×
Ad

ಕೋಳಿ ಸಾಕಾಣಿಕೆಯನ್ನು ‘ಕೃಷಿ’ ಎಂದು ಘೋಷಿಸಲು ಒತ್ತಾಯ

Update: 2023-02-14 19:21 IST

ಮಂಡ್ಯ, ಫೆ.14: ಪ್ರಸಕ್ತ ಬಜೆಟ್‍ನಲ್ಲಿ ಕೋಳಿ ಸಾಕಾಣಿಕೆಯನ್ನು ‘ಕೃಷಿ’ ಎಂದು ಘೋಷಿಸಿ ಕೃಷಿ, ರೇಷ್ಮೆ ಬೆಳೆಗಾರರಿಗೆ ನೀಡುತ್ತಿರುವ ಸೌಲಭ್ಯಗಳನ್ನು ಕೋಳಿ ಸಾಕಾಣಿಕೆದಾರ ರೈತರಿಗೂ ವಿಸ್ತರಿಸಬೇಕು ಎಂದು ಪ್ರಾಂತ ರೈತಸಂಘದ ಜಿಲ್ಲಾ ಮುಖಂಡ ಟಿ.ಎಲ್.ಕೃಷ್ಣೇಗೌಡ ಒತ್ತಾಯಿಸಿದ್ದಾರೆ.

ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋಳಿ ಸಾಕಾಣಿಕೆ ರೈತರು, ಕಂಪನಿಗಳು, ಸಗಟು ಮತ್ತು ಚಿಲ್ಲರೆ ವ್ಯಾಪಾರಸ್ಥರು, ಅಸಂಖ್ಯಾತ ಕೃಷಿ ಕೂಲಿಕಾರರು ಹಾಗೂ ಮಾಂಸ ತಿನ್ನುವ ಗ್ರಾಹಕರ ಹಿತ ರಕ್ಷಿಸಲು ಕುಕ್ಕುಟ ಕ್ಷೇತ್ರವನ್ನು ಹೈನುಗಾರಿಕೆ ಕ್ಷೇತ್ರಕ್ಕಿಂತ ಭಲಿಷ್ಟವಾಗಿ ಅಭಿವೃದ್ಧಿಪಡಿಸಲು ಅಗತ್ಯವಿರುವ ಸಮಗ್ರ ಕಾನೂನು ರೂಪಿಸಬೇಕು ಎಂದರು.

ರಾಜ್ಯದಲ್ಲಿ ಸುಮಾರು 10 ಸಾವಿರ ರೈತರು ವಿವಿಧ ಕಂಪನಿಗಳ ಜತೆ ಒಪ್ಪಂದ ಮಾಡಿಕೊಂಡು ಮಾಂಸದ ಕೋಳಿಗಳನ್ನು ಸಾಕುತ್ತಿದ್ದು, ಕುಕ್ಕುಟ ಕ್ಷೇತ್ರ ಭಾರಿ ವೇಗವಾಗಿ ಬೆಳೆಯುತ್ತಿದೆ. ವಾರ್ಷಿಕ ಸಾವಿರಾರು ಕೋಟಿ ರೂ. ವಹಿವಾಟು ನಡೆಯುತ್ತಿದ್ದು, ಮತ್ತಷ್ಟು ಅಭಿವೃದ್ಧಿಪಡಿಸಲು ಸರಕಾರಗಳು ಗಮನಹರಿಸಿಲ್ಲ ಎಂದು ಅವರು ವಿಷಾದಿಸಿದರು.

ಈಗಲಾದರೂ ಸರಕಾರವು ಬೇರೆ ರಾಜ್ಯಗಳಲ್ಲಿರುವಂತೆ ಕೋಳಿ ಸಾಕಾಣಿಕೆಯನ್ನು ಕೃಷಿ ಎಂದು ಘೋಷಿಸಿ ಅಭಿವೃದ್ಧಿಗೊಳಿಸಲು ಕಾನೂನು ರೂಪಿಸಬೇಕು. ಹಾಲು ಉತ್ಪಾದಕರಿಗೆ ನೀಡಲಾಗುತ್ತಿರುವ ರೀತಿಯಲ್ಲಿ ಪ್ರತಿ ಮಾಂಸದ ಕೋಳಿಗೆ 5 ರೂ. ಪ್ರೋತ್ಸಾಹ ಧನ ನೀಡಬೇಕು. ಇತರ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಅವರು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಾಂತ ರೈತಸಂಘದ ಸಿದ್ದೇಗೌಡ, ಮಹಾಲಿಂಗು ಮತ್ತು ಕೋಳಿ ಸಾಕಾಣಿಕೆದಾರ ನಿಂಗೇಗೌಡ ಉಪಸ್ಥಿತರಿದ್ದರು.

Similar News