ಜನರ ಒಳಿತಿಗಾಗಿ ಎಂತಹ ನೋವು ಬೇಕಾದರೂ ಅನುಭವಿಸಲು ಸಿದ್ಧ: ಶಾಸಕ ಎಂ.ಪಿ.ಕುಮಾರಸ್ವಾಮಿ

''ಗ್ರಾಮಸ್ಥರೇ ಅಟ್ಟಾಡಿಸಿ ಹಲ್ಲೆ ನಡೆಸಿದರು...''

Update: 2023-02-14 11:25 GMT

ಮೂಡಿಗೆರೆ, ಫೆ.14: ನಾನು 3 ಬಾರಿ ಶಾಸಕನಾಗಿದ್ದೇನೆ. ಶಾಸಕನಾಗಿದ್ದ ವೇಳೆಯೇ ಮೂರು ಬಾರಿ ಅಪಘಾತ ನಡೆದು ಪ್ರಾಣಾಪಾಯದಿಂದ ಪಾರಾಗಿದ್ದೇನೆಂದರೆ ಇದಕ್ಕೆ ನಾನು ಮಾಡಿರುವ ಒಳ್ಳೆಯ ಕೆಲಸಗಳೇ ಕಾರಣ ಎಂದು ಶಾಸಕ ಎಂ.ಪಿ.ಕುಮಾರಸ್ವಾಮಿ ಹೇಳಿದ್ದಾರೆ. 

ಸೋಮವಾರ ಸಂಜೆ ಪಟ್ಟಣದ ಹೊಯ್ಸಳ ಕ್ರೀಡಾಂಗಣದ ಹೇಮಾದ್ರಿ ವೇದಿಕೆಯಲ್ಲಿ ತಾಲೂಕು ಆಡಳಿತ ಮತ್ತು ಮೂಡಿಗೆರೆ ಉತ್ಸವ ಸಮಿತಿ ವತಿಯಿಂದ ಏರ್ಪಡಿಸಿದ್ದ ಮೂಡಿಗೆರೆ ಉತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ಇದನ್ನೂ ಓದಿ; ಚೆಕ್‍ಬೌನ್ಸ್ ಪ್ರಕರಣ: ಮೂಡಿಗೆರೆ ಬಿಜೆಪಿ ಶಾಸಕ ಎಂ.ಪಿ. ಕುಮಾರಸ್ವಾಮಿಗೆ 4 ವರ್ಷ ಜೈಲು ಶಿಕ್ಷೆ

ಮೊದಲ ಬಾರಿ ಅದೊಮ್ಮೆ ಬೆಂಗಳೂರಿಗೆ ತೆರಳುತ್ತಿದ್ದಾಗ ನನ್ನ ಕಾರು ಲಾರಿಗೆ ಢಿಕ್ಕಿ ಹೊಡೆದು ಅಪಘಾತವಾಗಿತ್ತು. 2ನೇ ಬಾರಿ ಕೋವಿಡ್‍ಗೆ ತುತ್ತಾಗಿ ನಾನು ಉಳಿದಿದ್ದೇ ಪವಾಡ. 3ನೇ ಬಾರಿ ಕಾಡಾನೆಯಿಂದ ಬಲಿಯಾದ ಮಹಿಳೆಯನ್ನು ನೋಡಲು ತೆರಳಿದ್ದಾಗ ಗ್ರಾಮಸ್ಥರು ಅಟ್ಟಾಡಿಸಿ ಹಲ್ಲೆ ನಡೆಸಿದರು. ಅಂದು ಜೀವ ಉಳಿದಿದ್ದೇ ಹೆಚ್ಚು. ಆದರೂ ತಾನು ಯಾರ ಮೇಲೂ ದೂರು ನೀಡದಿದ್ದರೂ ತನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಜನತೆಯ ಒಳಿತಿಗಾಗಿ ತಾನು ಎಂತಹ ನೋವು ಬೇಕಾದರೂ ಅನುಭವಿಸಲು ಸಿದ್ಧ ಎಂದು ಹೇಳಿದರು. 

ಉತ್ಸವದ ಕಾರ್ಯಾಧ್ಯಕ್ಷ ಜೆ.ಎಸ್.ರಘು ಮಾತನಾಡಿ, ನಾವು ಎಲ್ಲಿ ಹೋದರೂ ಮೊದಲು ತಮ್ಮ ತಾಯಿ ನೆಲವನ್ನೇ ಜನರು ಪ್ರಶ್ನಿಸುತ್ತಾರೆ. ನಮ್ಮ ಹುಟ್ಟೂರು ಮೂಡಿಗೆರೆಯಲ್ಲಿನ ಪ್ರಕೃತಿ, ಅತಿಥಿ ಸತ್ಕಾರ, ಭಾಷೆ, ಸಂಸ್ಕೃತಿಯನ್ನು ಬೇರೆ ಜಿಲ್ಲೆಯ ಜನರು ಕೊಂಡಾಡುತ್ತಾರೆ. ಇದರಿಂದ ನಮ್ಮ ಮನಸ್ಸಿನಲ್ಲಾಗುವ ಪುಳಕ ಅವಿಸ್ಮರಣೀಯ. ಇಂತಹ ನೆಲದಲ್ಲಿ ಹುಟ್ಟಿರುವ ನಾವು ತಾಯಿ ನೆಲದ ಋಣ ತೀರಿಸಬೇಕೆಂದು ಹೇಳಿದರು. 

ಚಲನಚಿತ್ರ ನಟ ಗುರುನಂದನ್ ಗೋಣಿಬೀಡು, ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಜಿ.ಸುರೇಂದ್ರ, ಹಳಸೆ ಶಿವಣ್ಣ, ಲೋಕವಳ್ಳಿ ರಮೇಶ್, ಮಂಚೇಗೌಡ, ಪ್ರಸನ್ನ ಗೌಡಹಳ್ಳಿ, ಡಿ.ಕೆ.ಲಕ್ಷ್ಮಣ್‍ಗೌಡ, ಪ.ಪಂ. ಸದಸ್ಯರು ಸೇರಿದಂತೆ ಮತ್ತಿತರರಿದ್ದರು.  

 

Similar News