×
Ad

ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮುಚ್ಚುವುದು ಖಚಿತ: ಕೇಂದ್ರದಿಂದ ಅಧಿಕೃತ ಮಾಹಿತಿ

Update: 2023-02-14 15:16 IST

ಶಿವಮೊಗ್ಗ: ಸ್ವಂತ ಕಬ್ಬಿಣದ ಅದಿರಿನ ಗಣಿಯ ಅಲಭ್ಯತೆ, ಬಳಕೆಯಲ್ಲಿಲ್ಲದ ತಂತ್ರಜ್ಞಾನದಿಂದಾಗಿ ಹೆಚ್ಚಿನ ವೆಚ್ಚ ಮತ್ತು ಕಡಿಮೆ ಉತ್ಪಾದನೆ, ಸ್ಪರ್ಧಾತ್ಮಕ ಮಿಶ್ರಲೋಹ ಉಕ್ಕಿನ ಮಾರುಕಟ್ಟೆ ಮತ್ತು ಇತರ ಕಾರಣಗಳಿಂದಾಗಿ ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ (ವಿಐಎಸ್‌ಎಲ್)ಯನ್ನು ಮುಚ್ಚಲಾಗುವುದು ಎಂದು ಕೇಂದ್ರ ಉಕ್ಕು ಸಚಿವ ಜ್ಯೋತಿರಾದಿತ್ಯ ಸಿಂದಿಯಾ ಅವರು ಸೋಮವಾರ ರಾಜ್ಯಸಭೆಯಲ್ಲಿ ಮಾಹಿತಿಯನ್ನು ನೀಡಿದ್ದಾರೆ.

ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ (ಸೇಲ್) ತನ್ನ ಹಲವಾರು ಘಟಕಗಳನ್ನು ಮುಚ್ಚಲಿದೆಯೇ ಎಂಬ ರಾಜ್ಯಸಭಾ ಸದಸ್ಯ ಸಂಜಯ ಸಿಂಗ್ ಅವರ ಪ್ರಶ್ನೆಗೆ ಉತ್ತರಿಸಿದ ಸಿಂದಿಯಾ, ಕೇಂದ್ರ ಸರಕಾರದ ನಿರ್ಧಾರಕ್ಕೆ ಅನುಗುಣವಾಗಿ ವಿಐಎಸ್‌ಎಲ್ ಅನ್ನು ಮಾತ್ರ ಸೇಲ್ ಮುಚ್ಚಲಿದೆ ಎಂದು ತಿಳಿಸಿದರು.

ಕೇಂದ್ರವನ್ನು ಮೂದಲಿಸಿರುವ ರಾಜ್ಯಸಭಾ ಸದಸ್ಯ ಜೈರಾಮ ರಮೇಶ ಅವರು,‘ಕರ್ನಾಟಕದಲ್ಲಿ ಖಾಸಗಿ ಉಕ್ಕು ಕಂಪನಿಗಳು ಕಬ್ಬಿಣದ ಅದಿರಿನ ಗಣಿಗಳನ್ನು ಹೊಂದಿವೆ,ಆದರೆ ವಿಐಎಸ್‌ಎಲ್ ಬಳಿ ಗಣಿಯಿಲ್ಲ ಎನ್ನುವುದು ಆಶ್ಚರ್ಯಕರವಾಗಿದೆ. ಭದ್ರಾವತಿಯು ಬಳ್ಳಾರಿಯಿಂದ 250 ಕಿ.ಮೀ.ಗೂ ಕಡಿಮೆ ಅಂತರದಲ್ಲಿದ್ದರೂ ಇಂತಹ ಸ್ಥಿತಿಯಿದೆ. ವಾಸ್ತವದಲ್ಲಿ 2011 ಅಕ್ಟೋಬರ್‌ನಲ್ಲಿಯೇ ವಿಐಎಸ್‌ಎಲ್‌ಗೆ ಗಣಿಯನ್ನು ಲೀಸ್‌ನಲ್ಲಿ ನೀಡಲಾಗಿತ್ತು, ಆದರೆ ಮೋದಿ ಸರಕಾರವು ಈ ಸಂಬಂಧ ಏನನ್ನೂ ಮಾಡಲಿಲ್ಲ’ ಎಂದು ಟ್ವೀಟಿಸಿದ್ದಾರೆ.

ಜಿ.ಸಿ.ಚಂದ್ರಶೇಖರ ಅವರ ಪ್ರಶ್ನೆಗೆ ಉತ್ತರಿಸಿದ ಸಿಂದಿಯಾ, ಬಳ್ಳಾರಿ ಜಿಲ್ಲೆಯಲ್ಲಿ 140 ಹೆಕ್ಟೇರ್ ಪ್ರದೇಶದಲ್ಲಿ ಕಬ್ಬಿಣದ ಅದಿರಿನ ಗಣಿಗಳನ್ನು ಲೀಸ್‌ನಲ್ಲಿ ಹಂಚಿಕೆ ಮಾಡಲು ಪ್ರಯತ್ನಗಳನ್ನು ಮಾಡಲಾಗಿತ್ತು. ಆದರೆ ಅದು ಕಾನೂನು ವ್ಯಾಜ್ಯದಲ್ಲಿ ಸಿಕ್ಕಿಕೊಂಡಿದ್ದರಿಂದ ಸಾಧ್ಯವಾಗಲಿಲ್ಲ. ವಿಐಎಸ್‌ಎಲ್ ಸೇಲ್‌ನ ಅಂಗಸಂಸ್ಥೆಯಾದ ಬಳಿಕ ಸ್ಥಾವರ ಮತ್ತು ಯಂತ್ರೋಪಕರಣಗಳಲ್ಲಿ ಒಟ್ಟು ಹೂಡಿಕೆಯು 316 ಕೋ.ರೂ.ಗಳಾಗಿವೆ ಎಂದು ತಿಳಿಸಿದರು.

Similar News