಗೆ ಹೆಚ್ಚಳ ಮಾಡಿದೆ. ಜತೆಗೆ, ಕಾನೂನು ಹೋರಾಟಕ್ಕಾಗಿ ನೀಡಿದ್ದ 50 ಸಾವಿರ ರೂ. ಗಳನ್ನು 1 ಲಕ್ಷ ರೂ. ಗಳಿಗೆ ಹೆಚ್ಚಳ ಮಾಡಿ ಆದೇಶಿಸಿದೆ.

ಮಾರ್ಗಸೂಚಿಗಳು: ಅರ್ಜಿ ಸಲ್ಲಿಸಿದ ತಕ್ಷಣ ಇ-ಮೇಲ್, ವಾಟ್ಸ್‍ಆಪ್ ಸೇರಿದಂತೆ ಕಾನೂನು ಪ್ರಕಾರ ಇರುವ ಅವಕಾಶಗಳಂತೆ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಬೇಕು.

ಜೀವನಾಂಶ ಕೋರಿ ಸಲ್ಲಿಸುವ ಅರ್ಜಿಗೆ ಸಂಬಂಧಿಸಿದಂತೆ ಎರಡು ತಿಂಗಳೊಳಗಾಗಿ ಆಕ್ಷೇಪಣೆ ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ಪತ್ನಿಯ ಆಸ್ತಿಗಳ ಕುರಿತಂತೆ ಮಾಹಿತಿ ನೀಡಲು ಎರಡು ತಿಂಗಳ ಕಾಲಾವಕಾಶ ನೀಡಬೇಕು. ಅರ್ಜಿದಾರರ ಆಸ್ತಿಗಳು ಮತ್ತು ಹೊಣೆಗಾರಿಕೆಗಳ ಸಂಬಂಧ ನಾಲ್ಕು ತಿಂಗಳೊಳಗೆ ಕಕ್ಷಿದಾರರ ವಾದ ಆಲಿಸಿ ವಿಚಾರಣೆ ಪೂರ್ಣಗೊಳಿಸಿ ಆದೇಶ ಹೊರಡಿಸಬೇಕು.

ಮಧ್ಯಂತರ ಅರ್ಜಿಗಳನ್ನು ಸಲ್ಲಿಕೆ ಮಾಡಿದ 6 ತಿಂಗಳಲ್ಲಿ ನಿರ್ಧಾರ ಕೈಗೊಳ್ಳಬೇಕು. ಅರ್ಜಿಗಳ ವಿಚಾರಣೆ ಸಂದರ್ಭದಲ್ಲಿ ಅನಗತ್ಯವಾಗಿ ಮುಂದೂಡುವ ಪ್ರಕ್ರಿಯೆಗಳನ್ನು ಕೈ ಬಿಡಬೇಕು. ವಿಚಾರಣೆ ಪೂರ್ಣಗೊಳಿಸುವುದಕ್ಕೆ ಪಕ್ಷಗಾರರು ಸೂಕ್ತ ರೀತಿಯಲ್ಲಿ ಸಹಕರಿಸದಿದ್ದಲ್ಲಿ ಜೀವನಾಂಶ ಕೋರಿರುವ ಅರ್ಜಿಗಳನ್ನು ಕಾನೂನಿನ ಪ್ರಕಾರ ನಿರ್ಧರಿಸಿ ಆದೇಶಗಳನ್ನು ನೀಡಲು ನ್ಯಾಯಾಲಯಗಳಿಗೆ ಸಂಪೂರ್ಣ ಅವಕಾಶವಿರಲಿದೆ.

ಜೀವನಾಂಶ ಕೋರಿ ಸಲ್ಲಿಸುವ ಅರ್ಜಿಗಳನ್ನು 6 ತಿಂಗಳಿಗೂ ಹೆಚ್ಚು ವಿಳಂಬವಾದಲ್ಲಿ ಅದಕ್ಕೆ ಸೂಕ್ತ ಕಾರಣಗಳನ್ನು ನೀಡಬೇಕು ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

Similar News