×
Ad

ಮಗ ಬಿಜೆಪಿಗೆ ಹೋಗಲಿ, ನನಗೆ ಕಾಂಗ್ರೆಸ್ ಪಕ್ಷವೇ ಮುಖ್ಯ: ಮಾಜಿ ಶಾಸಕ ವಾಸು ಸ್ಪಷ್ಟನೆ

''ಈ ಬಾರಿ ಚಾಮರಾಜ ಕ್ಷೇತ್ರದಿಂದ ಟಿಕೆಟ್ ಸಿಗಲಿದೆ...''

Update: 2023-02-14 20:36 IST

ಮೈಸೂರು,ಫೆ.14: ಪಕ್ಷ ಮತ್ತು ಮಗ ಎರಡು ವಿಚಾರ ಎದುರಾದರೆ ನನಗೆ ಪಕ್ಷವೇ ಮುಖ್ಯ ಹೊರತು  ಮಗನಲ್ಲ ಎಂದು ಕಾಂಗ್ರೆಸ್ ಪಕ್ಷದ ಮಾಜಿ ಶಾಸಕ ವಾಸು ಸ್ಪಷ್ಟಪಡಿಸಿದ್ದಾರೆ. 

ನಗರದ ಜಿಲ್ಲಾ ಪತ್ರಕರ್ತರ ಸಂಘದ ಆವರಣದಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿರು. ನಿಮ್ಮ ಮಗ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ನಿಮಗೆ ಕಾಂಗ್ರೆಸ್ ಪಕ್ಷ ಮತ್ತು ಮಗ ಎರಡು ವಿಚಾರ ಎದುರಾದರೆ ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತೀರಿ ಎಂಬ ಮಾಧ್ಯಮ ಪ್ರಶ್ನೆಗೆ  ಪ್ರತಿಕ್ರಿಯಿಸಿದ ಅವರು, ನನಗೆ ಮಗನಿಗಿಂತ ಪಕ್ಷವೇ ಮುಖ್ಯ ನಾನು 45 ವರ್ಷಗಳಿಂದಲೂ ಕಾಂಗ್ರೆಸ್ ಪಕ್ಷದಲ್ಲಿದ್ದೇನೆ. ನಾನು ಪಕ್ಷಕ್ಕಾಗಿ ಸಾಕಷ್ಟು ದುಡಿದಿದ್ದೇನೆ. ಹಾಗಾಗಿ ನನಗೆ ಪಕ್ಷವೇ ಮುಖ್ಯ ಎಂದು ಹೇಳಿದರು.

ಎಷ್ಟೋ ಜನ ಅಪ್ಪ ಮಕ್ಕಳು ಒಂದೇ ಮನೆಯಲ್ಲಿದ್ದರೂ ಬೇರೆ ಬೇರೆ ಪಕ್ಷದಲ್ಲಿ ಇರುತ್ತಾರೆ. ಮಗ ದೊಡ್ಡವನಾದ ಮೇಲೆ ಆತ ಸ್ವತಂತ್ರನಾಗಿರುತ್ತಾನೆ. ಅವರ ನಿರ್ಧಾರ ಅವರ ಹಕ್ಕು, ಅದನ್ನು ವಿರೋಧಿಸುವುದು ನಮ್ಮ ಹಕ್ಕಲ್ಲ, ಹಾಗಾಗಿ ಆತ ಬಿಜೆಪಿಗೆ ಹೋಗಿರುವುದು ಅವನ ಸ್ವಾತಂತ್ರ್ಯ, ನನ್ನ ಮಗ ಮನೆಯಲ್ಲಿ ಮಾತ್ರ ರಾಜಕೀಯವಾಗಿ ಎದುರಾದರೆ ನಾನು ಹೋರಾಟ ಮಾಡಲು ಸಿದ್ಧನಾಗಿದ್ದೇನೆ. ನನ್ನ ಮಗ ಬಿಜೆಪಿಗೆ ಹೋಗಿದ್ದರಿಂದ ನನಗೆ ಯಾವುದೇ ಹಿನ್ನಡೆ ಇಲ್ಲ ಎಂದು ಹೇಳಿದರು.

'ಚಾಮರಾಜ ಕ್ಷೇತ್ರದಿಂದ ಟಿಕೆಟ್ ಸಿಗಲಿದೆ';

ರಾಜಕೀಯದಲ್ಲಿ ಅದೃಷ್ಟ ಬೇಕು ಅದೃಷ್ಟ ಇಲ್ಲದಿದ್ದರಿಂದಲೇ ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಮುಖ್ಯಮಂತ್ರಿಯಾಗಲು ಸಾಧ್ಯವಾಗಲಿಲ್ಲ. ನನಗೆ ಅದೃಷ್ಟ ಇದ್ದರೆ ಈ ಬಾರಿ ಚಾಮರಾಜ ಕ್ಷೇತ್ರದಿಂದ ಟಿಕೆಟ್ ಸಿಗಲಿದೆ ಎಂದು ಹೇಳಿದರು.

ವೀರಪ್ಪ ಮೊಯ್ಲಿ ಅವರ ಜೊತೆ 1977 ರಿಂದಲೂ  ಇದ್ದೇನೆ. ಹಾಗಾಗಿ ನನ್ನ ಮನಸ್ಥಿತಿ ಮತ್ತು ವಿಶ್ವಾಸ ಗೊತ್ತಿದ್ದರಿಂದಲೇ ಕಾಂಗ್ರೆಸ್ ಪಕ್ಷದ ಮೊದಲ ಪಟ್ಟಿಯಲ್ಲೇ ಟಿಕೆಟ್ ಸಿಗಲಿದೆ ಎಂದು ಹೇಳಿರುವುದು. ಬೇರೆಯವರಿಗೆ ನನ್ನ ಬಗ್ಗೆ ಅಷ್ಟಾಗಿ ಗೊತ್ತಿಲ್ಲ ಹಾಗಾಗಿ ಅವರು ಯಾವುದನ್ನೂ ಪ್ರಸ್ತಾಪ ಮಾಡುತ್ತಿಲ್ಲ ಎಂದು ಹೇಳಿದರು.

ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಮತ್ತು ನನ್ನ ನಡುವೆ ಯಾವುದೇ ವೈಮನಸ್ಸು ಇಲ್ಲ, ಯಾರು ನಮ್ಮಿಬ್ಬರ ನಡುವೆ ವೈಮನಸ್ಸು ಇದೆ ಎಂದು ಹುಟ್ಟುಹಾಕಿದರೋ ಗೊತ್ತಿಲ್ಲ, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ನನ್ನ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ನೀಡಿದ್ದಾರೆ. ಹಾಗಾಗಿಯೇ ಟ್ರಾಮಾ ಸೆಂಟರ್, ಮಹರಾಣಿ ಮಹಿಳಾ ಕಾಲೇಜು, ಜಯದೇವ ಆಸ್ಪತ್ರೆ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ತರಲು ಸಾಧ್ಯವಾಯಿತು ಎಂದು ಹೇಳಿದರು.

Similar News