×
Ad

ಅಮಾಯಕನಿಗೆ ಥಳಿಸಿದ ಆರೋಪ: ಮೂಡಿಗೆರೆ ಠಾಣೆಯ ಇಬ್ಬರು ಪೊಲೀಸ್ ಸಿಬ್ಬಂದಿಯ ಅಮಾನತು

ಎಸ್ಸೈ ವಿರುದ್ಧ ಇಲಾಖಾ ತನಿಖೆಗೆ ಜಿಲ್ಲಾ ಎಸ್ಪಿ ಆದೇಶ

Update: 2023-02-14 11:12 IST

ಚಿಕ್ಕಮಗಳೂರು, ಫೆ.14: ಕಳ್ಳತನ ಪ್ರಕರಣವೊಂದಕ್ಕೆ ಸಂಬಂಧಿಸಿ ಯುವಕನೋರ್ವನನ್ನು ಠಾಣೆಗೆ ಕರೆದೊಯ್ದು ಹಲ್ಲೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಮೂಡಿಗೆರೆ ಠಾಣೆಯ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ  ಅಮಾನತುಗೊಳಿಸಿದ್ದಾರೆ. ಅಲ್ಲದೆ ಪ್ರಕರಣಕ್ಕೆ ಸಂಬಂಧಿಸಿ ಮೂಡಿಗೆರೆ ಸಬ್ ಇನ್ ಸ್ಪೆಕ್ಟರ್ ವಿರುದ್ಧ ಇಲಾಖೆ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ.

ಮೂಡಿಗೆರೆ ಪೊಲೀಸ್ ಠಾಣೆಯ ಪೇದೆಗಳಾದ ವಸಂತ್, ಲೋಹಿತ್ ಅಮಾನತುಗೊಂಡವರಾಗಿದ್ದಾರೆ. ಮೂಡಿಗೆರೆ ಠಾಣೆಯ ಸಬ್ ಇನ್ ಸ್ಪೆಕ್ಟರ್ ಆದರ್ಶ್ ವಿರುದ್ಧ ಇಲಾಖೆ ತನಿಖೆಗೆ ಆದೇಶಿಸಿ ಚಿಕ್ಕಮಗಳೂರು ಎಸ್ಪಿ ಉಮಾ ಪ್ರಶಾಂತ್ ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ: ಮೂಡಿಗೆರೆ | ಮನೆ ಕಳ್ಳತನ ಪ್ರಕರಣ: ಮನೆ ಮಾಲಕನ ಸಹೋದರನನ್ನೇ ಠಾಣೆಗೆ ಕರೆದೊಯ್ದು ಥಳಿಸಿದ ಪೊಲೀಸರು; ಆರೋಪ

ಕಳ್ಳತನದ ಆರೋಪದ ದೂರಿನನ್ವಯ ಮೂಡಿಗೆರೆ ಠಾಣೆಯ ಪೊಲೀಸರು ಫೆ.9ರಂದು ದಾರದಹಳ್ಳಿ ಗ್ರಾಮದ ಮಂಜು ಎಂಬವರನ್ನು ಠಾಣೆಗೆ ಕರೆದೊಯ್ದು ಮನಬಂದಂತೆ ಥಳಿಸಿದ್ದಾರೆಂದು ಆರೋಪಿಸಿ ಮಂಜು ಪತ್ನಿ ಯಶೋದಾ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ, ವೃತ್ತ ನಿರೀಕ್ಷಕರಿಗೆ ದೂರು ನೀಡಿದ್ದರು. ಈ ನಡುವೆ ಪೊಲೀಸರಿಂದ ಥಳಿತಕ್ಕೊಳಗಾದರೆನ್ನಲಾದ ಮಂಜು ಅವರನ್ನು ಚಿಕ್ಕಮಗಳೂರು ನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಇದೀಗ ಈ ಬಗ್ಗೆ ವಿಚಾರಣೆ ಕೈಗೆತ್ತಿಕೊಂಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೂಡಿಗೆರೆ ಠಾಣೆಯ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಸಸ್ಪೆಂಡ್ ಮಾಡಿದ್ದಲ್ಲದೆ, ಎಸ್ಸೈ ವಿರುದ್ಧ ಇಲಾಖಾ ತನಿಖೆಗೆ ಆದೇಶಿಸಿದ್ದಾರೆಂದು ತಿಳಿದುಬಂದಿದೆ.

Similar News