ಸರ್ಕಾರ ಸಿದ್ಧಪಡಿಸಿಕೊಟ್ಟ ಭಾಷಣವನ್ನು ರಾಜ್ಯಪಾಲರು ಓದಿದ್ದಾರೆ: ಬಿ.ಕೆ ಹರಿಪ್ರಸಾದ್

Update: 2023-02-10 15:58 GMT

ಬೆಂಗಳೂರು: 'ಬಿಜೆಪಿ ಸರ್ಕಾರಕ್ಕೆ ಸುಳ್ಳೇ ಮನೆ ದೇವರು ಎಂದು ರಾಜ್ಯಪಾಲರ ಮುಖಾಂತರ ಸರ್ಕಾರ ಇಂದಿನ ಭಾಷಣದಲ್ಲಿ ಸ್ಪಷ್ಟಪಡಿಸಿದೆ. ಸಂಪ್ರದಾಯದಂತೆ‌ ರಾಜ್ಯಪಾಲರು ಸರ್ಕಾರ ಸಿದ್ಧಪಡಿಸಿಕೊಟ್ಟ ಭಾಷಣವನ್ನು ಓದಿದ್ದಾರೆ. ಇಡೀ ಭಾಷಣ ಸುಳ್ಳುಗಳ ಕಂತೆ. ರಾಜ್ಯದ ಅಭಿವೃದ್ಧಿಗಾಗಿ ಕಿವಿ ಹಿಂಡಬೇಕಾದ ರಾಜ್ಯಪಾಲರು ತುತ್ತೂರಿ ಓದಿದಂತಿದೆ' ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ ಹರಿಪ್ರಸಾದ್ ಟೀಕಿಸಿದ್ದಾರೆ. 

''ರಾಜ್ಯದ ಅಭಿವೃದ್ಧಿಗೆ ಸರ್ಕಾರದ ಬಳಿ ಯಾವ ಮುನ್ನೋಟವೂ ಇಲ್ಲದೆ, ದೂರದೃಷ್ಟಿಯೂ ಇಲ್ಲ ಎಂಬುದನ್ನ ರಾಜ್ಯಪಾಲರೇ ಒಪ್ಪಿಕೊಂಡತಾಗಿದೆ. ರಾಜ್ಯಪಾಲರ ಭಾಷಣದಲ್ಲಾದರೂ ಜನರ ಎದುರು ನೈಜತೆ,ವಾಸ್ತವವನ್ನ ತೆರೆದಿಡಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ. ರಾಜ್ಯ ಸರ್ಕಾರದ ಸಾಧನೆಗಳೆಂದು ಸುಳ್ಳು ಅಂಕಿಅಂಶಗಳನ್ನು ರಾಜ್ಯಪಾಲರ ಬಾಯಲ್ಲಿ ಹೇಳಿಸಿದ್ದಾರೆ'' ಎಂದು ಕಿಡಿಕಾರಿದ್ದಾರೆ. 

''40% ಕಮಿಷನ್ ಕೆಲಸಗಳಿಗೆ ಪೂರಕವಾಗಿ ರಾಜ್ಯಪಾಲರ ಭಾಷಣವೂ ಇದೆ. ಕಮಿಷನ್ ಆರೋಪವನ್ನು ಮರೆಮಾಚಲು ರಾಜ್ಯಪಾಲರ ಭಾಷಣವನ್ನು ಬಳಸಿಕೊಳ್ಳಲಾಗಿದೆ. ರಾಜ್ಯ ಸರ್ಕಾರದ ವಿರುದ್ಧದ ಭ್ರಷ್ಟಾಚಾರದ ಆರೋಪಗಳ ಕುರಿತು ರಾಜ್ಯಪಾಲರು ಮಾತನಾಡದೇ ಇರುವುದು ಇದಕ್ಕೆ ಸಾಕ್ಷಿ'' ಎಂದು ಆರೋಪಿಸಿದರು. 

''ಸರ್ಕಾರ ‌ನಿಜವಾಗಿಯೂ ಸಾಧನೆಗಳನ್ನು ಮಾಡಿದ್ದರೆ ರಾಜ್ಯಪಾಲರಿಂದ ಸುಳ್ಳು ಹೇಳಿಸುವ ಕೆಲಸ ಮಾಡಬಾರದಿತ್ತು. ವಾಸ್ತವವಾಗಿ ಬಿಜೆಪಿ ಸರ್ಕಾರದ ಆಡಳಿತದ ಅವಧಿಯಲ್ಲಿ ರಾಜ್ಯದ ಅಭಿವೃದ್ಧಿ ಹಿಮ್ಮುಖವಾಗಿದೆ. ರಾಜ್ಯಪಾಲರ ಭಾಷಣದಲ್ಲಿನ ಅಂಕಿಅಂಶಗಳು ಸತ್ಯಕ್ಕೆ ದೂರವಾಗಿವೆ'' ಎಂದು ಹೇಳಿದ್ದಾರೆ.  

''ರಾಜ್ಯಪಾಲರು ಬಿಜೆಪಿ ಸರ್ಕಾರವನ್ನು ಹೊಗಳುವುದಕ್ಕೆ ಸೀಮಿತವಾಗಿ ವಿಧಾನಮಂಡಲದ ಜಂಟಿ ಅಧಿವೇಶನದಲ್ಲಿ ಭಾಷಣ‌ ಮಾಡಿದ್ದಾರೆ. ಅವರ ಭಾಷಣ ರಾಜ್ಯದ ಅಭಿವೃದ್ಧಿಗೆ ದಿಕ್ಸೂಚಿಯಾಗಬೇಕಿತ್ತು ಮತ್ತು ವಾಸ್ತವಕ್ಕೆ ಕನ್ನಡಿ ಹಿಡಿಯಬೇಕಿತ್ತು. ಈ ಎರಡೂ ಕೆಲಸಗಳಿಂದ ರಾಜ್ಯಪಾಲರು ದೂರ ಉಳಿದಿದ್ದಾರೆ'' ಎಂದು ಟೀಕಿಸಿದ್ದಾರೆ. 

''ರಾಜ್ಯ ಎದುರಿಸುತ್ತಿರುವ ಹಣಕಾಸಿನ ಅಸ್ಥಿರತೆ, ಪ್ರತಿ ಕಾಮಗಾರಿಗಳಲ್ಲಿ ಮಿತಿ ಮೀರಿರುವ ಲಂಚ, ತಾಂಡವಾಡುತ್ತಿರುವ ನಿರುದ್ಯೋಗ ಸಮಸ್ಯೆ, ನೇಮಕಾತಿಗಳಲ್ಲಿ ನಡೆದಿರುವ ಅಕ್ರಮ, ರೈತರು ಎದುರಿಸುತ್ತಿರುವ ಕೃಷಿ ಬಿಕ್ಕಟ್ಟು ಸೇರಿದಂತೆ ಸಮಸ್ಯೆಗಳ ಆಗರವೇ ಆಗಿರುವ ಎಲ್ಲಾ ಇಲಾಖೆಗಳ ಅಧ್ವಾನಗಳನ್ನ ಬಗ್ಗೆ ರಾಜ್ಯಪಾಲರ ಭಾಷಣದಲ್ಲಿ ಚಕಾರವೇ ಎತ್ತಿಲ್ಲ'' ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

''ಶಿಕ್ಷಣ ಇಲಾಖೆಯಲ್ಲಿ ಸುಳ್ಳಿನ ಸರಮಾಲೆಯನ್ನೇ ಪೋಣಿಸಿದಂತಿದೆ. ರಾಜ್ಯಪಾಲರ ಅಂಕಿ ಸಂಖ್ಯೆಗಳಿಗೂ ವಾಸ್ತವಕ್ಕೂ ತಾಳ,ಮೇಳ ಇಲ್ಲದ ಭಜನೆಯಂತಾಗಿದೆ. ಮಕ್ಕಳಿಗೆ ಸಮವಸ್ತ್ರ, ಸಾಕ್ಸ್, ಶೂ ಕೂಡ ನೀಡಲು ಸಾಧ್ಯವಾಗದ ಸರ್ಕಾರಕ್ಕೆ ನ್ಯಾಯಾಲಯ ಛೀಮಾರಿ ಹಾಕಿ ವಾರ ಕಳೆದಿಲ್ಲ. ಆದರೂ ಘನತೆಯೇ ಇಲ್ಲದ ಸರ್ಕಾರ ಘನವೆತ್ತ ರಾಜ್ಯಪಾಲರಿಂದ ನಾಡಿನ ವಿದ್ಯಾರ್ಥಿಗಳಿಗೆ ಕಾಲ ಕಾಲಕ್ಕೆ ಸಮವಸ್ತ್ರ ನೀಡಿದೆ ಎಂದು ಸುಳ್ಳು ಹೇಳಿಸಿದೆ. ಪಠ್ಯಪುಸ್ತಕದ ಅಧ್ವಾನಗಳ ಬಗ್ಗೆಯಂತೂ ಜನಸಾಮಾನ್ಯರ ಅಸಹ್ಯ ಹುಟ್ಟಿಸುವಂತಾಗಿದೆ'' ಎಂದು ಕಿಡಿಕಾರಿದ್ದಾರೆ.  

''ರಾಜ್ಯಪಾಲರ ಒಟ್ಟು 82 ಪ್ಯಾರಾಗಳ ಇಡೀ ಭಾಷಣವೇ ಸುಳ್ಳಿನ ಕಂತೆಯಾಗಿದೆ. ಕಾಂಗ್ರೆಸ್ ಸರ್ಕಾರದ ಯೋಜನೆಗಳನ್ನೆ ತಮ್ಮ ಸಾಧನೆ ಎಂದು ಬೆನ್ನು ತಟ್ಟಿಕೊಂಡಿರುವುದು ನಾಚಿಕೆಗೇಡಿನ ಪರಮಾವಧಿ'' ಎಂದು ಬಿ.ಕೆ ಹರಿಪ್ರಸಾದ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ. 

Similar News