ಹಾಸನ: ಉದ್ಯಮಿ ಅಪಹರಿಸಿ ಹತ್ಯೆ ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Update: 2023-02-11 14:55 GMT

ಹಾಸನ. ಫೆ.11: ಹಾಸನದ ಉದ್ಯಮಿಯೋರ್ವನನ್ನು ಅಪಹರಿಸಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.  

ನವೀನ್ ಮತ್ತು ಸಾಗರ್ ಬಂಧಿತ ಆರೋಪಿಗಳು ಎಂದು ಎಸ್ಪಿ ಹರಿರಾಮ್ ಶಂಕರ್ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. 

ಹಾಸನದ ಗವೇನಹಳ್ಳಿ ಬೈಪಾಸ್ ಸಮೀಪ ಸರ್ವಿಸ್ ಸ್ಟೇಷನ್ ನಡೆಸುತ್ತಿದ್ದ ಲಿಖಿತ್‌ ಗೌಡ (26) ಹತ್ಯೆಗೀಡಾದ ಯುವಕನಾಗಿದ್ದು, ಈತನ ಮೃತದೇಹ ಇತ್ತೀಚೆಗೆ ಹಾಸನ ತಾಲೂಕಿನ ಯೋಗೀಹಳ್ಳಿ ಅರಣ್ಯದಲ್ಲಿ ಪತ್ತೆಯಾಗಿತ್ತು.

ಘಟನೆ ವಿವರ: ಲಿಖಿತ್‌ ಗೌಡನ  ಸರ್ವೀಸ್ ಸ್ಟೇಷನ್‌ಗೆ ಟ್ಯಾಂಕರ್ ಸರ್ವೀಸ್‌ಗೆ ಬರುತ್ತಿದ್ದ ಟ್ಯಾಂಕರ್ ಚಾಲಕ ಸಾಗ‌ರ್ ನೊಂದಿಗೆ ಲಿಖಿತ್‌ ಗೌಡಗೆ ಸ್ನೇಹ ಬೆಳೆದಿದ್ದು, ಈ ವೇಳೆ ಲಿಖಿತ್‌ಗೌಡನಿಂದ ಸಾಗರ್ ಎಂಬವರು 2.5 ಲಕ್ಷ ರೂ. ಸಾಲ ಪಡೆದಿದ್ದ ಎನ್ನಲಾಗಿದೆ. ಇತ್ತೀಚೆಗೆ ಹಣ ವಾಪಸ್‌ ಕೇಳಿದಕ್ಕೆ ಇಬ್ಬರ ನಡುವೆ ಜಗಳ ನಡೆದಿತ್ತು ಎನ್ನಲಾಗಿದೆ. ಫೆ.5ರಂದು ಸಂಜೆ 6:30ರ ಸುಮಾರಿಗೆ ಹಣ ಕೊಡುವುದಾಗಿ ಸಾಗರ್ ಹಾಗೂ ಸ್ನೇಹಿತರು ಓಮಿನಿ ಕಾರಿನಲ್ಲಿ ಲಿಖಿತ್‌ ಗೌಡನನ್ನು ಕರೆದುಕೊಂಡು ಹೋದರು. ಇದಾದ ಬಳಿಕ ಅಂದಿನಿಂದಲೂ ಎಲ್ಲರ ಫೋನ್ ಸ್ವಿಚ್ ಆಫ್ ಆಗಿದೆ ಎಂದು ಲಿಖಿತ್‌ ಗೌಡನ ಪತ್ನಿ ಹಾಗೂ ಪೋಷಕರು ಲಿಖಿತ್ ಗೌಡ ಪತ್ತೆ ಮಾಡಿಕೊಡುವಂತೆ ಕೆ.ಆರ್. ಪುರಂ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. 

ಕಾಡಿನಲ್ಲಿ ಮೃತದೇಹ ಪತ್ತೆ: ಕುಟುಂಬಸ್ಥರ ದೂರಿನನ್ವಯ ಕೆಲವು ಮಾಹಿತಿಗಳ ಆಧಾರದಲ್ಲಿ ನೂರಾರು ಪೊಲೀಸರು ಕಾಡು ಪ್ರದೇಶದಲ್ಲಿ ಹುಡುಕಿದ್ದು, ಅಲ್ಲಿ  ಫೆ.8ರಂದು ಮೃತದೇಹ ಪತ್ತೆಯಾಗಿತ್ತು. 

Similar News