×
Ad

ಜಿಪಂ-ತಾಪಂ ಚುನಾವಣೆ | 10 ದಿನಗಳಲ್ಲಿ ಕ್ಷೇತ್ರ ಪುನರ್ ವಿಂಗಡಣೆ ಅಧಿಸೂಚನೆ ಹೊರಡಿಸಲಾಗುವುದು: ಹೈಕೋರ್ಟ್ ಗೆ ಹೇಳಿಕೆ

Update: 2023-02-14 20:53 IST

ಬೆಂಗಳೂರು, ಫೆ.14: ಜಿ.ಪಂ. ಹಾಗೂ ತಾ.ಪಂ. ಚುನಾವಣೆಗೆ ಸಂಬಂಧಿಸಿದಂತೆ ಕ್ಷೇತ್ರ ಪುನರ್ ವಿಂಗಡಣೆ ಕುರಿತು ಮುಂದಿನ 10 ದಿನಗಳಲ್ಲಿ ಅಧಿಸೂಚನೆ ಹೊರಡಿಸಲಾಗುವುದು ಎಂದು ಹೈಕೋರ್ಟ್‍ಗೆ ರಾಜ್ಯ ಸರಕಾರ ಮಾಹಿತಿ ನೀಡಿದೆ. 

ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಕ್ಷೇತ್ರಗಳ ಗಡಿ ನಿರ್ಣಯ ಮತ್ತು ಮೀಸಲಾತಿ ನಿಗದಿಪಡಿಸುವ ಅಧಿಕಾರವನ್ನು ರಾಜ್ಯ ಚುನಾವಣಾ ಆಯೋಗದಿಂದ ಹಿಂಪಡೆದು, ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ ರಚಿಸಿರುವುದನ್ನು ಪ್ರಶ್ನಿಸಿ ರಾಜ್ಯ ಚುನಾವಣಾ ಆಯೋಗ ಸಲ್ಲಿಸಿದ್ದ ಅರ್ಜಿ ವಿಚಾರಣೆ ಹೈಕೋರ್ಟ್ ನ್ಯಾಯಪೀಠದಲ್ಲಿ ನಡೆಯಿತು. 

ವಿಚಾರಣೆ ವೇಳೆ ಹಾಜರಾಗಿದ್ದ ರಾಜ್ಯ ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವದಗಿ ಅವರು, ಜಿಪಂ ಮತ್ತು ತಾಪಂಗಳ ಕ್ಷೇತ್ರ ಪುನರ್ ವಿಂಗಡಣೆಗೆ ಸಂಬಂಧಿಸಿದಂತೆ ಪುನರ್ ವಿಂಗಡನಾ ಆಯೋಗ ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದೆ. ಜ.30ರಂದು ಈ ಸಂಬಂಧ ಅಂತಿಮ ಅಧಿಸೂಚನೆಯನ್ನು ಸರಕಾರಕ್ಕೆ ಸಲ್ಲಿಸಿದೆ. ಈ ಸಂಬಂಧ ಮುಂದಿನ 10 ದಿನಗಳಲ್ಲಿ ಅಧಿಸೂಚನೆ ಹೊರಡಿಸುವುದಾಗಿ ವಿವರಿಸಿದರು.

ದಂಡದ ಮೊತ್ತವನ್ನು ಶೀಘ್ರದಲ್ಲಿ ಪಾವತಿ: ಈ ಹಿಂದೆ ವಿಚಾರಣೆ ನಡೆದ ಸಂದರ್ಭದಲ್ಲಿ ಸರಕಾರ ಕ್ಷೇತ್ರ ಪುನರ್ ವಿಂಗಡಣೆಗೆ ಸಂಬಂಧಿಸಿದಂತೆ ವಿಳಂಬ ದೋರಣೆ ಅನುಸರಿಸಿದ್ದ ಕ್ರಮಕ್ಕೆ 5 ಲಕ್ಷ ರೂ.ಗಳ ದಂಡ ವಿಧಿಸಿತ್ತು. ಈ ಸಂಬಂಧ ಪ್ರತಿಕ್ರಿಯಿಸಿದ ಅಡ್ವೋಕೇಟ್ ಜನರಲ್, ದಂಡ ವಿಧಿಸಿರುವ ಮಹತ್ವ ಅರ್ಥವಾಗದ ಹಿನ್ನೆಲೆಯಲ್ಲಿ ದಂಡ ಮನ್ನ ಮಾಡಬೇಕು ಎಂದು ಅರ್ಜಿ ಸಲ್ಲಿಸಲಾಗಿದೆ. ಇದೀಗ ದಂಡ ವಿಧಿಸಿರುವ ಮಹತ್ವ ಅರ್ಥವಾಗಿದ್ದು, ದಂಡದ ಮೊತ್ತವನ್ನು ಶೀಘ್ರದಲ್ಲಿ ಪಾವತಿ ಮಾಡುವುದಾಗಿ ಹೇಳಿದರು. ವಾದ ಆಲಿಸಿದ ನ್ಯಾಯಪೀಠ ಅರ್ಜಿ ವಿಚಾರಣೆಯನ್ನು ಮುಂದಿನ ಎರಡು ವಾರಗಳಿಗೆ ಮುಂದೂಡಿದೆ. 

Similar News