ಮೊಟ್ಟೆ ಸೇವಿಸದ ಮಕ್ಕಳಿಗೆ ಬಾಳೆಹಣ್ಣು: ಸಚಿವ ಬಿ.ಸಿ.ನಾಗೇಶ್

Update: 2023-02-13 12:55 GMT

ಬೆಂಗಳೂರು, ಫೆ. 13: ರಾಜ್ಯದಲ್ಲಿ 1ರಿಂದ 8ನೆ ತರಗತಿಯ ಮಕ್ಕಳಲ್ಲಿ ಅಪೌಷ್ಠಿಕ ಪ್ರಮಾಣ ನಿವಾರಣೆಗಾಗಿ ಮೊಟ್ಟೆ ಅಥವಾ ಮೊಟ್ಟೆ ಸೇವಿಸದ ಮಕ್ಕಳಿಗೆ ಬಾಳೆಹಣ್ಣು ಇಲ್ಲವೆ ಬೆಲ್ಲದಿಂದ ತಯಾರಿಸಿದ ಚಿಕ್ಕಿ(ಕಟ್ಲೀಸ್) ನೀಡುವುದನ್ನು ಮುಂದುವರಿಸಲಾಗುವುದು ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ. 

ಸೋಮವಾರ ವಿಧಾನ ಪರಿಷತ್‍ನಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಜೆಡಿಎಸ್ ಸದಸ್ಯ ಕೆ.ಎ.ತಿಪ್ಪೇಸ್ವಾಮಿ ಕೇಳಿದ ಪ್ರಶ್ನೆಗೆ ಸಚಿವರು ಉತ್ತರಿಸಿ, ಶಿಕ್ಷಣ ತಜ್ಞರು ಸೇರಿ ಕೆಲವರಿಂದ ಮೊಟ್ಟೆಯ ಬದಲಾಗಿ ಸಸ್ಯಹಾರಿ ಆಹಾರ ನೀಡುವಂತೆ ಸಲಹೆ ನೀಡಿದ್ದರು. ಆದರೆ, ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ವರದಿ ಪ್ರಕಾರ ವಿದ್ಯಾರ್ಥಿಗಳಿಗೆ ಪೂರಕ ಪೌಷ್ಠಿಕಾಂಶ ರೂಪದಲ್ಲಿ ಮೊಟ್ಟೆ ಹಾಗೂ ಮೊಟ್ಟೆ ಸೇವಿಸದ ವಿದ್ಯಾರ್ಥಿಗಳಿಗೆ ಬಾಳೆಹಣ್ಣು ಅಥವಾ ಚಿಕ್ಕಿ ನೀಡಲಾಗುವುದು ಎಂದು ಹೇಳಿದರು.

ಸರಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಪೂರಕ ಪೌಷ್ಠಿಕಾಂಶದ ರೂಪದಲ್ಲಿ ಮೊಟ್ಟೆ ಹಾಗೂ ಬಾಳೆಹಣ್ಣು, ಚಿಕ್ಕಿಯನ್ನು ನೀಡಲು 2021-22ನೆ ಸಾಲಿನಿಂದ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

2021-22ನೆ ಸಾಲಿನಲ್ಲಿ ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ ಮತ್ತು ವಿಜಯಪುರ ಜಿಲ್ಲೆಯಲ್ಲಿ ಅನುಷ್ಠಾನ ಮಾಡಿದ ನಂತರ 2022-23ನೆ ಸಾಲಿನಲ್ಲಿ ಈ ಯೋಜನೆಯನ್ನು ರಾಜ್ಯದ ಎಲ್ಲ ಜಿಲ್ಲೆಗಳಿಗೆ ವಿಸ್ತರಿಸಲಾಗಿದೆ ಎಂದು ಹೇಳಿದರು.

2021-22ನೆ ಸಾಲಿನಲ್ಲಿ 14.44 ಲಕ್ಷ ವಿದ್ಯಾರ್ಥಿಗಳಿಗೆ 39.86 ಕೋಟಿ ಅನುದಾನ ಒದಗಿಸಿದ್ದು, 2022-23ನೆ ಸಾಲಿನಲ್ಲಿ 45.92 ಲಕ್ಷ ವಿದ್ಯಾರ್ಥಿಗಳಿಗೆ 126.75 ಕೋಟಿ ರೂ. ಅನುದಾನ ಒದಗಿಸಿ ಮಕ್ಕಳಲ್ಲಿ ಅಪೌಷ್ಠಿಕತೆ ದೂರ ಮಾಡಲು ಪೂರಕ ಪೌಷ್ಠಿಕಾಂಶ ಆಹಾರಗಳನ್ನು ನೀಡಲಾಗುತ್ತಿದೆ ಎಂದು ಅವರು ಹೇಳಿದರು. 

Similar News