'ಆರು ಪಥದ ಹೆದ್ದಾರಿಯನ್ನು ಹತ್ತು ಪಥಗಳೆಂದು' ಟ್ವೀಟ್‌ ಮಾಡಿ ನಗೆಪಾಟಲಿಗೀಡಾದ ಸಿಎಂ ಬೊಮ್ಮಾಯಿ

Update: 2023-02-13 10:18 GMT

ಬೆಂಗಳೂರು: ಶುಕ್ರವಾರ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ರಾಜ್ಯದಲ್ಲಿ ಸುಧಾರಿತ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ ಎಂಬುದನ್ನು ಎತ್ತಿ ತೋರಿಸಲು ಒಂದು ವಿಡಿಯೊವನ್ನು ಟ್ವೀಟ್ ಮಾಡಿದ್ದರು. ಆದರೆ, ಅವರು ಆ ವಿಡಿಯೊದಲ್ಲಿ ಬೆಂಗಳೂರಿನಿಂದ ಮೈಸೂರಿಗೆ ಸಂಪರ್ಕಿಸುವ ನೂತನವಾಗಿ ನಿರ್ಮಾಣವಾಗಿರುವ ಹತ್ತು ಪಥದ ರಸ್ತೆ ಎಂದು ಆ ವಿಡಿಯೊ ಕುರಿತು ಉಲ್ಲೇಖಿಸಿದ್ದರು. ಆದರೆ, ಆ ವಿಡಿಯೊದಲ್ಲಿ ಕೇವಲ ಆರು ಪಥ ಮಾತ್ರ ಕಂಡು ಬಂದಿರುವುದರಿಂದ ಅವರ ಪ್ರತಿಪಾದನೆಯು ಸಾಮಾಜಿಕ ಮಾಧ್ಯಮಗಳಲ್ಲಿ ತಮಾಷೆಯ ವಸ್ತುವಾಗಿ ಬದಲಾಗಿದೆ.

ಡ್ರೋಣ್‌ನಲ್ಲಿ ಸೆರೆ ಹಿಡಿಯಲಾಗಿರುವ ವಂದೇ ಭಾರತ್ ಹೆದ್ದಾರಿಯ ವಿಡಿಯೊ ತುಣುಕನ್ನು ಪೋಸ್ಟ್ ಮಾಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ, ಇದು ಭಾರತೀಯ ಜನತಾ ಪಕ್ಷದ ಆಳ್ವಿಕೆಯಲ್ಲಿ ಕರ್ನಾಟಕವು ಸಾಧಿಸಿರುವ ಅಭೂತಪೂರ್ವ ಪ್ರಗತಿಗೆ ಸಾಕ್ಷಿ ಎಂದು ಪ್ರತಿಪಾದಿಸಿದ್ದರು.

ಈ ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದ ಪ್ರಧಾನಿ ನರೇಂದ್ರ ಮೋದಿ, "ನಮ್ಮ ಜನತೆ ಸಾಧ್ಯವಿರುವ ಎಲ್ಲ ಅತ್ಯುತ್ತಮ ಮೂಲಸೌಕರ್ಯ ಪಡೆಯಲು ಅರ್ಹರಾಗಿದ್ದು, ನಮ್ಮ ಸರ್ಕಾರವು ಅದನ್ನು ಒದಗಿಸಲು ಕಠಿಣವಾಗಿ ಪ್ರಯತ್ನಿಸಲಿದೆ" ಎಂದು ಹೇಳಿದ್ದರು. ಆದರೆ, ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೊ ನೋಡಿದ ಕೆಲವು ಬಳಕೆದಾರರು, ಉಳಿದ ನಾಲ್ಕು ಪಥಗಳು ಎಲ್ಲಿ ಹೋದವು ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. 

ಹಲವಾರು ಮಂದಿ ಶೇ. 40ರಷ್ಟು ಕಮಿಷನ್ ಕಳೆದ ನಂತರ ಜನರು ಇಷ್ಟನ್ನೇ ಪಡೆಯಲು ಸಾಧ್ಯ ಎಂದು ವ್ಯಂಗ್ಯ ಮಾಡಿದ್ದಾರೆ. ಗುತ್ತಿಗೆದಾರರು ಗುತ್ತಿಗೆಯನ್ನು ಪಡೆಯಲು ಅಷ್ಟು ಮೊತ್ತದ ಕಮಿಷನ್ ಅನ್ನು ಜನಪ್ರತಿನಿಧಿಗಳಿಗೆ ನೀಡಬೇಕಿದೆ ಎಂದೂ ಕೆಲವರು ಲೇವಡಿ ಮಾಡಿದ್ದಾರೆ.

ಕೆಂಗೇರಿಯಿಂದ ಮೈಸೂರಿನವರೆಗೆ ನಿರ್ಮಿಸಲಾಗಿರುವ, ರೂ. 8,500 ಕೋಟಿ ವೆಚ್ಚದ ಈ ಹೆದ್ದಾರಿಯು ಮಾರ್ಚ್‌ನಲ್ಲಿ ಉದ್ಘಾಟನೆಗೊಳ್ಳಲಿದ್ದು, ಸದ್ಯ ಬೆಂಗಳೂರಿನಿಂದ ಮೈಸೂರಿಗೆ ಪ್ರಯಾಣಿಸಲು ತಗುಲುತ್ತಿರುವ 3.5 ಗಂಟೆಯ ಅವಧಿಯನ್ನು 1.5 ಗಂಟೆಗೆ ತಗ್ಗಿಸುವ ಉದ್ದೇಶ ಹೊಂದಿದೆ.

.

Similar News