PSI ಹಗರಣ: 51 ಅಭ್ಯರ್ಥಿಗಳಿಗೆ ನಿರ್ಬಂಧ ವಿಧಿಸಿದ ರಾಜ್ಯ ಪೊಲೀಸ್ ನೇಮಕಾತಿ ವಿಭಾಗ
ಬೆಂಗಳೂರು, ಫೆ. 11: ಪಿಎಸ್ಸೈ ನೇಮಕಾತಿ ಹಗರಣ ಸಂಬಂಧ ಇದುವರೆಗೂ ಬಂಧನಕ್ಕೆ ಒಳಗಾಗಿರುವ 51 ಅಭ್ಯರ್ಥಿಗಳಿಗೆ ಮುಂದಿನ ದಿನಗಳಲ್ಲಿ ಅವಕಾಶ ಸಿಗದಂತೆ ತಡೆಯಲು ಅವರ ಆಧಾರ್ ಸಂಖ್ಯೆ ಆಧರಿಸಿ ರಾಜ್ಯ ಪೊಲೀಸ್ ನೇಮಕಾತಿ ವಿಭಾಗ ನಿರ್ಬಂಧ ವಿಧಿಸಿದೆ.
ಈ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಸಿಐಡಿಯಿಂದ ಈಗಾಗಲೇ ಬಂಧಿತ ಅಭ್ಯರ್ಥಿಗಳ ಮಾಹಿತಿ ಪಡೆದಿರುವ ಪೊಲೀಸ್ ನೇಮಕಾತಿ ವಿಭಾಗ, ಅಭ್ಯರ್ಥಿಗಳಿಗೆ ಭವಿಷ್ಯದಲ್ಲಿ ಅವಕಾಶ ದೊರೆಯದಂತೆ ತಡೆಯಲು ಅವರ ಆಧಾರ್ ಸಂಖ್ಯೆಯನ್ನು ಇಲಾಖೆಯ ವೆಬ್‍ಸೈಟ್‍ಗೆ ಲಿಂಕ್ ಮಾಡಿದೆ. ಇದರಿಂದಾಗಿ ಭವಿಷ್ಯದ ನೇಮಕಾತಿಗಳಿಗೆ ಆ ಅಭ್ಯರ್ಥಿಗಳ ಅರ್ಜಿಯೇ ಸ್ವೀಕೃತವಾಗದಂತೆ ನಿರ್ಬಂಧಿಸಲಾಗಿದೆ.
ಯಾವುದೇ ಹುದ್ದೆಯ ನೇಮಕಾತಿಯಲ್ಲಿ ಅರ್ಜಿ ಸಲ್ಲಿಸುವಾಗ ಆಧಾರ್ ನಂಬರ್ ನೀಡುವುದು ಕಡ್ಡಾಯವಾಗಿದೆ. ಆದುದರಿಂದ ಆರೋಪಿತ ಅಭ್ಯರ್ಥಿಗಳ ಅರ್ಜಿ ಸ್ವೀಕೃತವಾಗುವುದಿಲ್ಲ. ಭವಿಷ್ಯದಲ್ಲಿ ಅಕ್ರಮದಲ್ಲಿ ತೊಡಗುವವರಿಗೂ ಈ ಮೂಲಕ ಖಡಕ್ ಸಂದೇಶ ರವಾನೆಯಾಗಲಿದೆ ಎಂದು ಪೊಲೀಸ್ ನೇಮಕಾತಿ ವಿಭಾಗದ ಅಧಿಕಾರಿಯೊಬ್ಬರು ಮಾಹಿತಿ ಹಂಚಿಕೊಂಡಿದ್ದಾರೆ.