‘ಪ್ರಜಾಧ್ವನಿ’ ಎಂದರೆ ರಾಜ್ಯದ ಜನರ ಧ್ವನಿ: ಸಿದ್ದರಾಮಯ್ಯ

Update: 2023-02-10 15:48 GMT

ಯಾದಗಿರಿ, ಫೆ. 10: ಬಿಜೆಪಿ ಸರಕಾರ ಭ್ರಷ್ಟಾಚಾರ, ಜನವಿರೋಧಿ ಆಡಳಿತದಿಂದ ಕೂಡಿದ್ದು ಜನರ ಸಮಸ್ಯೆ ಬಗೆಹರಿಸುವಲ್ಲಿ ವಿಫಲವಾಗಿದೆ. ಪ್ರಜಾಧ್ವನಿ ಯಾತ್ರೆ ಮೂಲಕ ಜನರ ಸಲಹೆ ಪಡೆದು, ಮುಂದೆ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಅವುಗಳನ್ನು ಈಡೇರಿಸುವ ಕೆಲಸ ಮಾಡುತ್ತೇವೆ. ಪ್ರಜಾಧ್ವನಿ ಎಂದರೆ ನಾಡಿನ 7 ಕೋಟಿ ಜನರ ಧ್ವನಿ’ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಶುಕ್ರವಾರ ಜಿಲ್ಲೆಯ ಶಹಾಪುರ ಕ್ಷೇತ್ರದಲ್ಲಿ ನಡೆದ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ಅವರು, ಜಂಟಿ ಅಧಿವೇಶನದ ಮೊದಲ ದಿನ ರಾಜ್ಯಪಾಲರು ಭಾಷಣ ಮಾಡಿದ್ದು, ಸರಕಾರ ಸಿದ್ದಪಡಿಸಿದ್ದನ್ನು ಅವರು  ಓದುತ್ತಾರೆ ಅಷ್ಟೇ. ಪ್ರಜಾಧ್ವನಿ ಯಾತ್ರೆ ಮೊದಲೇ ಹಮ್ಮಿಕೊಂಡಿದ್ದರಿಂದ ಸದನಕ್ಕೆ ಹೋಗಲು ಆಗಲಿಲ್ಲ. ಅವರ ಭಾಷಣದ ಮೇಲೆ ವಂದನಾ ನಿರ್ಣಯವನ್ನು ಮಾಡುತ್ತೇನೆ ಎಂದು ಸ್ಪಷ್ಟನೆ ನೀಡಿದರು.

ರಾಜ್ಯಪಾಲರ ಭಾಷಣದಲ್ಲಿ ರಾಜ್ಯದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ಹಣಕಾಸಿನ ವ್ಯವಸ್ಥೆ ಮತ್ತು ಅಭಿವೃದ್ಧಿಯ ಮುನ್ನೋಟ ಇರಬೇಕಿತ್ತು. ಆದರೆ ಈ ಯಾವುದೂ ಇಲ್ಲ. ಇದೊಂದು ದಿಕ್ಕು ದೆಸೆ ಇಲ್ಲದ ಭಾಷಣ, ಸರಕಾರ ರಾಜ್ಯಪಾಲರ ಮೂಲಕ ಸುಳ್ಳು ಹೇಳಿಸಿದೆ. ನಾವು ಮಾಡಿದ ಕಾರ್ಯಕ್ರಮಗಳನ್ನು ತಾವು ಮಾಡಿದ್ದೇವೆ ಎಂದು ಹಸಿ ಹಸಿ ಸುಳ್ಳು ಹೇಳಿಸಿದ್ದಾರೆ ಎಂದು ಟೀಕಿಸಿದರು.

ತಮ್ಮನ್ನು ತಾವು ಚೌಕಿದಾರ ಎಂದು ಕರೆದುಕೊಳ್ಳುವ ಮೋದಿ ರಾಜ್ಯ ಸರಕಾರದ ಭ್ರಷ್ಟಾಚಾರ ವಿರುದ್ಧ ಏನಾದರೂ ಕ್ರಮ ತೆಗೆದುಕೊಂಡರೇ? ಈ ಸರಕಾರ ಅಲಿಬಾಬಾ ಮತ್ತು 40 ಮಂದಿ ಕಳ್ಳರ ಗುಂಪು ಎಂದು ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ, ಈ ಕ್ಷೇತ್ರದಿಂದ ಶರಣಬಸಪ್ಪ ದರ್ಶನಾಪುರ್ ಗೆಲುವು ಕಟ್ಟಿಟ್ಟ ಬುತ್ತಿ. ನೀವೆಲ್ಲರೂ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವ ಮೂಲಕ ನಮ್ಮ ಕೈಗಳನ್ನು ಬಲಪಡಿಸುವ ಕೆಲಸ ಮಾಡಬೇಕು ಎಂದು ಕೋರಿದರು.

Similar News