ಕಾಂಗ್ರೆಸ್ ಸಹವಾಸ ಕತ್ತೆಗೂ ಬೇಡವಾಗಿದೆ: ನಳಿನ್ ಕುಮಾರ್ ಕಟೀಲ್

Update: 2023-02-14 12:21 GMT

ಬೆಂಗಳೂರು, ಫೆ. 14: ‘ಭಯೋತ್ಪಾದಕ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುವ ಪ್ರತಿಪಕ್ಷ ಕಾಂಗ್ರೆಸ್ ಒಂದು ರೀತಿಯಲ್ಲಿ ಕಳ್ಳರ ಸಂತೆಯಾಗಿದ್ದು, ಆ ಪಕ್ಷದ ಸಹವಾಸ ಕತ್ತೆಗೂ ಬೇಡವಾಗಿದೆ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಇಂದಿಲ್ಲಿ ವಾಗ್ದಾಳಿ ನಡೆಸಿದ್ದಾರೆ.

ಮಂಗಳವಾರ ಕೊಪ್ಪಳ ಜಿಲ್ಲೆಯ ಕುಕನೂರಿನಲ್ಲಿ ನಡೆದ ವಿಜಯ ಸಂಕಲ್ಪ ಯಾತ್ರೆ ಹಾಗೂ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ‘ಪ್ರಧಾನಿ ಮೋದಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜನಪರ ಕೆಲಸ ಮಾಡಿದ್ದಾರೆ. ಆದರೆ, ಕಾಂಗ್ರೆಸ್ ದೇಶ ವಿರೋಧಿ ಕೆಲಸ ಮಾಡುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಭ್ರಷ್ಟಾಚಾರಿಗಳ ಪರವಾಗಿದ್ದು, ಪ್ರತಿಪಕ್ಷ ಸಿದ್ದರಾಮಯ್ಯ ಜಾತ್ಯತೀತ ಜನತಾ ದಳದಲ್ಲಿ ಬ್ರೋಕರ್ ಕೆಲಸ ಮಾಡಿದ ಅದೇ ಪಕ್ಷದ ನಾಯಕರನ್ನು ತುಳಿದು ಕಾಂಗ್ರೆಸ್‍ಗೆ ಬಂದು ಸೋನಿಯಾ ಗಾಂಧಿ ಕಾಲು ಹಿಡಿದು ಮುಖ್ಯಮಂತ್ರಿಯಾದರು. ಇದೀಗ ಮತ್ತೊಮ್ಮೆ ಮುಖ್ಯಮಂತ್ರಿ ಆಗುವ ಕನಸು ಕಾಣುತ್ತಿದ್ದಾರೆ ಎಂದು ಕಟೀಲ್ ಲೇವಡಿ ಮಾಡಿದರು.

ಮಾಜಿ ಸಿಎಂ ಸಿದ್ದರಾಮಯ್ಯ ಸ್ಪರ್ಧಿಸಲು ಕ್ಷೇತ್ರವೇ ಇಲ್ಲ. ಹೀಗಾಗಿ ಅವರು ನಿರುದ್ಯೋಗಿಯಾಗಿದ್ದು, ಅವರು ರಾಜಕಾರಣ ಬಿಟ್ಟು ಜ್ಯೋತಿಷ್ಯ ಹೇಳುವುದು ಉತ್ತಮ. ಕಾಂಗ್ರೆಸ್ ನಾಯಕರಿಗೆ ತಾಕತ್ತಿದ್ದರೆ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಸೋನಿಯಾ ಗಾಂಧಿ, ಖರ್ಗೆ ಇವರನ್ನೆಲ್ಲ ಏಕೆ ರಾಜ್ಯಕ್ಕೆ ಕರೆಸುತ್ತಿದ್ದಾರೆ. ಇವರೇ ಪ್ರಚಾರ ಮಾಡಬಹುದಲ್ಲ’ ಎಂದು ಕಟೀಲ್ ಟೀಕಿಸಿದರು.

ಸಿದ್ದರಾಮಯ್ಯ, ಕೋಲಾರ, ಬಾದಾಮಿ ಅಥವಾ ವರುಣ ಯಾವುದೇ ಕ್ಷೇತ್ರದಲ್ಲಿ ಸ್ಪರ್ಧಿಸಿದರೂ ಅವರನ್ನು ನಾವು ಸೋಲಿಸುತ್ತೇವೆ. ಜಾತಿ, ಮತ, ದ್ವೇಷವನ್ನು ದೂರ ಮಾಡಲು ರಾಜ್ಯದ ಜನತೆ ಕಾಂಗ್ರೆಸ್ ಧಿಕ್ಕರಿಸಿ ಬಿಜೆಪಿಗೆ ಮತ ಹಾಕಲಿದ್ದಾರೆ ಎಂದ ಅವರು, ಬಿಜೆಪಿ ವಿಜಯ ಸಂಕಲ್ಪ ಯಾತ್ರೆಗೆ ರಾಜ್ಯದಲ್ಲಿ ಅಭೂತ ಪೂರ್ವ ಬೆಂಬಲ ಸಿಗುತ್ತಿದೆ ಎಂದು ಹೇಳಿದರು.

‘ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿದ್ದೇವೆ, ಯಾರು ಯಾವ ಪಕ್ಷವನ್ನೂ ಬೇಕಾದರು ಸೇರಬಹುದು ಅಥವಾ ಬಿಡಬಹುದು. ಆ ಸ್ವಾತಂತ್ರ್ಯವನ್ನು ಸಂವಿಧಾನ ನೀಡಿದೆ. ಕೆಲವರು ಪಕ್ಷ ತೊರೆದು ಅನ್ಯ ಪಕ್ಷಗಳಿಗೆ ಸೇರ್ಪಡೆ ಆಗಬಹುದು. ಆದರೆ, ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರು ಎಂದೂ ಪಕ್ಷ ಬಿಡುವುದಿಲ್ಲ. ಪಕ್ಷದ ಸಿದ್ಧಾಂತವನ್ನು ಮೆಚ್ಚಿ ದೊಡ್ಡ ಸಂಖ್ಯೆಯಲ್ಲಿ ಬೇರೆ ಪಕ್ಷಗಳಿಂದ ಬಿಜೆಪಿ ಬರುತ್ತಿದ್ದಾರೆ’

-ನಳಿನ್ ಕುಮಾರ್ ಕಟೀಲ್ ಬಿಜೆಪಿ ರಾಜ್ಯಾಧ್ಯಕ್ಷ

Similar News