ಕೊಡಗು: ಇಬ್ಬರನ್ನು ಬಲಿ ಪಡೆದ ಹುಲಿಯನ್ನು ಸೆರೆ ಹಿಡಿದ ಅರಣ್ಯ ಇಲಾಖೆ ಸಿಬ್ಬಂದಿ

Update: 2023-02-14 13:44 GMT

ಕೊಡಗು: 24 ಗಂಟೆಯೊಳಗೆ ಕೆ.ಬಾಡಗ ಗ್ರಾಮದಲ್ಲಿ ಇಬ್ಬರನ್ನು ಬಲಿ ಪಡೆದಿದ್ದ ಹುಲಿಯನ್ನು ಅರಣ್ಯ ಇಲಾಖೆ ಇಂದು (ಮಂಗಳವಾರ) ಜೀವಂತವಾಗಿ ಸೆರೆ ಹಿಡಿದಿದೆ.  

ಮಂಗಳವಾರ ಬೆಳಿಗ್ಗೆ 6 ಗಂಟೆಯಿಂದ ಸಾಕಾನೆ ಅಭಿಮನ್ಯು ನೇತೃತ್ವದಲ್ಲಿ ಚಿಕ್ಕಭೀಮ, ದೊಡ್ಡಭೀಮ, ಅಶ್ವತ್ಥಾಮ ಹಾಗೂ ಶ್ರೀಕಂಠ ಆನೆಗಳ ಸಹಾಯದಿಂದ ನಾಗರಹೊಳೆ ಅರಣ್ಯಕ್ಕೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಕೂಂಬಿಂಗ್ ಕಾರ್ಯಾಚರಣೆ ನಡೆಸಲಾಯಿತು. ಹುಲಿ ಹೆಜ್ಜೆಯ ಜಾಡು ಅರಸಿದ ಕೂಂಬಿಂಗ್ ತಂಡ ಮಧ್ಯಾಹ್ನ 2.30ರ ವೇಳೆಗೆ ನಾಣಚ್ಚಿ ಗೇಟ್ ಬಳಿ ವ್ಯಾಘ್ರವನ್ನು ಮೊದಲಿಗೆ ಪತ್ತೆ ಹಚ್ಚಿತ್ತು. ಈ ವೇಳೆ ಮಾನವ ಜೀವ ಬಲಿ ಪಡೆದ ಹುಲಿಯ ಗುರುತನ್ನು ಖಾತರಿಪಡಿಸಲಾಯಿತು. ಬಳಿಕ ಟೈಗರ್ ಸ್ಕ್ವಾಡ್‍ನ ವೈದ್ಯಾಧಿಕಾರಿ ಡಾ.ರಂಜನ್ ಅವರು ಆನೆ ಮೇಲಿಂದ ಅರವಳಿಕೆ ಚುಚ್ಚು ಮದ್ದನ್ನು ಹುಲಿಗೆ ಡಾಟ್ ಮಾಡಿದರು. ಈ ವೇಳೆ ಹುಲಿ ಸ್ಥಳದಿಂದ ಕೆಲ ದೂರು ಓಡಿ ಕುಸಿದು ಬಿದ್ದಿದೆ. ಸಂಪೂರ್ಣವಾಗಿ ಪ್ರಜ್ಞೆ ತಪ್ಪಿರುವುದನ್ನು ಖಾತರಿಪಡಿಸಿಕೊಂಡು ಹುಲಿಯನ್ನು ಸೆರೆ ಹಿಡಿಯಲಾಯಿತು. 

ರವಿವಾರ ಸಂಜೆ ಮಧು ಹಾಗೂ ವೀಣಾ ದಂಪತಿಯ ಪುತ್ರ ಚೇತನ್ (18) ಎಂಬ ಯುವಕನ ಮೇಲೆ ಹುಲಿ ದಾಳಿ ಮಾಡಿ ಕೊಂದು ಹಾಕಿತ್ತು. ಈ ಘಟನೆ ಮಾಸುವ ಮುನ್ನವೇ ಸೋಮವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ಲೈನ್ ಮನೆಯ ನಿವಾಸಿ ಪಲ್ಲೇರಿಯ ರಾಜು(75) ಎಂಬುವವರನ್ನು ಹುಲಿ ಕೊಂದು ಹಾಕಿತ್ತು. ಅಲ್ಲದೇ ಚೇತನ್ ನ್ನು ಹುಡುಕಿಕೊಂಡು ಹೋದ ಆತನ ತಂದೆ ಮಧು ಮೇಲೆಯೂ ಹುಲಿದಾಳಿ ಮಾಡಿ ಗಾಯಗೊಳಿಸಿತ್ತು. ಇದರಿಂದ ಗ್ರಾಮಸ್ಥರು ತೀವ್ರ ಭಯಭೀತರಾಗಿದ್ದರು. 

ಇದನ್ನೂ ಓದಿ; ಕೊಡಗು: ಹುಲಿ ದಾಳಿಯಿಂದ ಮತ್ತೋರ್ವ ಮೃತ್ಯು

Similar News