×
Ad

‘ತಾಯಿ ಕಾರ್ಡ್’ ನೀಡಲು ನಿಮಗಿರುವ ಕಷ್ಟವೇನು?: ಸರಕಾರಕ್ಕೆ ಯು.ಟಿ.ಖಾದರ್ ಪ್ರಶ್ನೆ

"ಶಿರಾಡಿ ರಸ್ತೆಗೆ ಬಜೆಟ್‌ ನಲ್ಲಿ ನಯಾ ಪೈಸೆಯೂ ಇಟ್ಟಿಲ್ಲ"

Update: 2023-02-15 20:15 IST

ಬೆಂಗಳೂರು, ಫೆ. 15: ಕನಿಷ್ಠ ಪಕ್ಷ ‘ತಾಯಿ ಕಾರ್ಡ್’ ನೀಡಲೂ ಸಾಧ್ಯವಾಗದ ಈ ಸರಕಾರಕ್ಕೆ ರಿಪೋರ್ಟ್ ಕಾರ್ಡ್ ನೀಡುವುದು ಹೇಗೆ?, ತಾಯಿ ಕಾರ್ಡ್ ನೀಡಲು ಇವರಿಗೆ ಆಗಿರುವ ಕಷ್ಟವೇನು?’ ಎಂದು ವಿರೋಧ ಪಕ್ಷದ ಉಪ ನಾಯಕ ಯು.ಟಿ.ಖಾದರ್, ಇಂದಿಲ್ಲಿ ರಾಜ್ಯ ಸರಕಾರವನ್ನು ಖಾರವಾಗಿ ಪ್ರಶ್ನಿಸಿದ್ದಾರೆ.

ಬುಧವಾರ ವಿಧಾನಸಭೆ ಶೂನ್ಯವೇಳೆಯಲ್ಲಿ ರಾಜ್ಯದ ವಿವಿಧೆಡೆಗಳಲ್ಲಿ ಗರ್ಭಿಣಿ ಹೆಣ್ಣು ಮಕ್ಕಳಿಗೆ ‘ತಾಯಿ ಕಾರ್ಡ್’ ನೀಡುವಲ್ಲಿ ಆಗುತ್ತಿರುವ ಸಮಸ್ಯೆಯನ್ನು ಪ್ರಸ್ತಾಪಿಸಿದ ಅವರು, ‘ತಾಯಿ-ಮಗು ಆರೋಗ್ಯದಿಂದ ಇರಲು ‘ತಾಯಿ ಕಾರ್ಡ್’ ಅಗತ್ಯ. ಎಲ್ಲ ಸರಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ, ವಿವಿಧ ಚುಚ್ಚುಮದ್ದುಗಳು ಹಾಗೂ ಅಂಗನವಾಡಿಯಲ್ಲಿ ಪೌಷ್ಠಿಕಾಂಶವುಳ್ಳ ಆಹಾರ ಪಡೆಯಲು ‘ತಾಯಿ ಕಾರ್ಡ್’ ಅಗತ್ಯ’ ಎಂದು ಗಮನ ಸೆಳೆದರು.

ಆದರೆ, ಕೆಲದಿನಗಳಿಂದ ರಾಜ್ಯದಲ್ಲಿ ತಾಯಿ ಕಾರ್ಡ್ ಸರಿಯಾಗಿ ಪೂರೈಕೆ ಆಗದ ಹಿನ್ನೆಲೆಯಲ್ಲಿ ತಾಯಿ ಕಾರ್ಡ್ ನೀಡುತ್ತಿಲ್ಲ. ಹೀಗಾಗಿ ಗರ್ಭಿಣಿ ಹೆಣ್ಣು ಮಕ್ಕಳಿಗೆ ಸಮಸ್ಯೆಯಾಗಿದೆ. ನನ್ನ ಕ್ಷೇತ್ರದಲ್ಲಿ ಇಂತಹದ್ದೆ ಸಮಸ್ಯೆ ಹಿನ್ನೆಲೆಯಲ್ಲಿ ಖುದ್ದು ನಾನೇ ನಿಂತು ಆ ಸಮಸ್ಯೆ ಪರಿಹಾರ ಮಾಡಿದ್ದೇನೆ. ಹೀಗಾಗಿ ಕೂಡಲೇ ತಾಯಿ ಕಾರ್ಡ್ ಸಮಸ್ಯೆ ಇತ್ಯರ್ಥಕ್ಕೆ ಸರಕಾರ ಕ್ರಮ ಕೈಗೊಳ್ಳಬೇಕು’ ಎಂದು ಖಾದರ್ ಆಗ್ರಹಿಸಿದರು.

ಬಳಿಕ ಸರಕಾರದ ಪರವಾಗಿ ಪ್ರತಿಕ್ರಿಯಿಸಿದ ಕಾನೂನು ಸಚಿವ ಮಾಧುಸ್ವಾಮಿ, ‘ತಾಯಿ ಕಾರ್ಡ್’ ಆಸ್ಪತ್ರೆಯಲ್ಲಿ ಹೆರಿಗೆಗೆ ಮಾತ್ರ ಎಂದು ನಾನು ಭಾವಿಸಿದ್ದೆ. ಆದರೆ, ತುಮಕೂರಿನಲ್ಲಿ ತಾಯಿ ಕಾರ್ಡ್ ಇಲ್ಲದೆ ಗರ್ಭಿಣಿ ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ ಹಿನ್ನೆಲೆಯಲ್ಲಿ ತಾಯಿ ಕಾರ್ಡ್ ಇಲ್ಲದೆ ಇದ್ದರೂ ಹೆರಿಗೆ ಮಾಡಿಸಬೇಕೆಂದು ಎಲ್ಲ ಆಸ್ಪತ್ರೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಇದೀಗ ಚುಚ್ಚುಮದ್ದು ನೀಡಲು ಹಾಗೂ ಪೌಷ್ಠಿಕಾಂಶದ ಆಹಾರವನ್ನು ನೀಡಲು ತಾಯಿ ಕಾರ್ಡ್ ಅಗತ್ಯವಿದ್ದು, ಕೂಡಲೇ ಕಾರ್ಡ್ ಒದಗಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ಈ ವೇಳೆ ಮಧ್ಯಪ್ರವೇಶಿಸಿದ ಯು.ಟಿ.ಖಾದರ್, ತಾಯಿ ಕಾರ್ಡ್ ನಿಗದಿತ ಸಮಯಕ್ಕೆ ಪೂರೈಕೆ ಮಾಡುವಲ್ಲಿ ವಿಳಂಬ ಮಾಡಿದ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಈ ಕುರಿತು ಪರಿಶೀಲನೆ ನಡೆಸಿ ಮುಂದಿನ ಕ್ರಮ ವಹಿಸಲಾಗುವುದು ಎಂದು ಸಚಿವ ಮಾಧುಸ್ವಾಮಿ ಪ್ರತಿಕ್ರಿಯೆ ನೀಡಿದರು.

► ''ಶಿರಾಡಿ ರಸ್ತೆಗೆ ಬಜೆಟ್‌ ನಲ್ಲಿ ನಯಾ ಪೈಸೆಯೂ ಇಟ್ಟಿಲ್ಲ"

ದಕ್ಷಿಣ ಕನ್ನಡ ಜಿಲ್ಲೆಯನ್ನು ಸಂಪರ್ಕಿಸುವ ಶಿರಾಡಿಘಾಟ್ ರಸ್ತೆಯನ್ನು ದುರಸ್ತಿ ಮಾಡುವ ಕೆಲಸ ಮಾಡಿಲ್ಲ. ಬಿಜೆಪಿ ಸಂಸದ ನಳಿನ್ ಕುಮಾರ್ ಕಟೀಲ್, ಶಿರಾಡಿಘಾಟ್ ರಸ್ತೆ ಅಭಿವೃದ್ಧಿಗೆ ನಿತಿನ್ ಗಡ್ಕರಿ 11 ಸಾವಿರ ಕೋಟಿ ರೂ.ಕೊಡಲಿದ್ದಾರೆ ಎಂದು ಪತ್ರ ಬರೆದಿದ್ದಾರೆ ಎಂದರು. ಆದರೆ, ಕೇಂದ್ರದ ಬಜೆಟ್‌ನಲ್ಲಿ ಒಂದು ರೂಪಾಯಿ ಕೊಟ್ಟಿಲ್ಲ. ಇತ್ತೀಚೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಬಂದು ನಾವು ಶಿರಾಡಿಘಾಟ್ ರಸ್ತೆ ಅಭಿವೃದ್ಧಿ ಮಾಡುತ್ತೇವೆ ಎಂದು ಹೇಳಿ ಹೋಗಿದ್ದಾರೆ ಎಂದು ಖಾದರ್ ತಿಳಿಸಿದರು.

Full View

Similar News