ಚುನಾವಣೆಗಾಗಿ ಮೋರಿ ಉದ್ಘಾಟನೆಗೂ ರಾಜ್ಯಕ್ಕೆ ಓಡೋಡಿ ಬರುವ ಮೋದಿ: ಕಾಂಗ್ರೆಸ್ ಟೀಕೆ

''ಏರ್ ಶೋವನ್ನು ಹೈಜಾಕ್ ಮಾಡಲು ಯತ್ನಿಸಿದ್ದನ್ನು ಕನ್ನಡಿಗರು ಮರೆತಿಲ್ಲ''

Update: 2023-02-13 13:06 GMT

ಬೆಂಗಳೂರು: ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ಉದ್ಘಾಟನೆ ಮಾಡಲು ಬೆಂಗಳೂರಿಗೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿರೋಧ ಪಕ್ಷ ಕಾಂಗ್ರೆಸ್ @INCKarnataka ತರಾಟೆಗೆ ತೆಗೆದುಕೊಂಡಿದೆ.

ಈ ಸಂಬಂಧ ಸೋಮವಾರ ಸರಣಿ ಟ್ವೀಟ್ ಗಳನ್ನು ಮಾಡಿರುವ ಕಾಂಗ್ರೆಸ್, ''ಚುನಾವಣೆಗಾಗಿ ಮೋರಿ ಉದ್ಘಾಟನೆಗೂ ಕರ್ನಾಟಕಕ್ಕೆ ಓಡೋಡಿ ಬರುವ ಮೋದಿಯವರು ಬೆಂಗಳೂರಿನ ಏರ್ ಶೋ ಉದ್ಘಾಟನೆಗೆ ಬಂದಿದ್ದಾರೆ. ಇದೇ ಏರ್ ಶೋವನ್ನು ಉತ್ತರ ಪ್ರದೇಶಕ್ಕೆ ಸ್ಥಳಾಂತರಿಸಲು ಪ್ರಯತ್ನಿಸಿದ್ದನ್ನು ಕನ್ನಡಿಗರು ಮರೆತಿಲ್ಲ ನರೇಂದ್ರ ಮೋದಿ ಅವರೇ. ಏರ್ ಶೋವನ್ನೂ ಹೈಜಾಕ್ ಮಾಡಲು ಯತ್ನಿಸಿ ಈಗ ಉದ್ಘಾಟಿಸಲು ನೈತಿಕತೆ ಇದೆಯೇ? '' ಎಂದು ಪ್ರಶ್ನೆ ಮಾಡಿದೆ. 

''ಕರ್ನಾಟಕದ ಹೆಮ್ಮೆಯಾದ HALನೊಂದಿಗಿದ್ದ ರಫೆಲ್ ಒಪ್ಪಂದವನ್ನು ಬದಲಿಸಿ ಗೆಳೆಯರ ಅನುಕೂಲಕ್ಕೆ ದಾರೆ ಎರೆದು ಕೊಟ್ಟಿದ್ದ ನರೇಂದ್ರ ಮೋದಿ ಅವರೇ, ತಾವು HALಗೆ ಎಸಗಿದ ದ್ರೋಹವನ್ನು ಕನ್ನಡಿಗರು ಮರೆತಿಲ್ಲ, ಇಂದು ಅದ್ಯಾವ ನೈತಿಕತೆಯಲ್ಲಿ ಏರ್ ಶೋ ಉದ್ಘಾಟಿಸಿದಿರಿ? ಕರ್ನಾಟಕಕ್ಕೆ, ಕನ್ನಡಿಗರಿಗೆ ಮೋದಿ ಕೊಡುಗೆ - ದ್ರೋಹ, ಅನ್ಯಾಯ ಮಾತ್ರ'' ಎಂದು ವಾಗ್ದಾಳಿ ನಡೆಸಿದೆ. 

''ಭದ್ರಾವತಿಯು ಕಬ್ಬಿಣ ಅದಿರು ಸಂಪತ್ಭರಿತ ಬಳ್ಳಾರಿಯಿಂದ ಕೇವಲ 250 ಕಿಮೀ ನಷ್ಟು ಅಂತರದಲ್ಲಿದ್ದರೂ ಈ ಕಾರಣ ನೀಡಲಾಗಿದೆ. ಗಣಿ ಪರವಾನಗಿಯನ್ನು VISLಗೆ ಅಕ್ಟೋಬರ್ 2011ರಲ್ಲಿಯೇ ನೀಡಲಾಗಿದ್ದರೂ, ಈ ಮೋದಿ ಸರ್ಕಾರ ಈವರೆಗೂ ಏನನ್ನೂ ಮಾಡಿಲ್ಲಾ'' ಎಂದು ಆರೋಪಿಸಿದೆ.  

''ಚುನಾವಣೆಗಾಗಿ 'ಕರ್ನಾಟಕ ಟೂರಿಸ್ಟ್' ಆಗಿರುವ ಮೋದಿಯವರು ಕರೋನಾ ಸಂದರ್ಭದಲ್ಲಿ ರಾಜ್ಯಕ್ಕೆ ಮಾಡಿದ ದ್ರೋಹವನ್ನ ಜನ ಮರೆತಿಲ್ಲ. ಆಕ್ಸಿಜನ್ ಅನ್ಯಾಯ, ರೆಮಿಡಿಸಿವಿರ್ ಅನ್ಯಾಯ, ಲಸಿಕೆ ಅನ್ಯಾಯ, ಪರಿಹಾರದ ಅನ್ಯಾಯ ರಾಜ್ಯದ ಕೋವಿಡ್ ಮೃತರ ಸಮಾಧಿ ಮೇಲೆ ನಿಂತು ಚುನಾವಣಾ ಭಾಷಣ ಮಾಡುವ ಮೋದಿಯವರಿಗೆ ನಾಚಿಕೆಯಾಗಬೇಕು'' ಎಂದು ಕಾಂಗ್ರೆಸ್ ಕಿಡಿಕಾರಿದೆ. 

Similar News