ಆರೋಗ್ಯ ವಲಯದ ನಿರ್ಲಕ್ಷ್ಯವೂ ಸಾರ್ವಜನಿಕ ಸ್ವಾಸ್ಥ್ಯವೂ

Update: 2023-02-11 04:53 GMT

ಇಂದಿಗೂ ಶೇ. 60ಕ್ಕೂ ಹೆಚ್ಚು ಜನರು ಗ್ರಾಮೀಣ ಆರ್ಥಿಕತೆಯನ್ನೇ ಅವಲಂಬಿಸುವ ದೇಶದಲ್ಲಿ ಪ್ರಾಥಮಿಕ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಾಗುತ್ತದೆ. ಸಾರ್ವತ್ರಿಕ ಆರೋಗ್ಯ ರಕ್ಷಣೆಯ ಸಮಗ್ರ ನೀತಿಗಳ ಮೂಲಕ ತಳಮಟ್ಟದ ದುಡಿಯುವ ಜನತೆಗೆ ವೈದ್ಯಕೀಯ ಸೌಲಭ್ಯಗಳನ್ನು ಕೈಗೆಟುಕುವ ದರಗಳಲ್ಲಿ ಒದಗಿಸುವುದು ಸರಕಾರಗಳ ಆದ್ಯತೆಯಾಗಬೇಕಿದೆ.

ಸಾರ್ವಜನಿಕ ಆರೋಗ್ಯಕ್ಕೆ ಅತಿ ಕನಿಷ್ಠ ವೆಚ್ಚ ಮಾಡುವ ದೇಶಗಳ ಪೈಕಿ ಭಾರತ ಮುಂಚೂಣಿಯಲ್ಲಿದೆ ಎಂದು ಇತ್ತೀಚೆಗೆ ಪ್ರಕಟವಾದ ಆಕ್ಸ್‌ಫಾಮ್ ವರದಿಯಲ್ಲಿ ಹೇಳಲಾಗಿದೆ. ಇದನ್ನು ಪಿತೂರಿ ಅಥವಾ ವೃಥಾ ಆರೋಪ ಎಂದು ದೂಷಿಸುವ ಮುನ್ನ ಭಾರತದ ಆರೋಗ್ಯ ಕ್ಷೇತ್ರದ ವಾಸ್ತವ ಪರಿಸ್ಥಿತಿಯನ್ನು ಒಮ್ಮೆ ಅವಲೋಕನ ಮಾಡುವುದೂ ಉಚಿತ ಎನಿಸುತ್ತದೆ. ಕಳೆದ ಮೂರು ದಶಕಗಳಲ್ಲಿ ಅತಿ ಹೆಚ್ಚಿನ ಸಂಖ್ಯೆಯ ವೈದ್ಯರನ್ನು ಸೃಷ್ಟಿಸುತ್ತಿರುವ ಭಾರತ, ವಿಶ್ವಶ್ರೇಷ್ಠ ಅತ್ಯಾಧುನಿಕ ಆಸ್ಪತ್ರೆಗಳಿಗೂ ಹೆಸರಾಗುತ್ತಿದೆ. 

ನೆಹರೂ ಯುಗದ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಮಹಾವಿದ್ಯಾಲಯ (AIIMS) ಇಂದು ಹತ್ತಾರು ಶಾಖೆಗಳನ್ನು ಹೊಂದಿದ್ದು 2014ರ ನಂತರದಲ್ಲಿ ಮೋದಿ ಸರಕಾರವೂ ದೇಶದ ವಿವಿಧ ನಗರಗಳಲ್ಲಿ ಈ ಏಮ್ಸ್ ಆಸ್ಪತ್ರೆಗಳನ್ನು ನಿರ್ಮಿಸುತ್ತಿದೆ. ನೆಹರೂ ಯುಗದ ಕೂಸುಗಳೆಂದೇ ಹೇಳಬಹುದಾದ ರಾಮಮನೋಹರ್ ಲೋಹಿಯಾ ಆಸ್ಪತ್ರೆ, ಬೆಂಗಳೂರಿನ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ, ನಿಮ್ಹಾನ್ಸ್ ಮಾನಸಿಕ ರೋಗಗಳ ಆಸ್ಪತ್ರೆ ಇವೆಲ್ಲವೂ ಇಂದಿಗೂ ಭಾರತದ ಪ್ರತಿಷ್ಠೆಯನ್ನು ಹೆಚ್ಚಿಸುವಲ್ಲಿ ತಮ್ಮದೇ ಆದ ಕೊಡುಗೆಯನ್ನು ನೀಡುತ್ತಲೇ ಬಂದಿವೆ.

ಆದರೆ ಏಮ್ಸ್ ಆಸ್ಪತ್ರೆಗಳ ನಿರ್ಮಾಣ ಭಾರತವು ಆರೋಗ್ಯ ಕ್ಷೇತ್ರದಲ್ಲಿ ಅತ್ಯಾಧುನಿಕ ಸೌಲಭ್ಯಗಳೊಡನೆ ಸಾಧಿಸಿದ ಮುನ್ನಡೆಯ ಸಂಕೇತವಾಗಬಹುದೇ ಹೊರತು ದೇಶದ ಒಟ್ಟಾರೆ ಆರೋಗ್ಯ ವಲಯದ ಸ್ವಾಸ್ಥ್ಯವನ್ನು ಸೂಚಿಸುವುದಿಲ್ಲ. ಆದರೂ ವೈದ್ಯಕೀಯ ಕ್ಷೇತ್ರದಲ್ಲಿ ದೇಶದ ಪ್ರಗತಿಯ ಸೂಚಕವಾಗಿ ಕಾಣುವ ಈ ಪ್ರತಿಷ್ಠಿತ ಸಾಂಸ್ಥಿಕ ವಲಯದಲ್ಲಿ 1956ರಿಂದ 2003ರವರೆಗೆ 47 ವರ್ಷಗಳ ಕಾಲ ಯಾವುದೇ ಪ್ರಗತಿ ಸಾಧಿಸದೆ ಇರುವುದು ಅಚ್ಚರಿ ಮೂಡಿಸುತ್ತದೆ. ಈ ಅವಧಿಯಲ್ಲಿ ದೇಶವನ್ನಾಳಿದ ಸರಕಾರಗಳು ಉತ್ತರದಾಯಿಯಾಗುತ್ತವೆ. ಭಾರತವನ್ನು ಕಾಡುತ್ತಿರುವ ಆರೋಗ್ಯ ವಲಯದ ಸಮಸ್ಯೆಯನ್ನು ಭಿನ್ನ ನೆಲೆಯಲ್ಲೇ ನೋಡಬೇಕಿದೆ. ಶೇ. 80ಕ್ಕೂ ಹೆಚ್ಚು ಜನರಿಗೆ ನಿಲುಕದ ಏಮ್ಸ್ ಅಥವಾ ಮತ್ತಾವುದೇ ಸ್ವರೂಪದ ಅತ್ಯಾಧುನಿಕ ಆಸ್ಪತ್ರೆಗಳು ಮತ್ತು ವೈದ್ಯಕೀಯ ಶಿಕ್ಷಣ ಸಂಸ್ಥೆಗಳು ಆರೋಗ್ಯ ಕ್ಷೇತ್ರದಲ್ಲಿ ದೇಶದ ಮುನ್ನಡೆಯ ಸೂಚಕವಾಗುವುದೇ ಹೊರತು, ತಳಮಟ್ಟದ ಜನಸಾಮಾನ್ಯರಿಗೆ ನಿಲುಕುವಂತಹ ಆರೋಗ್ಯ ಸೇವೆ ಮತ್ತು ಸೌಲಭ್ಯಗಳ ಸೂಚಕವಾಗುವುದಿಲ್ಲ. 

ಕಳೆದ ಮೂರು ದಶಕಗಳಲ್ಲಿ ಭಾರತ ಆರೋಗ್ಯ ಕ್ಷೇತ್ರವನ್ನು ನಿರ್ಲಕ್ಷಿಸುತ್ತಿರುವುದು ಢಾಳಾಗಿ ಗೋಚರಿಸುತ್ತದೆ. ಆಡಳಿತಾರೂಢ ಸರಕಾರಗಳು ಮೂಲತಃ ಪ್ರಾಥಮಿಕ ಆರೋಗ್ಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಿದಾಗಲೇ, ಆರೋಗ್ಯ ಸೇವೆಗಳು ತಳಮಟ್ಟದ ಜನಸಾಮಾನ್ಯರಿಗೂ ಸುಲಭವಾಗಿ ದಕ್ಕುವಂತಾಗುತ್ತದೆ. ಜನಸಾಮಾನ್ಯರ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡುವುದರ ಮೂಲಕವೇ ಭಾರತ ಒಂದು ಸ್ವಸ್ಥ ಸಮಾಜವನ್ನು ರೂಪಿಸಲು ಸಾಧ್ಯವಾಗುತ್ತದೆ. ಈ ದೃಷ್ಟಿಯಿಂದ ನೋಡಿದಾಗ, ಕಳೆದ ಮೂರು ದಶಕಗಳಲ್ಲಿ ಆರೋಗ್ಯ ಸೇವೆಯೂ ಕ್ರಮೇಣ ಕಾರ್ಪೊರೇಟ್ ಔದ್ಯಮಿಕ ಹಿತಾಸಕ್ತಿಗಳನ್ನು ಪೋಷಿಸುವ ನಿಟ್ಟಿನಲ್ಲೇ ಪ್ರಗತಿ ಸಾಧಿಸುತ್ತಿರುವುದನ್ನು ಗಮನಿಸಬಹುದು. ವೈದ್ಯಕೀಯ ಸೇವೆಗಳ ಖಾಸಗೀಕರಣ ಮತ್ತು ಚಿಕಿತ್ಸಾ ಸೌಲಭ್ಯಗಳ ಕಾರ್ಪೊರೇಟೀಕರಣ ಪ್ರಕ್ರಿಯೆ ಪರಾಕಾಷ್ಠೆ ತಲುಪುತ್ತಿದ್ದು, ಬಹುಪಾಲು ಭಾರತೀಯರ ಪಾಲಿಗೆ ವೈದ್ಯಕೀಯ ವೆಚ್ಚಗಳು ಹೊರೆಯಾಗಿ ಪರಿಣಮಿಸುತ್ತಿದೆ. 

ದೇಶದ ಎಲ್ಲ ನಗರಗಳಲ್ಲೂ ಅತ್ಯಾಧುನಿಕ ಸೌಲಭ್ಯಗಳನ್ನೊಳಗೊಂಡ ಕಾರ್ಪೊರೇಟ್ ಆಸ್ಪತ್ರೆಗಳು ನಾಯಿಕೊಡೆಗಳಂತೆ ಬೆಳೆಯುತ್ತಿವೆ. ಆದರೆ ಈ ಕಾರ್ಪೊರೇಟ್ ಔದ್ಯಮಿಕ ಕೇಂದ್ರಗಳು ಜನಸಾಮಾನ್ಯರ ಯೋಗಕ್ಷೇಮಕ್ಕಿಂತಲೂ ಹೆಚ್ಚಿನ ಆದ್ಯತೆಯನ್ನು ತಮ್ಮ ಮಾರುಕಟ್ಟೆ ಲಾಭ ಮತ್ತು ವಿಸ್ತರಣೆಗೆ ನೀಡುತ್ತವೆ. ಕೋವಿಡ್ ಸಾಂಕ್ರಾಮಿಕ ಇಡೀ ದೇಶದ ಸಾಮಾನ್ಯ ಜನತೆಯನ್ನು ಸಂಕಷ್ಟದ ಬವಣೆಗೆ ದೂಡಿದ್ದಾಗ ಈ ಆಸ್ಪತ್ರೆಗಳು ನಡೆಸಿದ ಸುಲಿಗೆ ಮತ್ತು ಈ ವೈದ್ಯಕೀಯ ಕೇಂದ್ರಗಳು ತೋರಿದ ನಿರ್ಲಕ್ಷ್ಯವನ್ನು ಇಡೀ ದೇಶವೇ ಗಮನಿಸಿದೆ. ವೈದ್ಯಕೀಯ ಸೇವೆ ಮತ್ತು ಮಾರುಕಟ್ಟೆ

 ವೈದ್ಯರ ನಿಸ್ವಾರ್ಥ ಸೇವೆ ಮತ್ತು ಸಂವೇದನಾಶೀಲ ಜನಸ್ಪಂದನೆ ಇವೆರಡೂ ಲಕ್ಷಣಗಳಿಂದ ಹೊರತಾಗಿರುವ ಕಾರ್ಪೊರೇಟ್ ಆಸ್ಪತ್ರೆಗಳಲ್ಲಿ ದುಡಿಯುವ ವೈದ್ಯರೂ ಮಾರುಕಟ್ಟೆ ನಿಬಂಧನೆಗಳಿಗೆ ಒಳಗಾಗಿರುತ್ತಾರೆ. ವೈದ್ಯರ ವ್ಯಕ್ತಿಗತ ತಾತ್ವಿಕ ಸಂವೇದನೆಗಳನ್ನು, ವೈಯಕ್ತಿಕ ಜೀವನದ ಹಿತಾಸಕ್ತಿಗಳು ನುಂಗಿಹಾಕಿರುತ್ತವೆ. ಅತ್ಯುತ್ತಮ ಗುಣಮಟ್ಟದ ಚಿಕಿತ್ಸೆಯನ್ನು ರೋಗಿಗಳಿಗೆ ಒದಗಿಸುವ ಮೂಲಕ, ಪ್ರಾಣಾಂತಿಕ ಕಾಯಿಲೆಗಳನ್ನು ಗುಣಪಡಿಸುವ ಮೂಲಕ ಮತ್ತು ಅತ್ಯಾಧುನಿಕ ಶಸ್ತ್ರ ಚಿಕಿತ್ಸೆಗಳ ಮೂಲಕ ಸಾವಿರಾರು ಜನರ ಪ್ರಾಣ ಉಳಿಸುವ ಮೂಲಕ ಇಂದಿಗೂ ಜನರ ನಡುವೆ ‘‘ವೈದ್ಯೋ ನಾರಾಯಣೋ ಹರಿ’’ ಎಂಬ ಉದಾತ್ತ ಅಭಿಪ್ರಾಯವನ್ನು ಉಳಿಸಿಕೊಂಡಿದ್ದರೂ, ಈ ವೈದ್ಯರು ತಮ್ಮ ಬದುಕು ರೂಪಿಸಿಕೊಳ್ಳುವ ಹಾದಿಯಲ್ಲಿ ಧನಾರ್ಜನೆಯತ್ತಲೇ ಸಾಗುತ್ತಿರುವುದನ್ನು ಗಮನಿಸಬಹುದು. ಕಾರ್ಪೊರೇಟ್ ಆಸ್ಪತ್ರೆಗಳು ವೈದ್ಯರೊಳಗೆ ವ್ಯಕ್ತಿಗತವಾಗಿ ಇರಬಹುದಾದ ಸಂವೇದನೆಗಳನ್ನೂ ನಿಷ್ಕ್ರಿಯವಾಗಿಸಿ, ಅವರನ್ನು ಧನಾರ್ಜನೆಯ ಸಾಧನಗಳನ್ನಾಗಿ ಮಾಡಿಬಿಡುತ್ತವೆ. ಲಕ್ಷಗಳಲ್ಲಿ, ಕೋಟಿಗಳಲ್ಲಿ ಹಣ ವೆಚ್ಚ ಮಾಡಿ, ತಮ್ಮ ಬದುಕಿನ ಬಹುಮುಖ್ಯ ಭಾಗವನ್ನು ವೈದ್ಯಕೀಯ ಜ್ಞಾನಾರ್ಜನೆಯಲ್ಲೇ ಕಳೆದು, ಜನರ ಆರೋಗ್ಯ ರಕ್ಷಣೆಗೆ ಮುಂದಾಗುವ ವೈದ್ಯರು ಈ ಕಾರ್ಪೊರೇಟ್ ಮಾರುಕಟ್ಟೆ ವ್ಯವಸ್ಥೆಯ ಫಲಾನುಭವಿಗಳಾಗುವುದು ನವ ಉದಾರವಾದದ ಒಂದು ಪ್ರಧಾನ ಲಕ್ಷಣವಾಗಿಯೇ ಕಾಣುತ್ತದೆ. ಒಂದೆಡೆ ವೈದ್ಯಕೀಯ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವ ಆಡಳಿತ ನೀತಿಗಳನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳು ರೂಪಿಸುತ್ತಿದ್ದರೂ, ಈ ಸೌಲಭ್ಯಗಳು ತಳಮಟ್ಟದ ಜನತೆಯನ್ನು ತಲುಪುತ್ತಿಲ್ಲ ಎನ್ನುವುದೂ ಅಷ್ಟೇ ಸ್ಪಷ್ಟ. 

ದೇಶದಲ್ಲಿ ಇರುವ ಒಟ್ಟು 596 ವೈದ್ಯಕೀಯ ಕಾಲೇಜುಗಳು, ಭಾರತದ ತಳಮಟ್ಟದ ಜನಸಾಮಾನ್ಯರ ಆರೋಗ್ಯ ರಕ್ಷಣೆಗೆ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ ಎನ್ನುವುದನ್ನು ಅಂಕಿಅಂಶಗಳೇ ನಿರೂಪಿಸುತ್ತವೆ. ಈ ವೈದ್ಯಕೀಯ ಕಾಲೇಜುಗಳಲ್ಲಿ ಶಿಕ್ಷಣ ಪಡೆಯುವ ಒಂದು ಲಕ್ಷಕ್ಕೂ ಹೆಚ್ಚು ಶಿಕ್ಷಣಾರ್ಥಿಗಳು ವೈದ್ಯಕೀಯ ಜ್ಞಾನಾರ್ಜನೆಯೊಂದಿಗೆ, ಧನಾರ್ಜನೆಯ ಮಾರ್ಗಗಳನ್ನು ಶೋಧಿಸುವ ಪ್ರವೃತ್ತಿ ಹೆಚ್ಚಾಗುತ್ತಿರುವುದರಿಂದ, ಸಾಮಾನ್ಯ ಜನತೆ ಸರಕಾರಗಳ ವಿಮಾ ಯೋಜನೆಗಳ ಮೊರೆ ಹೋಗಬೇಕಾಗಿದೆ. ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ವೈದ್ಯಕೀಯ ಸೌಲಭ್ಯಗಳು ಜನಸಾಮಾನ್ಯರ ಕೈಗೆಟುಕದಿರುವುದರಿಂದ, ಹೆಚ್ಚಿನ ಸಂಖ್ಯೆಯ ಜನರು ಕಾರ್ಪೊರೇಟ್ ಆಸ್ಪತ್ರೆಗಳಿಂದ ಶೋಷಣೆಗೊಳಗಾಗುತ್ತಿದ್ದಾರೆ. 

ವಿಶ್ವ ಆರೋಗ್ಯ ಸಂಸ್ಥೆಯ ನಿಯಮಗಳ ಪ್ರಕಾರ ಒಂದು ಸಾವಿರ ಜನಸಂಖ್ಯೆಗೆ ಒಬ್ಬ ವೈದ್ಯರು ಇರಬೇಕಾಗಿದೆ. ಆದರೆ ಭಾರತದಲ್ಲಿ 1655 ಜನಕ್ಕೆ ಒಬ್ಬ ವೈದ್ಯರಿದ್ದಾರೆ. ಇತ್ತೀಚಿನ ಅಧ್ಯಯನದ ಪ್ರಕಾರ ಭಾರತದಲ್ಲಿ ಪ್ರತೀ ಹತ್ತು ಸಾವಿರ ಜನಸಂಖ್ಯೆಗೆ ಕೇವಲ ಐದು ವೈದ್ಯರು ಇರುತ್ತಾರೆ. 2021ರ ನೀಟ್ ಪರೀಕ್ಷೆಯಲ್ಲಿ 16 ಲಕ್ಷ ಅಭ್ಯರ್ಥಿಗಳಿದ್ದರೂ, ತೇರ್ಗಡೆಯಾದ ಅಭ್ಯರ್ಥಿಗಳ ಸಂಖ್ಯೆ ಎಂಟು ಲಕ್ಷ. ಇವರ ಪೈಕಿ 80 ಸಾವಿರ ಅಭ್ಯರ್ಥಿಗಳಿಗೆ ಮಾತ್ರ ವೈದ್ಯಕೀಯ ಶಿಕ್ಷಣ ಪಡೆಯಲು ಅವಕಾಶ ಲಭಿಸುತ್ತದೆ. ಮುಂದಿನ ವರ್ಷದಲ್ಲಿ ಇದನ್ನು ಒಂದು ಲಕ್ಷಕ್ಕೆ ಏರಿಸುವ ಭರವಸೆಯನ್ನು ಸರಕಾರ ನೀಡಿದೆ. ಆದರೆ ಇದರಲ್ಲಿ 42 ಸಾವಿರ ಸೀಟುಗಳು ಮಾತ್ರ ಸರಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಲಭ್ಯವಾಗುತ್ತದೆ. ಉಳಿದವರು ಖಾಸಗಿ ಕಾಲೇಜುಗಳ ಮೊರೆ ಹೋಗಬೇಕಾಗುತ್ತದೆ. ಖಾಸಗಿ ಕಾಲೇಜುಗಳಲ್ಲಿ ವೈದ್ಯಕೀಯ ಶಿಕ್ಷಣ ಪೂರೈಸಲು ಕನಿಷ್ಠ ರೂ. 75 ಲಕ್ಷದಿಂದ ಒಂದು ಕೋಟಿ ರೂ ಖರ್ಚಾಗುತ್ತದೆ. ಡೊನೇಷನ್ ಪಡೆಯುವ ಕಾಲೇಜುಗಳಿಗೆ ಕೋಟಿಗಟ್ಟಲೆ ಹಣ ಸುರಿಯಬೇಕಾಗುತ್ತದೆ. ಒಂದು ಖಾಸಗಿ ವೈದ್ಯಕೀಯ ಕಾಲೇಜು ಸ್ಥಾಪಿಸಲು 1,000 ಕೋಟಿ ರೂ. ಬಂಡವಾಳ ಹೂಡಬೇಕಾಗುತ್ತದೆ. ಈ ಬೃಹತ್ ಬಂಡವಾಳದ ಪರಿಣಾಮವೇ ವೈದ್ಯಕೀಯ ಶಿಕ್ಷಣ ಲಾಭ ನಷ್ಟಗಳ ಮಾರುಕಟ್ಟೆ ಲೆಕ್ಕಾಚಾರದಲ್ಲಿ ಸಿಲುಕಲು ಕಾರಣವೂ ಆಗಿದೆ.

ಅಪೌಷ್ಟಿಕತೆ, ಹಸಿವು, ಬಡತನ ಮತ್ತು ನಿರುದ್ಯೋಗ ಭಾರತದ ಸಾಮಾಜಿಕ ಜೀವನವನ್ನು ಮತ್ತಷ್ಟು ಸಂಕೀರ್ಣಗೊಳಿಸುತ್ತಿದೆ. ಈ ಸಂದರ್ಭದಲ್ಲಿ ಆರೋಗ್ಯ ರಕ್ಷಣೆ ಸರಕಾರಗಳ ಪ್ರಥಮ ಆದ್ಯತೆಯಾಗಬೇಕಿದೆ. ಇಂದಿಗೂ ಶೇ. 60ಕ್ಕೂ ಹೆಚ್ಚು ಜನರು ಗ್ರಾಮೀಣ ಆರ್ಥಿಕತೆಯನ್ನೇ ಅವಲಂಬಿಸುವ ದೇಶದಲ್ಲಿ ಪ್ರಾಥಮಿಕ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಾಗುತ್ತದೆ. ಸಾರ್ವತ್ರಿಕ ಆರೋಗ್ಯ ರಕ್ಷಣೆಯ ಸಮಗ್ರ ನೀತಿಗಳ ಮೂಲಕ ತಳಮಟ್ಟದ ದುಡಿಯುವ ಜನತೆಗೆ ವೈದ್ಯಕೀಯ ಸೌಲಭ್ಯಗಳನ್ನು ಕೈಗೆಟುಕುವ ದರಗಳಲ್ಲಿ ಒದಗಿಸುವುದು ಸರಕಾರಗಳ ಆದ್ಯತೆಯಾಗಬೇಕಿದೆ. ಆಯುಷ್ಮಾನ್, ಯಶಸ್ವಿನಿ ಮುಂತಾದ ವಿಮಾ ಯೋಜನೆಗಳು ರೋಗಕ್ಕೆ ತುತ್ತಾದ ಜನತೆಯ ರಕ್ಷಣೆಗೆ ಧಾವಿಸುವ ಹಣಕಾಸಿನ ಸಾಧನಗಳು. ಆದರೆ ಒಂದು ಸಮಾಜದ ಸ್ವಾಸ್ಥ್ಯ ನಿರ್ಧಾರವಾಗುವುದು ರೋಗಮುಕ್ತ ಜನಸಂಖ್ಯೆಯ ಪ್ರಮಾಣದಿಂದ ಅಲ್ಲವೇ? ವಿಮಾ ಯೋಜನೆಯನ್ನು ಹೆಚ್ಚು ಜನರು ಬಳಸಿಕೊಳ್ಳುತ್ತಿದ್ದಾರೆ ಎಂದರೆ ಹೆಚ್ಚಿನ ಜನರು ವಿವಿಧ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ ಎಂದೇ ಅರ್ಥ. 

ಜನರನ್ನು ಅನಾರೋಗ್ಯದಿಂದ ಕಾಪಾಡುವುದು ಪ್ರಭುತ್ವದ ಆದ್ಯತೆ ಮತ್ತು ಸಾಂವಿಧಾನಿಕ ಕರ್ತವ್ಯವೂ ಹೌದು. ಹೀಗೆ ಕಾಪಾಡಬೇಕಾದರೆ ಭಾರತ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗುತ್ತಿರುವ ಅಪೌಷ್ಟಿಕತೆ, ಮಕ್ಕಳ ಕುಂಠಿತ ಬೆಳವಣಿಗೆ, ಶಿಶುಮರಣ, ಗರ್ಭಿಣಿಯರ ಸಮಸ್ಯೆಗಳು, ತಾಯಂದಿರ ಮರಣ ಇವೇ ಮುಂತಾದ ಸಮಸ್ಯೆಗಳ ವಿರುದ್ಧ ಸಮರ ಸಾರಬೇಕಿದೆ. ಪ್ರತಿಯೊಂದು ಗ್ರಾಮದಲ್ಲೂ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಅಭಿವೃದ್ಧಿಪಡಿಸಿ, ಸೂಕ್ತ ತಜ್ಞರನ್ನು, ವೈದ್ಯಕೀಯ ಸಿಬ್ಬಂದಿಯನ್ನು, ಅತ್ಯಾಧುನಿಕ ವೈದ್ಯಕೀಯ ಉಪಕರಣಗಳನ್ನು, ಶುಶ್ರೂಷಕರನ್ನು ಒದಗಿಸುವುದು ಸರಕಾರಗಳ ಆದ್ಯತೆಯಾಗಬೇಕಿದೆ. 

ಈ ಆದ್ಯತೆಯನ್ನು ಮನಗಾಣಬೇಕಾದರೆ ಆಡಳಿತಾರೂಢ ಸರಕಾರಗಳು ಕಲ್ಯಾಣ ಪ್ರಭುತ್ವ ವ್ಯವಸ್ಥೆಯ ಜನಕಲ್ಯಾಣ ನೀತಿಗಳನ್ನು ಜಾರಿಗೊಳಿಸಬೇಕಾಗುತ್ತದೆ. ಈ ಜನಕಲ್ಯಾಣ ನೀತಿಗಳ ಪ್ರತಿಫಲನವನ್ನು ವಾರ್ಷಿಕ ಬಜೆಟ್‌ಗಳಲ್ಲಿ ನಾವು ಗುರುತಿಸಬೇಕಾಗುತ್ತದೆ. ಸರಕಾರಗಳು ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಹೂಡುವ ಬಂಡವಾಳ ಮತ್ತು ನಿಯೋಜಿಸುವ ಹಣಕಾಸು ಮೊತ್ತ ಆರೋಗ್ಯ ರಕ್ಷಣೆಯ ಕ್ಷೇತ್ರವನ್ನು ವಿಸ್ತರಿಸಿ ಮತ್ತಷ್ಟು ಗಟ್ಟಿಗೊಳಿಸಲು ಸಾಧ್ಯ. ಈ ದೃಷ್ಟಿಯಿಂದಲೇ 2023-24ರ ಕೇಂದ್ರ ಬಜೆಟ್‌ನಲ್ಲಿ ಆರೋಗ್ಯ ವಲಯದ ನಿರ್ಲಕ್ಷ್ಯವನ್ನು ಪರಾಮರ್ಶಿಸಬೇಕಿದೆ.