×
Ad

ಜಮೀನಿಗೆ ಪರಿಹಾರ ನೀಡದ ಸರಕಾರದ ವಿರುದ್ಧ ಹೈಕೋರ್ಟ್ ಅಸಮಾಧಾನ

Update: 2023-02-13 00:17 IST

ಬೆಂಗಳೂರು: ಖಾಸಗಿಯವರಿಗೆ ಸೇರಿದ ಭೂಮಿಯನ್ನು ಹಲವು ವರ್ಷಗಳ ಹಿಂದೆ ಸ್ವಾಧೀನಪಡಿಸಿಕೊಂಡು ಪರಿಹಾರ ನೀಡದ ಕೆಐಎಡಿಬಿ ಧೋರಣೆಗೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. 

ವ್ಯಕ್ತಿಯೊಬ್ಬರಿಗೆ ಸೇರಿದ ಜಮೀನನ್ನು ಸ್ವಾಧೀನಪಡಿಸಿಕೊಂಡು 15 ವರ್ಷ ಕಳೆದರೂ ಪರಿಹಾರ ನೀಡದ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ನಡೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಹೈಕೋರ್ಟ್, ಅರ್ಜಿದಾರರಿಗೆ 8 ವಾರಗಳಲ್ಲಿ ಬಡ್ಡಿಸಮೇತ ಪರಿಹಾರ ಮೊತ್ತ ಪಾವತಿಸಲು ಸೂಚಿಸಿದೆ.

ತಮಗೆ ಸೇರಿದ ಭೂಮಿಯನ್ನು ಕೈಗಾರಿಕಾ ಪ್ಲ್ಯಾಟ್‍ಗಳನ್ನಾಗಿ ಮಾಡಲು ಕೆಐಎಡಿಬಿ ಸ್ವಾಧೀನಪಡಿಸಿಕೊಂಡಿದೆ. ಆದರೆ, ಈವರೆಗೂ ಭೂ ಪರಿಹಾರ ನೀಡಿಲ್ಲ ಎಂದು ಆರೋಪಿಸಿ ಬೆಂಗಳೂರಿನ ನಿವಾಸಿಗಳಾದ ಎಂ.ವಿ.ಗುರುಪ್ರಸಾದ್ ಮತ್ತು ನಂದಿನಿ ಎಂಬವರು ಹೈಕೋರ್ಟ್ ಮೆಟ್ಟಿಲೇರಿದ್ದರು. 

ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠವು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಮತ್ತು ಅದರ ಅಧಿಕಾರಿಗಳ ನಡತೆ ನ್ಯಾಯಸಮ್ಮತ ಮಾನದಂಡಕ್ಕೆ ಅನುಗುಣವಾಗಿಲ್ಲ. ಈ ನಡವಳಿಕೆಯು ಸಂವಿಧಾನಕ್ಕೆ ವಿರುದ್ಧವಾಗಿ ಊಳಿಗಮಾನ್ಯ ಧೋರಣೆಯ ಸಂಕೋಲೆಗಳನ್ನು ಬಲಪಡಿಸುವಂತಿದೆ ಎಂದು ನ್ಯಾಯಪೀಠವು ತಿಳಿಸಿತು.

ಕೆಐಎಡಿಬಿ ನಡೆ ಸಂವಿಧಾನದ ಪರಿಚ್ಛೇದ 300ಎ ಅಡಿಯಲ್ಲಿ ಲಭ್ಯವಿರುವ ಆಸ್ತಿ ಹಕ್ಕು ಉಲ್ಲಂಘಿಸಿದಂತಾಗಿದೆ. ಕಲ್ಯಾಣ ರಾಜ್ಯದ ಉದ್ದೇಶವನ್ನೇ ಕಸಿದುಕೊಂಡಂತಾಗಿದೆ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ. 

Similar News