ಸೀರೆ, ಕುಕ್ಕರ್ ಮೂಲಕ ಮತದಾರರಿಗೆ ಆಮಿಷ: ಹೈಕೋರ್ಟ್ ಅಸಮಾಧಾನ
ಬೆಂಗಳೂರು, ಫೆ.14: ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮತದಾರರಿಗೆ ಕುಕ್ಕರ್, ಮಿಕ್ಸಿ, ಸೀರೆ ಸೇರಿ ವಿವಿಧ ವಸ್ತುಗಳನ್ನು ಹಂಚಲಾಗುತ್ತಿದೆ ಎಂಬ ಸುದ್ದಿ ವಾಹಿನಿಗಳ ವರದಿಗಳನ್ನು ಪ್ರಕರಣವೊಂದರ ವಿಚಾರಣೆ ವೇಳೆ ಮೆಲುಕು ಹಾಕಿರುವ ಹೈಕೋರ್ಟ್, ''ಇದು ಎಂತಹ ಚುನಾವಣೆ'' ಎಂದು ಅಸಮಾಧಾನ ವ್ಯಕ್ತಪಡಿಸಿದೆ.
ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕ ಡಿ.ಸಿ. ಗೌರಿಶಂಕರ್ ಆಯ್ಕೆಯನ್ನು ಅಸಿಂಧುಗೊಳಿಸಬೇಕು ಎಂದು ಕೋರಿ ಪರಾಜಿತ ಬಿಜೆಪಿ ಅಭ್ಯರ್ಥಿ ಬಿ.ಸುರೇಶ್ ಗೌಡ ಸಲ್ಲಿಸಿದ್ದ ಚುನಾವಣಾ ತಕರಾರು ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ ಮಂಗಳವಾರ ಮುಂದುವರಿಸಿತು.
ವಿಚಾರಣೆ ವೇಳೆ ಬರಲಿರುವ ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಹಲವೆಡೆ ಸಂಭಾವ್ಯ ಮತ್ತು ಅಪೇಕ್ಷಿತ ಅಭ್ಯರ್ಥಿಗಳು ಮತದಾರರಿಗೆ ಆಮಿಷ ಒಡ್ಡುತ್ತಿರುದ್ದಾರೆ ಎಂಬ ವರದಿಗಳನ್ನು ಮೌಖಿಕವಾಗಿ ಪ್ರಸ್ತಾಪಿಸಿದ ನ್ಯಾಯಮೂರ್ತಿಗಳು, ಈಗಿನ ಪರಿಸ್ಥಿತಿಯಲ್ಲಿ ಒಂದು ಕ್ಷೇತ್ರದ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಯೊಬ್ಬ ಕನಿಷ್ಠ 25 ರಿಂದ 30 ಕೋಟಿ ಖರ್ಚು ಮಾಡಬೇಕು ಎಂಬಂತಹ ಪರಿಸ್ಥಿತಿ ಇದೆ. ಕಲುಷಿತಗೊಂಡಿರುವ ಈ ವ್ಯವಸ್ಥೆಯನ್ನು ಸುಗುಮಗೊಳಿಸುವುದು ಹೇಗೆ ಎಂದು ಪ್ರಶ್ನಿಸಿತು.
ಚುನಾವಣೆಗೆ ಅಭ್ಯರ್ಥಿ ಎಂದು ಘೋಷಿಸಿದ ಬಳಿಕವೇ ಆತನ ಭ್ರಷ್ಟಾಚಾರಗಳ ಬಗ್ಗೆ ಕ್ರಮ ಕೈಗೊಳ್ಳಲು ಕಾನೂನಿನಲ್ಲಿ ಅವಕಾಶವಿದೆ. ಆದರೆ, ಹೀಗೆ ಚುನಾವಣೆಗೂ ಮುನ್ನವೇ ಆಮಿಷ ಒಡ್ಡುವ ಭ್ರಷ್ಟಾಚಾರವನ್ನು ಯಾವ ಕಾನೂನು ಮೂಲಕ ನಿಯಂತ್ರಿಸಬೇಕು ಎಂಬ ಜಿಜ್ಞಾಸೆಯನ್ನು ನ್ಯಾಯಪೀಠ ವ್ಯಕ್ತಪಡಿಸಿತು.
ಇದಕ್ಕೆ ಗೌರಿಶಂಕರ್ ಪರ ವಕೀಲ ಆರ್.ಹೇಮಂತ ರಾಜ್, ಎಲ್ಲ ಕ್ಷೇತ್ರಗಳಲ್ಲೂ ಭ್ರಷ್ಟಾಚಾರ ವ್ಯಾಪಕವಾಗಿದೆ. ಪ್ರಜಾಪ್ರಭುತ್ವದಲ್ಲಿ ಕ್ರಾಂತಿಕಾರಕ ಬದಲಾವಣೆಯಿಂದ ಮಾತ್ರವೇ ಇಂತಹುದನ್ನೆಲ್ಲಾ ನಿಯಂತ್ರಿಸಲು ಸಾಧ್ಯ ಎಂದು ನ್ಯಾಯಪೀಠದ ಕಳವಳಕ್ಕೆ ಪ್ರತಿಕ್ರಿಯಿಸಿದರು.