ನಿಮಗೆ ಸಾಧ್ಯವಾಗದಿದ್ದರೆ, ‘ಹುಲಿ ಮದುವೆ’ಗೆ ಅವಕಾಶ ಕೊಡಿ: ಸರಕಾರದ ವಿರುದ್ಧ ಕೆ.ಜಿ.ಬೋಪಯ್ಯ ಆಕ್ರೋಶ

ಸದನದಲ್ಲಿ ಪ್ರಸ್ತಾಪವಾದ ಹುಲಿ ದಾಳಿ ವಿಚಾರ

Update: 2023-02-13 11:38 GMT

ಬೆಂಗಳೂರು, ಫೆ. 13: ‘ಹುಲಿ ನಿಯಂತ್ರಣ ಮಾಡಲು ನಿಮಗೆ(ಸರಕಾರಕ್ಕೆ) ಸಾಧ್ಯವಾಗದಿದ್ದರೆ, ನಾವು ನಿಯಂತ್ರಣ ಮಾಡಿಕೊಳ್ಳುತ್ತೇವೆ. ಕೊಡಗಿನವರಿಗೆ ಹುಲಿ ಮದುವೆ ಮಾಡಿಕೊಳ್ಳುವುದು ಗೊತ್ತು. ಹೀಗಾಗಿ ಅದಕ್ಕೆ ಅವಕಾಶ ಕೊಡಿ’ ಎಂದು ಬಿಜೆಪಿ ಹಿರಿಯ ಸದಸ್ಯ ಕೆ.ಜಿ.ಬೋಪಯ್ಯ ಸರಕಾರದ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.

ಸೋಮವಾರ ವಿಧಾನಸಭೆಯ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿ ಬೋಪಯ್ಯ, ‘ಕೇರಳ ಗಡಿಭಾಗ ವಿರಾಜಪೇಟೆ ತಾಲೂಕಿನ ಕೆ.ಬಾಡಗ ಗ್ರಾಮದಲ್ಲಿ ನಿನ್ನೆ ಸಂಜೆ 12 ವರ್ಷದ ಬಾಲಕನನ್ನು ಕೊಂದು ತಿಂದಿದೆ. ಇಂದು(ಫೆ.13) ಬೆಳಗಿನಜಾವ ಪುನಃ ಬಾಲಕನ ತಾತನನ್ನು ಹುಲಿ ಕೊಂದಿದೆ. 24 ಗಂಟೆಗಳಲ್ಲಿ ಇಬ್ಬರನ್ನು ಹುಲಿ ಕೊಂದು ಹಾಕಿದ್ದು, ಇದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ’ ಎಂದು ದೂರಿದರು.

‘ನಿಮ್ಮ(ಸರಕಾರ) ಕೈಯಲ್ಲಿ ಆಗುವುದಿಲ್ಲ ಎಂದು ನಮಗೆ ಬಿಟ್ಟುಬಿಡಿ, ಹುಲಿ ನಿಯಂತ್ರಣ ಮಾಡುವುದು ನಮಗೆ ಗೊತ್ತು. ನಮ್ಮಲ್ಲಿ ಹುಲಿ ಮದುವೆ ಮಾಡಿಕೊಳ್ಳುವ ಪದ್ಧತಿ ಇದೆ. ಹೀಗಾಗಿ ನಾವು ಆ ಕೆಲಸಕ್ಕೆ ಮುಂದಾಗುವ ಮೊದಲು ಹುಲಿ ನಿಯಂತ್ರಣ ಮಾಡಬೇಕು. ನಾಗರಹೊಳೆ ಅಭಯಾರಣ್ಯ ವ್ಯಾಪ್ತಿಯಲ್ಲಿನ ಕೂಲಿ ಕಾರ್ಮಿಕರು ಕೈಯಲ್ಲಿ ಜೀವ ಹಿಡಿದು ಬದುಕಬೇಕಿದೆ’ ಎಂದು ಬೋಪಯ್ಯ ಗಮನ ಸೆಳೆದರು. 

ಇದನ್ನೂ ಓದಿಕೊಡಗು: ಹುಲಿ ದಾಳಿಯಿಂದ ಮತ್ತೋರ್ವ ಮೃತ್ಯು, ಕಳೆದ 24 ಗಂಟೆಗಳಲ್ಲಿ ಇಬ್ಬರನ್ನು ಬಲಿ ಪಡೆದ ವ್ಯಾಘ್ರ

‘ಅರಣ್ಯಾಧಿಕಾರಿಗಳ ನಿರ್ಲಕ್ಷ್ಯಕ್ಕೆ ಇಬ್ಬರು ಕೂಲಿ ಕಾರ್ಮಿಕರು ಬಲಿಯಾಗಿದ್ದಾರೆ. ಹೀಗಾಗಿ ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳನ್ನು ಕೂಡಲೇ ಅಮಾನತ್ತು ಮಾಡಬೇಕು. ಮೃತಪಟ್ಟವರಿಗೆ ಸೂಕ್ತ ಪರಿಹಾರ ನೀಡುವುದರ ಜೊತೆಗೆ ಕಾಡಂಚಿನ ಗ್ರಾಮಗಳಲ್ಲಿ ವನ್ಯಜೀವಿಗಳ ಹಾವಳಿ ತಡೆಗೆ ಸರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಬೋಪಯ್ಯ ಆಗ್ರಹಿಸಿದರು.

ಇದಕ್ಕೆ ಧ್ವನಿಗೂಡಿಸಿದ ಬಿಜೆಪಿ ಸದಸ್ಯ ಅಪ್ಪಚ್ಚು ರಂಜನ್, ‘ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಕೃತ್ಯ ನಡೆದಿದ್ದು, ಕೂಡಲೇ ಡಿಎಫ್‍ಒ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ಕಾಂಗ್ರೆಸ್ ಸದಸ್ಯ ಎಚ್.ಪಿ.ಮಂಜುನಾಥ್, ‘ಮೃತಪಟ್ಟ ಬಾಲಕ ಹಾಗೂ ಆತನ ತಾತ ನನ್ನ ಕ್ಷೇತ್ರದವರು. ಕೂಲಿ ಕೆಲಸಕ್ಕೆ ತೆರಳಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಈ ಸುದ್ದಿ ಕೇಳಿದ ಆಘಾತದಿಂದ ಅವರ ಅಜ್ಜಿಯೂ ತೀರಿಕೊಂಡಿದ್ದಾರೆ’ ಎಂದು ಗಮನ ಸೆಳೆದರು.

ಹುಲಿ ಯಾವ ತಾಲೂಕಿನದ್ದು?: ‘ಹುಲಿ ನಿಮ್ಮ ತಾಲೂಕಿನದ್ದೋ ಅಥವಾ ಬೇರೆ ತಾಲೂಕಿನದ್ದೋ’ ಎಂದು ಸ್ಪೀಕರ್ ಕಾಗೇರಿ ಪ್ರಶ್ನಿಸಿದರು. ಬಳಿಕ ಮಾತು ಮುಂದುವರಿಸಿದ ಮಂಜುನಾಥ್, ‘ಹುಲಿ ಸರಕಾರದ್ದು, ಆದರೆ ಸತ್ತವರು ನಮ್ಮ ತಾಲೂಕಿನವರು. ಇದರಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಇದೆ. ಹೀಗಾಗಿ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು. ಜೊತೆಗೆ ಅರಣ್ಯದಂಚಿನ ಗ್ರಾಮಗಳಲ್ಲಿನ ವನ್ಯಜೀವಿಗಳ ಹಾವಳಿ ತಡೆಗೆ ಕ್ರಮ ವಹಿಸಬೇಕು’ ಎಂದು ಆಗ್ರಹಿಸಿದರು.

ಬಳಿಕ ಸರಕಾರದ ಪರವಾಗಿ ಪ್ರತಿಕ್ರಿಯಿಸಿದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ‘ಯಾವುದೇ ಹಂತದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಕಂಡು ಬಂದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಮಿಸಿದ ಬಳಿಕ ಅವರೊಂದಿಗೆ ಸಮಾಲೋಚನೆ ನಡೆಸಿ, ಇಲಾಖೆಯಿಂದ ಮಾಹಿತಿ ಪಡೆದು ಸದನಕ್ಕೆ ಸೂಕ್ತ ಉತ್ತರ ನೀಡಲಾಗುವುದು’ ಎಂದು ಭರವಸೆ ನೀಡಿದರು.

Similar News