×
Ad

ಎಸ್‍ಸಿ-ಎಸ್‍ಟಿ ದೌರ್ಜನ್ಯ ತಡೆ ಕಾಯಿದೆ: ವರ್ಷದಿಂದ ಸಭೆ ನಡೆಸದಿರುವುದಕ್ಕೆ ಸರಕಾರದ ವಿರುದ್ಧ ಹೈಕೋರ್ಟ್ ಅಸಮಾಧಾನ

Update: 2023-02-15 20:27 IST

ಬೆಂಗಳೂರು, ಫೆ.15: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ(ದೌರ್ಜನ್ಯ ತಡೆ) ಕಾಯಿದೆ ಜಾರಿಗೆ ಸಂಬಂಧಿಸಿದಂತೆ ಕಳೆದ ಒಂದು ವರ್ಷದಿಂದ ಮುಖ್ಯಮಂತ್ರಿ ನೇತೃತ್ವದ ಉನ್ನತಾಧಿಕಾರ ವಿಚಕ್ಷಣಾ ಮತ್ತು ನಿಗಾ ಸಮಿತಿಯು ಸಭೆ ನಡೆಸದಿರುವುದಕ್ಕೆ ಹೈಕೋರ್ಟ್ ರಾಜ್ಯ ಸರಕಾರದ ವಿರುದ್ಧ  ಅಸಮಾಧಾನ ವ್ಯಕ್ತಪಡಿಸಿದೆ.

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಮೇಲ್ವಿಚಾರಣೆ ಮತ್ತು ಬಲವರ್ಧನೆ ಸಂಸ್ಥೆಯು ಕಾಯ್ದೆಯನ್ನು ರಾಜ್ಯದಲ್ಲಿ ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ನೇತೃತ್ವದ ವಿಭಾಗೀಯ ನ್ಯಾಯಪೀಠ, ಅಸಮಾಧಾನ ವ್ಯಕ್ತಪಡಿಸಿದೆ.

ಪ್ರತಿವರ್ಷ ಜನವರಿ ಮತ್ತು ಜುಲೈನಲ್ಲಿ ಎರಡು ಸಭೆಗಳನ್ನು ನಡೆಸುವುದು ಕಡ್ಡಾಯವಾಗಿದ್ದರೂ 2022 ರಲ್ಲಿ ಸಿಎಂ ನೇತೃತ್ವದ ಸಮಿತಿಯು ಒಮ್ಮೆಯೂ ಸಭೆ ನಡೆಸುವಲ್ಲಿ ವಿಫಲವಾಗಿದೆ ಎಂದು ಅಸಮಾಧಾನ ಹೊರಹಾಕಿತು. ಅಲ್ಲದೆ, 2023 ರಲ್ಲಿ ಇದುವರೆಗೆ ಯಾವುದೇ ಸಭೆ ನಡೆದಿಲ್ಲ ಎಂಬುದನ್ನು ನ್ಯಾಯಪೀಠವು ಗಮನಿಸಿದೆ. 

ಎಸ್‍ಸಿ-ಎಸ್‍ಟಿ (ದೌರ್ಜನ್ಯ ತಡೆ) ನಿಯಮಗಳು, 1995ರ ನಿಯಮ 16(2)ರ ಆದೇಶದ ಪ್ರಕಾರ ರಚಿಸಲಾಗಿದ್ದ ಸಿಎಂ ನೇತೃತ್ವದ ಸಮಿತಿಯ ಸಭೆಯನ್ನು ನಡೆಸದೇ ಇರುವುದಕ್ಕೆ 2021ರಲ್ಲಿ ನ್ಯಾಯಾಲಯ ಆಕ್ಷೇಪ ಎತ್ತಿದ್ದರೂ 2022ರಲ್ಲಿ ಸಭೆ ನಡೆಸಿಲ್ಲ ಎಂದು ಪೀಠವು ಪ್ರಶ್ನಿಸಿದೆ. 

ಕಾಯಿದೆಯ ನಿಬಂಧನೆಗಳು ಮತ್ತು ರಾಜ್ಯ ಸರಕಾರವು ಸ್ವೀಕರಿಸಿದ ವಿವಿಧ ವರದಿಗಳು, ಸಂತ್ರಸ್ತರಿಗೆ ಒದಗಿಸಲಾದ ಪರಿಹಾರ ಮತ್ತು ಪುನರ್ವಸತಿ ಸೌಲಭ್ಯಗಳು ಮತ್ತು ಅದಕ್ಕೆ ಸಂಬಂಧಿಸಿದ ಇತರ ವಿಷಯಗಳು, ಎಸ್‍ಸಿ ಮತ್ತು ಎಸ್‍ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣಗಳ ವಿಚಾರಣೆ, ಅನುಷ್ಠಾನಕ್ಕೆ ಜವಾಬ್ದಾರರಾಗಿರುವ ವಿವಿಧ ಅಧಿಕಾರಿಗಳು/ಏಜೆನ್ಸಿಗಳ ಪಾತ್ರವನ್ನು ಪರಿಶೀಲಿಸಲು ನಿಯಮ 16(2) ಮುಖ್ಯಮಂತ್ರಿ ನೇತೃತ್ವದ ಸಮಿತಿಗೆ ಜವಾಬ್ದಾರಿಯನ್ನು ನೀಡುತ್ತದೆ ಎಂದು ನ್ಯಾಯಪೀಠ ಹೇಳಿದೆ. 

ಜಿಲ್ಲಾ ಮಟ್ಟದ ಮತ್ತು ಉಪವಿಭಾಗ ಮಟ್ಟದ ಜಾಗೃತ ಮತ್ತು ಮೇಲ್ವಿಚಾರಣಾ ಸಮಿತಿಗಳ ಸಭೆಗಳನ್ನು ನಡೆಸುವ ಕುರಿತು ರಾಜ್ಯ ಸರಕಾರ ಸಲ್ಲಿಸಿದ ವರದಿಗಳ ಬಗ್ಗೆ ನ್ಯಾಯಾಲಯವು ಪ್ರಾಥಮಿಕವಾಗಿ ವರದಿಗಳಿಂದ ತೃಪ್ತಿಕರವಾಗಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಕಳೆದ ವಿಚಾರಣೆಯ ಸಮಯದಲ್ಲಿ ನ್ಯಾಯಾಲಯವು ಎತ್ತಿರುವ ವಿವಿಧ ಸಮಸ್ಯೆಗಳಿಗೆ ಉತ್ತರಗಳನ್ನು ಒದಗಿಸುವ ಹೆಚ್ಚಿನ ಪ್ರಶ್ನೆಗಳನ್ನು ವರದಿಗಳು ಎತ್ತುತ್ತಿವೆ ಮತ್ತು ಕೆಲವು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ನ್ಯಾಯಾಲಯಕ್ಕೆ ತೋರಿಸಲು ತರಾತುರಿಯಲ್ಲಿ ವರದಿಗಳನ್ನು ಸಿದ್ಧಪಡಿಸಲಾಗಿದೆ ಎಂದು ತೋರುತ್ತಿದೆ ಎಂದು ತಿಳಿಸಿದೆ. 

ಈ ಬಗ್ಗೆ ಸಮಗ್ರ ವರದಿಯನ್ನು ಸಲ್ಲಿಸುವಂತೆ ಸೂಚನೆ ನೀಡಿದ ನ್ಯಾಯಪೀಠವು ಮುಂದಿನ ವಿಚಾರಣೆಯನ್ನು ಮೂರು ವಾರಗಳಿಗೆ ಮುಂದೂಡಿತು.
 

Similar News