ದಾವಣಗೆರೆ | ಹೆದ್ದಾರಿ ದರೋಡೆ, ಕೊಲೆ ಪ್ರಕರಣಕ್ಕೆ ತಿರುವು: ಚಾಲಕ ಸೇರಿ ನಾಲ್ವರು ಆರೋಪಿಗಳ ಬಂಧನ

Update: 2023-02-15 09:38 GMT

ದಾವಣಗೆರೆ: ಇತ್ತೀಚಿಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿ ಮೂವರು ಮೃತಪಟ್ಟಿದ್ದ ಪ್ರಕರಣವೀಗ ಹೊಸ ತಿರುವು ಪಡೆದುಕೊಂಡಿದ್ದು, ಚಾಲಕ ಸೇರಿ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.

ದರೋಡೆಕೊರರ ಮೇಲೆ ಲಾರಿ ಹತ್ತಿಸಿಕೊಂಡು ಹೋಗಿದ್ದ ಲಾರಿಯನ್ನು ಚೆನ್ನೈ ನಲ್ಲಿ ಪತ್ತೆ ಮಾಡಿದ್ದು, ಆರೋಪಿ ಉತ್ತರಪ್ರದೇಶದ ಚಾಲಕ ಭೋಲೆ ಯಾದವ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ದಾವಣಗೆರೆಯ ಶ್ರೀರಾಮನಗರದ ಪರಶುರಾಮ್, ಶಿವುಕುಮಾರ್, ಸಂದೇಶ್ ಎಂಬವರು ಕಾಟಿಹಳ್ಳಿಯಲ್ಲಿ ಜಾತ್ರೆ ಮುಗಿಸಿಕೊಂಡು ಬೈಕ್‌ನಲ್ಲಿ ಬರುವಾಗ ಆನಗೋಡು ಬಳಿ ಲಾರಿ ಢಿಕ್ಕಿ ಹೊಡೆದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಪತ್ರಿಕೆಗಳಲ್ಲಿ ಸುದ್ದಿ ಪ್ರಕಟವಾಗಿತ್ತು. ಆದರೆ, ಪರಶುರಾಮ, ನಾಗರಾಜ, ಸಂದೇಶ, ಗಣೇಶ, ರಾಹುಲ್ ಮತ್ತು ಶಿವುಕುಮಾರ್ ಎಂಬವರು ಕಳೆದ ಫೆ.೧೧ರಂದು ಬೆಳಗಿನ ಜಾವ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಆನಗೋಡು ಗ್ರಾಮದ ಸಮೀಪದ ರಾಪ್ಟ್ರೀಯ ಹೆದ್ದಾರಿಯಲ್ಲಿ ಲಾರಿ ನಿಲ್ಲಿಸಿ ಲಾರಿ ಚಾಲಕನನ್ನು ಹೆದರಿಸಿ ಹಲ್ಲೆ ಮಾಡಿದ್ದಾರೆ. ಬಳಿಕ  ಚಾಲಕನಿಂದ ೮ ಸಾವಿರ ನಗದು, ಮೊಬೈಲ್ ಹಾಗೂ ಇತರ ವಸ್ತು ದರೋಡೆ ಮಾಡಿ ಪರಾರಿ ಆಗುವ ಸಂದರ್ಭದಲ್ಲಿ ಲಾರಿ ಚಾಲಕ ದರೋಡೆ ಮಾಡಿ ಬೈಕ್‌ನಲ್ಲಿ ಹೋಗುತ್ತಿದ್ದ ಅವರ ಮೇಲೆ ಲಾರಿ ಹತ್ತಿಸಿ ಹೋಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೈಕ್‌ನಲ್ಲಿದ್ದ ಪರಶುರಾಮ, ಶಿವುಕುಮಾರ್ ಮತ್ತು ಸಂದೇಶ ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಇನ್ನುಳಿದ ನಾಗರಾಜ, ಗಣೇಶ ಮತ್ತು ರಾಹುಲ್‌ಗೆ ಗಾಯಗಳಾಗಿದ್ದು, ಘಟನಾ ಸ್ಥಳದಿಂದ ತಪ್ಪಿಸಿಕೊಂಡು ಹೋಗಿದ್ದರು ಎಂದು ಪೊಲೀಸರು ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡ ದಾವಣಗೆರೆ ಗ್ರಾಮಾಂತರ ಠಾಣೆ ಪೊಲೀಸರು ತಪ್ಪಿಸಿಕೊಂಡು ಹೋಗಿದ್ದ ಮೂವರನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ದರೋಡೆ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ದಾವಣಗೆರೆ ಜಿಲ್ಲಾ ಪೊಲೀಸ್ ಕಚೇರಿಯ ಡಿಸಿಐಬಿ ವಿಭಾಗದ ತಂಡ, ದರೋಡೆಕೊರರ ಮೇಲೆ ಲಾರಿ ಹತ್ತಿಸಿಕೊಂಡು ಹೋಗಿದ್ದ ಲಾರಿಯನ್ನು ಚೆನ್ನೈ ನಲ್ಲಿ ಪತ್ತೆ ಮಾಡಿದ್ದು, ಆರೋಪಿ ಉತ್ತರಪ್ರದೇಶದ ಭೋಲೆ ಯಾದವ್‌ನನ್ನು ಬಂಧಿಸಿದೆ. ಈಗ ಮೂವರು ದರೋಡೆಕೋರರು ಹಾಗೂ ಲಾರಿ ಚಾಲಕನನ್ನು ನ್ಯಾಯಾಲಯ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಹೆಚ್ಚುವರಿ ಎಸ್ಪಿ ರಾಮಗೊಂಡ ಬಿ.ಬಸರಗಿ, ಎಎಸ್ಪಿ ಕನ್ನೀಕಾ ಸಿಕ್ರೀವಾಲಾ ಮಾರ್ಗದರ್ಶನದಲ್ಲಿ ಪಿಐ ಲಿಂಗನಗೌಡ ನೆಗಳೂರು, ಎಚ್.ಪಿ.ನಾರಪ್ಪ, ಜಗದೀಶ, ದೇವೇಂದ್ರನಾಯ್ಕ, ಅಣ್ಣಯ್ಯ, ಮಂಜುನಾಥ್, ಮಹಮ್ಮದ್ ಯೂಸಫ್ ಅತ್ತಾರ್, ನಾಗರಾಜಯ್ಯ ಮತ್ತು ಡಿಸಿಐಬಿ ವಿಭಾಗದ ಸಿಬ್ಬಂದಿ ಮಜೀದ್, ಆಂಜನೇಯ, ರಾಘವೇಂದ್ರ, ಮಾರುತಿ, ಅಶೋಕ, ಸುರೇಶ, ಮಲ್ಲಿಕಾರ್ಜುನ, ರಮೇಶನಾಯ್ಕ, ನಟರಾಜ, ಚಾಲಕ ನೂರುಲ್ಲಾ ಶರೀಫ್ ಹಾಗೂ ಎಸ್ಪಿ ಕಚೇರಿಯ ರಾಘವೇಂದ್ರ, ಶಾಂತರಾಜು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಎಸ್ಪಿ ಸಿ.ಬಿ.ರಿಷ್ಯಂತ್, ಹೆಚ್ಚುವರಿ ಎಸ್ಪಿ  ರಾಮಗೊಂಡ ಬಿ.ಬಸರಗಿ ಅಭಿನಂದನೆ ಸಲ್ಲಿಸಿದ್ದಾರೆ.

Similar News