ಅಮಾನವೀಯ | ಚಾಮರಾಜನಗರದಲ್ಲಿ ಶವ ಸಂಸ್ಕಾರಕ್ಕೂ ಅಡ್ಡಿಯಾದ ಬಹಿಷ್ಕಾರ
ಪೊಲೀಸ್ ಮೊರೆ ಹೋದ ಮೃತರ ಕುಟುಂಬಸ್ಥರು
ಚಾಮರಾಜನಗರ, ಫೆ.13: ಸುಮಾರು 5 ವರ್ಷಗಳಿಂದ ತನ್ನದೇ ಸಮುದಾಯದಿಂದ ಬಹಿಷ್ಕರಿಸಲ್ಪಟ್ಟ ಕುಟುಂಬವೊಂದರಲ್ಲಿ ವ್ಯಕ್ತಿಯೋರ್ವ ಮೃತಪಟ್ಟಿದ್ದು, ಅಂತ್ಯ ಸಂಸ್ಕಾರಕ್ಕೆ ಗ್ರಾಮದ ಸಮುದಾಯದವರು ಬಾರದಿರುವ ಅಮಾನವೀಯ ಘಟನೆ ಚಾಮರಾಜ ನಗರದ ಗ್ರಾಮವೊಂದರಲ್ಲಿ ನಡೆದಿದೆ. ಈ ನಡುವೆ ಶವ ಸಂಸ್ಕಾರಕ್ಕೆ ತೊಂದರೆ ಕೊಡುತ್ತಿದ್ದಾರೆ ಎಂದು ಮೃತರ ಕುಟುಂಬಸ್ಥರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಜಿಲ್ಲೆಯ ನಾಗವಳ್ಳಿ ಎಂಬ ಗ್ರಾಮದಲ್ಲಿ ಈ ಅಮಾನವೀಯ ಘಟನೆ ನಡೆದಿದೆ. ಗ್ರಾಮದ ರಂಗಶೆಟ್ಟಿ(65) ಎಂಬವರು ರವಿವಾರ ಮೃತಪಟ್ಟಿದ್ದಾರೆ. ಆದರೆ ರಂಗಶೆಟ್ಟಿಯವರ ಕುಟುಂಬವನ್ನು 5 ವರ್ಷಗಳ ಹಿಂದೆ ಗ್ರಾಮದಿಂದ ಬಹಿಷ್ಕರಿಸಿರುವ ಕಾರಣ ಶವ ಸಂಸ್ಕಾರಕ್ಕೆ ಉಪ್ಪಾರ ಸಮುದಾಯದ ಜನರು ಆಗಮಿಸಿಲ್ಲ ಎಂದು ತಿಳಿದುಬಂದಿದೆ.
ರಂಗಶೆಟ್ಟಿ ಉಪ್ಪಾರ ಸಮುದಾಯಕ್ಕೆ ಸೇರಿದವರಾಗಿದ್ದಾರೆ. 5 ವರ್ಷಗಳ ಹಿಂದೆ ಜಮೀನಿನ ವಿಚಾರವಾಗಿ ತಗಾದೆಯ ಹಿನ್ನೆಲೆಯಲ್ಲಿ ರಂಗಶೆಟ್ಟಿ ಕುಟುಂಬಕ್ಕೆ ಸಮುದಾಯದವರು ನ್ಯಾಯ ಪಂಚಾಯಿತಿಯಲ್ಲಿ ಬಹಿಷ್ಕಾರ ಹಾಕಿದ್ದರು. ಈ ಕಾರಣದಿಂದ ರಂಗಶೆಟ್ಟಿ ಕುಟುಂಬವು ಮೂರು ವರ್ಷಗಳಿಂದ ತೋಟದ ಮನೆಯಲ್ಲೇ ವಾಸವಿದೆ.
ರವಿವಾರ ರಂಗಶೆಟ್ಟಿ ಮೃತಪಟ್ಟಿದ್ದು, ವಿಷಯ ತಿಳಿದು 20-25 ಮಂದಿ ಹತ್ತಿರದ ಸಂಬಂಧಿಕರಷ್ಟೇ ಮೃತರ ಅಂತಿಮ ದರ್ಶನ ಪಡೆಯಲು ಆಗಮಿಸಿದ್ದಾರೆ. ಗ್ರಾಮದ ಸಮುದಾಯದ ಜನರು ಮೃತರ ಅಂತಿಮ ದರ್ಶನ ಪಡೆಯಲು ಬಂದಿಲ್ಲ ಎಂದು ರಂಗಶೆಟ್ಟಿಯ ತಮ್ಮ ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಮೃತದೇಹವನ್ನು ತೋಟದ ಮನೆಯಲ್ಲೇ ಇಟ್ಟಿರುವ ಕುಟುಂಬಸ್ಥರು, ಸಮುದಾಯದ ಬಹಿಷ್ಕಾರದ ವಿರುದ್ಧ ನಗರದ ಪೂರ್ವ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.