ಮೂಡಿಗೆರೆ | ಮನೆ ಕಳ್ಳತನ ಪ್ರಕರಣ: ಮನೆ ಮಾಲಕನ ಸಹೋದರನನ್ನೇ ಠಾಣೆಗೆ ಕರೆದೊಯ್ದು ಥಳಿಸಿದ ಪೊಲೀಸರು; ಆರೋಪ

ಪೊಲೀಸರ ವಿರುದ್ಧ ಕ್ರಮಕ್ಕೆ ಕುಟುಂಬಸ್ಥರ ಆಗ್ರಹ

Update: 2023-02-13 14:32 GMT

ಮೂಡಿಗೆರೆ, ಫೆ.13: ಕಳ್ಳತನದ ಆರೋಪದ ದೂರಿನನ್ವಯ ಪಟ್ಟಣ ಠಾಣೆಯ ಪೊಲೀಸರು ಫೆ.9ರಂದು ತಾಲೂಕಿನ ದಾರದಹಳ್ಳಿ ಗ್ರಾಮದ ಮಂಜು ಅವರನ್ನು ಠಾಣೆಗೆ ಕರೆದೊಯ್ದು ಮನಬಂದಂತೆ ಥಳಿಸಿದ್ದಾರೆಂದು ಆರೋಪಿಸಿ ಹಲ್ಲೆಗೊಳಗಾದ  ಮಂಜು ಪತ್ನಿ ಪೊಲೀಸರ ವಿರುದ್ಧವೇ ವೃತ್ತ ನಿರೀಕ್ಷಕರಿಗೆ ದೂರು ನೀಡಿರುವ ಘಟನೆ ಸೋಮವಾರ ವರದಿಯಾಗಿದೆ.

ತಾಲೂಕಿನ ದಾರದಹಳ್ಳಿ ಗ್ರಾಮದಲ್ಲಿ ಕಳೆದ 3 ದಿನಗಳ ಹಿಂದೆ ಮನೆಯೊಂದರಲ್ಲಿ ಕಳ್ಳತನ ನಡೆದಿದ್ದು, ಈ ಸಂಬಂಧ ಮನೆ ಮಾಲಕ ವಿಶ್ವನಾಥ್ ಎಂಬವರು ಮೂಡಿಗೆರೆ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ಕೈಗೊಂಡ ಪೊಲೀಸರು ಮನೆಯ ಚೀಲಕ ಹಾಗೂ ಮನೆಯೊಳಗಿರುವ ಕೆಲ ವಸ್ತುಗಳ ಮೇಲಿರುವ ಹೆಬ್ಬೆರಳಿನ ಗುರುತು ಪರೀಕ್ಷೆ ನಡೆಸಿದಾಗ ಪಕ್ಕದ ಮನೆಯಲ್ಲಿಯೇ ವಾಸವಾಗಿದ್ದ ವಿಶ್ವನಾಥ್ ಸಹೋದರ ಮಂಜು ಅವರ 2 ಬೆರಳಚ್ಚಿನ ಗುರುತು ಮನೆ ಮುಂಭಾಗದ ಚಿಲಕದಲ್ಲಿ ಪತ್ತೆಯಾಗಿದೆ ಎನ್ನಲಾಗಿದೆ. ಈ ಹಿನ್ನೆಲ್ಲೆಯಲ್ಲಿ ಮಂಜು ಅವರನ್ನು ಠಾಣೆಗೆ ಕರೆದೊಯ್ದ ಪೊಲೀಸರು ಹಿಗ್ಗಾಮುಗ್ಗಾ ಥಳಿಸಿ, ನಂತರ ಮನೆಗೆ ಕಳುಹಿಸಿದ್ದಾರೆ. ಪೊಲೀಸರ ಪೆಟ್ಟು ತಿಂದು ಅಸ್ವಸ್ಥರಾಗಿದ್ದ ಮಂಜು ಅವರನ್ನು ಮೂಡಿಗೆರೆ ಎಂಜಿಎಂ ಆಸ್ಪತ್ರೆಗೆ ದಾಖಲಿಸಿದ್ದು, ಹೆಚ್ಚಿನ ಚಿಕಿತ್ಸೆಗೆ ಚಿಕ್ಕಮಗಳೂರು ನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಈ ಘಟನೆ ಸಂಬಂಧ ಮಂಜು ಅವರ ಪತ್ನಿ ಯಶೋಧ ಅವರು ಮೂಡಿಗೆರೆ ಸಿಪಿಐ ಅವರಿಗೆ ಸೋಮವಾರ ದೂರು ನೀಡಿ, ಸಂಬಂಧವಿಲ್ಲದ ವಿಚಾರಕ್ಕೆ ಸಹಿ ಹಾಕಬೇಕೆಂದು ಒತ್ತಾಯಿಸಿ ತನ್ನ ಪತಿ ಮಂಜು ಅವರನ್ನು ಮೂಡಿಗೆರೆ ಪೊಲೀಸರು ಠಾಣೆಗೆ ಕರೆದೊಯ್ದಿದ್ದರು. ಠಾಣೆಯಲ್ಲಿ ಪಿಎಸ್ಸೈ ಆದರ್ಶ, ಸಿಬ್ಬಂದಿ ಲೋಹಿತ್ ಮತ್ತು ವಸಂತ ಎಂಬವರ ಅವ್ಯಾಚ್ಯ ಶಬ್ಧಗಳಿಂದ ನಿಂದಿಸಿ ಬೂಟು ಕಾಲಿನಿಂದ ಎದೆಗೆ ಒದ್ದು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಇದರಿಂದ ನನ್ನ ಪತಿ ಮಂಜು ನಡೆದಾಡಲು ಸಾಧ್ಯವಾಗದೇ ಪರದಾಡುತ್ತಿದ್ದಾರೆ. ಪೊಲೀಸರ ಹಲ್ಲೆಯಿಂದ ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ. ಅವರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ರಕ್ಷಣೆ ನೀಡಬೇಕೆಂದು ಒತ್ತಾಯಿಸಿದ್ದಾರೆ.

[ಮಂಜು ಪತ್ನಿ ಯಶೋಧ ಮೂಡಿಗೆರೆ ಸಿಪಿಐಗೆ ನೀಡಿದ ದೂರಿನ ಪ್ರತಿ] 

ಮಂಜು ಪತ್ನಿ ಸಿಪಿಐಗೆ ದೂರು ನೀಡಿದ್ದರೂ ಇದುವರೆಗೂ ಪೊಲೀಸರ ವಿರುದ್ಧ ಯಾವುದೇ ಕ್ರಮಕೈಗೊಂಡಿಲ್ಲ ಎಂದು ತಿಳಿದು ಬಂದಿದೆ. ಈ ಮಧ್ಯೆ ಮನೆ ಕಳ್ಳತನ ಪ್ರಕರಣ ಸಂಬಂಧ ದೂರು ನೀಡಿದ್ದ ವಿಶ್ವನಾಥ್, ತನ್ನ ಸಹೋದರ ಕಳ್ಳತನ ಮಾಡಲು ಸಾಧ್ಯವೇ ಇಲ್ಲ. ನೈಜ ಕಳ್ಳರನ್ನು ಹುಡುಕಿಕೊಡಬೇಕೆಂದು ಪೊಲೀಸರನ್ನು ಒತ್ತಾಯಿಸಿದ್ದು, ಸಹೋದರನನ್ನು ವಿಚಾರಣೆ ನೆಪದಲ್ಲಿ ಠಾಣೆಗೆ ಕರೆದೊಯ್ದು ಹಲ್ಲೆ ಮಾಡಿರುವ ಪೊಲೀಸರು ಪ್ರಕರಣ ಮುಚ್ಚಿ ಹಾಕುವ ಎಲ್ಲಾ ತಂತ್ರ ನಡೆಸುತ್ತಿದ್ದಾರೆ. ಇದಕ್ಕೆ  ಜಿಲ್ಲಾ ವರಿಷ್ಠಾಧಿಕಾರಿ ಅವಕಾಶ ನೀಡಬಾರದು ಎಂದು ಒತ್ತಾಯಿಸಿದ್ದಾರೆ. 

Similar News