×
Ad

ಉಚಿತ ವಿದ್ಯುತ್ ನೀಡಿ ಎಸ್ಕಾಂಗಳನ್ನು ದಿವಾಳಿ ಮಾಡಲು ನಾವು ಸಿದ್ಧರಿಲ್ಲ: ಸಚಿವ ಸುನಿಲ್‍ ಕುಮಾರ್

Update: 2023-02-13 20:23 IST

ಬೆಂಗಳೂರು, ಫೆ.13: ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಉಚಿತ ವಿದ್ಯುತ್ ಯೂನಿಟ್ ನೀಡುವ ಭರವಸೆಗಳಿಂದಾಗಿ ಎಸ್ಕಾಂಗಳು ಈಗಾಗಲೇ ಸಾಲದಲ್ಲಿ ಸಿಲುಕಿವೆ. ರಾಜ್ಯ ಸರಕಾರ ಇನ್ನಷ್ಟು ಉಚಿತ ಯೂನಿಟ್ ಘೋಷಿಸಿ ಎಸ್ಕಾಂಗಳನ್ನು ದಿವಾಳಿ ಮಾಡಲು ಸಿದ್ಧರಿಲ್ಲ ಎಂದು ಇಂಧನ ಸಚಿವ ವಿ. ಸುನಿಲ್‍ಕುಮಾರ್ ತಿಳಿಸಿದ್ದಾರೆ. 

ಸೋಮವಾರ ಪರಿಷತ್‍ನಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಸದಸ್ಯ ಡಿ.ಎಸ್.ಅರುಣ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈ ಉಚಿತ ವಿದ್ಯುತ್ ಭರವಸೆಯಿಂದಾಗಿ ರಾಜ್ಯದ ಎಸ್ಕಾಂಗಳು ಮತ್ತು ಕೆಪಿಟಿಸಿಎಲ್‍ಗಳು 72 ಸಾವಿರ ಕೋಟಿ ರೂ.ಗಳಷ್ಟು ಸಾಲದ ಹೊರೆ ಹೊತ್ತಿವೆ ಎಂದು ಮಾಹಿತಿ ನೀಡಿದರು. 

ಹುಬ್ಬಳ್ಳಿಯ ಎಸ್ಕಾಂ ಮತ್ತು ಕೆಪಿಟಿಸಿಎಲ್ ನಡೆಸುವುದೇ ಕಷ್ಟ ಎನ್ನುವಂತಾಗಿತ್ತು. ನಮ್ಮ ಸರಕಾರ ಆಡಳಿತಕ್ಕೆ ಬಂದ ನಂತರ ಒಂದೇ ಬಾರಿಗೆ 12 ಸಾವಿರ ಕೋಟಿ ರೂ.ನೀಡಿ ಸಾಲದಿಂದ ಮೇಲೆತ್ತುವ ಕೆಲಸ ಮಾಡಲಾಗಿದೆ. ಭಾಗ್ಯಲಕ್ಷ್ಮಿ, ಕುಟೀರ ಜ್ಯೋತಿ ಯೋಜನೆಯಡಿ 40 ಯೂನಿಟ್‍ವರೆಗೂ ಉಚಿತ ವಿದ್ಯುತ್ ಅಮೃತ ಯೋಜನೆಯಡಿ 75ಯೂನಿಟ್ ಉಚಿತ ವಿದ್ಯುತ್ ನೀಡಲಾಗುತ್ತಿದೆ ಎಂದು ತಿಳಿಸಿದರು.

ಸರಕಾರ ನಿಗದಿಪಡಿಸಿರುವ ಉಚಿತ ಯೂನಿಟ್ ದಾಟಿದರೆ ಅಂತಹವರು ತಾವು ಬಳಸುವ ವಿದ್ಯುತ್‍ಗೆ ಹಣ ಪಾವತಿ ಮಾಡಬೇಕಾಗುತ್ತದೆ. ಅದರಲ್ಲಿ ಅಮೃತ್ ಯೋಜನೆಯಡಿ ಘೋಷಿಸಿರುವ 75 ಯೂನಿಟ್ ವಿದ್ಯುತ್‍ಗೆ ಫಲಾನುಭವಿಗಳು ಹಣ ಪಾವತಿ ಮಾಡಿ ಅದನ್ನು ನೇರ ನಗದು ವರ್ಗಾವಣೆ ಮೂಲಕ ಫಲಾನುಭವಿಗಳು ವಾಪಸ್ ಪಡೆಯುವ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು. 

ಅಗತ್ಯಕ್ಕಿಂತ ಹೆಚ್ಚಿನ ವಿದ್ಯುತ್ ಬಳಸಿದ ಬಡವರು ಸೇರಿದಂತೆ ಎಲ್ಲರೂ ತಾವು ಬಳಸಿದ ವಿದ್ಯುತ್‍ಗೆ ಬಿಲ್ ಪಾವತಿ ಮಾಡಬೇಕು. ಈ ವಿಷಯದಲ್ಲಿ ಸದನ ಸಹಕಾರ ನೀಡಬೇಕು. ಭಾಗ್ಯಲಕ್ಷ್ಮಿ ಮತ್ತು ಕುಟೀರ ಜ್ಯೋತಿ ಯೋಜನೆಯಡಿ 40 ಯೂನಿಟ್ ಉಚಿತ ವಿದ್ಯುತ್ ನೀಡುವ ಯೋಜನೆಯಡಿ 26.80 ಲಕ್ಷ ಫಲಾನುಭವಿಗಳಿದ್ದಾರೆ. ಅಮೃತ ಯೋಜನೆಯಡಿ 24 ಫಲಾನುಭವಿಗಳಿದ್ದಾರೆ ಎಂದು ತಿಳಿಸಿದರು.

Similar News